The Federal Karnataka Impact | ಎನ್‌ಎಚ್‌ಎಂ ನೌಕರರ ಗುತ್ತಿಗೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ
ʼದ ಫೆಡರಲ್ ಕರ್ನಾಟಕʼದ ವರದಿಗೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯು ಗುತ್ತಿಗೆ ಸಿಬ್ಬಂದಿಯ ಅವಧಿಯನ್ನು ಹಿಂದಿನಂತೆ ಯಥಾ ಪ್ರಕಾರ ವಿಸ್ತರಿಸಿದೆ. ಒಟ್ಟು 27 ಸಾವಿರ ಕಾರ್ಮಿಕರ ವಾರ್ಷಿಕ ನವೀಕರಣ ಅವಧಿಯನ್ನು ಪರಿಷ್ಕರಿಸಿದೆ.;
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಕಾರ್ಯಕ್ಷಮತೆ ಮೌಲ್ಯಮಾಪನ ವರದಿ ಪರಿಗಣಿಸಿ ಗುತ್ತಿಗೆ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ.
“ಸಾವಿರಾರು ಎನ್ಎಚ್ಎಂ ಸಿಬ್ಬಂದಿಗೆ 'ಆಂತರಿಕ ಮೌಲ್ಯಮಾಪನ'ವೇ ಶಾಪ ; 'ತಿಂಗಳ ನವೀಕರಣ'ದ ಪ್ರಲಾಪ” ಎಂಬ ಶೀರ್ಷಿಕೆಯಡಿ ʼದ ಫೆಡರಲ್ ಕರ್ನಾಟಕʼ ಗುತ್ತಿಗೆ ನೌಕರರ ಸಂಕಷ್ಟಗಳ ಕುರಿತು ವರದಿ ಪ್ರಕಟಿಸಿತ್ತು. ಜತೆಗೆ ಎನ್ಎಚ್ಎಂ ಗುತ್ತಿಗೆ ನೌಕರರ ಬವಣೆಗಳ ಕುರಿತಂತೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ-ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಕಾಂತ್ ಸ್ವಾಮಿ ಅವರೊಂದಿಗೆ ಚರ್ಚಾ ಕಾರ್ಯಕ್ರಮದ ವರದಿ ಪ್ರಸಾರ ಮಾಡಿತ್ತು.
ʼದ ಫೆಡರಲ್ ಕರ್ನಾಟಕʼದ ವರದಿಗೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯು ಗುತ್ತಿಗೆ ಸಿಬ್ಬಂದಿಯ ಅವಧಿಯನ್ನು ಹಿಂದಿನಂತೆ ಯಥಾ ಪ್ರಕಾರ ವಿಸ್ತರಿಸಿದೆ. ಒಟ್ಟು 27 ಸಾವಿರ ಕಾರ್ಮಿಕರ ವಾರ್ಷಿಕ ನವೀಕರಣ ಅವಧಿಯನ್ನು ಪರಿಷ್ಕರಿಸಿದೆ.
ಆದೇಶದಲ್ಲಿ ಏನಿದೆ?
2024-25ನೇ ಸಾಲಿನ ನಿಬಂಧನೆಯಂತೆ ಮಾನವ ಸಂಪನ್ಮೂಲ ಸಿಬ್ಬಂದಿಯ ಪರಿಷ್ಕೃತ ಕಾರ್ಯಕ್ಷಮತೆ ಮೌಲ್ಯಮಾಪನ ಪಟ್ಟಿಯನ್ವಯ ಕಾರ್ಯಸಾಧನೆ ಪರಾಮರ್ಶಿಸಿ 2025-26ನೇ ಸಾಲಿಗೆ ಗುತ್ತಿಗೆ ಸಿಬ್ಬಂದಿ ಅವಧಿ ಮುಂದುವರಿಸಲಾಗಿದೆ.
ಎನ್ಎಚ್ಎಂ ಸಿಬ್ಬಂದಿಯ ಗುತ್ತಿಗೆ ಅವಧಿ ಜುಲೈ 31ಕ್ಕೆ ಮುಕ್ತಾಯಗೊಂಡಿದೆ. ಅಂತಹವರಿಗೆ ಒಂದು ದಿನದ ವಿರಾಮ ನೀಡಿ ಆಗಸ್ಟ್ 2 ರಿಂದ 2026 ಮಾ.31 ರವರೆಗೆ ಅವಧಿ ವಿಸ್ತರಿಸಲಾಗಿದೆ. ಅತೃಪ್ತಿಕರ ಕಾರ್ಯಕ್ಷಮತೆ ಹೊಂದಿದ ಸಿಬ್ಬಂದಿಗೆ ಮೂರು ತಿಂಗಳ ಸೇವಾ ಅವಧಿಯನ್ನು ಅಂದರೆ ಆ.2 ರಿಂದ ಅ.31ರವರೆಗೆ ಷರತ್ತುಗಳನ್ವಯ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಆದಾಗ್ಯೂ, ಈ ಸುತ್ತೋಲೆಯು ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಕೋವಿಡ್-19 ಅವಧಿಗಾಗಿ ತಾತ್ಕಾಲಿಕವಾಗಿ ನೇಮಕವಾಗಿರುವ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾವಾರು ಒಟ್ಟು 22,741 ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಜಿಲ್ಲಾ ಮಟ್ಟದ ಮೌಲ್ಯಮಾಪನ ಸಮಿತಿಗಳು ನೀಡಿದ ಕಾರ್ಯಕ್ಷಮತೆ ವರದಿ ಆಧಾರದ ಮೇಲೆ 397 ಮಂದಿ ಗುತ್ತಿಗೆ ಸಿಬ್ಬಂದಿಗೆ ಮಾತ್ರ ಮೂರು ತಿಂಗಳ ವಿಸ್ತರಣೆ ನೀಡಲಾಗಿದೆ. ಉಳಿದಂತೆ ಎಲ್ಲರಿಗೂ ವರ್ಷದವರೆಗೆ ಅವಧಿ ವಿಸ್ತರಿಸಲಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ನೇರಗುತ್ತಿಗೆ ಆಧಾರದಲ್ಲಿ ಒಟ್ಟು 92 ಮಂದಿ ಮತ್ತು ಜಿಲ್ಲೆಗಳಲ್ಲಿ ಒಟ್ಟು 1010 ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ76 ನೇರ ಗುತ್ತಿಗೆ ಸಿಬ್ಬಂದಿಯ ಸೇವಾ ಅವಧಿಯನ್ನು 2026 ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಕಳಪೆ ಕಾರ್ಯಕ್ಷಮತೆ ತೋರಿದ 13 ಸಿಬ್ಬಂದಿಯ ಸೇವಾವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಗಿದೆ.
ಅಗತ್ಯ ಸೇವೆಯಲ್ಲಿರುವವರಿಗೆ ಭದ್ರತೆ ಒದಗಿಸಿ
ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ಮಾಧ್ಯಮದ ವರದಿಗೆ ಸರ್ಕಾರ ಎಚ್ಚೆತ್ತುಕೊಂಡು ಗುತ್ತಿಗೆ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ. ಸರ್ಕಾರದ ಆದೇಶದಿಂದಾಗಿ ಮುಂದಿನ ವರ್ಷ ಮಾರ್ಚ್‌ವರೆಗೆ ನೌಕರರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಕೆಲವರಿಗೆ ಮಾತ್ರ ಮೌಲ್ಯಮಾಪನ ವರದಿ ಆಧರಿಸಿ ಮೂರು ತಿಂಗಳಿಗೆ ಅವಧಿ ವಿಸ್ತರಿಸಿದೆ ಎಂದು ತಿಳಿಸಿದರು.
ಅಗತ್ಯ ಸೇವಾ ವಲಯದವಾಗಿರುವ ಆರೋಗ್ಯ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ನೌಕರರನ್ನು ಸೇವೆಯಿಂದ ಕೈ ಬಿಡುವ ಕೆಲಸ ಆಗಬಾರದು. ಸರ್ಕಾರ ಬೇಕಿದ್ದರೆ ಬೇರೆ ಇಲಾಖೆಗಳಲ್ಲಿ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಿ, ಆದರೆ, ಆರೋಗ್ಯ ಕ್ಷೇತ್ರದಲ್ಲಿ ಅದಾಗಬಾರದು. ಖುಷಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಿದರೆ ಮಾತ್ರ ಆರೋಗ್ಯ ಕ್ಷೇತ್ರ ಇನ್ನಷ್ಟು ಸುಧಾರಣೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.