ನನ್ನ ತಾಕತ್ ಟೆಸ್ಟ್ ಮಾಡಬೇಕು ಅಂದ್ರೆ ಶೋಭಾ ನನ್ನ ಕ್ಷೇತ್ರಕ್ಕೆ ಬರಲಿ: ಎಸ್ ಟಿ ಸೋಮಶೇಖರ್ ಸವಾಲು
ಚಿಕ್ಕಮಗಳೂರಿನಲ್ಲಿ ನಿಮಗೆ ಉಗಿದ ರೀತಿ, ನನ್ನನ್ನು ಏನೂ ಕ್ಷೇತ್ರದಲ್ಲಿ ಕ್ಯಾಕರಿಸಿ ಉಗಿದಿಲ್ಲ. ನನ್ನ ತಾಕತ್ ಬಗ್ಗೆ, ನನ್ನ ಬಗ್ಗೆ ಮಾತಾಡುವ ಕಿಂಚಿತ್ ಯೋಗ್ಯತೆ ಇಲ್ಲ ಈ ಯಮ್ಮನಿಗೆ.. ತಾಳ್ಮೆಯಿಂದ ಇದ್ದರೆ ಸರಿ, ಇಲ್ಲದಿದ್ದರೆ ಪಾಪದ ಕೊಡ ತುಂಬುತ್ತಿದೆ, ತುಂಬಿದ ಮೇಲೆ ಹೇಳುತ್ತೇನೆ ಎಂದು ಹೇಳಿದ್ದಾರೆ.;
ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅವರು ತಮ್ಮದೇ ಪಕ್ಷದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕಿಡಿಕಾರಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ತಾಕತ್ತಿದ್ದರೆ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಯಶವಂತಪುರದಿಂದ ನನ್ನ ಎದುರು ಸ್ಪರ್ಧಿಸಲಿ, ನನ್ನ ತಾಕತ್ತು ಪರೀಕ್ಷಿಸಲಿ ಎಂದು ಸವಾಲು ಹಾಕಿದ್ದಾರೆ.
ಚನ್ನಪಟ್ಟಣ ಉಪಚನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಎಸ್ ಟಿ ಸೋಮಶೇಖರ್ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಸೋಮಶೇಖರ್ ಅವರಿಗೆ ತಾಕತ್ ಇದ್ದರೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ನಿಂದ ಗೆದ್ದು ತೋರಿಸಲಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದರು.
ಈ ಹೇಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಟಿ ಸೋಮಶೇಖರ್, ``ನನ್ನ ತಾಕತ್ ಬಗ್ಗೆ ಟೆಸ್ಟ್ ಮಾಡಬೇಕು ಅಂತಾದರೆ ಕ್ಷೇತ್ರಕ್ಕೆ ಬರಲಿ. ಅವಳು ಸಂಸದೆ ಸ್ಥಾನಕ್ಕೆ ರಾಜೀನಾಮೆ ಕೊಡಲಿ, ನಾನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಯಶವಂತಪುರದಲ್ಲಿ ಹೇಗೂ ಗೆದ್ದಿದ್ದಳಲ್ಲ ಅವಳು, ತಾಕತ್ ಇದ್ದರೆ ಯಶವಂತಪುರದಲ್ಲಿ ಅವಳೂ ನಿಲ್ಲಲಿ.. ಅವಳದ್ದು ಪಾಪದ ಕೊಡ ಇನ್ನೂ ತುಂಬಬೇಕಾಗುತ್ತದೆ. ಪಾಪದ ಕೊಡ ತುಂಬುವವರೆಗೂ ನಾನೂ ತಾಳ್ಮೆಯಿಂದ ಕಾಯುತ್ತಿದ್ದೇನೆ. ಆಮೇಲೆ ನಾನು ಮಾತನಾಡುತ್ತೇನೆ, ನನಗೆ ಏನೂ ಮಾತು ಬರಲ್ಲ ಅಂತಾ ಅಲ್ಲ.. ಅವಳ ಹತ್ತರಷ್ಟು ನಾನು ಮಾತಾಡುತ್ತೇನೆ’’ ಎಂದು ಕಿಡಿಕಾರಿದ್ದಾರೆ.
"ಚಿಕ್ಕಮಗಳೂರಿನಲ್ಲಿ ಉಗಿದ ರೀತಿ ನನ್ನನ್ನು ಏನೂ ಕ್ಷೇತ್ರದ ಜನ ಕ್ಯಾಕರಿಸಿ ಉಗಿದಿಲ್ಲ, ನನ್ನ ತಾಕತ್ ಬಗ್ಗೆ, ನನ್ನ ಬಗ್ಗೆ ಮಾತಾಡುವ ಕಿಂಚಿತ್ ಯೋಗ್ಯತೆ ಇಲ್ಲ ಈ ಯಮ್ಮನಿಗೆ ಇಲ್ಲ.. ತಾಳ್ಮೆಯಿಂದ ಇದ್ದರೆ ಸರಿ, ಇಲ್ಲದಿದ್ದರೆ ಪಾಪದ ಕೊಡ ತುಂಬುತ್ತಿದೆ, ತುಂಬಿದ ಮೇಲೆ ಹೇಳುತ್ತೇನೆ" ಎಂದು ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಪರ ಕಾಂಗ್ರೆಸ್ ನಾಯಕರು ಚಕ್ಕರೆ ಗ್ರಾಮದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿದರು. ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಇದು ಅನೇಕ ಬಿಜೆಪಿ ನಾಯಕರ ಕೆಗ್ಗಣ್ಣಿಗೆ ಗುರಿಯಾಗಿತ್ತು.