ಶಾಸಕರ ಬಳಿಕ ಈಗ ಸಚಿವರ ಜತೆ ಒನ್‌ ಟು ಒನ್‌ ಮಾತುಕತೆಗೆ ಮುಂದಾದ ಸುರ್ಜೇವಾಲ

Update: 2025-07-14 14:35 GMT

ಸಿಎಂ ಬದಲಾವಣೆ ಮತ್ತು ಶಾಸಕರಿಗೆ ಸಿಗಬೇಕಾದ ಅನುದಾನದಲ್ಲಿ ವ್ಯತ್ಯಯ ಮತ್ತಿತರ ಗೊಂದಲಗಳ ಬಗ್ಗೆ ಸುಮಾರು 101 ಕಾಂಗ್ರೆಸ್‌ ಶಾಸಕರ ಜತೆ ʼಒನ್‌ ಟು ಒನ್‌ʼ ಸಭೆ ನಡೆಸಿ ಕಾಂಗ್ರೆಸ್‌ ಹೈಕಮಾಂಡ್‌ಗೆ ವರದಿ ನೀಡಿದ್ದ ರಾಜ್ಯದ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಈಗ ಸಿದ್ದರಾಮಯ್ಯ ಸಂಪುಟದ ಸಚಿವರ ಜತೆಯೂ ಪ್ರತ್ಯೇಕವಾಗಿ ನೇರಾ ನೇರ ಮಾತುಕತೆ ನಡೆಸಿದ್ದಾರೆ.

ಪ್ರಮುಖವಾಗಿ ಸಚಿವ ಸಹಕಾರ ಸಿಗುತ್ತಿಲ್ಲ ಎಂಬ ಶಾಸಕರ ಆರೋಪದ ಮೇಲೆ ಸಚಿವರ ಜತೆ ಸುರ್ಜೇವಾಲ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಚಿವರಾದ ಭೈರತಿ ಸುರೇಶ್ (ನಗರಾಭಿವೃದ್ಧಿ), ರಹೀಂಖಾನ್ (ಪೌರಾಡಳಿತ), ಜಮೀರ್ ಅಹಮ್ಮದ್ (ವಸತಿ), ಹೆಚ್.ಸಿ ಮಹದೇವಪ್ಪ(ಲೋಕೋಪಯೋಗಿ), ಎಸ್‌.ಎಸ್ ಮಲ್ಲಿಕಾರ್ಜುನ್ (ಗಣಿ ಇಲಾಖೆ) ಜೊತೆ ಒನ್ ಟು ಒನ್ ಚರ್ಚೆ ನಡೆಸಲಾಗಿದೆ. ಸಚಿವರ ಜತೆ ಶಾಸಕರ ಅಭಿಪ್ರಾಯಗಳನ್ನು ಸುರ್ಜೇವಾಲ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕರ ಆರೋಪಗಳ ಪಟ್ಟಿಯನ್ನು ಸಚಿವರ ಮುಂದಿಟ್ಟಿರುವ ಉಸ್ತುವಾರಿ ಸುರ್ಜೇವಾಲಾ, ಅನುದಾನ ಬಿಡುಗಡೆ ಅಗತ್ಯ ಇಲಾಖಾ ಸಹಕಾರ ಮತ್ತಿತರ ವಿಷಯಗಳ ಬಗ್ಗೆ ಶಾಸಕರ ದೂರುಗಳನ್ನು ಮುಂದಿಟ್ಟು ಚರ್ಚಿಸಿದ್ದಾರೆ. "ಶಾಸಕರ ಆರೋಪಗಳಿವೆ, ಏನು ಮಾಡುತ್ತೀರಿ ಹೇಳಿ?" ಎಂದು ಕೇಳಿರುವ ಸುರ್ಜೇವಾಲಾ, "ನಿಮ್ಮ ಇಲಾಖೆಗೆ ಸಂಬಂಧಿಸಿದಂತೆ ಹಲ ಶಾಸಕರು ದೂರು ನೀಡಿದ್ದಾರೆ. ಶಾಸಕರ ಯಾವುದೇ ಪತ್ರಗಳಿಗೂ ಮಾನ್ಯತೆ ನೀಡುತ್ತಿಲ್ಲ, ಯಾವ ಕೆಲಸಗಳನ್ನೂ ಮಾಡಿಕೊಡುತ್ತಿಲ್ಲ, ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಶಾಸಕರು ದೂರುತ್ತಿದ್ದಾರೆ," ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದರು ಎಂದು ಹೇಳಲಾಗಿದೆ.

ತಬ್ಬಿಬ್ಬಾದ ಸಚಿವರು

ಸುರ್ಜೇವಾಲಾ ಪ್ರಶ್ನೆಗಳಿಗೆ ತಬ್ಬಿಬ್ಬಾಗಿರುವ ಸಚಿವರು, "ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ, ಯಾವುದೇ ಬೇಡಿಕೆಗಳಿದ್ದರೂ ಸ್ಪಂದಿಸುತ್ತಿದ್ದೇವೆ, ಆದರೂ ದೂರುಗಳಿದ್ದಲ್ಲಿ ಬಗೆಹರಿಸುತ್ತೇವೆ," ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಮುಕ್ತಾಯವಾದ ಶಾಸಕರ ಒನ್‌ ಟು ಒನ್‌ ಸಭೆ

ರಾಜ್ಯ ಸರ್ಕಾರದ ಸಚಿವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೆವಾಲಾ ನಡೆಸುತ್ತಿರುವ 'ಒನ್ ಟು ಒನ್' ಸಭೆ  ಇತ್ತೀಚಗೆ ಮುಕ್ತಾಯವಾಗಿತ್ತು.

ಸುರ್ಜೇವಾಲ ಅವರು ಕಳೆದ ವಾರ ಮೊದಲ ಹಂತದಲ್ಲಿ 42 ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಮತ್ತೆ ಎರಡನೇ ಹಂತದಲ್ಲಿ ಉಳಿದ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದ್ದು ಬುಧವಾರ(ಜು.9) ಅಂತ್ಯವಾಗಿಲಿದೆ. ಸೋಮವಾರ 21 ಶಾಸಕರು ಹಾಗೂ ಮಂಗಳವಾರ 24 ಶಾಸಕರ ಜತೆ ಸಭೆ ನಡೆಸಲಾಗಿತ್ತು.   ಒಟ್ಟು 101 ಶಾಸಕರ ಜತೆ ಸಭೆ ನಡೆಸಿ ಅಭಿಪ್ರಾಯ ಕಲೆಹಾಕಿ ದೆಹಲಿಗೆ ತೆರಳಿ ಹೈಕಮಾಂಡ್‌ಗೆ ಸಂಪೂರ್ಣ ವರದಿ ನೀಡಿದ್ದರು.

ಅನುದಾನದ ಜತೆಗೆ ಕ್ಷೇತ್ರದ ಅಭಿವೃದ್ಧಿ, ಸಚಿವರ ಕಾರ್ಯವೈಖರಿ ಹಾಗೂ ಸರ್ಕಾರದ ಆಡಳಿತ ವ್ಯವಸ್ಥೆ ಬಗ್ಗೆ ಶಾಸಕರ ಜತೆ ಸಭೆ ನಡೆಸಿ ಅಭಿಪ್ರಾಯ ಕೇಳಿದ್ದರು. ಪ್ರತಿ ಶಾಸಕರ ಅಭಿಪ್ರಾಯ ಆಲಿಸಿರುವ ಸುರ್ಜೇವಾಲಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ವರದಿ ಸಲ್ಲಿಸಿದ್ದರು.

ಸುರ್ಜೆವಾಲಾ ಸಭೆಗೆ ಅಸಮಾಧಾನ

ಬಹುತೇಕ ಶಾಸಕರು ಹಾಗೂ ಸಚಿವರು ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರು ಶಾಸಕರ ಜತೆ ನಡೆಸಿದ ಪ್ರತ್ಯೇಕ ಸಭೆ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಸಭೆ ನಡೆಸುವ ಅವಶ್ಯಕತೆ ಇರಲಿಲ್ಲ. ಇದರ ಜತೆಗೆ ಸರ್ಕಾರದ ಆಡಳಿತ ವೈಖರಿ ಬಗ್ಗೆ ಶಾಸಕರ ಅಭಿಪ್ರಾಯ ಕಲೆಹಾಕುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಸಕರ ಬೇಡಿಕೆಗಳ ಈಡೇರಿಕೆ, ಸಮಸ್ಯೆಗಳಿಗೆ ಪರಿಹಾರ ಕೊಡುವುದು ಸಿಎಂ ಕೈಯಲ್ಲಿದೆ. ಅವರ ಸಮ್ಮುಖದಲ್ಲಿ ಶಾಸಕರ ಅಭಿಪ್ರಾಯ ಪಡೆಯಬೇಕಿತ್ತು ಎನ್ನುವುದು ಶಾಸಕರ ವಾದವಾಗಿದೆ. 

ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರು ಈ ಮೊದಲಿನಿಂದಲೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಿಕಟವಾಗಿದ್ದು, ಶಾಸಕರ ಅಭಿಪ್ರಾಯ ಕೇಳುವ ನೆಪದಲ್ಲಿ ಸಿಎಂ ವಿರುದ್ಧದ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ದೂರಲಾಗಿದೆ.

ಸಿಎಂ ಸಿದ್ದರಾಮಯ್ಯ ಬಣದ ಸಚಿವರು ಈ ಹಿಂದೆ ಔತಣಕೂಟ ಸಭೆ ಹಾಗೂ ಹಾಸನದಲ್ಲಿ ಅಹಿಂದ ಸಮಾವೇಶ ನಡೆಸಲು ತೀರ್ಮಾನಿಸಿದ್ದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇದೇ ಸುರ್ಜೆವಾಲಾ ಅವರ ಮೂಲಕ ಔತಣಕೂಟ ಸಭೆ ಹಾಗೂ ಅಹಿಂದ ಸಮಾವೇಶಕ್ಕೆ ಬ್ರೇಕ್ ಹಾಕಿದ್ದರು. ಸುರ್ಜೆವಾಲಾ ಧೋರಣೆ ವಿರುದ್ಧ ಹಲವು ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೂ ದೂರು ಸಲ್ಲಿಸಿದ್ದರು. ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯಲು ತೀರ್ಮಾನಿಸಿದ್ದರು.

Tags:    

Similar News