ಬಾಹ್ಯಾಕಾಶದಿಂದ ಧಾರವಾಡಕ್ಕೆ ಮರಳಿದ ಮೆಂತೆ, ಹೆಸರು ಕಾಳು: ಸಂಶೋಧನೆ ಶುರು
ಕಳೆದ ಎರಡು ದಿನಗಳ ಹಿಂದೆ ಧಾರವಾಡಕ್ಕೆ ತಲುಪಿದ ಈ ಕಾಳುಗಳನ್ನು ಕೃಷಿ ವಿವಿಯ ಬಯೋ ಟೆಕ್ನಾಲಜಿ ವಿಭಾಗದಲ್ಲಿ ಮತ್ತೆ -80 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸ್ಟೊರೆಜ್ ಮಾಡಿ ಇಡಲಾಗಿದೆ.;
ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಮೆಂತೆ ಮತ್ತು ಹೆಸರು ಕಾಳುಗಳು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ವಾಪಸ್ ಬಂದಿವೆ.
ಭಾರತದ ಎರಡನೇ ಗಗನಯಾತ್ರಿ ಎಂಬ ಖ್ಯಾತಿಗೆ ಪಾತ್ರರಾದ ಶುಭಾಂಶು ಶುಕ್ಲಾ ಅವರೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಕಳುಹಿಸಲಾಗಿದ್ದ ಮೆಂತೆ ಮತ್ತು ಹೆಸರು ಕಾಳುಗಳು, ಇದೀಗ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸುರಕ್ಷಿತವಾಗಿ ವಾಪಸ್ ಬಂದಿವೆ. ಈ ಬೀಜಗಳನ್ನು ಮುಂದಿನ ಎರಡು ತಿಂಗಳ ಕಾಲ ಸಮಗ್ರ ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಕೃಷಿ ವಿವಿಯ ಜೈವಿಕ ತಂತ್ರಜ್ಞಾನ (ಬಯೋ ಟೆಕ್ನಾಲಜಿ) ವಿಭಾಗದ ವಿಜ್ಞಾನಿ ಡಾ. ರವಿಕುಮಾರ್ ಹೊಸಮನಿ ತಿಳಿಸಿದ್ದಾರೆ.
ಶೂನ್ಯ ಗುರುತ್ವದಲ್ಲಿ ಬೆಳೆದ ಆಹಾರದ ಅಧ್ಯಯನ
ಬಾಹ್ಯಾಕಾಶದ ಕಠಿಣ ಪರಿಸರದಲ್ಲಿ, ವಿಶೇಷವಾಗಿ ಶೂನ್ಯ ಗುರುತ್ವದಲ್ಲಿ (zero gravity), ಗಗನಯಾತ್ರಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಸವಾಲನ್ನು ಎದುರಿಸಲು ಈ ಮಹತ್ವದ ಸಂಶೋಧನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯು, ಭವಿಷ್ಯದ ದೀರ್ಘಾವಧಿಯ ಬಾಹ್ಯಾಕಾಶ ಯಾನಗಳಲ್ಲಿ ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲೇ ತಾಜಾ ಆಹಾರವನ್ನು ಬೆಳೆದು, ಪೂರೈಸುವ ಸಾಧ್ಯತೆಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ.
ಕಳೆದ ಜೂನ್ 25ರಂದು, ಆಕ್ಸಿಯಂ-4 ವಾಣಿಜ್ಯ ಬಾಹ್ಯಾಕಾಶ ಯಾನದ ಭಾಗವಾಗಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಐಐಟಿ-ಧಾರವಾಡ ಜಂಟಿಯಾಗಿ ಈ ಕಾಳುಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದವು. ಡಾ. ರವಿಕುಮಾರ್ ಅವರ ಸಂಶೋಧನಾ ಯೋಜನೆಯಡಿಯಲ್ಲಿ, ತಲಾ ಆರು ಪ್ಲೇಟ್‌ಗಳಲ್ಲಿ ಮೆಂತೆ ಮತ್ತು ಹೆಸರು ಕಾಳುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶ ನಿಲ್ದಾಣದಲ್ಲೇ ಈ ಕಾಳುಗಳಿಗೆ ಇಂಜೆಕ್ಷನ್ ಮೂಲಕ ನೀರನ್ನು ನೀಡಿ ಮೊಳಕೆ ಬರಿಸುವಲ್ಲಿ ಯಶಸ್ವಿಯಾಗಿದ್ದರು.
ಮೊಳಕೆಯೊಡೆದ ನಂತರ, ಆ ಕಾಳುಗಳನ್ನು ಮುಂದಿನ ಅಧ್ಯಯನಕ್ಕಾಗಿ -80 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂರಕ್ಷಿಸಲಾಗಿತ್ತು. 18 ದಿನಗಳ ಬಾಹ್ಯಾಕಾಶ ಯಾನವನ್ನು ಯಶಸ್ವಿಯಾಗಿ ಮುಗಿಸಿ, ಜುಲೈ 15ರಂದು ಶುಭಾಂಶು ಶುಕ್ಲಾ ಮತ್ತು ತಂಡವು ಭೂಮಿಗೆ ಮರಳಿದ ನಂತರ, ಈ ಕಾಳುಗಳನ್ನು ಅಮೆರಿಕದಿಂದ ಭಾರತಕ್ಕೆ ತಂದು, ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗಿದೆ.
ಸಂಶೋಧನೆಯ ಮುಂದಿನ ಹಂತ
ಇದೀಗ ಧಾರವಾಡದಲ್ಲಿರುವ ಅತ್ಯಾಧುನಿಕ ಪ್ರಯೋಗಾಲಯದಲ್ಲಿ, ಬಾಹ್ಯಾಕಾಶದಿಂದ ಮರಳಿದ ಈ ಕಾಳುಗಳನ್ನು ಆಳವಾದ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಬಾಹ್ಯಾಕಾಶದ ಶೂನ್ಯ ಗುರುತ್ವ ಮತ್ತು ವಿಕಿರಣಗಳು ಕಾಳುಗಳ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರಿವೆ? ಅವುಗಳಲ್ಲಿರುವ ಪೋಷಕಾಂಶಗಳ ಪ್ರಮಾಣದಲ್ಲಿ ಏನಾದರೂ ಬದಲಾವಣೆಯಾಗಿದೆಯೇ? ಬೀಜಗಳ ಆನುವಂಶಿಕ ರಚನೆ ಮತ್ತು ಸೂಕ್ಷ್ಮಜೀವಿಯ ಸಮುದಾಯಗಳಲ್ಲಿನ ವ್ಯತ್ಯಾಸಗಳೇನು? ಮನುಷ್ಯನ ಬಳಕೆಗೆ ಈ ಆಹಾರ ಸುರಕ್ಷಿತವೇ ಮತ್ತು ಪೌಷ್ಟಿಕವೇ ಎಂಬ ಕೋನದಲ್ಲಿ ಸಂಶೋಧನೆ ನಡೆಯಲಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ಮುಂದಿನ ಎರಡು ತಿಂಗಳ ಕಾಲ ನಿರಂತರ ಸಂಶೋಧನೆ ನಡೆಸಲಿದ್ದಾರೆ.