ರಾಜ್ಯ ಕಾಂಗ್ರೆಸ್ ಐಟಿ ಸೆಲ್ ಪಾಕ್ ಉಗ್ರರ ಸ್ಲೀಪರ್ ಸೆಲ್: ಆರ್. ಅಶೋಕ್
ಭಾರತದ ವಿರೋಧದ ನಡುವೆಯೂ ಐಎಂಎಫ್ ಪಾಕಿಸ್ತಾನಕ್ಕೆ 8,500 ಕೋಟಿ ರೂಪಾಯಿ ಅನುದಾನ ನೀಡಿದೆ ಎಂಬ ಪೋಸ್ಟ್‌ನಲ್ಲಿ ಜಮ್ಮು ಕಾಶ್ಮೀರ ಸೇರಿದ ಪಾಕಿಸ್ತಾನದ ಭೂಪಟ ಹಾಕಿ ಜನಾಕ್ರೋಶಕ್ಕೆ ಗುರಿಯಾಗಿದ್ದ ಕಾಂಗ್ರೆಸ್ ಇದೀಗ ಪೋಸ್ಟ್ ಡಿಲೀಟ್ ಮಾಡಿದೆ.;
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ ಟ್ವೀಟ್ ಬಗ್ಗೆ ವಾಗ್ದಾಳಿ ನಡಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ನ ಸಾಮಾಜಿಕ ಜಾಲತಾಣಗಳು ಪಾಕಿಸ್ತಾದ ಉಗ್ರರ ಸ್ಲೀಪರ್ ಸೆಲ್ ರೀತಿ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಜಮ್ಮು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿರುವ ರೀತಿಯ ಭೂಪಟವನ್ನು ಕಾಂಗ್ರೆಸ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಆರ್. ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ́ಅಪರೇಷನ್ ಸಿಂದೂರ್ ́ ಕಾರ್ಯಾಚರಣೆಗೆ ಮೊದಲೇ ಪಾಕಿಸ್ತಾನದ ಜತೆ ಯುದ್ಧ ಬೇಡ ಎಂದು ಹೇಳಿಕೆ ನೀಡಿದ್ದರು. ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾದಾಗ ಉಲ್ಟಾ ಹೊಡೆದಿದ್ದರು. ́ಅಪರೇಷನ್ ಸಿಂದೂರ್ ́ ಮೂಲಕ ಪಾಕಿಸ್ತಾನದಲ್ಲಿರವ ಉಗ್ರರ ನೆಲೆಗಳನ್ನು ಧ್ವಂಸ ಮಾಡುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಮಹಾತ್ಮ ಗಾಂಧೀಜಿಯವರ "ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ" ಎಂಬ ಪೋಸ್ಟ್ ಮಾಡಿ ಬಳಿಕ ಡಿಲೀಟ್ ಮಾಡಿದ್ದರು ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಏಕಾಏಕಿ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಬಿಂಬಿಸುವ ಭೂಪಟ ಟ್ವೀಟ್ ಮಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನದ ಮೇಲೆ ತನಗೆಷ್ಟು ಪ್ರೀತಿ ಇದೆ ಎಂದು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಏನಿದು ಯಡವಟ್ಟು?
ಪಾಕಿಸ್ತಾನಕ್ಕೆ ಐಎಂಎಫ್ ಹಣಕಾಸು ಸೌಲಭ್ಯ ಒದಿಸುವುದಕ್ಕೆ ಭಾರತ ವಿರೋಧಿಸಿದ್ದರೂ, 8,500 ಕೋಟಿ ರೂಪಾಯಿ ಅನುದಾನ ನೀಡಿತ್ತು. ಇದನ್ನು ಪ್ರಧಾನಿ ಮೋದಿಯ ವೈಫಲ್ಯ ಎಂದು ಬಿಂಬಿಸಲು ಹೊರಟಿದ್ದ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ಪೋಸ್ಟ್ ಪ್ರಕಟಿಸಿತ್ತು. ಅದರಲ್ಲಿ ಜಮ್ಮು- ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿರುವ ರೀತಿಯ ಭೂಪಟವನ್ನು ಹಾಕಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಜತೆಗೆ ಪ್ರತಿಪಕ್ಷ ಬಿಜೆಪಿ ಕಟು ಪದಗಳಿಂದ ಟೀಕೆ ವ್ಯಕ್ತಪಡಿಸಿದೆ. ಅಂತೆಯೇ ಆರ್. ಅಶೋಕ್ 'ಪಾಕಿಸ್ತಾನದ ಉಗ್ರರ ಸ್ಲೀಪರ್ ಸೆಲ್' ಎಂದು ಲೇವಡಿ ಮಾಡಿದ್ದಾರೆ.