ಮಂಗಳೂರಿನಲ್ಲಿ ಕಾಡಾನೆ ದಾಳಿ ತಡೆಗೆ ವಿಶೇಷ ಆನೆ ಕಾರ್ಯಪಡೆ: ಅರಣ್ಯ ಸಚಿವ ಈಶ್ವರ್‌ ಖಂಡ್ರೆ

ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಯಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು. ಈಗಾಗಲೇ 3,800 ಕಿ.ಮೀ ಉದ್ದದ ಸೌರ ಬೇಲಿ ಮತ್ತು 428 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್‌ ಅಳವಡಿಸಲಾಗಿದೆ.;

Update: 2025-08-14 09:27 GMT

ಅರಣ್ಯ ಸಚಿವ ಈಶ್ವರ್‌ ಖಂಡ್ರೆ

ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ವನ್ಯಜೀವಿ ಮತ್ತು ಮಾನವ ಸಂಘರ್ಷವನ್ನು ನಿಯಂತ್ರಿಸಲು ವಿಶೇಷ ಆನೆ ಕಾರ್ಯಪಡೆ (ಎಲಿಫೆಂಟ್‌ ಟಾಸ್ಕ್‌ ಪೋರ್ಸ್‌) ಘಟಕವನ್ನು ಆರಂಭಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು. ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಯಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು. ಈಗಾಗಲೇ 3,800 ಕಿ.ಮೀ ಉದ್ದದ ಸೌರ ಬೇಲಿ ಮತ್ತು 428 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಇನ್ನೂ 103 ಕಿ.ಮೀ ಬ್ಯಾರಿಕೇಡ್‌ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಮಂಗಳೂರು ಭಾಗದಲ್ಲಿ 300 ಕಿ.ಮೀ ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಅದಕ್ಕೆ ಸುಮಾರು ₹500 ಕೋಟಿ ವೆಚ್ಚವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಮಾನವ–ಪ್ರಾಣಿ ಸಂಘರ್ಷಕ್ಕೆ ಕಾಡಿನ ಪ್ರದೇಶ ಕಡಿಮೆಯಾಗುತ್ತಿರುವುದು ಮತ್ತು ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಪ್ರಮುಖ ಕಾರಣ ಎಂದು ಖಂಡ್ರೆ ಹೇಳಿದರು. ಜನರು ಕಾಡಾನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ, ಕಾಡಾನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಪರಿಹಾರ ಮತ್ತು ನೆರವು

ಕಾಡಂಚಿನಲ್ಲಿ ಬೆಳೆ ಮತ್ತು ಜೀವ ಹಾನಿ ಸಂಭವಿಸುತ್ತಿರುವುದನ್ನು ಸಚಿವರು ಒಪ್ಪಿಕೊಂಡರು. ಇಂತಹ ಹಾನಿಗಳಿಗೆ ನೀಡುವ ಪರಿಹಾರ ಮೊತ್ತವನ್ನು ದುಪ್ಪಟ್ಟು ಮಾಡಲಾಗಿದೆ. ಈಗಾಗಲೇ  47 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರವನ್ನು ನೀಡಲಾಗಿದೆ. ರೈತರು ತಮ್ಮ ಹೊಲಗಳ ಸುತ್ತ ಸೋಲಾರ್ ತಂತಿ ಹಾಕಿಕೊಳ್ಳಲು ಬಯಸಿದರೆ, ಸರ್ಕಾರವು ಸಬ್ಸಿಡಿ ನೀಡಲಿದೆ ಎಂದು ಭರವಸೆ ನೀಡಿದರು.

ಇದಲ್ಲದೆ, ಕರ್ನಾಟಕದಲ್ಲಿ ಮಾತ್ರ ಕುಂಕಿ ಆನೆಗಳ ಸಹಾಯದಿಂದ ಕಾಡಾನೆಗಳನ್ನು ಸೆರೆಹಿಡಿಯುವ ವ್ಯವಸ್ಥೆ ಇದೆ ಎಂದು ಅವರು ಸ್ಪಷ್ಟಪಡಿಸಿದರು. ಮಂಗಳೂರು ಭಾಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಾಡಾನೆಗಳ ಹಾವಳಿ ಕಡಿಮೆಯಾಗಿದೆ. ಆದಾಗ್ಯೂ, ಭವಿಷ್ಯದಲ್ಲಿ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇರುವುದರಿಂದ, ರೈಲ್ವೆ ಬ್ಯಾರಿಕೇಡ್‌ಗಳನ್ನು ಎಲ್ಲಿ ಹಾಕಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಕಾಡಾನೆಗಳು ಅರಣ್ಯದ ಹೊರಗೆ ಬರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಖಂಡ್ರೆ ತಿಳಿಸಿದರು.

Tags:    

Similar News