ಡಿಜೆ ಹಳ್ಳಿ- ಕೆಜೆ ಹಳ್ಳಿ ಕೇಸ್ ಹಿಂಪಡೆಯಲು ಸಿದ್ಧತೆ: ರಾಜ್ಯ ಸರ್ಕಾರದ ವಿರುದ್ಧ ಜೋಷಿ ಆರೋಪ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಗಲಭೆಕೋರರ ಮೇಲಿನ ಕೇಸ್ ಹಿಂಪಡೆಯಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಿದ್ದಾರೆ;
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಗಲಭೆಕೋರರ ಮೇಲಿನ ಕೇಸ್ ಹಿಂಪಡೆಯಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಆರೋಪಿಸಿದ್ದಾರೆ.
ಅವರು ಗುರುವಾರ ಸಂಡೂರು ವಿಧಾನಸಭಾ ಕ್ಷೇತ್ರದ ತೋರಣಗಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಮುಸ್ಲಿಂ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಹಳೇ ಹುಬ್ಬಳ್ಳಿ ಗಲಭೆಕೋರರ ಮೇಲಿನ ಕೇಸ್ ರದ್ದುಪಡಿಸಿತು. ಇದೀಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಮುಸ್ಲಿಮರ ಮೇಲಿನ ಕೇಸ್ ಹಿಂಪಡೆಯಲು ತಯಾರಿ ನಡೆಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ಸಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಅಷ್ಟು ಸತ್ಯವಂತರಾಗಿದ್ದರೆ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ ಜೋಶಿ, ರಾಜ್ಯ ಸರ್ಕಾರದ್ದು ಎಲ್ಲಾ ಬೋಗಸ್ ಗ್ಯಾರೆಂಟಿಗಳು. ಈ ಸರ್ಕಾರ ಒಂದೆಡೆ ಕೊಟ್ಟು, ಮತ್ತೊಂದಲ್ಲಿ ಅದರ ಹತ್ತರಷ್ಟು ಕಿತ್ತುಕೊಳ್ಳುತ್ತಿದೆ. ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ, ವಿದ್ಯುತ್ ದರ, ಹಾಲಿನ ದರ, ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ರೈತರ ಪಹಣಿ ಶುಲ್ಕ ಹೀಗೆ ಎಲ್ಲದರಲ್ಲೂ ಬೆಲೆ ಏರಿಕೆ ಹೊರೆ ಹೊರಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಿ, ಎಷ್ಟು ಜನರಿಗೆ ತಲುಪಿವೆ? ಅದರ ಆದಾಯದ ಮೂಲ, ವೆಚ್ಚ ಸಮಗ್ರ ಮಾಹಿತಿಯುಳ್ಳ ಶ್ವೇತ ಪತ್ರ ಹೊರಡಿಸಲಿ ಮೊದಲು ಎಂದು ಸಚಿವ ಜೋಶಿ ಆಗ್ರಹಿಸಿದರು.
ಗೃಹಲಕ್ಷ್ಮಿ ಹಣ ಎಷ್ಟು ಜನರಿಗೆ ತಲುಪಿದೆ? ಇದರಲ್ಲಿ ತಾರತಮ್ಮ ತೋರಲಾಗಿದೆ. ಶಕ್ತಿ ಯೋಜನೆ ಕೊಟ್ಟರೆ ಪೆಟ್ರೋಲ್, ಡೀಸೆಲ್, ಪ್ರಯಾಣ ದರ ಹೆಚ್ಚಿಸಿದ್ದಾರೆ. ಫ್ರೀ ವಿದ್ಯುತ್ ಘೋಷಿಸಿದಂತೆ ಇಲ್ಲ. ಅಲ್ಲದೇ, 3 ರೂ. ಯುನಿಟ್ ಇದ್ದ ವಿದ್ಯುತ್ ಶುಲ್ಕ ಈಗ 7.50 ರೂ.ಗೆ ಹೆಚ್ಚಿಸಿದ್ದಾರೆಂದರು.