The Federal Series- 2 | ಬೆಂಗಳೂರು ಗ್ರಾಮೀಣ-ನಗರ ಬೆಸೆಯಲು ಸಬ್- ಅರ್ಬನ್ ರೈಲು ಪರಿಹಾರವೇ?
ಬಿಎಸ್ಆರ್‌ಪಿ ಹಾಗೂ ಮೆಟ್ರೋ ಜಾಲದ ಸಂಯೋಜನೆಯಿಂದ ಬೆಂಗಳೂರಿನ ಸಾರಿಗೆ ಭೂದೃಶ್ಯವೇ ಬದಲಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಗೂ ಸಮಗ್ರ ದೃಷ್ಟಿಕೋನ ಒದಗಿಸಲಿದೆ. ಸುಸ್ಥಿರ, ಸುಸಂಘಟಿತ ಮತ್ತು ಭವಿಷ್ಯದ ಚಲನಶೀಲತೆಯು ರಚನಾತ್ಮಕವಾಗಿ ಇರಲಿದೆ ಎಂದು ಐಐಎಸ್‌ಸಿ (IISc) ವರದಿ ಹೇಳಿದೆ.;
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗಾಗಿ ವಿನ್ಯಾಸಗೊಳಿಸಿದ ಉಪನಗರ ರೈಲು ವ್ಯವಸ್ಥೆ(ಬಿಎಸ್ಆರ್‌ಪಿ) ಪರಿಣಾಮಕಾರಿ ಸಾರಿಗೆ ವಿಧಾನವಾಗಿ ಹೊರಹೊಮ್ಮಲಿದೆ. ಇದು ಮೆಟ್ರೋ ರೈಲು ನಿಗಮದ ದೊಂದಿಗೆ ಸೇರಿ ಸುಗಮ ಏಕೀಕರಣ ಸಾರಿಗೆ ಸೌಲಭ್ಯ ಒದಗಿಸಲಿದೆ ಹಾಗೂ ಮಹಾನಗರಿಯ ತಕ್ಷಣದ ಹಾಗೂ ದೀರ್ಘಾವಧಿಯ ಸಾರಿಗೆ ಅಗತ್ಯಗಳನ್ನು ಪೂರೈಸಲಿದೆ ಎಂಬುದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ- IISc) ಅಧ್ಯಯನದಿಂದ ಕಂಡು ಬಂದಿದೆ.
ಆದಾಗ್ಯೂ, ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವುದು ದೊಡ್ಡ ಸವಾಲಾಗಿದೆ. ಸರ್ಕಾರದ ಇಚ್ಛಾಶಕ್ತಿ ಕೊರತೆ, ಹಳಿಗಳ ನಿರ್ಮಾಣಕ್ಕೆ ಜಾಗದ ಸಮಸ್ಯೆ, ಯೋಜನೆ ವಿಳಂಬದಿಂದ ಹೆಚ್ಚುವ ವೆಚ್ಚ, ಉದ್ದೇಶಿತ ಮಾರ್ಗದಲ್ಲಿರುವ ಕಟ್ಟಡ, ದೇವಸ್ಥಾನಗಳ ತೆರವಾಗದ ಕಾರಣದಿಂದ ಯೋಜನೆ ವಿಳಂಬವಾಗುವ ಜೊತೆಗೆ ಅಧಿಕ ಸಂಚಾರ ದಟ್ಟಣೆಗೆ ಅವಕಾಶ ಮಾಡಿಕೊಡಲಿದೆ ಎಂಬುದು ನಗರ ತಜ್ಞರ ಆತಂಕವಾಗಿದೆ.
ದೇಶದಲ್ಲಿ ಬಹುತೇಕ ದೊಡ್ಡ ಯೋಜನೆಗಳು ಕಾರ್ಯರೂಪಕ್ಕೆ ಬರಲು ದಶಕಗಳೇ ಹಿಡಿಯಲಿವೆ. ಉಪನಗರ ರೈಲು ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ನಡೆಯುವುದರಿಂದ ಬದ್ಧತೆಯಿಂದ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು. ಯೋಜನೆಯನ್ನು ಐದಾರು ಮಂದಿ ಗುತ್ತಿಗೆದಾರರಿಗೆ ವಹಿಸಿದರೆ ತ್ವರಿತವಾಗಿ ಯೋಜನೆ ಪೂರ್ಣವಾಗಲಿದೆ. ಜೊತೆಗೆ ಅಧಿಕ ವೆಚ್ಚಕ್ಕೂ ಕಡಿವಾಣ ಬೀಳಲಿದೆ ಎಂದು ನಗರ ತಜ್ಞ ಪ್ರೊ.ಶ್ರೀಹರಿ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಸಬ್ ಅರ್ಬನ್ ರೈಲು ಯೋಜನೆ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸುವ ವಿಷಯದಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕಿಂತ ಹೆಚ್ಚು ಯಶಸ್ವಿಯಾಗಿರುವ ಬಹು ಸಾರಿಗೆ ವ್ಯವಸ್ಥೆ ಎನಿಸಿರುವ ತ್ವರಿತ ಸಮೂಹ ಸಾರಿಗೆ(MRTS) ಅಡಿ ತಂದರೆ ಹೆಚ್ಚು ಅನುಕೂಲವಾಗಲಿದೆ. ನಿರ್ವಹಣೆಯೂ ಸುಲಭವಾಗಲಿದೆ. ಹೇಗೆಂದರೆ ಬಹುಸಾರಿಗೆ ವ್ಯವಸ್ಥೆಯಲ್ಲಿ ಒಂದೇ ರಸ್ತೆಯೊಳಗೆ ರೈಲು, ಬಸ್ ಹಾಗೂ ಮೆಟ್ರೋ ಸಾರಿಗೆ ಸಾಧ್ಯವಾಗಲಿದೆ. ತಂತ್ರಜ್ಞಾನ ಬಳಸಿಕೊಂಡು ತ್ವರಿತ ಸಮೂಹ ಸಾರಿಗೆಗೆ ಉತ್ತೇಜನ ನೀಡಿದರೆ ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ತಿಳಿಸಿದರು.
ಸಾರಿಗೆ ಭೂದೃಶ್ಯವೇ ಬದಲು
ಬಿಎಸ್ಆರ್‌ಪಿ ಹಾಗೂ ಮೆಟ್ರೋ ಜಾಲದ ಸಂಯೋಜನೆಯಿಂದ ಬೆಂಗಳೂರಿನ ಸಾರಿಗೆ ಭೂದೃಶ್ಯವೇ ಬದಲಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಗೂ ಸಮಗ್ರ ದೃಷ್ಟಿಕೋನ ಒದಗಿಸಲಿದೆ. ಉಪ ನಗರ ರೈಲು ಯೋಜನೆಯಿಂದ ಸುಸ್ಥಿರ, ಸುಸಂಘಟಿತ ಮತ್ತು ಭವಿಷ್ಯದ ಚಲನಶೀಲತೆಯು ರಚನಾತ್ಮಕವಾಗಿ ಇರಲಿದೆ ಎಂದು ಐಐಎಸ್ಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ ಸಾಕಷ್ಟು ಅಡೆತಡೆಗಳಿದ್ದು, ಅಂದುಕೊಂಡಂತೆ ನಾಲ್ಕೂ ಕಾರಿಡಾರ್‌ಗಳಲ್ಲಿ ರೈಲು ಕಾರ್ಯಾಚರಣೆ ಆರಂಭಿಸಿದರೆ 2025, 2031 ಮತ್ತು 2041 ನೇ ಸಾಲಿನಲ್ಲಿ ಒಟ್ಟು ದೈನಂದಿನ ಪ್ರಯಾಣಿಕರ ಸಂಖ್ಯೆಯು ಕ್ರಮವಾಗಿ 9.84 ಲಕ್ಷ, 13.41 ಲಕ್ಷ ಹಾಗೂ 17.60 ಲಕ್ಷ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆಯಿದೆ.
ಕೆಂಗೇರಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಂಟೋನ್ಮೆಂಟ್, ಕೆಂಗೇರಿ, ಹೆಬ್ಬಾಳ, ಬಾಣಸವಾಡಿ ಹಾಗೂ ಯಶವಂತಪುರ ವಿಭಾಗಗಳಲ್ಲಿ ಉಉನಗರ ರೈಲು ಯೋಜನೆಗೆ ಸ್ಥಳಾವಾಕಾಶ ಕೊರತೆ ಇದೆ. ರೈಲ್ವೆ ಜಾಗದ ಗಡಿಯಲ್ಲಿ ಖಾಸಗಿ ಕಟ್ಟಡಗಳು, ದೇವಾಲಯಗಳನ್ನು ನಿರ್ಮಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಮುಗಿದರೆ ಯೋಜನೆಯ ವೇಗ ಹೆಚ್ಚಲಿದೆ.
ಎಲ್ಲಿಂದ, ಎಲ್ಲಿಗೆ ಉಪನಗರ ರೈಲು?
ಬೆಂಗಳೂರು ಹೊರವಲಯದ ಪ್ರದೇಶಗಳ ನಡುವೆ ಸಂಪರ್ಕ ಜಾಲ ವಿಸ್ತರಿಸುವ ಭಾಗವಾಗಿ ಒಟ್ಟು 156.3 ಕಿ.ಮೀ ಉದ್ದದ ನಾಲ್ಕು ಪ್ರಮುಖ ಕಾರಿಡಾರ್ಗಳನ್ನು ಉಪನಗರ ರೈಲು ಯೋಜನೆ ಹೊಂದಿದೆ.
ಸಂಪಿಗೆ ಕಾರಿಡಾರ್ (ಕಾರಿಡಾರ್ 1) – ಮೆಜೆಸ್ಟಿಕ್ ಹಾಗೂ ಯಶವಂತಪುರ ಸಂಪರ್ಕಿಸಲಿದೆ. ಇದೇ ಮಾರ್ಗ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ವಿಸ್ತರಣೆಯಾಗಲಿದೆ.
ಮಲ್ಲಿಗೆ ಕಾರಿಡಾರ್ (ಕಾರಿಡಾರ್ 2) - ಚಿಕ್ಕಬಾಣಾವರದಿಂದ (ಸೋಲದೇವನಹಳ್ಳಿವರೆಗೆ ವಿಸ್ತರಣೆ) ಪ್ರಾರಂಭಗೊಂಡು ಬಯ್ಯಪ್ಪನಹಳ್ಳಿ ಸಮೀಪದ ಬೆನ್ನಿಗಾನಹಳ್ಳಿಯಲ್ಲಿ ಕೊನೆಯಾಗಲಿದೆ.
ಪಾರಿಜಾತ ಕಾರಿಡಾರ್ (ಕಾರಿಡಾರ್ 3)- ಕೆಂಗೇರಿಯಿಂದ ವೈಟ್ ಫೀಲ್ಡ್ ವರೆಗೆ ಇರಲಿದೆ.
ಕನಕ ಕಾರಿಡಾರ್ (ಕಾರಿಡಾರ್ 4)- ಚಂದಾಪುರ ಸಮೀಪದ ಹೀಲಲಿಗೆಯಿಂದ ಯಲಹಂಕ ಬಳಿಯ ರಾಜನುಕುಂಟೆವರೆಗೆ ವಿಸ್ತರಿಸಲಿದೆ.
2027 ರ ಹೊತ್ತಿಗೆ ಎಲ್ಲಾ ಪ್ರಸ್ತಾವಿತ ಕಾರಿಡಾರ್ ಗಳಲ್ಲಿ ಕೆ-ರೈಡ್(ಕರ್ನಾಟಕ- ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ) ತಾತ್ಕಾಲಿಕ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ. ಇದು 2031ರ ಸಮಗ್ರ ಚಲನಶೀಲತಾ ಯೋಜನೆಗೆ ಮುನ್ನಡಿಯಾಗಲಿದೆ ಎಂದು ವಿಶ್ಲೇಷಿಸಿದೆ.
ಅಧ್ಯಯನಕ್ಕೆ ಎಂಎನ್ಎಲ್ ಮಾದರಿ ಬಳಕೆ
ಉಪನಗರ ರೈಲಿನ( ಸಬ್ ಅರ್ಬನ್ ) ಉಪಯುಕ್ತತೆಯನ್ನು 2027, 2031 ಮತ್ತು 2041 ರ ಸಾಲಿನಲ್ಲಿ ವಿಶ್ಲೇಷಣೆಗೆ ಒಳಪಡಿಸಲು ಐಐಎಸ್ಸಿ ತಜ್ಞರು ಎಂಎನ್ಎಲ್ ಮಾದರಿ (ವರ್ಗೀಕೃತ ದತ್ತಾಂಶದೊಂದಿಗೆ ವ್ಯವಹರಿಸುವಾಗ ವಿಭಿನ್ನ ಫಲಿತಾಂಶಗಳ ಸಂಭವನೀಯತೆ ಊಹಿಸುವ ಮಾದರಿ ) ಅಳವಡಿಸಿಕೊಂಡಿದ್ದಾರೆ.
ಉಪನಗರ ರೈಲಿನ ಪ್ರಯಾಣದ ಸಮಯವು ಮೆಟ್ರೋಕ್ಕಿಂತ ಶೇ 20 ಕಡಿಮೆ ಇದ್ದರೂ ಸ್ಪರ್ಧೆಯನ್ನು ಖಚಿತಪಡಿಸಲಿದೆ. ಖಾಸಗಿ ಸಾರಿಗೆ ಪ್ರಯಾಣದ ವೆಚ್ಚಗಳಲ್ಲಿನ ಹಣದುಬ್ಬರವು 2027 ರ ಪ್ರಯಾಣದ ವೆಚ್ಚಗಳಿಗೆ ಹೋಲಿಸಿದರೆ 2031 ಹಾಗೂ 2041 ರಲ್ಲಿ ಸ್ಥಿರವಾಗಿರಲಿದೆ ಎಂದು ಊಹಿಸಲಾಗಿದೆ. ಏಕೆಂದರೆ ದರ ಪರಿಷ್ಕರಣೆಗಳು ಸಾಮಾನ್ಯವಾಗಿ ದೀರ್ಘಾವಧಿಗೆ ಒಮ್ಮೆ ನಡೆಯಲಿವೆ. ಹಾಗಾಗಿ ಬೆಲೆಗಳು ಸ್ಥಿರವಾಗಿರಲಿವೆ ಎಂದು ಅಧ್ಯಯನ ಹೇಳಿದೆ.
ಸಾರಿಗೆ ವಿಧಾನ | ಶೇಕಾಡಾವಾರು ಹಂಚಿಕೆ (2027 2031 2041) |
ಕಾರು | 5.80 | 5.78 | 2.87 |
ದ್ವಿಚಕ್ರ ವಾಹನ | 17.60 | 16.66 | 14.38 |
ಆಟೋ/ಟ್ಯಾಕ್ಸಿ | 2.63 | 2.77 | 0.88 |
ಬಸ್ | 21.51 | 20.06 | 22.97 |
ಮೆಟ್ರೋ | 18.92 | 19.89 | 22.07 |
ಉಪನಗರ ರೈಲು | 18.16 | 19.45 | 21.45 |
ಮೋಟಾರೀಕೃತವಲ್ಲದ ಸಾರಿಗೆ | 15.38 | 15.38 | 15.38 |
ಒಟ್ಟು MRTS | 37.29 | 39.34 | 43.52 |
ಒಟ್ಟು PT + NMT | 74.30 | 74.78 | 81.87 |
ಬಿಎಸ್‌ಆರ್‌ಪಿ ಸ್ಥಿತಿಗತಿ ಏನು ಎತ್ತ?
ಬೆಂಗಳೂರು ಉಪನಗರ ರೈಲು ಯೋಜನೆಯ ಅನುಷ್ಠಾನಕ್ಕಾಗಿ ಸುಮಾರು 101.687 ಎಕರೆ ಖಾಸಗಿ ಭೂಮಿ ಅವಶ್ಯಕವಾಗಿದೆ. ಈಗಾಗಲೇ ರೈಲ್ವೆ ಬಳಿ ಸುಮಾರು 326.9 ಎಕರೆ ಲಭ್ಯವಿದೆ.
25KV AC, 50 HZ ಸಿಂಗಲ್ ಫೇಸ್ ಎಳೆತದ ವ್ಯವಸ್ಥೆಯೊಂದಿಗೆ 3660 mm ಅಗಲದ ಬ್ರಾಡ್ ಗೇಜ್ ಹವಾನಿಯಂತ್ರಿತ ಕೋಚ್‌ಗಳನ್ನು ನಿರ್ಮಿಸಲು 2019 ರಲ್ಲಿ ಬಿಡುಗಡೆಯಾದ ಯೋಜನೆಯ ಕಾರ್ಯಸಾಧ್ಯತೆಯ ವರದಿ ಶಿಫಾರಸು ಮಾಡಿದೆ.
ಹೆಚ್ಚಿನ ಆವರ್ತನ ಕಾರ್ಯಾಚರಣೆ ಅಗತ್ಯವನ್ನು ಪೂರೈಸಲು CBCTC ಸಿಗ್ನಲಿಂಗ್ ವ್ಯವಸ್ಥೆ ಪ್ರಸ್ತಾಪಿಸಲಾಗಿದೆ. ಆರಂಭಿಕ ಕಾರ್ಯಾಚರಣೆ 6 ಬೋಗಿಗಳೊಂದಿಗೆ ಆರಂಭವಾಗಲಿದೆ. ಪ್ರತಿ ರೈಲು ಸಂಚಾರವು 12 ನಿಮಿಷದಿಂದ 20 ನಿಮಿಷ ಅಂತರದಲ್ಲಿರಲಿದೆ.
ಬೆಳಿಗ್ಗೆ 5 ರಿಂದ ಮಧ್ಯರಾತ್ರಿಯವರೆಗೆ ಸೇವೆ ಇರಲಿದೆ. 90 ಕಿ.ಮೀ ವೇಗದಲ್ಲಿ ರೈಲುಗಳು ಸಂಚರಿಸಲಿವೆ. ಪ್ರತಿ ನಿಲ್ದಾಣದಲ್ಲಿ 30 ಸೆಕೆಂಡುಗಳ ಕಾಲ ರೈಲು ನಿಲುಗಡೆ ಆಗಲಿದೆ. ಯೋಜನೆಯ ಒಟ್ಟು ಬಂಡವಾಳ ವೆಚ್ಚವನ್ನು 2019 ರಲ್ಲಿ 14,615.26 ಕೋಟಿ ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯ ಮೊದಲ ವರ್ಷದ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಕ್ಕೆ 1,124.00 ಕೋಟಿ ಕಾಯ್ದಿರಿಸಲಾಗಿದೆ. ಆರ್ಥಿಕ ಆಂತರಿಕ ಆದಾಯ ದರ (EIRR) ಶೇ 19.01 ಎಂದು ಅಂದಾಜಿಸಲಾಗಿದೆ.
ಸಬ್ ಅರ್ಬನ್ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ
ಕಾರಿಡಾರ್ ಹೆಸರು | ದೈನಂದಿನ ಪ್ರಯಾಣಿಕರ ಸಂಖ್ಯೆ (ಲಕ್ಷಗಳು) 2027 2031 2041 |
ಉಪ-ನಗರ ರೈಲು | 156.3 ಕಿ.ಮೀ 156.3 ಕಿ.ಮೀ 156.3 ಕಿ.ಮೀ |
ಕಾರಿಡಾರ್ -1(ಕೆಎಸ್ಆರ್ ಬೆಂಗಳೂರು ನಗರ -ದೇವನಹಳ್ಳಿ) | 4.07 4.87 7.25 |
ಕಾರಿಡಾರ್ -2( ಬೈಯಪ್ಪನಹಳ್ಳಿ - ಚಿಕ್ಕಬಾಣವಾರ) | 3.75 4.49 6.67 |
ಕಾರಿಡಾರ್ -3(ಕೆಂಗೇರಿ - ವೈಟ್ ಫೀಲ್ಡ್) | 6.62 7.79 11.54 |
ಕಾರಿಡಾರ್ -4 (ಹೀಲಲಿಗೆ - ರಾಜಾನಕುಂಟೆ) | 5.32 6.69 11.23 |
ಒಟ್ಟು ದೈನಂದಿನ ಪ್ರಯಾಣಿಕರ ಸಂಖ್ಯೆ | 19.76 23.84 36.69 |