ತಾರಕಕ್ಕೇರಿದ ಕಬ್ಬು ಹೋರಾಟ: ಗೋಕಾಕ್‌ನಲ್ಲಿ ಹೆದ್ದಾರಿ ತಡೆಗೆ ಯತ್ನ, ಪೊಲೀಸರೊಂದಿಗೆ ವಾಗ್ವಾದ

ರೈತರ ಹೋರಾಟವು ಬೆಳಗಾವಿ ಜಿಲ್ಲೆಯ ಗೋಕಾಕ್, ಅಥಣಿ, ಚಿಕ್ಕೋಡಿ, ಹುಕ್ಕೇರಿ ಮತ್ತು ಮುಧೋಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಪಟ್ಟಣಗಳಿಗೆ ವ್ಯಾಪಿಸಿದೆ. ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

Update: 2025-11-07 05:02 GMT
ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ಉಂಟಾಯಿತು.
Click the Play button to listen to article

ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ತಾರಕಕ್ಕೇರಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ನಾಕಾ ನಂಬರ್ 1ರಲ್ಲಿ ಹೆದ್ದಾರಿ ತಡೆಯಲು ಯತ್ನಿಸಿದ ರೈತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ಶುಕ್ರವಾರ ವರದಿಯಾಗಿದೆ. ಸರ್ಕಾರದೊಂದಿಗೆ ನಡೆದ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡ ಹಿನ್ನೆಲೆಯಲ್ಲಿ, ರೈತರು ತಮ್ಮ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.

ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಕಾರಣ ಗೋಕಾಕ್‌ನಲ್ಲಿ ಹೆದ್ದಾರಿ ತಡೆಯಲು ಮುಂದಾದರು. ಮಾರ್ಗ ಮಧ್ಯೆ ರೈತರನ್ನು ತಡೆದ ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಏರುಧ್ವನಿಯಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೋರಾಟದ ಪ್ರಮುಖಾಂಶಗಳು

ರೈತರ ಹೋರಾಟವು ಬೆಳಗಾವಿ ಜಿಲ್ಲೆಯ ಗೋಕಾಕ್, ಅಥಣಿ, ಚಿಕ್ಕೋಡಿ, ಹುಕ್ಕೇರಿ ಮತ್ತು ಮುಧೋಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಪಟ್ಟಣಗಳಿಗೆ ವ್ಯಾಪಿಸಿದೆ. ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಸಕ್ಕರೆ ಕಾರ್ಖಾನೆಗಳು 3,200 ರೂಪಾಯಿ ನೀಡಲು ಮುಂದಾಗಿದ್ದು, ಇದನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ.

ಧರಣಿ ಮತ್ತು ರಸ್ತೆ ತಡೆಗಳು ನಡೆದಿವೆ. ಗುರುವಾರ, ಸಚಿವರೊಬ್ಬರ ಕಾರಿಗೆ ಚಪ್ಪಲಿ ಎಸೆಯುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಪ್ರತಿಭಟನೆಯ ಕಾವು ಹೆಚ್ಚಾದಂತೆ, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಕಾರ್ಯ ಸ್ಥಗಿತಗೊಂಡಿದೆ.

Tags:    

Similar News