ದಾವಣಗೆರೆ ಲೋಕಸಭಾ ಕ್ಷೇತ್ರ | ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ: ಬಿ. ವಿನಯ್ ಕುಮಾರ್
ಸಭೆಯಲ್ಲಿ ಮಾತನಾಡಿದ ಜಿ.ಬಿ. ವಿನಯ್ ಕುಮಾರ್ ಅವರು ನನಗೆ ಟಿಕೆಟ್ ತಪ್ಪಿದಾಗ ಯಾರೂ ಕರೆ ಮಾಡಲಿಲ್ಲ, ಮನೆ ಬಾಗಿಲಿಗೂ ಯಾರೂ ಬರಲಿಲ್ಲ ಎಂದರು;
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಟ್ಟ ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲ ಎಂದು ಅಹಿಂದ ನಾಯಕ, ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ. ವಿನಯ್ ಕುಮಾರ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಮೂಡಿತ್ತು. ಆದ್ರೆ, ಎಸ್. ಎಸ್. ಬಡಾವಣೆಯ ಜನಸಂಪರ್ಕ ಕಚೇರಿಯಲ್ಲಿ ಕರೆದಿದ್ದ ಆಪ್ತರು, ಮುಖಂಡರು, ಹಿತೈಷಿಗಳ ಸಭೆಯಲ್ಲಿ ಅಧಿಕೃತವಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಜಿ.ಬಿ. ವಿನಯ್ ಕುಮಾರ್ ಅವರು ನನಗೆ ಟಿಕೆಟ್ ತಪ್ಪಿದಾಗ ಯಾರೂ ಕರೆ ಮಾಡಲಿಲ್ಲ, ಮನೆ ಬಾಗಿಲಿಗೂ ಯಾರೂ ಬರಲಿಲ್ಲ. ಆದ್ರೆ, ಈಗ ನನ್ನ ಜನಪ್ರಿಯತೆ ಅರಿತ ಬಳಿಕ ರಾಜ್ಯಮಟ್ಟದಲ್ಲಿ ಸಂಧಾನ ಮಾಡಿಸಲು ಮುಂದಾದರು. ಟಿಕೆಟ್ ಘೋಷಣೆಯಾದಾಗ ನನ್ನನ್ನು ಸಂಪರ್ಕಿಸಿದ್ದರೆ ಕಣದಿಂದ ಹಿಂದೆ ಸರಿಯಬೇಕು ಎಂದು ಮನಸ್ಸಿನಲ್ಲಿ ಅನಿಸುತಿತ್ತೋ ಏನೋ ಗೊತ್ತಿಲ್ಲ. ಈಗ ಕಾಲ ಮಿಂಚಿ ಹೋಗಿದೆ. ಯಾವುದೇ ಒತ್ತಡ, ಆಮಿಷ, ಬೆದರಿಕೆಗೆ ಬಗ್ಗುವ ಪ್ರಶ್ನೆಯೇ ಇಲ್ಲ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಲು ಕಾರಣ ಈ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ. ನೀವು ತೋರಿದ ಪ್ರೀತಿ ವಿಶ್ವಾಸದ ಮುಂದೆ ಯಾವುದೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಭಾನುವಾರ (ಏ.7) ರಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೇವೆ. ಅದೊಂದು ಸೌಜನ್ಯಯುತವಾದ ಭೇಟಿ. ಭೇಟಿ ಮಾಡಿದಾಕ್ಷಣ ನಾನು ಬಂಡಾಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂಬ ಅಭಿಪ್ರಾಯಕ್ಕೆ ಬರಬೇಡಿ, ಮುಖ್ಯಮಂತ್ರಿಯವರ ಬಳಿಯೂ ಪಕ್ಷೇತರನಾಗಿ ನಿಂತರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ಅದಕ್ಕೆ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಿದ್ದಾರೆ.
ಇದು ದುಡುಕಿನ ನಿರ್ಧಾರ ಅಲ್ಲ
ಎರಡು ಪ್ರಬಲ ಕುಟುಂಬಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದರಿಂದ ಜನರು ಬೇಸತ್ತು ಹೋಗಿದ್ದಾರೆ. ಎರಡು ಕುಟುಂಬಗಳ ವಿರುದ್ಧ ಲಕ್ಷಕ್ಕೂ ಅಧಿಕ ಮತ ಪಡೆದು ಗೆಲ್ಲುತ್ತೇನೆ. ನಿನ್ನೆ ನಡೆದ ಸಭೆಯಲ್ಲಿ ನನಗೆ ಸಿಎಂ ಸಿದ್ದರಾಮಯ್ಯ ಅವರು ಹೂಮಾಲೆ ಹಾಕಿದ್ದಾರೆ. ಅದು ವಿಜಯದ ಮಾಲೆ ಅಂದುಕೊಳ್ಳುವೆ. ನಿಮ್ಮ ಮೇಲೆ ಪ್ರೀತಿ ಗೌರವ ಉಳ್ಳವನು ನಾನು. ಇದು ದುಡುಕಿನ ನಿರ್ಧಾರ ಅಲ್ಲ. ಜನರ ನಿರ್ಧಾರವಾಗಿದೆ ಎಂದು ವಿನಯ್ ಕುಮಾರ್ ಹೇಳಿದರು.