ಬಿಜೆಪಿ ಭಿನ್ನಮತ ಸ್ಫೋಟ | ಅಧ್ಯಕ್ಷರಾಗಿ ವಿಜಯೇಂದ್ರನನ್ನು ಒಪ್ಪುವುದಿಲ್ಲ ಎಂದ ಜಾರಕಿಹೊಳಿ
ಕಳೆದ ವಾರ ಬಿಜೆಪಿ ಬಣ ಸಮರಕ್ಕೆ ಅಂತ್ಯ ಹಾಡಲು ಎಲ್ಲಾ ಬಣಗಳ ಮುಂಚೂಣಿ ಮುಖಂಡರೊಂದಿಗೆ ಆರ್‌ಎಸ್ ಎಸ್ ನಾಯಕರು ರಹಸ್ಯ ಸಭೆ ನಡೆಸಿದ ಬೆನ್ನಲ್ಲೇ ಸ್ಫೋಟಕ ಹೇಳಿಕೆಯ ಮೂಲಕ ರಮೇಶ್ ಜಾರಕಿಹೊಳಿ, ಭಿನ್ನಮತ ಶಮನದ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಬಣ ರಾಜಕಾರಣ ರಾಜ್ಯ ಬಿಜೆಪಿಯಲ್ಲಿ ಭುಗಿಲೇಳುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದ್ದಾರೆ.;
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರನ್ನು ಪಕ್ಷ ಆಯ್ಕೆ ಮಾಡಿ ವರ್ಷ ಕಳೆದರೂ ಅವರ ಆಯ್ಕೆಯ ಕುರಿತು ಪಕ್ಷದಲ್ಲಿ ಇರುವ ಅಸಮಾಧಾನದ ಹೊಗೆ ಆರುವಂತೆ ತೋರುತ್ತಿಲ್ಲ.
ಇದೀಗ ಪಕ್ಷದ ಹಿರಿಯ ನಾಯಕ, ಶಾಸಕ ರಮೇಶ್ ಜಾರಕಿಹೊಳಿ ಅವರು ವಿಜಯೇಂದ್ರ ವಿರುದ್ಧದ ತಮ್ಮ ಬಂಡಾಯವನ್ನು ಪುನರುಚ್ಚರಿಸಿದ್ದು, “ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರನ್ನು ನಾವು ಎಂದಿಗೂ ಒಪ್ಪುವುದೇ ಇಲ್ಲ. ಪಕ್ಷದಲ್ಲಿ ಅತ್ಯಂತ ಜ್ಯೂನಿಯರ್ ಆಗಿರುವ ಅವರಿಗೆ ಯಾವ ಸಿದ್ಧಾಂತವೂ ಗೊತ್ತಿಲ್ಲ. ಹಾಗಾಗಿ ಪಕ್ಷದ ವರಿಷ್ಠರು ಮುಂದಿನ ಅಧ್ಯಕ್ಷರನ್ನು ನಿರ್ಧರಿಸಬೇಕು” ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅಥಣಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತೀಯ ಜನತಾ ಪಕ್ಷಕ್ಕೆ ʼಭ್ರಷ್ಟʼತೆಯ ಲೇಬಲ್ ತಂದುಕೊಟ್ಟಿದ್ದೇ ಈ ವಿಜಯೇಂದ್ರ. ಅಂತಹ ಹಿನ್ನೆಲೆಯ ಅವರು ಅಧ್ಯಕ್ಷರಾಗಿದ್ದಕ್ಕೆ ನನ್ನ ವಿರೋಧವಿದೆ. ಆದರೆ, ಬಿ ಎಸ್ ಯಡಿಯೂರಪ್ಪ ಅವರನ್ನು ನಾನು ಎಂದಿಗೂ ವಿರೋಧಿಸುವುದಿಲ್ಲ. ಅವರು ನಮ್ಮ ಪಕ್ಷದ ಪಕ್ಷಾತೀತ ಹಿರಿಯ ನಾಯಕರು. ಆದರೆ, ವಿಜಯೇಂದ್ರ ನಮ್ಮ ನಾಯಕನಲ್ಲ. ಅನಂತಕುಮಾರ್ ಅವರ ನಿಧನದ ಬಳಿಕ ಪಕ್ಷದ ರಾಜ್ಯ ಘಟಕದಲ್ಲಿ ಅಂತಹ ಯಾವ ಪ್ರಬಲ ನಾಯಕರೂ ಈಗಿಲ್ಲ” ಎಂದು ವಿಜಯೇಂದ್ರ ವಿರುದ್ಧ ನೇರ ಬಂಡಾಯ ಸಾರಿದ್ದಾರೆ.
ಪಕ್ಷದ ರಾಜ್ಯ ಘಟಕದ ಬಣ ರಾಜಕಾರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್ ಎಸ್ ನಾಯಕರು ಇತ್ತೀಚೆಗೆ ಪಕ್ಷದ ರಾಜ್ಯ ನಾಯಕರೊಂದಿಗೆ ನಡೆಸಿದ ಸಭೆಯ ಕುರಿತು ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, “ಸಭೆಯಲ್ಲಿ ಏನೇನೆಲ್ಲಾ ಚರ್ಚೆಯಾಯಿತು. ಮುಖಂಡರು ಯಾರಿಗೆ ಏನೆಲ್ಲಾ ಬೈದರು ಎನ್ನೋದೆಲ್ಲಾ ಹೇಳಲಾಗದು. ಆದರೆ, ನಾವು ಬಿಜೆಪಿ ಆಡಳಿತವನ್ನು ಒಬ್ಬರ ಕೈಯಲ್ಲಿ ಕೊಡುವುದು ಬೇಡ ಎಂದು ಮುಖಂಡರಿಗೆ ಸ್ಪಷ್ಟವಾಗಿ ಹೇಳಿದ್ದೇವೆ” ಎಂದರು.
“ರಾಜ್ಯ ಬಿಜೆಪಿಯ ಹೊಣೆಗಾರಿಕೆಯನ್ನು 15-20 ಮುಖಂಡರಿಗೆ ಸಾಮೂಹಿಕ ನಾಯಕ್ವ ವಹಿಸಿ. 120-130 ವಿಧಾನಸಭಾ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ನಮಗಿದೆ. ಆ ಗುರಿ ಸಾಧಿಸುವಲ್ಲಿ ನಾವು ವಿಫಲವಾದರೆ ನಮ್ಮನ್ನು ಪಕ್ಷದಿಂದ ಹೊರಹಾಕಿ ಎಂದು ಕೂಡ ಹೇಳಿದ್ದೇವೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರಿಗೆ ವಿಶ್ರಾಂತಿ ಬೇಕಾಗಿದೆ. ಹಾಗಾಗಿ ಅವರು ವಿಶ್ರಾಂತಿ ಪಡೆಯಲಿ, ನಮಗೆ ಅವರ ಸಲಹೆ- ಮಾರ್ಗದರ್ಶನ ಬೇಕಿದ್ದರೆ ನಾವೇ ಅವರ ಮನೆಗೆ ಹೋಗಿ ಕೇಳುತ್ತೇವೆ” ಎಂದೂ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕಳೆದ ವಾರ ಬಿಜೆಪಿ ಬಣ ಸಮರಕ್ಕೆ ಅಂತ್ಯ ಹಾಡಲು ಎಲ್ಲಾ ಬಣಗಳ ಮುಂಚೂಣಿ ಮುಖಂಡರೊಂದಿಗೆ ಆರ್‌ಎಸ್ ಎಸ್ ನಾಯಕರು ರಹಸ್ಯ ಸಭೆ ನಡೆಸಿದ ಬೆನ್ನಲ್ಲೇ ವಿಜಯೇಂದ್ರ ವಿರೋಧಿ ಬಣದಲ್ಲಿ ಪ್ರಮುಖರಾಗಿರುವ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆಯ ಮೂಲಕ ಭಿನ್ನಮತ ಶಮನದ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಬಣ ರಾಜಕಾರಣ ರಾಜ್ಯ ಬಿಜೆಪಿಯಲ್ಲಿ ಭುಗಿಲೇಳುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದ್ದಾರೆ.