ಶಿಡ್ಲಘಟ್ಟದಲ್ಲಿ ಐದು ವರ್ಷದ ಬಾಲಕಿ ಮೇಲೆ ಬೀದಿನಾಯಿ ದಾಳಿ
ಬಿಜಿಎಸ್ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದ ಬಾಲಕಿ ಶುಕ್ರವಾರ ಅಂಗಡಿಗೆ ತೆರಳುವಾಗ ಹಿಂಬಾಲಿಸಿ ಬಂದ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ. ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.;
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ದಾಳಿ ಹೆಚ್ಚಾಗಿದೆ. ವೃದ್ಧರು ಹಾಗೂ ವಿದ್ಯಾರ್ಥಿಗಳ ಮೇಲಿನ ದಾಳಿ ಪ್ರಕರಣಗಳು ಮಾಸುವ ಮುನ್ನವೇ ಶಿಡ್ಲಘಟ್ಟದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ, ಗಾಯಗೊಳಿಸಿವೆ.
ಬಿಜಿಎಸ್ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದ ಬಾಲಕಿ ಶುಕ್ರವಾರ ಅಂಗಡಿಗೆ ತೆರಳುವಾಗ ಹಿಂಬಾಲಿಸಿ ಬಂದು ಬೀದಿ ನಾಯಿಗಳು ದಾಳಿ ನಡೆಸಿವೆ. ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ನಗರದ ನೆಹರು ಕ್ರೀಡಾಂಗಣದಲ್ಲಿ ಬಾಲಕನ ಮೇಲೆ 15 ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಈಗ 20ನೇ ವಾರ್ಡ್ ನಲ್ಲಿ ಬೀದಿ ನಾಯಿಗಳು ಬಾಲಕಿ ಮೇಲೆ ದಾಳಿ ನಡೆಸಿವೆ ಎಂದು ಸ್ಥಳೀಯರು ದೂರಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಮುಂಜಾನೆ ವಾಕಿಂಗ್‌ಗೆ ಹೋಗಿದ್ದ ವೃದ್ಧನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ಗಾಯಗೊಂಡಿದ್ದ ವೃದ್ಧ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೂ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ್ದವು.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಬೀದಿ ನಾಯಿ ದಾಳಿಯಿಂದ 30 ಜನರು ಗಾಯಗೊಂಡಿದ್ದರು. ಈ ಪೈಕಿ ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನ ಕೆಳ ತುಟಿ ಹರಿದು ಹೋದ ಪರಿಣಾಮ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಬೀದಿ ನಾಯಿಗಳ ಕುರಿತು ಸುಪ್ರೀಂ ತೀರ್ಪು
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (ಎನ್ಸಿಆರ್) ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕೆಂದು ನೀಡಿದ್ದ ತನ್ನ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 22) ಮಾರ್ಪಡಿಸಿತ್ತು.
ಹೊಸ ನಿರ್ದೇಶನದ ಪ್ರಕಾರ, ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆ ನೀಡಿದ ಬಳಿಕ ಅವುಗಳನ್ನು ಹಿಡಿದ ಸ್ಥಳದಲ್ಲೇ ಬಿಡುಗಡೆ ಮಾಡಬೇಕು ಎಂದು ತೀರ್ಪಿನಲ್ಲಿ ತಿಳಿಸಿತ್ತು.
ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ವಿಶೇಷ ಪೀಠವು ಮಹತ್ವದ ತೀರ್ಪು ನೀಡಿತ್ತು. ಆಶ್ರಯತಾಣಗಳಿಗೆ ಸ್ಥಳಾಂತರಿಸಿದ ನಾಯಿಗಳನ್ನು ಮರಳಿ ಬಿಡುಗಡೆ ಮಾಡಬಾರದು ಎಂಬ ತನ್ನ ಹಿಂದಿನ ನಿರ್ದೇಶನವನ್ನು ರದ್ದುಪಡಿಸಿತ್ತು.
ಆದಾಗ್ಯೂ, ರೇಬೀಸ್ ಸೋಂಕಿತ, ರೇಬೀಸ್ ಶಂಕಿತ ಅಥವಾ ಆಕ್ರಮಣಕಾರಿ ಸ್ವಭಾವ ಪ್ರದರ್ಶಿಸುವ ನಾಯಿಗಳಿಗೆ ಈ ಮಾರ್ಪಡಿತ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ದೇಶಾದ್ಯಂತ ತೀರ್ಪು ವ್ಯಾಪ್ತಿ ವಿಸ್ತರಣೆ
ಬೀದಿ ನಾಯಿಗಳ ಸಮಸ್ಯೆ ಕೇವಲ ದೆಹಲಿ-ಎನ್ಸಿಆರ್ ಸೀಮಿತವಾಗಿಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್, ಈ ಪ್ರಕರಣದ ವ್ಯಾಪ್ತಿಯನ್ನು ಇಡೀ ದೇಶಕ್ಕೆ ವಿಸ್ತರಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ವಿವಿಧ ಹೈಕೋರ್ಟ್‌ಗಳಲ್ಲಿ ಈ ಕುರಿತು ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ತನ್ನ ವ್ಯಾಪ್ತಿಗೆ ವರ್ಗಾಯಿಸಿಕೊಂಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಎಂಟು ವಾರಗಳ ನಂತರ ನಡೆಸಲಾಗುವುದು ಎಂದು ತಿಳಿಸಿತ್ತು.