Terror Suspect Arrested | ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನ ಬಂಧನ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ್ದಾರೆ. ಹಿಜ್ಬ್- ಉಲ್ - ತಹ್ರೀರ್ ಸಂಘಟನೆಗೆ ಸೇರಿದ ಅಜೀಜ್ ಅಹಮದ್ ಅಲಿಯಾಸ್ ಜಲೀಲ್ ಅಜೀಜ್ ಅಹ್ಮದ್ ಬಂಧಿತ ಉಗ್ರನಾಗಿದ್ದಾನೆ.;
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ್ದಾರೆ. ಹಿಜ್ಬ್- ಉಲ್ - ತಹ್ರೀರ್ ಸಂಘಟನೆಗೆ ಸೇರಿದ ಅಜೀಜ್ ಅಹಮದ್ ಅಲಿಯಾಸ್ ಜಲೀಲ್ ಅಜೀಜ್ ಅಹ್ಮದ್ ಬಂಧಿತ ಉಗ್ರನಾಗಿದ್ದಾನೆ.
ಹಿಜ್ಬ್ ಉಲ್ ತಹ್ರೀರ್ ಭಯೋತ್ಪಾದಕ ಸಂಘಟನೆಯ ಅಜೀಜ್ ಅಹ್ಮದ್, ಶುಕ್ರವಾರ ಬೆಳಿಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಸೌದಿಯ ಜೆದ್ದಾಗೆ ಪಾರಾರಿಯಾಗುತ್ತಿದ್ದನು. ಈ ಮಾಹಿತಿಯನ್ನು ಇಮಿಗ್ರೇಷನ್ ಅಧಿಕಾರಿಗಳು ಎನ್ಐಎಗೆ ನೀಡಿದ್ದರು. ಮಾಹಿತಿ ಆಧರಿಸಿ ಕೂಡಲೆ ಸ್ಥಳಕ್ಕೆ ತೆರಳಿ ಶಂಕಿತ ಉಗ್ರ ಅಜೀಜ್ ಅಹ್ಮದ್‌ನನ್ನು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಉಗ್ರಗಾಮಿ ಹಾಗೂ ಇಸ್ಲಾಂ ಮೂಲಭೂತ ಸಿದ್ಧಾಂತದಿಂದ ಪ್ರಭಾವಿತವಾಗಿ ಜಗತ್ತಿನ ಇಸ್ಲಾಮೀಕರಣ ಮತ್ತು ಇಸ್ಲಾಮಿಕ್ ಕಾನೂನು ಸ್ಥಾಪಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಆರು ಮಂದಿ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿಕೊಂಡಿತ್ತು. ಹಿಜ್ಬ್ -ಉಲ್ - ತಹ್ರೀರ್‌ನ ಸಂಸ್ಥಾಪಕ ತಾಕಿ ಅಲ್-ದಿನ್ ಅಲ್-ನಭಾನಿ ಬರೆದ ಸಂವಿಧಾನವನ್ನು ಭಾರತದಲ್ಲಿ ಜಾರಿಗೊಳಿಸುವ ಗುರಿಯನ್ನು ಆರೋಪಿಗಳು ಹೊಂದಿದ್ದರು.
ಎನ್‌ಐಎ ತನಿಖೆಯ ಪ್ರಕಾರ, ಆರೋಪಿಗಳು ಅನೇಕ ಯುವಕರನ್ನು ಒಗ್ಗೂಡಿಸಿ ಹಿಜ್ಬ್ - ಉಲ್-ತಹ್ರೀರ್‌ನ ಸಿದ್ಧಾಂತಗಳನ್ನು ಅವರ ತಲೆಗೆ ತುಂಬುವ, ಹಾಗೂ ತಮ್ಮ ಗುರಿ ಸಾಧಿಸಲು ಶತ್ರು ಶಕ್ತಿಗಳಿಂದ ಮಿಲಿಟರಿ ಸಹಾಯ (ನುಸ್ರಾ) ಪಡೆಯುವ ಶಿಬಿರಗಳನ್ನು (ಬಯಾನ್) ಸಂಘಟಿಸಿದ್ದರು. ಅಂತಹ ರಹಸ್ಯ ಬಯಾನ್‌ಗಳನ್ನು ಸಂಘಟಿಸುವ ಪ್ರಮುಖ ಆರೋಪಿಗಳಲ್ಲಿ ಅಜೀಜ್ ಅಹಮದ್ ಸಹ ಓರ್ವನಾಗಿದ್ದನು. ಸದ್ಯ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿರುವುದಾಗಿ ಎನ್‌ಐಎ ತಿಳಿಸಿದೆ.