Mysore MUDA Case | ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್‌ಚಿಟ್‌; ಪ್ರತಿಭಟನಾ ಅರ್ಜಿ ಆದೇಶ ಏ.15ಕ್ಕೆ ಪ್ರಕಟ

ಮುಡಾ ತನಿಖೆಯಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಇಡಿ ಅಧಿಕಾರಿಗಳು ಲೋಕಾಯುಕ್ತಕ್ಕೆ ನೀಡಿದ್ದರು. ಆದರೆ, ಲೋಕಾಯುಕ್ತರು ಬಿ ವರದಿ ಸಲ್ಲಿಸುವಾಗ ಇದನ್ನು ಪರಿಗಣಿಸಿಲ್ಲ ಎಂದು ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು..;

Update: 2025-04-10 02:12 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆವರಿಸಿರುವ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ವರದಿ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಪ್ರತಿಭಟನಾ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಏಪ್ರಿಲ್‌ 15ಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕಟಿಸಲಿದೆ.

ಏಪ್ರಿಲ್‌ 3ರಂದು ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿ ಸಂಬಂಧ ವಾದವನ್ನು ನ್ಯಾಯಾಲಯ ಆಲಿಸಿತ್ತು. ಮುಡಾ ಪ್ರಕರಣದಲ್ಲಿ ಪ್ರತಿಭಟನಾ ಅರ್ಜಿ ಸಲ್ಲಿಸಲು ತನಗೂ ಅನುಮತಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ವಾದ-ಪ್ರತಿವಾದವನ್ನು ವಿಶೇಷ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಇಂದು ಆಲಿಸಿದರು.

ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತ ಪೊಲೀಸರ ಪರ ವಕೀಲರ ವಾದ ಆಲಿಸಿ, ನ್ಯಾಯಾಲಯ ಆದೇಶ ಕಾಯ್ದಿರಿಸಿದೆ.

ಜಾರಿ ನಿರ್ದೇಶನಾಲಯದ ವಕೀಲರು “ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಲೋಕಾಯುಕ್ತದ ಜೊತೆ ನವೆಂಬರ್‌ 30 ಮತ್ತು 2025ರ ಜನವರಿ 24ರಂದು ಹಂಚಿಕೊಳ್ಳಲಾಗಿದೆ. ಬಿ ವರದಿ ಸಲ್ಲಿಸುವಾಗ ಲೋಕಾಯುಕ್ತ ಪೊಲೀಸ್‌ ಇದನ್ನು ಪರಿಗಣಿಸಿಲ್ಲ. ಅಲ್ಲದೇ, ಪ್ರತಿಭಟನಾ ಅರ್ಜಿ ಸಲ್ಲಿಸುವ ಹಕ್ಕು ತನಗೂ ಇದೆ” ಎಂದು ವಾದಿಸಿದರು. ಸಂಬಂಧಿತ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.

ಲೋಕಾಯುಕ್ತ ಪೊಲೀಸರ ಪರ ವಕೀಲರು “ಜಾರಿ ನಿರ್ದೇಶನಾಲಯವು ಪ್ರತಿಭಟನಾ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಜಾರಿ ನಿರ್ದೇಶನಾಲಯವು ಬಾದಿತ ವ್ಯಕ್ತಿಯಾಗುವುದಿಲ್ಲ. ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳು ಲೋಕಾಯುಕ್ತ ಪೊಲೀಸರ ಜೊತೆ ಹಂಚಿಕೊಂಡಿರುವ 28 ದಾಖಲೆಗಳನ್ನು ಪರಿಗಣಿಸಲಾಗಿದ್ದು, ಬಿ ವರದಿಯಲ್ಲಿ ಒಂದು ಸಂಚಿಕೆಯನ್ನು ಮೀಸಲಿಡಲಾಗಿದೆ” ಎಂದು ವಿವರಿಸಿದರು.

Tags:    

Similar News