ಮುಡಾ ಹಗರಣ| ಚರ್ಚೆಗೆ ನಾವು ರೆಡಿ- ನಿಯಮವೇ ಅಡ್ಡಿ- ಖಾದರ್
ಮೈಸೂರಿನ ಮುಡಾ ಸೈಟು ಹಂಚಿಕೆ ಹಗರಣ ಸಂಬಂಧಿಸಿ ಸರ್ಕಾರವೇನೋ ಚರ್ಚೆಗೆ ಸಿದ್ಧವಿತ್ತು. ಆದರೆ, ಪ್ರಕರಣ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಆಯೋಗದ ಮುಂದೆ ತನಿಖಾ ಹಂತದಲ್ಲಿರುವಾಗ ಆ ವಿಚಾರವನ್ನು ಸದನದಲ್ಲಿ ಚರ್ಚಿಸಲಾಗುವುದಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ;
ಮೈಸೂರಿನ ಮುಡಾ ಸೈಟು ಹಂಚಿಕೆ ಹಗರಣ ಸಂಬಂಧಿಸಿ ಸರ್ಕಾರವೇನೋ ಚರ್ಚೆಗೆ ಸಿದ್ಧವಿತ್ತು. ಆದರೆ, ಪ್ರಕರಣ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಆಯೋಗದ ಮುಂದೆ ತನಿಖಾ ಹಂತದಲ್ಲಿರುವಾಗ ಆ ವಿಚಾರವನ್ನು ಸದನದಲ್ಲಿ ಚರ್ಚಿಸಲಾಗುವುದಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಮುಡಾ ಅಕ್ರಮಗಳ ವಿಚಾರ ಸಂಬಂಧಿಸಿ ವಿಧಾನಸಭಾ ಕಲಾಪದಲ್ಲಿ ಚರ್ಚೆಗೆ ಆಸ್ಪದ ನೀಡಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ, ಖಾದರ್ ಅವರು ಮಂಗಳೂರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ʼಆ ವಿಚಾರ ಚರ್ಚಿಸಲು ಸರ್ಕಾರ ಸಿದ್ಧವಿದೆಯೋ ಇಲ್ಲವೋ ಎಂಬುದು ಬೇರೆ ವಿಚಾರ. ಆದರೆ, ನಿಯಮಾವಳಿಗಳಲ್ಲಿ ಅದಕ್ಕೆ ಅವಕಾಶ ಇಲ್ಲ. ಇದರಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ವಾದ ಪ್ರತಿವಾದ ಆಲಿಸಿಯೇ ರೂಲಿಂಗ್ ನೀಡಿದ್ದೇನೆ. ಈ ಸಂದರ್ಭ ನಿಯಮಾವಳಿಗಳು ಮುಖ್ಯವೇ ಹೊರತು, ಯಾರದೇ ಮರ್ಜಿ ಅಥವಾ ವಿಮರ್ಶೆ ಅಲ್ಲ. ನಿಯಮ ಮೀರಿ ನಾನು ಕೆಟ್ಟ ಸಂಪ್ರದಾಯ ಹುಟ್ಟು ಹಾಕಲು ಸಾಧ್ಯವಿಲ್ಲʼ ಎಂದರು.
ಏನಿದು ನಿಯಮ?
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕರು ಸದನದಲ್ಲಿ ಮಂಡಿಸಿದ ನಿಲುವಳಿ ಸೂಚನೆಗೆ ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲಾಗದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ
62(7)ರ ಪ್ರಕಾರ ‘ನಿಲುವಳಿ ಸೂಚನೆಯು ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದ ಮುಂದೆ ವಿಚಾರಣೆಯ ಹಂತದಲ್ಲಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿ ಇರಬಾರದು’ ಎಂದು ಹೇಳುತ್ತದೆ.
ʼಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 63ರ ಪ್ರಕಾರ ‘ನ್ಯಾಯಾಧಿಕರಣಗಳು, ಆಯೋಗಗಳ ಮುಂದಿರುವ ವಿಷಯಗಳ ಕುರಿತು ಚರ್ಚಿಸಲು ನಿಲುವಳಿ ಸೂಚನೆ ತರುವುದು, ಯಾವುದೇ ನ್ಯಾಯಿಕ ಅಥವಾ ನ್ಯಾಯಿಕ ಸ್ವರೂಪದ ಪ್ರಕಾರಗಳನ್ನು ನಿರ್ವಹಿಸುತ್ತಿರುವ ಶಾಸನಬದ್ಧ ನ್ಯಾಯಾಧಿಕರಣ ಅಥವಾ ಶಾಸನ ಪ್ರಾಧಿಕಾರದ ಮುಂದೆ ಅಥವಾ ಯಾವುದೇ ವಿಷಯದ ವಿಚಾರಣೆ, ತನಿಖೆ ನಡೆಸಲು ಆಯೋಗ ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ವಿಷಯದ ಕುರಿತು ಚರ್ಚಿಸಲು ಸೂಚನೆಯನ್ನು ತರಲು ಅವಕಾಶವನ್ನು ಕೊಡಬಾರದು’ ಎಂದಿದೆ. ಈ ನಿಯಮನ್ನು ಉಲ್ಲಂಘಿಸಲಾಗದುʼ ಎಂದು ಅವರು ಸಮರ್ಥನೆ ನೀಡಿದರು.
ʼಒಂದು ವೇಳೆ ಸದನದಲ್ಲಿ ಈ ವಿಚಯ ಚರ್ಚೆ ಆದರೆ ಅದು ಆಯೋಗದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಈ ಸಂಬಂಧ ಏನೇ ಹೇಳಿಕೆಗಳಿದ್ದರೂ ಅದನ್ನು ಆಯೋಗದ ಮುಂದೆ ನೀಡಬಹುದು ಎಂದು ಶಾಸಕರಿಗೆ ಹೇಳಿದ್ದೆʼ ಎಂದರು.
ಎಲ್ಲ ಸದಸ್ಯರಿಗೂ ಕಲಾಪದಲ್ಲಿ ಮಾತನಾಡುವ ಮುಕ್ತ ಅವಕಾಶ ಇದೆ. ಯಾವುದೇ ನ್ಯಾಯ ಪ್ರಕ್ರಿಯೆ ಕಾನೂನು ಬದ್ಧವಾಗಿಯೇ ನಡೆಯಬೇಕು. ಜನರು ಬಯಸುತ್ತಾರೆ ಎಂದೋ, ಬಹುಮತ ಇದೆಯೆಂದೋ ನಿಯಮಾವಳಿ, ಕಾನೂನು ಮೀರಬಾರದು ಎಂಬ ಪ್ರಜ್ಞೆ ನಮಗಿರಬೇಕು. ಮುಕ್ತ ಮಾತುಕತೆಗೆ ಸದನದಲ್ಲಿ ಬಿಎಸಿ (ಬ್ಯುಸಿನೆಸ್ ಅಡ್ವೈಸರಿ ಕಮಿಟಿ) ಇದೆ. ಆ ಸಮಿತಿಯಲ್ಲಿ ಪ್ರತಿಪಕ್ಷದ ನಾಯಕರು, ಎಲ್ಲ ಪಕ್ಷಗಳ ಶಾಸಕಾಂಗ ನಾಯಕರೂ, ಮುಖ್ಯಮಂತ್ರಿ, ಸಚಿವರು ಇರುತ್ತಾರೆ. ಬಿಎಸಿ ಸಮಿತಿಯಲ್ಲಿ ಈ ವಿಷಯವನ್ನು ಚರ್ಚಿಸಿ ನಿಯಮಾವಳಿಗಳಂತೆ ಬೇರೊಂದು ನಿಯಮ ಸಂಖ್ಯೆಯಡಿಯಲ್ಲಿ ಚರ್ಚಿಸುವ ಅವಕಾಶವನ್ನು ಸರ್ವಾನುಮತದ ನಿರ್ಧಾರಕ್ಕೆ ಬರುವ ಅವಕಾಶ ಇದೆ ಎಂದರು.
ಸಮಸ್ಯೆ ಚರ್ಚೆ ಇಲ್ಲ: ವಿಷಾದ
́ಈ ಬಾರಿ ಎಂಟು ದಿನ ಅಧಿವೇಶನ ನಡೆದಿದೆ. 36 ಗಂಟೆ , 51 ನಿಮಿಷ ಕಾರ್ಯ ಕಲಾಪ ನಡೆದಿವೆ. ಮೂರು ತಿಂಗಳಿಗೊಮ್ಮೆ ನಡೆಯುವ ಅಧಿವೇಶನದಲ್ಲಿ ಜನರ ಸಮಸ್ಯೆ ಹೆಚ್ಚು ಚರ್ಚೆಯಾಗಬೇಕು. ಆದರೆ, ಈ ಬಾರಿ ಜನರ ಸಮಸ್ಯೆ ಹೆಚ್ಚು ಚರ್ಚಿಸಲು ಆಗಿಲ್ಲ ಎಂಬ ವಿಷಾದವಿದೆʼ ಎಂದರು.
ಡಿಜಿಟಲ್ ವಿಧಾನಸಭೆ
ವಿಧಾನಸಭೆಯ ಕಡತಗಳ ಸಹಿತ ಎಲ್ಲವನ್ನೂ ಡಿಜಿಟಲ್ ರೂಪಕ್ಕೆ ತರುವ ಉದ್ದೇಶವಿದೆ. ಇದಕ್ಕಾಗಿ ದೇಶಾದ್ಯಂತ ಇರುವಂತೆ ಸಮಾನ ತಂತ್ರಾಂಶದ ಬದಲಾಗಿ ಇಲ್ಲಿಗೆ ಪ್ರತ್ಯೇಕ ತಂತ್ರಾಂಶ ಹೊಂದಬೇಕು. ಅದಕ್ಕಾಗಿ ಐಟಿ ಸೇರಿದಂತೆ ವಿವಿಧ ತಜ್ಞರ ಸಮಿತಿ ರಚಿಸಲಾಗಿದೆ. ವಿಧಾನಸಭಾ ಕಲಾಪಕ್ಕೆ ಹಾಜರಾಗುವ ಹಾಗೂ ನಿರ್ಗಮಿಸುವ ಸಮಯವನ್ನು ಇನ್ನು ಕರಾರುವಕ್ಕಾಗಿ ದಾಖಲಿಸಬಹುದು. ಇದಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದರು ಖಾದರ್.