ಕನ್ನಡಿಗರನ್ನು ಭಾಷಾಂಧರೆಂದು ಕರೆದ ಸೋನು ನಿಗಮ್‍ಗೆ ಕನ್ನಡ ಎಲ್ಲವನ್ನೂ ಕೊಟ್ಟಿದೆ; ಅವರ ಕೊಡುಗೆಯೇನು?
ಹಾಗೆ ನೋಡಿದರೆ, ಅಕ್ಕಪಕ್ಕದ ರಾಜ್ಯಗಳಲ್ಲಿ ಸೋನು ಅತಿಥಿ ಗಾಯಕರಷ್ಟೇ. ಕನ್ನಡದಲ್ಲಿ ಅವರು ಪ್ರಮುಖ ಗಾಯಕರಷ್ಟೇ ಅಲ್ಲ, ಹಾಡೊಂದಕ್ಕೆ ಐದರಿಂದ ಎಂಟು ಲಕ್ಷ ಸಂಭಾವನೆ ಪಡೆಯುತ್ತಾರೆ. ಹಾಗಾದರೆ ಅವರಿಗೆ ಕನ್ನಡಿಗರೆಂದರೆ ಅಲರ್ಜಿ ಯಾಕೆ?;
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡಬೇಕು ಎಂದು ಯುವಕನೊಬ್ಬ ಮನವಿ ಇಟ್ಟಾಗ, ಬಾಲಿವುಡ್‍ನ ಜನಪ್ರಿಯ ಗಾಯಕ ಸೋನು ನಿಗಮ್ ಸಿಟ್ಟಾಗಿದ್ದರು. ತಮಗೆ ಕನ್ನಡದ ಮೇಲಿರುವ ಪ್ರೀತಿ ಮತ್ತು ಗೌರವದ ಬಗ್ಗೆ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಈ ಪ್ರಕರಣವನ್ನು ಇತ್ತೀಚೆಗೆ ಪಹಲ್ಗಾಮ್‍ನಲ್ಲಿ ಭಯೋತ್ಪಾದಕ ದಾಳಿಗೆ ಹೋಲಿಸಿದ್ದರು.
ಸೋನು ನಿಗಮ್ ಅವರ ಈ ನಡೆಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಕೆಲವರು ಸೋನು ನಿಗಮ್ ಅವರ ನಡೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಖಂಡಿಸಿದ್ದಾರೆ. ‘ಭಯೋತ್ಪಾದಕ ಕೃತ್ಯಕ್ಕೂ, ಕನ್ನಡ ಹಾಡು ಹಾಡಬೇಕೆಂಬ ಮನವಿಗೂ ಏನು ಸಂಬಂಧ? ಇಂಥದ್ದೊಂದು ತಳಕು ಹಾಕುವುದು ಮೂರ್ಖತನ. ತಮ್ಮ ಹಿಂದಿನ ಕಾರ್ಯಕ್ರಮಗಳಲ್ಲಿ ಕನ್ನಡಿಗರ ತೋರಿಸಿದ ಪ್ರೀತಿಯ ಬಗ್ಗೆ ಸೋನು ನಿಗಮ್ ಮಾತನಾಡಿದ್ದರು. ಈಗ ವಿಚಿತ್ರ ಹೇಳಿಕೆ ನೀಡಿದ್ದಾರೆ. ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು’ ಎಂದು ಕಾರ್ತಿಕ್ ಒತ್ತಾಯಿಸಿದ್ದರು.
ಸೋನು ನಿಗಮ್ ಅವರ ಈ ಹೇಳಿಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡಪರ ಹೋರಾಟಗಾರರು ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿವೆ. ಈ ಸಂಬಂಧ ಬೆಂಗಳೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ದೂರು ದಾಖಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿ್ಜ್ಯ ಮಂಡಳಿಯಲ್ಲೂ ದೂರು ದಾಖಲಾಗಿದೆ.
ಸೋನು ನಿಗಮ್ ಕಳೆದ 29 ವರ್ಷಗಳಿಂದ ಕನ್ನಡದಲ್ಲಿ ಹಾಡುತ್ತಿದ್ದಾರೆ. ಅವರು ತಮ್ಮ ವೃತ್ತಿಜೀವನದ ಹಾಡುಗಳ ಪೈಕಿ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. 2006ರಲ್ಲಿ ಬಿಡುಗಡೆಯಾದ ‘ಮುಂಗಾರು ಮಳೆ’ ಚಿತ್ರದಿಂದ ಸೋನುಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕರೂ, ಅದಕ್ಕೂ ಒಂದು ದಶಕದ ಮೊಲಿನಿಂದಲೇ ಅವರು ಕನ್ನಡದಲ್ಲಿ ಹಾಡುತ್ತಿದ್ದಾರೆ. 1996ರಲ್ಲಿ ಬಿಡುಗಡೆಯಾದ ‘ಜೀವನದಿ’ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಅವರು, ‘ಮುಂಗಾರು ಮಳೆ’ಯಿಂದ ಜನಪ್ರಿಯರಾಗುವುದಕ್ಕೆ ಮುನ್ನವೇ, ‘ಬಾವ ಬಾಮೈದ’ ಚಿತ್ರದ ‘ಪ್ರೀತಿ ನೀ ಇಲ್ಲದೆ ನಾನು ಹೇಗಿರಲಿ …’, ‘ಗಟ್ಟಿಮೇಳ’ ಚಿತ್ರದ ‘ಹಂಸವೇ ಹಂಸವೇ …’, ‘ಹುಚ್ಚ’ ಚಿತ್ರದ ‘ಉಸಿರೇ ಉಸಿರೇ …’, ‘ಏಕಾಂಗಿ’ ಚಿತ್ರದ ‘ಒನ್ಸ್ ಅಪಾನ್ ಎ ಟೈಮ್ …’, ‘ಕಂಠಿ’ ಚಿತ್ರದ ‘ಬಾನಿಂದ ಬಾ ಚಂದಿರ …’, ರಿಷಿ ಚಿತ್ರದ ‘ಎಲ್ಲೆಲ್ಲೂ ಹಬ್ಬ ಹಬ್ಬ …’ ಮುಂತಾದ ಜನಪ್ರಿಯ ಹಾಡುಗಳನ್ನು ಹಾಡಿದ್ದರು.
‘ಮುಂಗಾರು ಮಳೆ’ ಚಿತ್ರದ ನಂತರ ಆ ಜನಪ್ರಿಯತೆ ಇಮ್ಮಡಿಯಾಯ್ತು. ಅವರು ಕನ್ನಡದ ಗಾಯಕರೇ ಎನ್ನುವುಷ್ಟು ಪ್ರೀತಿಯನ್ನು ಕನ್ನಡಿಗರು ಸಹ ತೋರಿದರು. ಸೋನು ಎಷ್ಟೇ ಯಶಸ್ವಿ ಮತ್ತು ಜನಪ್ರಿಯ ಗಾಯಕರಾದರೂ, ಅಕ್ಕಪಕ್ಕದ ರಾಜ್ಯಗಳಲ್ಲಿ ಅವರು ಅತಿಥಿ ಗಾಯಕರು ಅಷ್ಟೇ. ಬಹುಶಃ ಹಿಂದಿ ಬಿಟ್ಟರೆ ಕನ್ನಡದಲ್ಲಿ ಮಾತ್ರ ಅವರು ಅಷ್ಟು ಜನಪ್ರಿಯವಾಗಿದ್ದಷ್ಟೇ ಅಲ್ಲ, ಅವರು ಹಲವು ಹಾಡುಗಳು ಯಶಸ್ವಿಯಾಗಿವೆ.
ಇದನ್ನು ಸೋನು ನಿಗಮ್ ಸಹ ಹೇಳಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಡೆದ ಘಟನೆಯ ನಂತರವೂ ಕರ್ನಾಟಕದಲ್ಲಿ ತಮಗೆ ಸಿಕ್ಕ ಪ್ರೀತಿಯ ಬಗ್ಗೆ ಸೋನು ಒಂದಿಷ್ಟು ಮಾತನಾಡಿದ್ದಾರೆ. ‘ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆ ಪೈಕಿ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ನನ್ನನ್ನು ನಿಮ್ಮ ಕುಟುಂಬದವರಂತೆ ನೋಡಿಕೊಂಡಿದ್ದೀರಿ. ಪ್ರತಿ ಬಾರಿ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ, ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಒಂದು ಸಾಲು ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ. ಆ ಹುಡುಗನ ವಯಸ್ಸಿಗಿಂತ ಮೊದಲಿನಿಂದಲೂ ನಾನು ಕನ್ನಡ ಹಾಡು ಹಾಡುತ್ತಿದ್ದೇನೆ. ಆದರೆ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡರು.
ಸೋನು ನಿಗಮ್ ಹೀಗೆ ಮಾಡುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮೊದಲು 2023ರಲ್ಲೂ ಸೋನು ನಿಗಮ್ ಇದೇ ರೀತಿ ಮಾಡಿದ್ದರು. 2023ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ಸಂಗೀತ ಸಂಜೆಯಲ್ಲಿ ಸೋನು ನಿಗಮ್, ‘ಪರಮಾತ್ಮ’ ಚಿತ್ರದ ‘ಪರವಶನಾದೆನು …’ ಹಾಡು ಹಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಪೀಕರ್ ಹಾಳಾಗಿ ಕರ್ಕಶ ಧ್ವನಿ ಕೇಳುತ್ತಿತ್ತು. ಆಗ ಹಾಡುವುದನ್ನು ನಿಲ್ಲಿಸಿದ್ದ ಸೋನು ವಿವಾದ ಎಬ್ಬಿಸಿದ್ದರು. ಈಗ ಈ ಪ್ರಕರಣ ನಡೆದಿದೆ.
ಹಾಗೆ ನೋಡಿದರೆ, ಅಕ್ಕಪಕ್ಕದ ರಾಜ್ಯಗಳಲ್ಲಿ ಸೋನು ಅತಿಥಿ ಗಾಯಕರಷ್ಟೇ. ಕನ್ನಡದಲ್ಲಿ ಅವರು ಪ್ರಮುಖ ಗಾಯಕರಷ್ಟೇ ಅಲ್ಲ, ಹಾಡೊಂದಕ್ಕೆ ಐದರಿಂದ ಎಂಟು ಲಕ್ಷ ಸಂಭಾವನೆ ಪಡೆಯುತ್ತಾರೆ. ಅದೂ ಅವರು ಬೆಂಗಳೂರಿಗೆ ಬಂದು ಹಾಡುವುದಿಲ್ಲ. ಮುಂಬೈಗೆ ಚಿತ್ರತಂಡದವರನ್ನು ಕರೆಸಿಕೊಂಡು ಹಾಡುತ್ತಾರೆ. ಕನ್ನಡದಿಂದ ಇಷ್ಟೆಲ್ಲಾ ಪಡೆಯುವ ಸೋನು, ಕನ್ನಡಿಗರ ಮೇಲೆ ಆಗಾಗ ಹರಿಹಾಯುತ್ತಲೇ ಇರುತ್ತಾರೆ. ಸೋನು ನಿಗಮ್‍ಗೆ ಕನ್ನಡ ಎಲ್ಲ ಕೊಟ್ಟಿದೆ, ಆದರೆ ಅವರೇನು ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಅವರು ಪದೇಪದೇ ಕರ್ನಾಟಕಕ್ಕೆ ಬಂದು ವಿವಾದ ಮಾಡುತ್ತಲೇ ಇದ್ದಾರೆ. ಈ ಬಾರಿಯಂತೂ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು, ಕನ್ನಡಿಗರಲ್ಲಿ ಆಕ್ರೋಶ ಹುಟ್ಟುಹಾಕಿದೆ.