ಬಾಲಕನ ಅಪಹರಣ, ಕೊಲೆ ಪ್ರಕರಣ | ಗೃಹ ಸಚಿವರಿಗಿಲ್ಲ ಘಟನೆಯ ಮಾಹಿತಿ; ಮತ್ತೆ ಟೀಕೆಗೆ ಗುರಿಯಾದ ಪರಮೇಶ್ವರ್‌

ಶಾಲಾ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿ 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ವಿದ್ಯಾರ್ಥಿಯ ಅಪಹರಣದ ವಿಷಯ ಪೊಲೀಸರಿಗೆ ತಿಳಿಸಿದರೆಂಬ ಕಾರಣಕ್ಕೆ ಕಗ್ಗಲೀಪುರ ಅರಣ್ಯದಲ್ಲಿ ಕತ್ತುಕೊಯ್ದು, ಬಾಲಕನ ಶವವನ್ನು ಪೆಟ್ರೋಲ್‌ ಹಾಕಿ ಸುಟ್ಟು ಹಾಕಿದ್ದರು.;

Update: 2025-08-01 07:34 GMT

ಬೆಂಗಳೂರಿನಲ್ಲಿ ಶಾಲಾ ಬಾಲಕನನ್ನು ಅಪಹರಿಸಿ ಕೊಲೆಗೈದು ಪೆಟ್ರೋಲ್‌ನಿಂದ ಸುಟ್ಟು ಹಾಕಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಆದರೆ, ರಾಜ್ಯದ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿರುವ ಗೃಹ ಸಚಿವರಿಗೆ ಮಾತ್ರ ಘಟನೆಯ ಮಾಹಿತಿಯೇ ಇಲ್ಲವಂತೆ..!

13 ವರ್ಷದ ಶಾಲಾ ಬಾಲಕ ಕೊಲೆ ಹಾಗೂ ಪೊಲೀಸರ ಶೂಟೌಟ್‌ ಪ್ರಕರಣದ ಕುರಿತಂತೆ ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಪ್ರಕರಣದ ಮಾಹಿತಿ ಇಲ್ಲ, ಏನಾಗಿದೆ, ಯಾವಾಗ ಆಗಿದೆ ಎಂದು ಮಾಧ್ಯಮದವರನ್ನೇ ಮರು ಪ್ರಶ್ನಿಸಿದರು. ಅಲ್ಲದೇ ನನಗೆ ಯಾರೂ ಕೂಡ ಮಾಹಿತಿ ಕೊಟ್ಟಿಲ್ಲ ಎಂಬ ಗೃಹ ಸಚಿವರು ಹೇಳಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.  

ಬುಧವಾರ ಸಂಜೆ ಆನೇಕಲ್‌ ತಾಲೂಕಿನ ಅರಕೆರೆ ಗ್ರಾಮದ ಶಾಂತಿನಿಕೇತನ ಬಡಾವಣೆಯಲ್ಲಿ ಶಾಲಾ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿ 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ವಿದ್ಯಾರ್ಥಿಯ ಅಪಹರಣದ ವಿಷಯ ಪೊಲೀಸರಿಗೆ ತಿಳಿಸಿದರೆಂಬ ಕಾರಣಕ್ಕೆ ಕಗ್ಗಲೀಪುರ ಅರಣ್ಯದಲ್ಲಿ ಕತ್ತುಕೊಯ್ದು, ಬಾಲಕನ ಶವವನ್ನು ಪೆಟ್ರೋಲ್‌ ಹಾಕಿ ಸುಟ್ಟು ಹಾಕಿದ್ದರು.  

ಗೃಹ ಸಚಿವರ ಉಡಾಫೆ ಉತ್ತರ ಇದೇ ಮೊದಲಲ್ಲ

ಕಳೆದ ಏಪ್ರಿಲ್ 3 ರಂದು ಬೆಂಗಳೂರಿನ ಸುದ್ದುಗುಂಟೆ ಪಾಳ್ಯದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು, ಪೊಲೀಸರು ಮಳೆ ಮತ್ತು ಚಳಿ ಎಲ್ಲದೇ ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ. ಅದರಿಂದಲೇ ಬೆಂಗಳೂರಿನಲ್ಲಿ ಶಾಂತಿ ನೆಲೆಸಿದೆ. ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಅಲ್ಲೊಂದು, ಇಲ್ಲೊಂದು ಘಟನೆಗಳು ಸಾಮಾನ್ಯ" ಎಂದು  ಹೇಳಿದ್ದರು. ಇದಕ್ಕೆ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದ ಬಳಿಕ  'ನನ್ನ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಾರೆ. ನಾನು ಮಹಿಳೆಯರ ಸುರಕ್ಷತೆಯ ಬಗ್ಗೆ ಯಾವಾಗಲೂ ಕಾಳಜಿ ವಹಿಸುವ ವ್ಯಕ್ತಿ. ನನ್ನ ಹೇಳಿಕೆಯಿಂದ ಯಾರಿಗಾದರೂ, ವಿಶೇಷವಾಗಿ ಮಹಿಳೆಯರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ಹೇಳಿದ್ದರು. ಸಚಿವರು ತಮ್ಮ ಹೇಳಿಕೆಗೆ ಕ್ಷಮೆ ಕೇಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಒತ್ತಾಯಿಸಿತ್ತು.

2024 ಸೆಪ್ಟೆಂಬರ್‌ ತಿಂಗಳಲ್ಲಿ ಮಂಡ್ಯದ ನಾಗಮಂಗಲದಲ್ಲಿ ನಡೆದಿದ್ದ ಗಲಭೆಯ ಬಗ್ಗೆಯೂ ಗೃಹ ಸಚಿವ ಜಿ.ಪರಮೇಶ್ವರ್ ಅವರು ಹಗುರ ಹೇಳಿಕೆ ನೀಡಿದ್ದರು. ಅದೊಂದು ಸಣ್ಣ ಘಟನೆ, ಯಾವುದೇ ಕೋಮುಗಲಭೆಯಲ್ಲ. ವಿಪಕ್ಷಗಳು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದ್ದರು. ಇದಕ್ಕೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿ, ಗಲಭೆಯಿಂದ ಒಂದೂವರೆ ಕೋಟಿ ರೂ.ನಷ್ಟ ಸಂಭವಿಸಿದರೂ ಸಣ್ಣ ಘಟನೆ ಎನ್ನುವ ಗೃಹ ಸಚಿವ ಹೇಳಿಕೆ ನಾಚಿಕೆಗೇಡು ಎಂದು ಟೀಕಿಸಿದ್ದರು. 

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕೋಮು ಗಲಭೆ ಸಂಭವಿಸಿತ್ತು. ಕಲ್ಲುತೂರಾಟ, ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. 

ಬಿಜೆಪಿ ಅವಧಿಯಲ್ಲಿ ಅಪರಾಧ ಹೆಚ್ಚಿರಲಿಲ್ಲವೇ?

 ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹಗದೆಟ್ಟಿದೆ ಎಂಬ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದ ಗೃಹ ಸಚಿವರು, ನಿಮ್ಮ(ಬಿಜೆಪಿ) ಕಾಲದಲ್ಲಿ ಎಷ್ಟು ಕೊಲೆ, ಅತ್ಯಾಚಾರ ನಡೆದಿವೆ ಎಂಬುದರ ದಾಖಲೆ ಬಿಚ್ಚಿಡಲಿ, ಯಾರ ಸರ್ಕಾರದಲ್ಲಿ ಸುರಕ್ಷತೆ ಇತ್ತು ಎಂಬುದು ತಿಳಿಯುತ್ತದೆ ಎಂದು ಹೇಳಿದ್ದರು. 

ಬೆಂಗಳೂರಿನಲ್ಲಿ ಸರಣಿ ಅತ್ಯಾಚಾರ, ಮಂಗಳೂರು ಗಲಭೆ, ಬ್ಯಾಂಕ್‌ ದರೋಡೆ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳು ನಡೆದಿದ್ದವು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದವು. 

ಈಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲೂ ಪೊಲೀಸ್‌ ಇಲಾಖೆ ವೈಫಲ್ಯದತ್ತ ತನಿಖಾ ವರದಿಗಳು ಬೊಟ್ಟು ಮಾಡಿರುವುದು ಗೃಹ ಇಲಾಖೆಯ ಅದಕ್ಷ ಕಾರ್ಯನಿರ್ವಹಣೆ, ಗೃಹ ಸಚಿವ ಅಸಮರ್ಥ ಆಡಳಿತಕ್ಕೆ ಸಾಕ್ಷಿ ಎಂದು ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ದೂರಿವೆ.  

ದ ಫೆಡರಲ್‌ ವಿಶ್ಲೇಷಣೆ ಇಲ್ಲಿದೆ

Full View


Tags:    

Similar News