ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಒಂದೇ ಕುಟುಂಬದ ಆರು ಮಂದಿ ಸಾವು
ನೆಲಮಂಗಲ ಸಮೀಪದ ತಾಳೇಕೆರೆ ಗ್ರಾಮದ ಬಳಿ ಸರಣಿ ಅಪಘಾತ ಸಂಭವಿಸಿದೆ. ಕಂಟೇನರ್ ಲಾರಿ ಕಾರಿನ ಮೇಲೆ ಬಿದ್ದು ಆರು ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಎರಡು ಕಾರು, ಎರಡು ಲಾರಿ ಮತ್ತು ಸ್ಕೂಲ್ ಬಸ್ ಜಖಂಗೊಂಡಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಸರಣಿ ಅಪಘಾತ ಸಂಭವಿಸಿ, ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಧಾರುಣ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸರಣಿ ಅಪಘಾತದಲ್ಲಿ ಕಂಟೇನರ್ ಲಾರಿಯೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ವಿಜಯಪುರ ಮೂಲದವರಾದ IAST ಸಾಫ್ಟ್ವೇರ್ ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಮ್ ಯೇಗಪ್ಪಗೋಳ್, ಬಾಲಕಿ ದೀಕ್ಷಾ ಎಂದು ಗುರುತಿಸಲಾಗಿದೆ. ಉಳಿದವರ ಗುರುತು ಪತ್ತೆ ಹೆಚ್ಚಲಾಗುತ್ತಿದೆ.
ನೆಲಮಂಗಲ ಸಮೀಪದ ತಾಳೇಕೆರೆ ಗ್ರಾಮದ ಬಳಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡು ಕಾರು, ಎರಡು ಲಾರಿ ಮತ್ತು ಸ್ಕೂಲ್ ಬಸ್ ಜಖಂ ಆಗಿವೆ. ಈ ವೇಳೆ ಕಂಟೇನರ್ ಲಾರಿಯೊಂದು ಕಾರಿನ ಮೇಲೆ ಬಿದ್ದುದರಿಂದ ಕಾರು ಅಪ್ಪಚ್ಚಿಯಾಗಿದೆ.
Traffic advisory:
— SP Bengaluru District Police (@bngdistpol) December 21, 2024
Slow-moving traffic in Bengaluru-Tumkur national highway due to vehicle accidents between canter and car near Beguru in Nelmangla.
Kindly co-operate. pic.twitter.com/0x6FmlOKyo
ಅಪಘಾತದಿಂದ ಟ್ರಾಫಿಕ್ ಜಾಮ್
ಭೀಕರ ಅಪಘಾತದಿಂದಾಗಿ ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಸುಮಾರು 3 ಕಿ.ಮೀ ದೂರಗಳವರೆಗೆ ಸಂಚಾರ ದಟ್ಟಣೆ ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಂಟೇನರ್ ಲಾರಿ ಹಾಗೂ ಜಖಂಗೊಂಡ ವಾಹನಗಳನ್ನು ತೆರವು ಮಾಡಿದರು. ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿ ಪರಿಶೀಲನೆ ನಡೆಸಿದರು.
ಕಂಟೇನರ್ ಲಾರಿಯ ಕೆಳಗೆ ಸಿಲುಕಿದ ಕಾರು ಬೆಂಗಳೂರು ನೋಂದಣಿ ಸಂಖ್ಯೆ ಹೊಂದಿದ್ದು, ಮೃತರನ್ನು ವಿಜಯಪುರ ಮೂಲದವರು ಎಂದು ಹೇಳಲಾಗಿದೆ. ಕಾರಿನಲ್ಲಿ ಮಕ್ಕಳ ಪುಸ್ತಕಗಳು ದೊರೆತಿದ್ದು, ಅದರಲ್ಲಿ ದೀಕ್ಷಾ ಎಂಬ ಹೆಸರಿದೆ. ಮೃತರ ವಿವರಗಳು ಇನ್ನಷ್ಟೇ ತಿಳಿದುಬರಬೇಕಾಗಿದೆ.