ದಸರಾ ನಂತರ ಸ್ಥಳೀಯ ಸಂಸ್ಥೆ ಚುನಾವಣೆ; ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ
ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸರ್ಕಾರ ಮೀಸಲು ನಿಗದಿಪಡಿಸಿ ಮೇ 30 ರೊಳಗೆ ಆಯೋಗಕ್ಕೆ ಸಲ್ಲಿಸಲಿದೆ. ಮೀಸಲಾತಿ ಪಟ್ಟಿಯನ್ನು ಸ್ವೀಕರಿಸಿದ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಪ್ರಾರಂಭಿಸುತ್ತೇವೆ ಎಂದು ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೆಶಿ ತಿಳಿಸಿದ್ದಾರೆ.;
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ದಸರಾ ನಂತರ ನಡೆಸಲು ಸಿದ್ಧತೆ ಆರಂಭಿಸಲಿದ್ದೇವೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೆಶಿ ತಿಳಿಸಿದರು.
ತಿಪಟೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಮೀಸಲು ನಿಗದಿಪಡಿಸಿ ಮೇ30 ರೊಳಗೆ ಚುನಾವಣಾ ಆಯೋಗಕ್ಕೆ ಪಟ್ಟಿ ಸಲ್ಲಿಸಲಿದೆ. ಮೀಸಲಾತಿ ಪಟ್ಟಿ ಚುನಾವಣಾ ಸ್ವೀಕೃತವಾದ ನಂತರ ಸಿದ್ಧತೆ ಆರಂಭಿಸುತ್ತೇವೆ. ಚುನಾವಣೆ ನಡೆಸಲು ಕನಿಷ್ಠ ಮೂರು ತಿಂಗಳು ಬೇಕಾಗಲಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ದಸರಾ ನಡೆಯಲಿದ್ದು, ಆ ನಂತರ ಚುನಾವಣೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ತಿಪಟೂರಿನಲ್ಲಿನ ಒಂದು ಗ್ರಾಮ ಪಂಚಾಯಿತಿಗೆ ಉಪಚುನಾವಣೆ ನಡೆಯಬೇಕಾಗಿದೆ. ಈ ಕುರಿತಂತೆ ಮತದಾರರ ಪಟ್ಟಿ, ಚುನಾವಣೆ ಸಿದ್ದತೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸೂಚನೆ ನೀಡಲಾಗಿದೆ ಎಂದರು.
ಚುನಾವಣೆಯಾಗಿ ಒಂಬತ್ತು ವರ್ಷ
ರಾಜ್ಯ ಸರ್ಕಾರ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಿ ಒಂಬತ್ತು ವರ್ಷಗಳು ಕಳೆದಿವೆ. 2016ರ ಫೆಬ್ರವರಿಯಲ್ಲಿ 30 ಜಿಲ್ಲೆಗಳ 1080 ಕ್ಷೇತ್ರಗಳು ಹಾಗೂ 175 ತಾಲೂಕು ಪಂಚಾಯಿತಿಯ 3884 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಿತ್ತು. 10 ಜಿಲ್ಲೆಗಳಲ್ಲಿ ಕಾಂಗ್ರೆಸ್, 7 ಜಿಲ್ಲೆಗಳಲ್ಲಿ ಬಿಜೆಪಿ, ಎರಡು ಜಿಲ್ಲೆಗಳಲ್ಲಿ ಜೆಡಿಎಸ್ ಹಾಗೂ 11 ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿಯ ಫಲಿತಾಂಶ ದೊರೆತಿತ್ತು.
ರಾಜ್ಯದ 175 ತಾಲೂಕು ಪಂಚಾಯಿತಿಗಳ ಪೈಕಿ ಕಾಂಗ್ರೆಸ್ 55 , ಬಿಜೆಪಿ 55, ಜೆಡಿಎಸ್ 20 ಹಾಗೂ 45 ತಾಲೂಕುಗಳಲ್ಲಿ ಅತಂತ್ರ ಫಲಿತಾಂಶ ಪ್ರಕಟವಾಗಿತ್ತು. ಚುನಾಯಿತ ಸದಸ್ಯರ ಅವಧಿ 2021ಕ್ಕೆ ಕೊನೆಗೊಂಡಿದ್ದು ಸರ್ಕಾರ ಇದುವರೆಗೂ ತಾ.ಪಂ ಹಾಗೂ ಜಿ.ಪಂ ಚುನಾವಣೆಗೆ ಕಸರತ್ತು ನಡೆಸುತ್ತಲೇ ಇದೆ.
ಚುನಾವಣೆಗೆ ಸಿದ್ಧರಾಗಲು ಕಾರ್ಯಕರ್ತರಿಗೆ ಕರೆ
ರಾಜ್ಯ ಸರ್ಕಾರ ಶೀಘ್ರವೇ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದು ಚುನಾವಣೆಗೆ ಸಿದ್ದರಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗಷ್ಟೇ ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಿಗೆ ಸಾಕಷ್ಟು ಕೆಲಸ ಮಾಡಿದ್ದೀರಿ. ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಕಾರ್ಯಕರ್ತರು ಕೆಲಸ ಮಾಡಲು ಸಿದ್ಧರಾಗಬೇಕು ಎಂದು ಸೂಚಿಸಿದ್ದರು.