Mysore Muda Case| ಸಿದ್ದರಾಮಯ್ಯ ಬೆಂಬಲಿಸಿದ ಜೆಡಿಎಸ್ ನಾಯಕ ಜಿ.ಟಿ. ದೇವೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು
Mysore Muda Case| ಜಿಟಿ ದೇವೇಗೌಡ ತಮ್ಮ ಪ್ರಭಾವ ಬಳಸಿ ಮುಡಾ ಸೈಟ್ ಪಡೆಯುವಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ;
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಇದೀಗ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಸಂಕಷ್ಟ ಎದುರಾಗಿದ್ದು, ಜಿ.ಟಿ. ದೇವೇಗೌಡ ತಮ್ಮ ಪ್ರಭಾವ ಬಳಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸೈಟ್ ಪಡೆಯುವಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣ ದಾಖಲಾದಾಗ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರೋಧಿ ಬಣದ ನಾಯಕ ಜಿ.ಟಿ. ದೇವೇಗೌಡ ಅವರು ಸಿದ್ದರಾಮಯ್ಯ ಪರವಾಗಿ ಮಾತನಾಡಿ, ಅವರ ರಾಜೀನಾಮೆ ಕೇಳುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜತೆಗೆ ತಮ್ಮದೇ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದನ್ನು ಈಗ ಸ್ಮರಿಸಿಕೊಳ್ಳಬಹುದು.
ಮೈಸೂರು ಲೋಕಾಯುಕ್ತಕ್ಕೆ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಅವರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರವರು, ತಮ್ಮ ಪ್ರಭಾವ ವನ್ನು ಬಳಸಿಕೊಂಡು, ಸರ್ಕಾರಕ್ಕೆ ಸೇರಿದ ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಸಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆ.ಚೌಡಯ್ಯ ಎಂಬುವವರ ಹೆಸರಿಗೆ 50:50 ಅನುಪಾತದಲ್ಲಿ ಒಟ್ಟು ಆರು ನಿವೇಶನಗಳನ್ನು ಅಕ್ರಮವಾಗಿ ಕೊಡಿಸಿ, ಅದರಲ್ಲಿ 50+80 ಅಡಿ ಅಳತೆಯ ಎರಡು ನಿವೇಶನಗಳನ್ನು ಅವರ ಮಗಳು ಶ್ರೀಮತಿ ಡಿ.ಅನ್ನಪೂರ್ಣ ಮತ್ತು ಅಳಿಯ ಜಿ.ಎಂ.ವಿಶ್ವೇಶ್ವರಯ್ಯನವರ ಹೆಸರಿಗೆ ಪಡೆದುಕೊಂಡಿರುವ ಬಗ್ಗೆ ತನಿಖೆ ನಡೆಸಿ, ಎಲ್ಲಾ ತಪಿತಸ್ಥರನ್ನು ನಾನು ನಿಮ್ಮ ಠಾಣೆಯಲ್ಲಿ ದಾಖಲು ಮಾಡಿಸಿರುವ 11/2024 ಸಂಖ್ಯೆಯ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿ, ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.
ಮೈಸೂರು ತಾಲ್ಲೂಕು ಕಸಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂ.154ರ ಆರ್.ಟಿ.ಸಿ ಪ್ರತಿಯಲ್ಲಿನ 9ನೇ ಕಾಲಂನಲ್ಲಿ ಜವರಯ್ಯ, ಕೆ.ಬೋರಯ್ಯ, ಚೌಡಯ್ಯ, ಪುಟ್ಟಣ್ಣಯ್ಯ, ಗಂಗಾಧರ ಎಂಬುವವರ ಹೆಸರಿಗೆ 3.38 ಎಕರೆ ಜಮೀನಿನ ಜಂಟಿ ಖಾತೆ ಇದೆ. ಇದೇ, ಆರ್ಟಿಸಿಯಲ್ಲಿ 11ನೇ ಕಾಲಂನಲ್ಲಿ ನಗರದ ಭೂಮಿತಿ ಕಾಯಿದೆ ವ್ಯಾಪ್ತಿಗೆ ಒಳಪಟ್ಟಿರುವುದಾಗಿ ನಮೂದಿಸಿದೆ. ಅಂದರೆ ಸರ್ಕಾರದ ಆಸ್ತಿಯಾಗಿದೆ.
ಈ ಜಮೀನು ನಗರದ ಭೂಮಿತಿ ಕಾಯಿದೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸರ್ಕಾರ ವಶಕ್ಕೆ ಪಡೆದಿದೆಯೇ? ಅಥವಾ ಕಾಯಿದೆಯಿಂದ ಕೈಬಿಡಲಾಗಿದೆಯೆ? ಕೈಬಿಟ್ಟಿದ್ದರೆ ಆರ್ಟಿಸಿಯಲ್ಲಿ ಈಗಲೂ ಉಲ್ಲೇಖ ಇರಲು ಕಾರಣವೇನು? ಪ್ರಾಧಿಕಾರದಿಂದ ಜಮೀನನ್ನು ಸ್ವಾಧೀನಕ್ಕೆ ಪಡೆಯಲಾಗಿದೆಯೇ? ಯಾವಾಗ ಸ್ವಾಧೀನಕ್ಕೆ ಪಡೆಯಲಾಗಿದೆ? ಆ ಸಂದರ್ಭದಲ್ಲಿ ಯಾರಿಗೆ ಪರಿಹಾರದ ಹಣವನ್ನು ನೀಡಲಾಗಿದೆ? ಅಥವಾ ಪರಿಹಾರ ನೀಡಿಲ್ಲವೇ? ಜಮೀನಿನಲ್ಲಿ ಪ್ರಾಧಿಕಾರದಿಂದ ಬಡಾವಣೆ ರಚನೆ ಮಾಡಲಾಗಿದೆಯೇ? ಯಾವಾಗ ಬಡಾವಣೆ ರಚನೆ ಮಾಡಲಾಗಿದೆ? ಎಂಬ ಅಂಶಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಮೈಸೂರಿನ ವಿಜಯನಗರ 4ನೇ ಹಂತದ 2ನೇ ಘಟ್ಟದ ನಿವೇಶನ ಸಂಖ್ಯೆ-12257 ಮತ್ತು 12259 ಸಂಖ್ಯೆಯ 50X80 ಅಳತೆಯ ನಿವೇಶನಗಳನ್ನು ಜಿಟಿ ದೇವೇಗೌಡ ಪುತ್ರಿ ಡಿ.ಅನ್ನಪೂರ್ಣ ಮತ್ತು ಅಳಿಯ ಜಿ.ಎಂ.ವಿಶ್ವೇಶ್ವರಯ್ಯಗೆ 2023ರ ನವೆಂಬರ್ 11 ರಂದು ಕ್ರಯಪತ್ರಗಳನ್ನು ನೊಂದಣಿ ಮಾಡಲಾಗಿದೆ. ಇದೇ ನಿವೇಶನಗಳನ್ನು ಪ್ರಾಧಿಕಾರದಿಂದ ಚೌಡಯ್ಯ ಎಂಬುವರಿಗೆ 2023ರ ಅಕ್ಟೋಬರ್ 19 ರಂದು ಕ್ರಯಪತ್ರ ನೊಂದಣಿ ಮಾಡಲಾಗಿದೆ. ಅದಾದ ಕೇವಲ ಸುಮಾರು 19 ದಿನಗಳ ಅಂತರದಲ್ಲೇ ಡಿ.ಅನ್ನಪೂರ್ಣ ಮತ್ತು ಜಿ.ಎಂ.ವಿಶ್ವೇಶ್ವರಯ್ಯಗೆ ಕ್ರಯಪತ್ರಗಳನ್ನು ನೊಂದಣಿ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.