Pennar River Dispute | ದಕ್ಷಿಣ ಪಿನಾಕಿನಿ ನದಿಗೆ ತಮಿಳುನಾಡು ತಗಾದೆ; ವಿವಾದದತ್ತ ನೆರೆ ರಾಜ್ಯದ ನಡೆ

ದಕ್ಷಿಣ ಪಿನಾಕಿನಿ ಉಪನದಿಯಾದ ಮಾರ್ಕಂಡೇಯ ನದಿಗೆ ಮಾಲೂರು ತಾಲೂಕಿನ ಯರಗೋಳದಲ್ಲಿ ಬೃಹತ್ ಚೆಕ್ ಡ್ಯಾಂ(ಜಲಾಶಯ) ನಿರ್ಮಿಸಿರುವ ರಾಜ್ಯ ಸರ್ಕಾರದ ನಡೆಗೆ ತಮಿಳುನಾಡು ತಗಾದೆ ತೆಗೆದಿರುವ ಪರಿಣಾಮ ಅಂತರರಾಜ್ಯ ನದಿ ವಿವಾದವಾಗಿ ಮಾರ್ಪಟ್ಟಿದೆ.;

Update: 2025-03-22 03:30 GMT
ದಕ್ಷಿಣ ಪಿನಾಕಿನಿ ನದಿ

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಗಿರಿಧಾಮ ನಂದಿಬೆಟ್ಟದಲ್ಲಿ ಉಗಮಿಸಿ, ತಮಿಳುನಾಡು ಸಮೀಪದ ಬಂಗಾಳ ಕೊಲ್ಲಿಯಲ್ಲಿ ಸಮುದ್ರ ಸೇರುವ “ದಕ್ಷಿಣ ಪಿನಾಕಿನಿ” ಅಥವಾ "ಪೆನ್ನಾರ್ ನದಿ" ನೀರಿನ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ದಕ್ಷಿಣ ಪಿನಾಕಿನಿಯ ಉಪನದಿ ಮಾರ್ಕಂಡೇಯ ನದಿಗೆ ಮಾಲೂರು ತಾಲೂಕಿನ ಯರಗೋಳದಲ್ಲಿ ಬೃಹತ್ ಚೆಕ್ ಡ್ಯಾಂ(ಜಲಾಶಯ) ನಿರ್ಮಿಸಿದ ರಾಜ್ಯ ಸರ್ಕಾರದ ನಡೆಗೆ ತಮಿಳುನಾಡು ತಗಾದೆ ಎತ್ತಿರುವ ಪರಿಣಾಮ ಅಂತರರಾಜ್ಯ ನದಿ ವಿವಾದವಾಗಿ ಮಾರ್ಪಟ್ಟಿದೆ.

ಬಯಲು ಸೀಮೆಯ ಕೋಲಾರ ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ನಿರ್ಮಿಸಿರುವ ಈ ಜಲಾಶಯಕ್ಕೆ ತಮಿಳುನಾಡು ತಕರಾರು ತೆಗೆದು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ನ್ಯಾಯಾಧೀಕರಣ ಸ್ಥಾಪನೆಗೆ ಪಟ್ಟು ಹಿಡಿದಿದೆ. ತಮಿಳುನಾಡು ಸರ್ಕಾರ ಹೊಸ ತಗಾದೆಗೆ ರಾಜ್ಯದ ನೀರಾವರಿ ಹೋರಾಟಗಾರರು ಹಾಗೂ ರೈತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಾಗಾದರೆ, ದಕ್ಷಿಣ ಪಿನಾಕಿನಿ ನದಿ ವಿವಾದ ಏನು, ಸಂಘರ್ಷಕ್ಕೆ ಕಾರಣವೇನು, ದಕ್ಷಿಣ ಪಿನಾಕಿನಿಯ ಈಗಿನ ಸ್ಥಿತಿ ಗತಿ ಹೇಗಿದೆ ಎಂಬ ವರದಿ ಇಲ್ಲಿದೆ.

ನೀರಿನ ಬವಣೆ ನೀಗಿಸುವ ಪಿನಾಕಿನಿ

ನಂದಿಬೆಟ್ಟದಲ್ಲಿ ಹುಟ್ಟುವ ದಕ್ಷಿಣ ಪಿನಾಕಿನಿ ನದಿಯು ಪೂರ್ವಕ್ಕೆ 425 ಕಿ.ಮೀ ದೂರ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ 28,288 ಚ.ಕಿ.ಮೀ. ಜಲಾನಯನ ಪ್ರದೇಶ ಸೃಷ್ಟಿಸಿರುವ ‌ದಕ್ಷಿಣ ಪಿನಾಕಿನಿ ನದಿಯು ರಾಜ್ಯದಲ್ಲೇ ಸುಮಾರು 3,687 ಚ.ಕಿ.ಮೀ. ಕರ್ನಾಟಕದಲ್ಲೇ ಇದೆ.

ದಕ್ಷಿಣ ಪಿನಾಕಿನಿ ನದಿ ಹಾಗೂ ಅದರ ಉಪನದಿಗಳಾದ ಮಾರ್ಕಂಡೇಯ, ಯರಗೋಳ, ಕುಶಾವತಿ ನದಿ ನೀರನ್ನು ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕುಡಿಯುವ ನೀರಿಗಾಗಿ ಬಳಸಲು ನಿರ್ಧರಿಸಿದೆ. ಇದರ ಭಾಗವಾಗಿಯೇ ಬಂಗಾರಪೇಟೆಯ ಯರಗೋಳದಲ್ಲಿ ಚೆಕ್‌ ಡ್ಯಾಂ ನಿರ್ಮಿಸಿ, ಶಿಡ್ಲಘಟ್ಟ, ಮಾಲೂರು ಹಾಗೂ ಬಂಗಾರಪೇಟೆ ತಾಲೂಕಿಗೆ ಕುಡಿಯುವ ನೀರು ಒದಗಿಸಲು ಉದ್ದೇಶಿಸಿದೆ. 

ಯರಗೋಳ ಜಲಾಶಯ ನಿರ್ಮಿಸಿದ ಕರ್ನಾಟಕದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ದಕ್ಷಿಣ ಪಿನಾಕಿನ ನದಿ ವಿವಾದವನ್ನು ಸುಪ್ರೀಂಕೋರ್ಟ್‌ ಅಂಗಳಕ್ಕೆ ಎಳೆದಿದೆ. ಎರಡೂ ರಾಜ್ಯಗಳಿಗೆ ಸಂಬಂಧಿಸಿದ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಿರುವ ಕರ್ನಾಟಕ ಹಾಗೂ ಅದಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರವನ್ನು ನ್ಯಾಯಾಲಯದ ಕಟಕಟೆಗೆ ತೆಗೆದುಕೊಂಡು ಹೋಗಿದೆ.  

ಯರಗೋಳ ಜಲಾಶಯ

ಪೊನ್ನೈಯರ್‌ ನದಿಯಾಗಿರುವ ಪಿನಾಕಿನಿ

ದಕ್ಷಿಣ ಪಿನಾಕಿನಿ ನದಿಯು ತಮಿಳುನಾಡು ಪ್ರವೇಶಿಸುತ್ತಿದ್ದಂತೆ ಪೊನ್ನೈಯರ್‌ ನದಿಯಾಗಿ ಹೊಸೂರು, ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗಳಲ್ಲಿ ಹರಿದು ಕಡಲೂರು ಬಳಿ ಬಂಗಾಲ ಕೊಲ್ಲಿ ಸೇರುತ್ತದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ದಕ್ಷಿಣ ಪಿನಾಕಿನಿ ನದಿ ನೀರಿನ ಮೇಲೆ ಹಕ್ಕು ಪ್ರತಿಪಾದಿಸುತ್ತಿದೆ.

ರಾಜ್ಯದ ಒಪ್ಪಿಗೆ ಪಡೆಯದೇ ದಕ್ಷಿಣ ಪಿನಾಕಿನಿ ಉಪನದಿಯಾದ ಮಾರ್ಕಂಡೇಯ ನದಿಗೆ ಚೆಕ್‌ ಡ್ಯಾಂ ನಿರ್ಮಿಸಿ, ಅಂತರರಾಜ್ಯ ಜಲವಿವಾದ ಕಾಯ್ದೆ ಉಲ್ಲಂಘಿಸಿದೆ ಎಂಬುದು ತಮಿಳುನಾಡು ಆರೋಪ.  

ತಮಿಳುನಾಡು ತಗಾದೆ ಏನು?

ದಕ್ಷಿಣ ಪಿನಾಕಿನಿ ನದಿ ಕಣಿವೆಯಲ್ಲಿ ಕರ್ನಾಟಕವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಿದೆ.

ಬೆಂಗಳೂರಿನ ಎಲೆಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಸಮೀಪ ಪೊನ್ನೈಯರ್‌ ನದಿಯಿಂದ ನೀರು ಹರಿಸುವ ಕಾಮಗಾರಿಗೆ ತಮಿಳುನಾಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ ಹಾಗೂ ಜಲಾಶಯ ನಿರ್ಮಿಸಿದ ರಾಜ್ಯ ಸರ್ಕಾರದ ವಿರುದ್ಧ 2018 ರಲ್ಲಿ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿತ್ತು. 

2019 ನ.30 ರಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿ ದಕ್ಷಿಣ ಪಿನಾಕಿನಿಯು ಎರಡೂ ರಾಜ್ಯಗಳಿಗೆ ಸಂಬಂಧಿಸಿರುವ ಕಾರಣ ನದಿ ನೀರು ಹಂಚಿಕೆಗೆ ನ್ಯಾಯಾಧೀಕರಣ ಸ್ಥಾಪಿಸಬೇಕು ಎಂದು ಮನವಿ ಮಾಡಿತ್ತು. ಆಗ ಮಧ್ಯಪ್ರವೇಶಿಸಿದ್ದ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿ, ವಿವಾದವನ್ನು ಇತ್ಯರ್ಥಪಡಿಸಲು ಸಂಧಾನ ಸಮಿತಿ ರಚಿಸುವುದಾಗಿ ಹೇಳಿತ್ತು. 

ನೀರಿನ ಬಳಕೆಯಲ್ಲಿ ತಮಿಳುನಾಡಿನದ್ದೇ ಸಿಂಹಪಾಲು

ತಮಿಳುನಾಡಿನಲ್ಲಿ ಪೊನ್ನೈಯರ್ ನದಿಯು ಕಾವೇರಿ ನಂತರದ ಎರಡನೇ ಅತಿ ಉದ್ದದ ನದಿಯಾಗಿದೆ. ಹೊಸೂರು ಸಮೀಪ ಕೆಲವರಪಲ್ಲಿ ಮತ್ತು ಕೃಷ್ಣಗಿರಿ ಎಂಬಲ್ಲಿ ಪೊನ್ನೈಯರ್‌ ನದಿಗೆ ಅಡ್ಡಲಾಗಿ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಿದೆ. ತಿರುವಣ್ಣಾಮಲೈ ಸಮೀಪ 7.3 ಟಿಎಂಸಿ ಎಫ್‌ಟಿ ಸಾಮರ್ಥ್ಯದ ಸಾತನೂರ್ ಅಣೆಕಟ್ಟು ನಿರ್ಮಿಸಿದೆ. ಅಲ್ಲದೇ ಸುಮಾರು 20ಸಾವಿರಕ್ಕೂ ಹೆಚ್ಚು ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ.

ಸಂಧಾನ ಸಭೆಗೆ ತಮಿಳುನಾಡು ಅಸಹಕಾರ

ದಕ್ಷಿಣ ಪಿನಾಕಿನಿ(ಪೆನ್ನಾರ್) ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರು ಈಚೆಗೆ ಕರೆದಿದ್ದ ಸಂಧಾನ ಸಭೆಯನ್ನು ತಮಿಳುನಾಡು ಸರ್ಕಾರ ಬಹಿಷ್ಕರಿಸಿದ್ದರಿಂದ ಸಭೆ ರದ್ದುಗೊಂಡಿದೆ.  ವಿವಾದಕ್ಕೆ ಸಂಬಂಧಿಸಿ ಪ್ರತ್ಯೇಕ ಸಭೆ ಕರೆಯಬೇಕು ಎಂದು ಬೇಡಿಕೆ ಮುಂದಿಟ್ಟಿದೆ. ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳುವ ರಾಜ್ಯ ಸರ್ಕಾರಕ್ಕೆ ತಮಿಳುನಾಡಿನ ಧೋರಣೆ ಹಿನ್ನಡೆ ತಂದೊಡ್ಡಿದೆ.  

ದಕ್ಷಿಣ ಪಿನಾಕಿನಿ ಜಲವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಕರೆದಿದ್ದ ಸಂಧಾನ ಸಭೆಗೆ ತಮಿಳುನಾಡಿನ ಪ್ರತಿನಿಧಿಗಳು ಭಾಗವಹಿಸಲಿರಲ್ಲ. ಪ್ರತ್ಯೇಕ ಸಭೆ ನಡೆಸುವಂತೆ ಒತ್ತಾಯಿಸುತ್ತಿದೆ ಎಂದು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ದಕ್ಷಿಣ ಪಿನಾಕಿನಿ ಹರಿಯುವ ನಕ್ಷೆ

ಕಲುಷಿತಗೊಂಡಿರುವ ನದಿ ಕಣಿವೆ

ದಕ್ಷಿಣ ಪಿನಾಕಿನಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲೇ ಬೆಂಗಳೂರಿನ ಬೆಳ್ಳಂದೂರು, ವರ್ತೂರು ಕೆರೆಗಳಿದ್ದು, ಸಂಪೂರ್ಣ ಕಲುಷಿತವಾಗಿದೆ. ಕೈಗಾರಿಕೆಗಳು ಹೊರಬಿಡುವ ವಿಷಕಾರಿ ತ್ಯಾಜ್ಯ ಕೆರೆಗಳಿಗೆ ಸೇರುತ್ತಿದೆ. ಒಳ ಚರಂಡಿ ನೀರೂ ಸೇರಿ ಇಡೀ ದಕ್ಷಿಣ ಪಿನಾಕಿನಿಯ ಒಡಲು ಹಾಳಾಗಿದೆ. ಕರ್ನಾಟಕ ಮಾತ್ರವಲ್ಲದೇ ಹೊಸೂರು ಮತ್ತು ಚೆಂಗಂ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಕೂಡ ನದಿಯನ್ನು ಸಂಪೂರ್ಣ ಕಲುಷಿತಗೊಳಿಸಿದೆ. 

"ದಕ್ಷಿಣ ಪಿನಾಕಿನಿ ನದಿ ವ್ಯಾಪ್ತಿಯಲ್ಲೇ ಕೆ.ಸಿ.ವ್ಯಾಲಿ ಯೋಜನೆಯಿದೆ. ಬೆಂಗಳೂರಿನ ಉಳಿದ ಎಲ್ಲಾ ಕಲುಷಿತ ನೀರು ತಮಿಳುನಾಡಿನ ಕೆಳವಾರಿಪಲ್ಲಿ ಜಲಾಶಯಕ್ಕೆ ಹರಿದು ಹೋಗುತ್ತದೆ. ಅಲ್ಲಿ ಸಂಗ್ರಹಣೆಯಾಗುವ ನೀರು ತಿಳಿಗೊಂಡು ಸಾತನೂರ್‌ ಹಾಗೂ ಕೃಷ್ಣಗಿರಿ ಜಲಾಶಯಕ್ಕೆ ಹರಿಯುತ್ತದೆ. ಇದೇ ನೀರಿನಿಂದ ತಮಿಳುನಾಡಿನ ರೈತರು ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಬಯಲು ಸೀಮೆಯ ರೈತರಿಗೆ ಮಾತ್ರ ನೀರಾವರಿ ಸೌಲಭ್ಯ ದೊರಕುತ್ತಿಲ್ಲ. ಕೆಳಗಿನ ರಾಜ್ಯಗಳು ಮಾತ್ರವಲ್ಲದೇ ಮೇಲ್ಭಾಗದ ರಾಜ್ಯಗಳಿಗೆ ಸಮಾನ ನೀರಿನ ಹಂಚಿಕೆ ಆಗುವಂತೆ ಜಲಕಾಯ್ದೆ ಜಾರಿಗೊಳಿಸಬೇಕು. ಸರ್ಕಾರಗಳು ಈ ವಿಷಯದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ದಕ್ಷಿಣ ಪಿನಾಕಿನಿ ನದಿ ನೀರಿಗಾಗಿ ಹೋರಾಡುತ್ತಿರುವ ಪರಿಸರವಾದಿ ಹಾಗೂ ಹೋರಾಟಗಾರ ಸಿ.ಚೌಡಪ್ಪ ಅವರು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದರು. 

ದಕ್ಷಿಣ ಪಿನಾಕಿನಿ ಹಾದಿ ಯಾವುದು?

ದಕ್ಷಿಣ ಪಿನಾಕಿನಿ ನದಿಯು ಹೊಸಕೋಟೆ, ಕಾಡುಗೋಡಿ, ಬೆಳ್ಳಂದೂರು, ವರ್ತೂರು, ಬಾಗಲೂರು ಮೂಲಕ ತಮಿಳುನಾಡಿನ ಹೊಸೂರು ಸಮೀಪ ಕೆಳವಾರಿಪಲ್ಲಿ ಜಲಾಶಯಕ್ಕೆ ಹರಿಯುತ್ತದೆ. ಅಲ್ಲಿಂದ ಕೃಷ್ಣಗಿರಿ ಡ್ಯಾಂ, ಕಾವೇರಿ ಪಟ್ಟಣಂ, ಸಾತನೂರು ಡ್ಯಾಂ, ಮುಡಿಯನೂರು ಮೂಲಕ ಕಡಲೂರು ಬೀಚ್‌ನಲ್ಲಿ ಬಂಗಾಳ ಕೊಲ್ಲಿ ಸೇರುತ್ತದೆ.

ದಕ್ಷಿಣ ಪಿನಾಕಿನಿ ನದಿಯು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಾವಿರಾರು ಕೆರೆಗಳಿಗೆ ಜಲಮೂಲವಾಗಿದೆ. ಮಾರ್ಕಂಡೇಯ ನದಿ, ಯರಗೋಳ, ಕುಶಾವತಿ ಉಪನದಿಗಳು ಕೂಡ ಕೆರೆ ಕುಂಟೆಗಳನ್ನು ಒಳಗೊಂಡಿವೆ.  

ಜಲಾಶಯ ನಿರ್ಮಾಣಕ್ಕೆ ಕೇಂದ್ರವೇ ನೀಡಿತ್ತು ಒಪ್ಪಿಗೆ

ಕೋಲಾರದ ಯರಗೋಳದಲ್ಲಿ ಚೆಕ್‌ ಡ್ಯಾಂ ನಿರ್ಮಿಸಲು ಕೇಂದ್ರ ಜಲಶಕ್ತಿ ಸಚಿವಾಲಯದ ಅನುಮೋದನೆ ನೀಡಿತ್ತು. ಅದರಂತೆ ಕರ್ನಾಟಕ ಸರ್ಕಾರವು 240 ಕೋಟಿ ರೂ. ವೆಚ್ಚದಲ್ಲಿ ಜಲಾಶಯ ನಿರ್ಮಿಸಿದ್ದು, ಮಳೆಗಾಲದಲ್ಲಿ ಮಾತ್ರ ಮೈ ದುಂಬಿ ಹರಿಯುತ್ತದೆ. ಯರಗೋಳ ಜಲಾಶಯವನ್ನು ಸಂಪೂರ್ಣ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೀಸಲಿರಿಸಲಾಗಿದೆ. 

ದಕ್ಷಿಣ ಪಿನಾಕಿನಿ ನದಿ ವಿವಾದ ಏರ್ಪಟ್ಟ ನಂತರ ಸಂಧಾನ ಮಾತುಕತೆಗೆ ನೇಮಿಸಿದ್ದ ಸಮಿತಿ ತಮಿಳುನಾಡಿಗೆ ಪ್ರತಿ ವರ್ಷ ೧೦ ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಆದರೆ, ಕರ್ನಾಟಕ ೭.೫ ಟಿಎಂಸಿ ನೀರು ಹರಿಸುವುದಾಗಿ ಹೇಳಿತ್ತು. ಕರ್ನಾಟಕದ ಮನವಿ ತಿರಸ್ಕರಿಸಿದ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿ, ನ್ಯಾಯಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿತ್ತು.

ಕನಸಾಗಿ ಉಳಿದ ನೀರಾವರಿ ಸೌಲಭ್ಯ

ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ ಕೆಲ ಭಾಗಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಕನಸಾಗಿಯೇ ಉಳಿದಿದೆ. ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿದ್ದರೂ ಅದು ನಿರಾಶೆಯ ಯೋಜನೆ ಎಂಬುದು ಹಲವರಲ್ಲಿ ಬೇಸರ ತರಿಸಿದೆ. ಈಗ ದಕ್ಷಿಣ ಪಿನಾಕಿನಿಯ ನೀರೂ ಕೂಡ ತಮಿಳುನಾಡು ಪಾಲಾಗುತ್ತಿರುವುದಕ್ಕೆ ನೀರಾವರಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಗಳು ಸಣ್ಣ ನದಿ ನೀರಿನಲ್ಲೂ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ದಶಕದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಹರಿಯುವ ನದಿ ಉಳಿದಂತೆ ಒಣಗಿರುತ್ತದೆ. ಹೀಗಿದ್ದರೂ ನೆರೆಯ ತಮಿಳುನಾಡು, ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿರುವುದು ಸರಿಯಲ್ಲ. ಎಲ್ಲ ನೀರು ಕೆಳಗಿನ ರಾಜ್ಯಗಳಿಗೆ ನೀಡಿದರೆ ಕರ್ನಾಟಕದ ಜನರಿಗೆ ನೀರು ಬೇಡವೇ. ನಾವು ಯಾರೂ ಮನುಷ್ಯರಲ್ಲೇ ಎಂದು ನೀರಾವರಿ ಹೋರಾಟಗಾರ ಚೌಡಪ್ಪ ಪ್ರಶ್ನಿಸಿದರು.

ದೇಶದಲ್ಲಿ ಏಕರೂಪದ ನೀರು ಹಂಚಿಕೆಗಾಗಿ ಜಲ ಕಾಯ್ದೆ ಜಾರಿಗೊಳಿಸಬೇಕು. ಎಲ್ಲರಿಗೂ ಸಮಾನವಾದ ನೀರಿನ ಹಕ್ಕು ದೊರೆಯಬೇಕು. ನಾವು ರಾಷ್ಟ್ರೀಯ ಜಲ ಕಾಯ್ದೆಗಾಗಿ ಹೋರಾಡಬೇಕಾಗಿದೆ. ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಕೆಳಗಿನ ರಾಜ್ಯಗಳ ಮರ್ಮ ಅರ್ಥವಾಗುತ್ತಿಲ್ಲ. ಬ್ರಿಟೀಷ್‌ ಕಾಲದ ಕಾನೂನಿನಂತೆಯೇ ನೀರು ಹಂಚಿಕೆಯಾಗುತ್ತಿದ್ದು, ರಾಜ್ಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂದು ದೂರಿದರು.

ನದಿ ನೀದಿ ಸಮಾನ ಹಂಚಿಕೆಗೆ ಒತ್ತಾಯಿಸಿ 2016ರಲ್ಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಜ್ಯದ ಎಲ್ಲ ನಾಯಕರಿಗೂ ಮನವಿ ಸಲ್ಲಿಸಿದ್ದೇನೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Tags:    

Similar News