ಸ್ವಾತಂತ್ರ್ಯೋತ್ಸವಕ್ಕೆ ಉತ್ತರ ಕನ್ನಡದ ಚಿತ್ತಾರ ಕಲಾವಿದ ದಂಪತಿಗೆ ದೆಹಲಿಗೆ ವಿಶೇಷ ಆಹ್ವಾನ
ವಿಶೇಷವೆಂದರೆ, ಸರಸ್ವತಿ ಅವರ ಪತಿ, ಹಸೆ ಚಿತ್ತಾರ ಕಲಾವಿದ ಈಶ್ವರ ನಾಯ್ಕ ಅವರಿಗೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವ ಅವಕಾಶ ಲಭಿಸಿತ್ತು.;
ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಸೆ ಚಿತ್ತಾರ ಕಲಾವಿದ ದಂಪತಿಗೆ ಅಪರೂಪದ ಗೌರವ ಲಭಿಸಿದೆ. ತಮ್ಮ ವಿಶಿಷ್ಟ ಜಾನಪದ ಕಲೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ ಸಾಧನೆಗಾಗಿ ಈ ದಂಪತಿಯನ್ನು ಸರ್ಕಾರ ವಿಶೇಷ ಅತಿಥಿಗಳಾಗಿ ಆಹ್ವಾನಿಸಿದೆ.
ಸಿದ್ದಾಪುರ ತಾಲೂಕಿನ ಮನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸವಂತೆ ಗ್ರಾಮದ, ಪ್ರಗತಿ ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ಸರಸ್ವತಿ ಈಶ್ವರ ನಾಯ್ಕ ಅವರೇ ಈ ಗೌರವಕ್ಕೆ ಪಾತ್ರರಾದವರು. ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ 'ಸಂಜೀವಿನಿ' ಯೋಜನೆಯಡಿ ಆಯೋಜಿಸಲಾಗುವ 'ಸರಸ್' ಮೇಳಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಅದ್ಭುತ ಚಿತ್ತಾರ ಕಲೆಯನ್ನು ಪ್ರದರ್ಶಿಸಿದ್ದನ್ನು ಗುರುತಿಸಿ ಇವರನ್ನು ಆಯ್ಕೆ ಮಾಡಲಾಗಿದೆ. ಅಧಿಕಾರಿಗಳು ದಂಪತಿಯ ಮನೆಗೆ ತೆರಳಿ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಿದ್ದಾರೆ.
"ಸ್ವಸಹಾಯ ಸಂಘದ ಸದಸ್ಯರಾಗಿ, ಉತ್ತರ ಕನ್ನಡ ಜಿಲ್ಲೆಯ ಶ್ರೀಮಂತ ಚಿತ್ತಾರ ಕಲೆಯ ಕುಶಲಕರ್ಮಿಗಳನ್ನು ಪ್ರತಿನಿಧಿಸಿ, ಸರಸ್ವತಿ ಅವರು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ" ಎಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರಾದ ಪಿ.ಐ. ಶ್ರೀವಿದ್ಯಾ ಅವರು ತಿಳಿಸಿದ್ದಾರೆ.
ವಿಶೇಷವೆಂದರೆ, ಸರಸ್ವತಿ ಅವರ ಪತಿ, ಹಸೆ ಚಿತ್ತಾರ ಕಲಾವಿದ ಈಶ್ವರ ನಾಯ್ಕ ಅವರಿಗೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವ ಅವಕಾಶ ಲಭಿಸಿತ್ತು. ಇದೀಗ ಪತ್ನಿಗೆ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಅವರ ಕಲಾ ಸಾಧನೆಗೆ ಸಂದ ಮತ್ತೊಂದು ಗರಿಯಾಗಿದೆ. ಈ ಪ್ರತಿಷ್ಠಿತ ಕಾರ್ಯಕ್ರಮದ ಭಾಗವಾಗಿ, ದಂಪತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.