Euthanasia | ದಯಾಮರಣ ಹಕ್ಕು ಜಾರಿ ಮಾಡಿದ ರಾಜ್ಯ ಸರ್ಕಾರ; ಏನಿದು ದಯಾಮರಣ ಆದೇಶ?
ಚೇತರಿಕೆ ಕಾಣುವ ಭರವಸೆಯೇ ಇಲ್ಲದ ರೋಗಿಗಳು, ನಿರಂತರ ಕೋಮಾದಲ್ಲಿರುವರಿಗೆ ಸಂವಿಧಾನದಲ್ಲಿ ಅಡಕವಾಗಿರುವ ಜೀವಿಸುವ ಹಕ್ಕಿನ ಕಲಂ 21 ರ ಅನ್ವಯ ಘನತೆಯಿಂದ ಮರಣ ಹೊಂದುವ ಹಕ್ಕು ನೀಡಿದೆ.;
ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿರುವ ರೋಗಿಗಳಿಗೆ ದಯಾಮರಣದ ಹಕ್ಕು ನೀಡುವ ಕುರಿತ ಸುಪ್ರೀಂಕೋರ್ಟ್ ನಿರ್ದೇಶನವನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಚೇತರಿಕೆ ಕಾಣುವ ಭರವಸೆಯೇ ಇಲ್ಲದ ರೋಗಿಗಳು, ನಿರಂತರ ಕೋಮಾದಲ್ಲಿರುವರಿಗೆ ಸಂವಿಧಾನದಲ್ಲಿ ಅಡಕವಾಗಿರುವ ಜೀವಿಸುವ ಹಕ್ಕಿನ ಕಲಂ 21 ರ ಅನ್ವಯ ಘನತೆಯಿಂದ ಮರಣ ಹೊಂದುವ ಹಕ್ಕು ನೀಡಿದೆ.
ಜೊತೆಗೆ ರೋಗಿಯು ಭವಿಷ್ಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಅಥವಾ ಬದುಕುವ ಇಚ್ಛೆ ಉಯಿಲು ದಾಖಲಿಸುವುದಕ್ಕೂ (ಲಿವಿಂಗ್ ವಿಲ್) ಅವಕಾಶ ನೀಡಲಾಗಿದೆ.
ದಯಾಮರಣ ನಿರ್ಧರಿಸಲು ಮಂಡಳಿ ಸ್ಥಾಪನೆ
ದಯಾಮರಣದ ಹಕ್ಕು ನಿರ್ಧರಿಸಲು ವೈದ್ಯರನ್ನು ಒಳಗೊಂಡ ಎರಡು ಮಂಡಳಿಗಳನ್ನು ಸ್ಥಾಪನೆ ಮಾಡಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮಾರಕ ರೋಗದಿಂದ ಬಳಲುತ್ತಿರುವವರಿಗೆ ಮರಣದ ಹಕ್ಕು ನೀಡುವ ಮೂಲಕ ರಾಜ್ಯ ಆರೋಗ್ಯ ಇಲಾಖೆ ಸುಪ್ರೀಂಕೋರ್ಟ್ನ ನಿರ್ದೇಶನ ಜಾರಿ ಮಾಡಿದೆ.
ದಯಾಮರಣ ಅನುಮತಿ ಪ್ರಕ್ರಿಯೆ ಹೇಗೆ?
ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಕುಟುಂಬಸ್ಥರ ಮನವಿ ಮೇರೆಗೆ ವೈದ್ಯರ ತಂಡ ದಯಾಮರಣ ಹಕ್ಕು ಪರಿಶೀಲಿಸಲಿದೆ.
ಇದಕ್ಕಾಗಿ ಪ್ರಾಥಮಿಕ(ಪ್ರೈಮರಿ) ಹಾಗೂ ಸೆಕೆಂಡರಿ ಎಂಬ ಎರಡು ವೈದ್ಯರ ಬೋರ್ಡ್ಗಳನ್ನು ಸ್ಥಾಪಿಸಲಿದೆ. ಪ್ರಾಥಮಿಕ ಹಾಗೂ ಸೆಕೆಂಡರಿ ಬೋರ್ಡ್ನಲ್ಲಿ ತಲಾ ಮೂವರು ವೈದ್ಯರು ಇರಲಿದ್ದಾರೆ. ಈ ಪೈಕಿ ಒಬ್ಬರು ಸರ್ಕಾರಿ ವೈದ್ಯರು ಇರಲಿದ್ದಾರೆ. ದಯಾ ಮರಣ ಕೋರುವ ರೋಗಿಯ ಕುಟುಂಬದ ಮನವಿಯನ್ನು ಮೊದಲಿಗೆ ಪ್ರಾಥಮಿಕ ಬೋರ್ಡ್ ಪರಿಶೀಲಿಸಿ ವರದಿ ನೀಡಲಿದೆ.
ರೋಗಿಯ ಕುಟುಂಬಸ್ಥರ ಮನವಿಯನ್ನು ಪ್ರೈಮರಿ ಬೋರ್ಡ್ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ನಂತರ ಆ ವರದಿಯನ್ನು ಸೆಕೆಂಡರಿ ಬೋರ್ಡ್ ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿಯ ನೀಡಲಿದೆ. ನ್ಯಾಯಾಲಯ ಅನುಮತಿ ನೀಡಿದ ಬಳಿಕ ರೋಗಿಗೆ ಅಳವಡಿಸಿರುವ ಕೃತಕ ಉಸಿರಾಟ ವ್ಯವಸ್ಥೆಯನ್ನು ವೈದ್ಯರು ತೆಗೆಯಲಿದ್ದಾರೆ.
ಅರುಣಾ ಶಾನ್ಬಾಗ್ ಪ್ರಕರಣ
1973 ರಲ್ಲಿ ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅರುಣಾ ರಾಮಚಂದ್ರ ಶಾನ್ಬಾಗ್ ಮೇಲೆ ಅದೇ ಆಸ್ಪತ್ರೆಯ ಗೇಟ್ ಕೀಪರ್ಗಳು ಲೈಂಗಿಕ ದೌರ್ಜನ್ಯ ಎಸಗಿದ್ದರು. ಘಟನೆಯ ಬಳಿಕ ಅರುಣಾ ಕೋಮಾ ಸ್ಥಿತಿಗೆ ತೆರಳಿದ್ದರು. ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ 42 ವರ್ಷಗಳ ಕಾಲ ಜೀವಚ್ಛವವಾಗಿ ಹಾಸಿಗೆ ಮೇಲೆ ಇದ್ದರು.
ಅರುಣಾ ಶಾನಭಾಗ್ ಅವರಿಗೆ ದಯಾಮರಣ ಪಾಲಿಸುವಂತೆ ಪತ್ರಕರ್ತೆ ಪಿಂಕಿ ವಿರಾನಿ ಸುಪ್ರೀಂಕೋರ್ಟ್ಗೆ 2010 ರಲ್ಲಿ ಮನವಿ ಮಾಡಿದ್ದರು. ಅದರಂತೆ ಮೂವರು ವೈದ್ಯರ ಸಮಿತಿ ರಚಿಸಿ ವರದಿ ಕೇಳಿತ್ತು. ಅರುಣಾ 40 ವರ್ಷಗಳಿಂದ ಕೋಮಾದಲ್ಲಿದ್ದು, ಬದುಕುವ ಸಾಧ್ಯತೆಯೇ ಇಲ್ಲ ಎಂದು ವೈದ್ಯರು ವರದಿ ನೀಡಿದ್ದರು. 2011 ಮಾರ್ಚ್ 7 ರಂದು ನ್ಯಾಯಾಲಯ ದಯಾಮರಣ ಹಕ್ಕು ನೀಡಿ ಆದೇಶಿಸಿತು.
ಅರುಣಾ ಶಾನ್ಬಾಗ್ ಸಾವಿಗೂ ಕೆಲ ದಿನಗಳ ಮೊದಲು ನ್ಯುಮೋನಿಯಾ ತಗುಲಿತ್ತು. ಆಕೆಯನ್ನು ಆಸ್ಪತ್ರೆಯ ವೈದ್ಯಕೀಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. 2015 ಮೇ 18 ರಂದು ಬೆಳಿಗ್ಗೆ ಅರುಣಾ ನಿಧನರಾದರು. ಆಕೆಯ ಅಂತ್ಯಕ್ರಿಯೆಯನ್ನು ಆಸ್ಪತ್ರೆಯ ದಾದಿಯರು ಮತ್ತು ಇತರ ಸಿಬ್ಬಂದಿಯರೇ ನೆರವೇರಿಸಿದ್ದರು.