SSLC Result: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಲಕಿ ಅಂಕಿತಾ ಕೊನ್ನೂರ್ ಯಶಸ್ಸಿನ ಗುಟ್ಟೇನು?
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಅಂಕಿತಾ ಕೊನ್ನೂರ್ ರಾಜ್ಯಕ್ಕೆ ಪ್ರಧಮ ಸ್ಥಾನ ಗಳಿಸಿದ್ದಾರೆ.
ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಅಂಕಿತಾ ಕೊನ್ನೂರು ರೈತರ ಮಗಳಾಗಿ ಈ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.. ಈ ಯಶಸ್ಸಿನ ಗುಟ್ಟು ಏನು ಎನ್ನುವ ಪ್ರಶ್ನೆಗೆ ಅಂಕಿತಾ ಉತ್ತರ ನೀಡಿದ್ದಾಳೆ.
ಅಂಕಿತಾ ಹೇಳಿದ್ದೇನು?
ಐಎಎಸ್ ಅಧಿಕಾರಿ ಆಗಬೇಕು ಎನ್ನುವ ಆಸೆಯಿದೆ. ನಾನು ಹಾಸ್ಟೆಲ್‌ನಲ್ಲಿದ್ದೆ, ಅಲ್ಲಿ ಮೊಬೈಲ್ ಫೋನ್ ಇರಲಿಲ್ಲ. ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೆ ಶಾಲೆಯ ಕಂಪ್ಯೂಟರ್‌ನ ಯುಟ್ಯೂಬ್‌ನಲ್ಲಿ ನೋಡುತ್ತಿದ್ದೇವು. ಓದುವುದರಲ್ಲಿ ಹಾರ್ಡ್‌ವರ್ಕ್ ಮತ್ತು ಸ್ಮಾರ್ಟ್‌ವರ್ಕ್ ಎರಡೂ ಬೇಕು. ಕಾನ್ಸೆಪ್ಟ್ ಅರ್ಥ ಮಾಡಿಕೊಂಡರೆ ಆರಾಮಾಗಿ ಮಾರ್ಕ್ಸ್ ತೆಗೆಯಬಹುದು ಎಂದು ಅವರು ಹೇಳಿದ್ದಾರೆ.
ಓದಿಗೆ ಯೂಟ್ಯೂಬ್ ನೆರವು
ತಂತ್ರಜ್ಞಾನ ಮುಂದುವರೆದಿರುವುದರಿಂದ ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಾನು ಪಠ್ಯದ ಯಾವುದಾದರೂ ವಿಷಯ ಅರ್ಥವಾಗದೆ ಇದ್ದರೆ, ಅಥವಾ ಆ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಯೂಟ್ಯೂಬ್‌ನಲ್ಲಿ ಸಂಬಂಧಪಟ್ಟ ವಿಡಿಯೋಗಳನ್ನು ನೋಡುತ್ತಿದ್ದೆ. ಇದು ಕೂಡ ಇವರ ಯಶಸ್ಸಿಗೆ ನೆರವಾಗಿದೆ.
ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಚೆನ್ನಾಗಿ ತಯಾರಿ ನಡೆಸಿರುತ್ತಾರೆ. ಚೆನ್ನಾಗಿ ಓದಿರ್ತಾರೆ ಆದರೆ ಪರೀಕ್ಷೆ ಬರೆಯುವುದರಲ್ಲಿ ಗಡಿಬಿಡಿ ಮಾಡಿಕೊಂಡು ಫೇಲ್ ಆಗುತ್ತಾರೆ. ಕೆಲವರು ನಿರ್ಲಕ್ಷ್ಯದಿಂದ ಫೇಲ್ ಆಗುತ್ತಾರೆ. ನಾನು ತುಂಬಾ ಚೆನ್ನಾಗ ಓದಿ ಮುಂದೆ ಐಎಎಸ್ ಅಧಿಕಾರಿ ಆಗಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದೇನೆ. ಸಮಾಜಕ್ಕಾಗಿ ಕೆಲಸ ಮಾಡಬೇಕು ಆಸೆ ಇದೆ ಎಂದು ಅವರು ಹೇಳಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಅಂಕಿತಾ ಬಸಪ್ಪ ಮೊದಲನೇ ಸ್ಥಾನಗಳಿಸಿದ್ದಾರೆ. ಬೆಂಗಳೂರಿನ ವಿದ್ಯಾರ್ಥಿನಿ ಮೇದಾ ಪಿ ಶೆಟ್ಟಿ ಎರಡನೇ ಸ್ಥಾನ ಪಡೆದಿದ್ದಾರೆ. ಕಾರ್ಕಳ ತಾಲೂಕಿನ ಜ್ಞಾನಸುಧಾ ವಿದ್ಯಾರ್ಥಿನಿ ಸಹನಾ 623 ಅಂಕ ಪಡೆದು ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
ಎಸ್‌ಎಸ್‌ಎಲ್‌ಸಿ ಟಾಪರ್ಸ್: 7 ಜನರಿಗೆ ದ್ವಿತೀಯ ಸ್ಥಾನ
ಎಸ್‌ಎಸ್‌ಎಲ್‌ಸಿ ಟಾಪರ್ಸ್‌ಗಳಲ್ಲಿ ಏಳು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625, ಹರ್ಷಿತಾ ಡಿಎಂ (ಮಧುಗಿರಿ), ಚಿನ್ಮಯ್ (ದಕ್ಷಿಣ ಕನ್ನಡ), ಸಿದ್ದಾಂತ್ (ಚಿಕ್ಕೊಡಿ ), ದರ್ಶನ್ (ಶಿರಸಿ), ಚಿನ್ಮಯ್ (ಶಿರಸಿ), ಶ್ರೀರಾಮ್ (ಶಿರಸಿ) ದ್ವಿತೀಯ ಸ್ಥಾನ ಪಡೆದಿದ್ದಾರೆ.