ಸೈಬರ್ ಹೂಡಿಕೆ ವಂಚನೆ; ಪಾರ್ಟ್ ಟೈಂ ಉದ್ಯೋಗ ಆಮಿಷಕ್ಕೆ ವಿದ್ಯಾರ್ಥಿಗಳೇ ಟಾರ್ಗೆಟ್
ಬೆಂಗಳೂರಿನಲ್ಲಿ ಅರೆಕಾಲಿಕ ಉದ್ಯೋಗ ಆಮಿಷ ತೋರಿ ಹಣ ಲಪಟಾಯಿಸಿದ ಸೈಬರ್ ವಂಚನೆಯ ಜಾಲಕ್ಕೆ ವಿದ್ಯಾರ್ಥಿಗಳೇ ಟಾರ್ಗೆಟ್ ಆಗಿದ್ದ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.;
ಸೈಬರ್ ಅಪರಾಧಗಳು ಈಗ ಸಂಕೀರ್ಣವಾಗುತ್ತಿವೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ವಂಚನೆ ನಡೆಸುತ್ತಿರುವುದು ಈಗ ಸೈಬರ್ ಅಪರಾಧದ ಹೊಸ ಟ್ರೆಂಡ್.
ಬೆಂಗಳೂರು ಪೊಲೀಸರು ಬೇಧಿಸಿದ ಸೈಬರ್ ಹೂಡಿಕೆ ವಂಚನೆ ಜಾಲದಿಂದ ಇದು ಬಯಲಾಗಿದೆ. ವಿದ್ಯಾರ್ಥಿಗಳನ್ನೇ ಅಸ್ತ್ರವಾಗಿಸಿಕೊಂಡು ನಡೆಸಿದ ಸೈಬರ್ ಹೂಡಿಕೆ ವಂಚನೆ ಪ್ರಕರಣದಲ್ಲಿ ರಾಜಸ್ತಾನ ಮೂಲದ ನಾಲ್ವರು ಆರೋಪಿಗಳು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಸೈಬರ್ ವಂಚಕರು , "ಸೈಬರ್ ಹೂಡಿಕೆ" ಮೂಲಕ ಯಾವ ರೀತಿಯ ವಂಚಿಸುತ್ತಾರೆ? ಅವರ ಕಾರ್ಯಾಚರಣೆ ಹೇಗೆ?, ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಈ ವಂಚನೆ ಮಾಡಿದ್ದು ಹೇಗೆ ಮತ್ತು ಯಾಕೆ? ಈ ಎಲ್ಲಾ ಅಂಶಗಳು ಸೈಬರ್ ತನಿಖೆಯಲ್ಲಿ ಬೆಳಕಿಗೆ ಬಂದಿವೆ.
ಆ ಬಗ ಹೇಗೆ? ಎಂಬ ಮಾಹಿತಿ ಇಲ್ಲಿದೆ.
ಸೈಬರ್ ಹೂಡಿಕೆ ವಂಚನೆ ಹೇಗೆ?
ಕ್ರಿಪ್ಟೋಕರೆನ್ಸಿ, ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಬಹುದೆಂಬ ಉದ್ದೇಶದಿಂದ ಜನರು ಆನ್ಲೈನ್ ವಹಿವಾಟುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ನಾನಾ ರೀತಿಯಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಸೈಬರ್ ಅಪರಾಧದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳನ್ನೇ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ.
ವಾಟ್ಸಾಪ್ ಮತ್ತು ಟೆಲಿಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುವ ವಂಚಕರು, ತ್ವರಿತ ಲಾಭದ ಆಸೆ ಹುಟ್ಟಿಸುತ್ತಾರೆ. ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಹೂಡಿಕೆ ಮಾಡುವ ಹಣಕ್ಕೆ ಮೊದಲ ಬಾರಿಗೆ ಲಾಭವನ್ನೂ ನೀಡುತ್ತಾರೆ. ಇದನ್ನೇ ನಂಬಿ ಹೆಚ್ಚಿನ ಪ್ರಮಾಣದ ಹಣ ಹೂಡಿಕೆ ಮಾಡಿದಾಗ ಎಲ್ಲವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಕಾಣಬಹುದಾಗಿದೆ. ಅಲ್ಲದೇ ವಿದೇಶಿ ವಿನಿಮಯದ ವ್ಯಾಪಾರ, ಪ್ರಾಂಚೈಸಿ ನೀಡುವಂತಹ ಆಮಿಷಗಳೂ ಕೂಡ ಸೈಬರ್ ಹೂಡಿಕೆಯ ವಂಚನೆಯ ಕರಾಳ ಮುಖಗಳಾಗಿವೆ. ಈ ಬಗ್ಗೆ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂಬುದು ಸೈಬರ್ ತಜ್ಞರ ಮಾತು.
ಪಾರ್ಟ್ ಟೈಂ ಜಾಬ್ ಆಮಿಷ
ಬೆಂಗಳೂರಿನಲ್ಲಿ ಪಾರ್ಟ್ ಟೈಂ ಉದ್ಯೋಗದ ಆಮಿಷವೊಡ್ಡಿ ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚಿಸಿದ ಪ್ರಕರಣದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಂಡ ಸಂಗತಿ ಬಯಲಾಗಿದೆ. ಸೆ.6 ರಂದು ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಸೈಬರ್ ವಂಚನೆ ಪ್ರಕರಣ ದಾಖಲಾಗಿತ್ತು. ಆನ್‌ಲೈನ್‌ನಲ್ಲಿ ಪಾರ್ಟ್ ಟೈಂ ಉದ್ಯೋಗ ಆಮಿಷ ತೋರಿದ ವಂಚಕರು ವ್ಯಕ್ತಿಯೊಬ್ಬರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ 12,43,250 ರೂ. ಹಾಕಿಸಿಕೊಂಡು ವಂಚಿಸಿದ್ದರು. ಪ್ರಕರಣದ ತನಿಖೆ ನಡೆಸಿದಾಗ ವಂಚನೆಗೆ ವಿದ್ಯಾರ್ಥಿಗಳನ್ನೇ ಬಳಸಿಕೊಂಡಿದ್ದ ಸಂಗತಿ ಬಯಲಾಯಿತು.
ಸೈಬರ್ ಹೂಡಿಕೆ ವಂಚನೆಗೆ ವಿದ್ಯಾರ್ಥಿಗಳೇ ಯಾಕೆ ಟಾರ್ಗೆಟ್?
ಬೆಂಗಳೂರಿನ ಸೈಬರ್ ಹೂಡಿಕೆ ವಂಚನೆ ಪ್ರಕರಣದಲ್ಲಿ ಹಣ ಹಾಕಿಸಿಕೊಂಡಿದ್ದ ಖಾತೆಗಳ ಮಾಹಿತಿಯನ್ನು ಪೊಲೀಸರು ಪಡೆದಿದ್ದರು. ತನಿಖೆ ನಡೆಸಿದಾಗ ಆ ಖಾತೆ ವಿದ್ಯಾರ್ಥಿಯದ್ದಾಗಿತ್ತು. ಹಣ ವಿನಿಮಯಕ್ಕೆ (ಕರೆನ್ಸಿ ಎಕ್ಸ್ಚೇಂಜ್) ಬ್ಯಾಂಕ್ ಖಾತೆಗಳು ಬೇಕಾಗಿದ್ದು, ಹೆಚ್ಚು ಬ್ಯಾಂಕ್ ಖಾತೆಗಳು ತೆರೆಸಿದರೆ ಲಾಭಾಂಶ ನೀಡುವುದಾಗಿ ವಿದ್ಯಾರ್ಥಿಗಳಿಗೆ ರಾಜಸ್ತಾನಿ ಮೂಲದ ವಂಚಕರು ನಂಬಿಸಿದ್ದರು. ಅಂತೆಯೇ ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗಳನ್ನು ಮಾಡಿಸಿದ್ದರು. ಬಳಿಕ ಖಾತೆಯ ಪಾಸ್ ಬುಕ್, ಎಟಿಎಂ ಕಾರ್ಡ್, ಪಿನ್ ಸಂಖ್ಯೆ, ಚೆಕ್ ಬುಕ್ ಹಾಗೂ ಮೊಬೈಲ್ ಸಿಮ್ ಕಾರ್ಡನ್ನು ವಂಚಕರೇ ಪಡೆದುಕೊಂಡಿದ್ದರು. ಈ ಖಾತೆಗಳನ್ನು ವಂಚಕರು ಕ್ರಿಪ್ಟೊ ಕರೆನ್ಸಿ ಖರೀದಿಗೆ ಬಳಸಿದ್ದರು. ಅಲ್ಲಿ ಬಂದ ಲಾಭಾಂಶವನ್ನು ವಿದ್ಯಾರ್ಥಿಗಳ ಖಾತೆಗೆ ವರ್ಗಾವಣೆ ಮಾಡಿ, ಅಲ್ಲಿಂದ ಡಿಜಿಟಲ್ ವಾಲೆಟ್‌ಗಳಿಗೆ ಕಳುಹಿಸಿಕೊಂಡು ವಂಚಿಸುತ್ತಿದ್ದರು.
ಬ್ಯಾಂಕ್ ಖಾತೆ ತೆರೆಸಲು ರಾಜಸ್ತಾನದಿಂದ ಬಂದಿದ್ದ ವಂಚಕರು
ಪಾರ್ಟ್ ಟೈಂ ಜಾಬ್ ಕೊಡಿಸುವ ಆಮಿಷ ಪ್ರಕರಣದಲ್ಲಿ ಹಣ ಹಾಕಿದ್ದ ಖಾತೆಯೊಂದು ವಿದ್ಯಾರ್ಥಿಯದ್ದಾಗಿದ್ದು, ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ರಾಜಸ್ತಾನದ ಆರೋಪಿಗಳ ಮಾಹಿತಿ ತಿಳಿದುಬಂದಿದೆ.
ಅ.20 ಬೆಂಗಳೂರಿನ ಬೊಮ್ಮನಹಳ್ಳಿಯ ಪಿ.ಜಿ ಒಂದರಲ್ಲಿ ವಾಸವಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ವಂಚಕರು ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆ ತೆರೆಸಲೆಂದೇ ರಾಜಸ್ತಾನದಿಂದ ಬೆಂಗಳೂರಿಗೆ ಬಂದಿದ್ದರು ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದರು.
ಅ.21 ರಂದು ರಾಜಸ್ತಾನದಿಂದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಅ.25 ರಂದು ರಾಜಸ್ಯಾನದ ಉದಯಪುರದಲ್ಲಿ ಆರೋಪಿಗಳು ತಂಗಿದ್ದ ಮನೆಯಲ್ಲಿ ಪಂಚನಾಮೆ ನಡೆಸಿದಾಗ 19 ಮೊಬೈಲ್ ಫೋನ್, 2 ಲ್ಯಾಪ್ ಟಾಪ್, 20 ಸಿಮ್ ಕಾರ್ಡ್, ವಿದ್ಯಾರ್ಥಿಗಳಿಂದ ತೆರೆಸಿದ್ದ 34 ಬ್ಯಾಂಕ್ ಪಾಸ್‌ಬುಕ್‌ಗಳು, 106 ಡೆಬಿಟ್ ಕಾರ್ಡ್, 39 ಬ್ಯಾಂಕ್ ಚೆಕ್ ಬುಕ್‌ಗಳು ಹಾಗೂ 75 ಸಾವಿರ ನಗದನ್ನು ಜಪ್ತಿ ಮಾಡಿದ್ದರು.