ವಿದ್ಯಾರ್ಥಿನಿ ಪ್ರಬುದ್ಧ ಕೊಲೆ ಪ್ರಕರಣ: ತನಿಖೆ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

Update: 2024-06-25 07:27 GMT

ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಪ್ರಬುದ್ದ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಮೃತ ಬಾಲಕಿಯ ತಾಯಿ ಸೌಮ್ಯಾ ಅವರು ಖುದ್ದು ಸಿಎಂ ಭೇಟಿಯಾಗಿ ಮನವಿ ಮಾಡಿದ್ದರು. ಅವರ ದೂರಿನ ಮೇರೆಗೆ ಸಿಐಡಿಗೆ ವಹಿಸಲು ಡಿಜಿ&ಐಜಿಪಿ ಅಲೋಕ್ ಮೋಹನ್‌ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸಾಮಾಜಿಕ ಹೋರಾಟಗಾರರು ಆಗಿರುವ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಪ್ರಬುದ್ದ ಕೊಲೆ ವಿಚಾರದಲ್ಲಿ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ. ಅದೆಷ್ಟೋ ಜನರ ಪರವಾಗಿ ಹೋರಾಟ ಮಾಡಿದ ನಾನೀಗ ನನ್ನ ಮಗಳ ಕೊಲೆ ಪ್ರಕರಣದಲ್ಲಿ ನ್ಯಾಯ ಪಡೆಯಲು ಆಗುತ್ತಿಲ್ಲ. ಸುಬ್ರಹ್ಮಣ್ಯಪುರ ಪೊಲೀಸರು ನನಗೆ ನ್ಯಾಯ ಕೊಡುವ ಬದಲು ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ, ಸಿಐಡಿ ತನಿಖೆ ವಹಿಸಿದ್ದಾರೆ.

ಮೇ 15 ರಂದು ಬೆಂಗಳೂರು ದಕ್ಷಿಣ ಡಿಸಿಪಿ ವ್ಯಾಪ್ತಿಯ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಬುದ್ದ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತೆ ಆಗಿರುವ ಕೆ.ಆರ್.ಸೌಮ್ಯ ಅವರು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದರು.

ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಬುದ್ದ ಮರಣೋತ್ತರ ಪರೀಕ್ಷೆ ನಡೆದಾಗ ತಲೆಗೆ ಹೊಡೆದು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡ ಹಾಗೆ ದೇಹವನ್ನು ಇರಿಸಿದ್ದು ಕಂಡು ಬಂದಿತ್ತು.  ಆದರೂ ಸೂಕ್ತ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಮೊದಲು ಪೊಲೀಸರು ಪರಿಗಣಿಸಿದ್ದರು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಮಗಳ ಸಾವಿನ ಬಗ್ಗೆ ಸೌಮ್ಯ ಅನುಮಾನ ವ್ಯಕ್ತಪಡಿಸಿದ್ದರು.

ಆರೋಪಿಗಳನ್ನು ಬಂಧಿಸಿದರೂ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪಿ ಕಡೆಯವರು ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿಯೇ ಬಾರ್‌ ನಡೆಸಿಕೊಂಡು ಪೊಲೀಸರೊಂದಿಗೆ ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ಧಾರೆ. ಈ ಪ್ರಕರಣದಲ್ಲಿ ಮಗಳನ್ನು ಕಳೆದುಕೊಂಡಿದ್ದೇನೆ. ನನಗೆ ಹಾಗೂ ನನ್ನ ತಾಯಿಗೂ ಜೀವ ಬೆದರಿಕೆಯಿದೆ. ಒಂಟಿ ಪೋಷಕಳಾದ ನನಗೆ ನ್ಯಾಯ ಕೊಡಿಸಿ ಎಂದು ಸೌಮ್ಯ ಮನವಿಯಲ್ಲಿ ವಿವರಿಸಿದ್ದರು.

ʻʻನನ್ನ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯನವರು ಸಿಐಡಿಗೆ ವಹಿಸಿದ್ದಾರೆ. ಹೆಣ್ಣುಮಕ್ಕಳು ನಿರಾಕರಿಸಿದರೆ ಅವರನ್ನು ಬರ್ಬರವಾಗಿ ಹತ್ಯೆ ಮಾಡುತ್ತಾರೆ. ಸಮಾಜಕ್ಕೆ ಯಾವ ಸಂದೇಶ ಸಿಗುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲʼʼ ಎಂದು ಪ್ರಬುದ್ಧ ತಾಯಿ ಸೌಮ್ಯ ಹೇಳಿದ್ದಾರೆ.

Tags:    

Similar News