ಕಬ್ಬು ಕದನ| ದರ ನಿಗದಿ ಪರಮಾಧಿಕಾರ ಸಿಎಂಗೆ ನೀಡಿ ಸಂಪುಟ ನಿರ್ಣಯ

ಕಬ್ಬು ಬೆಳೆಗಾರರ ಬೇಡಿಕೆ, ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

Update: 2025-11-06 09:15 GMT

ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. 

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ದರ ನಿಗದಿ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲು ಸಚಿವ ರಾಜ್ಯ ಸಂಪುಟ ನಿರ್ಣಯಿಸಿದೆ. 

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ದರ ನಿಗದಿ ಅಧಿಕಾರವನ್ನು ಸಿಎಂಗೆ ನೀಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕಬ್ಬು ಬೆಳೆಗಾರರ ಬೇಡಿಕೆ, ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಂಭೀರ ಸಮಾಲೋಚನೆ ನಡೆಯಿತು. ಕಬ್ಬಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಸೂಕ್ತ ದರ ನಿಗದಿ ಮಾಡುವಂತೆ ರೈತರು ಇಟ್ಟಿರುವ ಬೇಡಿಕೆ ಸಂಬಂಧ ವಿವಿಧ ಇಲಾಖೆಗಳ ಅಭಿಪ್ರಾಯ ಆಲಿಸಲಾಯಿತು.

ನಾಳೆ (ನ. 7) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಲಿದ್ದು, ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಂತೆ ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವ ಕುರಿತು ತೀರ್ಮಾನಿಸುವ ಸಾಧ್ಯತೆ ಇದೆ. 

ಈ ಮಧ್ಯೆ,ಕಬ್ಬು ಬೆಳೆಗಾರರು ದರ ನಿಗದಿಗೆ ಇಂದು ಸಂಜೆಯವರೆಗೆ ಗಡುವು ನೀಡಿದ್ದಾರೆ. ಹಾಗಾಗಿ ರೈತರೊಂದಿಗೆ ಸಮಾಲೋಚನೆ ನಡೆಸಿ, ದರ ನಿಗದಿ  ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಬೆಳಗಾವಿಯ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ತಮ್ಮ ಬೆಳೆಗಳಿಗೆ ಸೂಕ್ತ ದರ ನಿಗದಿ ಮಾಡುವಂತೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸಂಜೆಯೊಳಗೆ ರಾಜ್ಯ ಸರ್ಕಾರ ಎಫ್‌ಆರ್‌ಪಿ ದರ ನಿಗದಿ ಮಾಡದಿದ್ದರೆ ಹೆದ್ದಾರಿ ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.

ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮಾಡುತ್ತಿರುವ ಮೋಸ, ನಿಗದಿತ ಸಮಯದೊಳಗೆ ರೈತರಿಗೆ ಹಣ ಪಾವತಿಸದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಕಳೆದ ವರ್ಷವೂ ರೈತರು ಹಲವು ಕಾರ್ಖಾನೆಗಳ ಮೇಲೆ ಆರೋಪ ಮಾಡಿದ್ದರು. ಹಾಗಾಗಿ ಈ ವಿಚಾರವನ್ನುಗಂಭೀರವಾಗಿ ಪರಿಗಣಿಸಬೇಕು ಎಂದು ಹಲವು ಸಚಿವರು ಒತ್ತಾಯಿಸಿದ್ದಾರೆ. ಆದ್ದರಿಂದ ನಾಳೆ ಸಿಎಂ ಸಿದ್ದರಾಮಯ್ಯ ಅವರು ಕೈಗೊಳ್ಳುವ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.

ವಿಜಯೇಂದ್ರ ವಿರುದ್ಧ ಆಕ್ರೋಶ

ಕಬ್ಬು ಬೆಳೆಗಾರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎತ್ತಿಕಟ್ಟುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಅನಗತ್ಯವಾಗಿ ಸರ್ಕಾರದ ವಿರುದ್ಧ ರೈತರನ್ನು ಪ್ರಚೋದಿಸಲಾಗುತ್ತಿದೆ. ಸರ್ಕಾರ ರೈತರ ಪರವಾಗಿದೆ. ಆದರೂ ವಿಜಯೇಂದ್ರ ಅವರು ರೈತರ ಹೋರಾಟದ ಸ್ಥಳಕ್ಕೆ ಹೋಗಿ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಪ್ರಚೋದನೆಗೆ ಪ್ರತ್ಯುತ್ತರ ನೀಡಿ ಎಂದು ಸಚಿವರಿಗೆ ಸಿಎಂ ಸೂಚಿಸಿದರು ಎಂದು ಹೇಳಲಾಗಿದೆ. 

Tags:    

Similar News