Cabinet Decision | ಕೋವಿಡ್ ಅವ್ಯವಹಾರ ತನಿಖೆಗೆ ಎಸ್ಐಟಿ ರಚನೆಗೆ ತೀರ್ಮಾನ

ಎಸ್ಐಟಿ ನಡೆಸುವ ತನಿಖೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರ ಮೇಲ್ವಿಚಾರಣೆ ನಡೆಸಲು ಸಚಿವ ಸಂಪುಟದ ಉಪಸಮಿತಿಯನ್ನೂ ರಚಿಸಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟದ ಉಪಸಮಿತಿ ಸದಸ್ಯರನ್ನು ಅಂತಿಮಗೊಳಿಸಲು ಮುಖ್ಯಮಂತ್ರಿ ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಎಚ್.ಕೆ. ಪಾಟೀಲ್ ವಿವರಿಸಿದರು.;

Update: 2024-10-10 13:11 GMT

ಕೋವಿಡ್ ಅವಧಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಬಹುಕೋಟಿ ಅವ್ಯವಹಾರಗಳ ತನಿಖೆಗೆ ಸಂಬಂಧಿಸಿ ನೇಮಿಸಿದ್ದ ನ್ಯಾ.ಮೈಕಲ್ ಡಿ ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ನೀಡಿರುವ ಮಧ್ಯಂತರ ವರದಿ ಆಧಾರದ ಮೇಲೆ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ನೇಮಿಸಲು ರಾಜ್ಯ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಸಚಿವ ಸಂಪುಟದ ನಿರ್ಣಯಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್, ಸತ್ಯಸಂಶೋಧನಾ ವರದಿಯಲ್ಲಿ ಯಾರ ಪಾತ್ರ ಏನು ಎಂಬುದನ್ನು ತನಿಖೆ ಮಾಡಿ ಎಸ್ಐಟಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಕುನ್ಹಾ ಆಯೋಗ ಸಲ್ಲಿಸಿರುವ 11 ಸಂಪುಟಗಳ ಮಧ್ಯಂತರ ವರದಿಯಲ್ಲಿ ಒಟ್ಟು ರೂ.7223.64 ಕೋಟಿ ಮೊತ್ತದ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಾಗಿರುವ ಅವ್ಯವಹಾರದ ಕುರಿತು ತನಿಖೆ ನಡೆಸಿದೆ. ರೂ.500 ಕೋಟಿ ವಸೂಲಾತಿಗೂ ಶಿಫಾರಸು ಮಾಡಿದೆ. ಬಿಬಿಎಂಪಿ 4 ವಲಯಗಳ ಮತ್ತು ರಾಜ್ಯದ ಎಲ್ಲಾ 31 ಜಿಲ್ಲೆಗಳ ವರದಿ ಸಲ್ಲಿಕೆ ಬಾಕಿಯಿದೆ. 55000 ಕಡತಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ಪರಿಶೀಲಿಸಿ ಆಯೋಗವು ವರದಿ ಸಲ್ಲಿಸಿದೆ ಎಂದು ತಿಳಿಸಿದರು.

ಎಸ್ಐಟಿ ನಡೆಸುವ ತನಿಖೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರ ಮೇಲ್ವಿಚಾರಣೆ ನಡೆಸಲು ಸಚಿವ ಸಂಪುಟದ ಉಪಸಮಿತಿಯನ್ನೂ ರಚಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಚಿವ ಸಂಪುಟದ ಉಪಸಮಿತಿ ಸದಸ್ಯರನ್ನು ಅಂತಿಮಗೊಳಿಸಲು ಮುಖ್ಯಮಂತ್ರಿ ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಎಚ್.ಕೆ. ಪಾಟೀಲ್ ವಿವರಿಸಿದರು.

ರೂ.500 ಕೋಟಿ ಮೊತ್ತದ ವಸೂಲಾತಿ ಕುರಿತು ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾರ್ವಜನಿಕರ ಹಣ ದುರುಪಯೋಗ ಮತ್ತು ಅಧಿಕಾರ ದುರುಪಯೋಗ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿರುವ ವರದಿಯನ್ನು 2023 ಜುಲೈ 17 ರಂದು 15ನೇ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಈ ವರದಿಯ ಆಧಾರದ ಮೇಲೆ ಸತ್ಯಸಂಶೋಧನೆ ಮಾಡಿ ವರದಿ ನೀಡಲು ನ್ಯಾ. ಡಿ ಕುನ್ಹಾ ಆಯೋಗ ನೇಮಿಸಲಾಗಿತ್ತು. ಈ ಆಯೋಗವು 12 ವಿಶ್ಲೇಷಣಾ ವರದಿಗಳನ್ನು ನೀಡಿದೆ ಎಂದು ಸಚಿವರು ವಿವರಿಸಿದರು.

Tags:    

Similar News