BodhGaya | ಬುದ್ಧಗಯಾ ಬ್ರಾಹ್ಮಣೀಕರಣ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ

ಬುದ್ಧ ವಿಹಾರದ ಆಡಳಿತದಲ್ಲಿ ವೈದಿಕರು (ಮಹಾಂತರು ಅಥವಾ ಬ್ರಾಹ್ಮಣರು) ಸೇರಿಕೊಂಡು ಬೌದ್ಧ ಧರ್ಮದ ಆಚರಣೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಬೌದ್ಧ ಧರ್ಮವನ್ನು ಬ್ರಾಹ್ಮಣೀಕರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬೌದ್ಧ ಧರ್ಮಿಕರಯ ಆರೋಪಿಸಿದ್ದಾರೆ.;

Update: 2024-11-26 06:58 GMT

ಗೌತಮ ಬುದ್ದರಿಗೆ ಜ್ಞಾನೋದಯವಾದ ಬುದ್ದ ಗಯಾದ ಮಹಾಬೋಧಿ ಬುದ್ಧ ವಿಹಾರದ ಆಡಳಿತ ವಿವಾದದ ಕೇಂದ್ರಬಿಂದುವಾಗಿದೆ. ಬುದ್ಧ ವಿಹಾರದ ಸಂಪೂರ್ಣ ಆಡಳಿತ ಹಾಗೂ ನಿರ್ವಹಣೆಯನ್ನು ಬೌದ್ಧರಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಇಂದು (ಮಂಗಳವಾರ) ಏಕಕಾಲದಲ್ಲಿ ಬೌದ್ಧ ಧರ್ಮಿಯರು ಪ್ರತಿಭಟನೆ ನಡೆಸಿದ್ದಾರೆ.

ಸಂವಿಧಾನದಲ್ಲಿ ಆಯಾ ಧರ್ಮಗಳ ಆಚರಣೆಗೆ ಮುಕ್ತ ಅವಕಾಶವಿದೆ. ವಿವಿಧ ಧರ್ಮಗಳ ಶ್ರದ್ಧಾಕೇಂದ್ರಗಳು ಆಯಾ ಧರ್ಮಿಯರ ಹಿಡಿತದಲ್ಲಿಯೇ ಇವೆ. ಆದರೆ, ಬುದ್ಧ ವಿಹಾರದ ಆಡಳಿತದಲ್ಲಿ ಮಾತ್ರ ವೈದಿಕರು(ಮಹಾಂತರು ಅಥವಾ ಬ್ರಾಹ್ಮಣರು) ಸೇರಿಕೊಂಡು ಬೌದ್ಧ ಧರ್ಮದ ಆಚರಣೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಬೌದ್ಧ ಧರ್ಮವನ್ನು ಬ್ರಾಹ್ಮಣೀಕರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ ಬೌದ್ಧ ಧರ್ಮಿಯರು ಸಂವಿಧಾನ ಸಮರ್ಪಣಾ ದಿನದಂದೇ (ನ.26) ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು. ರಾಷ್ಟ್ರಪತಿ, ಪ್ರಧಾನಿ, ಸಿಎಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಏನಿದು ಬುದ್ಧ ವಿಹಾರ ವಿವಾದ?

1947ರ ಸಾತಂತ್ರ್ಯದ ನಂತರ ಬಿಹಾರ ವಿಧಾನಸಭೆಯಲ್ಲಿ ಬುದ್ಧಗಯಾ ಟೆಂಪಲ್ ಆಕ್ಟ್(ಬಿ.ಟಿ. ಆಕ್ಟ್‌) 1949 ಕಾಯ್ದೆ ಜಾರಿಗೆ ತಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಾಲ್ವರು ಬೌದ್ಧರು, ನಾಲ್ವರು ಮಹಾಂತರನ್ನು(ಬ್ರಾಹ್ಮಣರು) ಒಳಗೊಂಡ ಬಿ.ಟಿ.ಎಂ.ಸಿ. (ಬುದ್ಧಗಯಾ ಟೆಂಪಲ್ ಮ್ಯಾನೇಜ್‌ಮೆಂಟ್ ಕಮಿಟಿ) ರಚಿಸಲಾಯಿತು. ಬೌದ್ಧ ಧರ್ಮಕ್ಕೆ ಸೇರಿದ ವಿಹಾರದ ಆಡಳಿತದಲ್ಲಿ ಬ್ರಾಹ್ಮಣರನ್ನು ಸೇರಿಸಿದ ಕ್ರಮಕ್ಕೆ ಬೌದ್ಧರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಬಿಹಾರ ಸರ್ಕಾರ ಕಮಿಟಿಯನ್ನು ಪುನಾರಚನೆ ಮಾಡಲಿಲ್ಲ. ಪರಿಣಾಮ ಬುದ್ದಗಯಾ ಶ್ರದ್ಧಾಕೇಂದ್ರದ ಸುತ್ತ ದೇಗುಲಗಳು ತಲೆ ಎತ್ತಿವೆ. ಹಿಂದೂ ಆಚರಣೆಗಳು ಚಾಲ್ತಿಗೆ ಬಂದಿದೆ. ಇದರಿಂದ ಜಗತ್ತಿನ ಬೌದ್ಧರಿಗೆಲ್ಲ ಪವಿತ್ರ ಸ್ಥಳವಾಗಿರುವ ಬುದ್ಧಗಯಾದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ ಎಂಬುದು ಈಗ ವಿವಾದ ಸ್ವರೂಪ ಪಡೆದಿರುವ ವಿಷಯ.

ಕೇಂದ್ರ ಸರ್ಕಾರದಿಂದ ಅನ್ಯಾಯ

ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಆಶಯದಂತೆ ಆಯಾ ಧರ್ಮಗಳ ಶ್ರದ್ಧಾ ಕೇಂದ್ರಗಳ ನಿರ್ವಹಣೆಯನ್ನು ಆಯಾ ಧರ್ಮಿಯರಿಗೆ ನೀಡಲಾಗಿದೆ. 1950 ಜನವರಿ 26ರಂದು ಸಂವಿಧಾನ ಜಾರಿಯಾದ ನಂತರ ಸಂವಿಧಾನದ ಕಲಂ 3ರ ಪ್ರಕಾರ ಅನ್ಯಧರ್ಮಿಯರ ಹಸ್ತಕ್ಷೇಪ ತೆಗೆದು ಹಾಕಲಾಗಿದೆ. ಆದರೆ, ಬುದ್ದಗಯಾದಲ್ಲಿ ಮಾತ್ರ ಹಸ್ತಕ್ಷೇಪ ನಿಂತಿಲ್ಲ. ಪ್ರತಿಯೊಬ್ಬರಿಗೆ ಅವರವರ ಆಚರಣೆ, ಸ್ವಾತಂತ್ರ್ಯ ಹಾಗೂ ಧರ್ಮಪಾಲನೆಗೆ ಸಂವಿಧಾನದ ಕಲಂ 25, 26 ಮತ್ತು 29 ಅವಕಾಶ ಮಾಡಿಕೊಟ್ಟಿದೆ. ಆದರೆ, ಬುದ್ದಗಯಾದಲ್ಲಿ ಸಂವಿಧಾನ ನೀಡಿರುವ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂಬುದು ಬೌದ್ಧ ಧರ್ಮಿಯರ ಆರೋಪ.


ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಎದುರು ಬೌದ್ಧ ಧರ್ಮಿಕರು ಪ್ರತಿಭಟನೆ ನಡೆಸಿದರು

ಬುದ್ಧ ಗಯಾದ ಹಿನ್ನೆಲೆ

ಬುದ್ಧ ಗಯಾ ಜಗತ್ತಿನ ಬೌದ್ಧರ ಪವಿತ್ರ ಸ್ಥಳ. ರಾಜಕುಮಾರ ಸಿದ್ದಾರ್ಥ್ ಬೋಧಿ ವೃಕ್ಷದಡಿ ಜ್ಞಾನೋದಯ ಪಡೆದ ನಂತರ ಭಗವಾನ್ ಬುದ್ಧರಾದ ಪಾವನ ಸ್ಥಳ. ಹಾಗಾಗಿ ಈ ಕ್ಷೇತ್ರ ಪೂಜ್ಯನೀಯವಾಗಿದೆ. ಸಾಮ್ರಾಟ ಅಶೋಕ ಸೇರಿ ಅನೇಕ ರಾಜ ಮಹಾರಾಜರು, ವಿದೇಶಿ ರಾಜರು, ಬೌದ್ಧ ಧರ್ಮದ ಉಪಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಕ್ರಿ.ಶ.1150 ರಿಂದ ಕ್ರಿ.ಶ. 1800 ರಲ್ಲಿ ಬೌದ್ಧ ಧರ್ಮದ ಚರಿತ್ರೆಯಲ್ಲಿ ಕತ್ತಲೆಯ ಯುಗ ಎಂದು ದಾಖಲಿಸಲಾಗಿದೆ. ದೆಹಲಿ ರಾಜ ಅಕ್ಬರ ಆಡಳಿತದ ಸಂದರ್ಭದಲ್ಲಿ ಶೈವ ಪಂಥಕ್ಕೆ ಸೇರಿದ ಗೋಸಾಯಿ ಗಮಂಡಿಗಿರಿ ಎಂಬ ಬ್ರಾಹ್ಮಣರು ಬುದ್ಧಗಯಾದ ಮಹಾಬೋಧಿ ಮಹಾವಿಹಾರ ಕ್ಷೇತ್ರ ಪ್ರವೇಶಿಸಿದರು. ಇವರಿಗೆ ಮೊಘಲ್ ಸುಲ್ತಾನ ಷಾ ಆಲಂ (1719-1748) ಮಾಸ್ತಿಪುರ ಮತ್ತು ತಾರಾಡಿಯಾ ಎಂಬ ಹಳ್ಳಿಗಳನ್ನು ದಾನಕೊಟ್ಟಿದ್ದರು. ಈ ಗ್ರಾಮಗಳು ಬುದ್ಧಗಯಾ ಪಕ್ಕದಲ್ಲಿಯೇ ಇವೆ.

ಬ್ರಿಟಿಷ್ ಆಡಳಿತ ಸಂದರ್ಭದಲ್ಲಿ ಮೇಜರ್ ಜನರಲ್ ಕನ್ನಿಂಗ್ ಹ್ಯಾಮ್ ನೇತೃತ್ವದಲ್ಲಿ ಉತ್ಖನನ ಮತ್ತು ಸಂಶೋಧನೆ ನಡೆದಾಗ ಬೌದ್ಧ ಇತಿಹಾಸ ಜಗತ್ತಿಗೆ ಪರಿಚಯವಾಯಿತು.

ಲಾಭಕ್ಕಾಗಿ ಹಿಂದೂಗಳ ಪ್ರವೇಶ

ಬುದ್ದಗಯಾದಲ್ಲಿ ಮಹಾಬೋಧಿ ಮಹಾ ವಿಹಾರದ ಆಡಳಿತದಲ್ಲಿ ಮಹಾಂತರು ಸೇರಿರುವುದು ಕೇವಲ ಲಾಭಕ್ಕಾಗಿ ಮಾತ್ರ ಎಂದು ಆಲ್‌ ಇಂಡಿಯಾ ಬುದ್ದಿಸ್ಟ್‌ ಫೋರಂ ಕರ್ನಾಟಕ ಉಸ್ತುವಾರಿ ದೇವೇಂದ್ರ ಹೆಗ್ಗಡೆ ಆರೋಪಿಸಿದರು.

ಹಿಂದೂ ಆಚರಣೆಗಳು ಬೌದ್ಧ ಧರ್ಮಕ್ಕೆ ವಿರುದ್ಧವಾಗಿವೆ. ಕಮಿಟಿಯಲ್ಲಿರುವ ಹಿಂದೂಗಳಿಗೆ ಡೊನೇಷನ್‌ ಮಾತ್ರ ಬೇಕಿದೆ. ಬೌದ್ಧ ಧರ್ಮದ ಸಂಸ್ಕೃತಿ ಹಾಗೂ ಆಚರಣೆಗಳು ಬೇಕಾಗಿಲ್ಲ. ಬುದ್ದಗಯಾಗೆ ಪ್ರತಿವರ್ಷ ಎಲ್ಲ ಧರ್ಮಿಯರು ಉದಾರ ದಾನ ನೀಡುತ್ತಾರೆ. ಲಾಭದ ದೃಷ್ಟಿಯಿಂದ ಹಿಂದೂಗಳು ಬುದ್ದಗಯಾ ಆಡಳಿತವನ್ನು ಬೌದ್ಧರಿಗೆ ಬಿಟ್ಟುಕೊಡುತ್ತಿಲ್ಲ. 150 ವರ್ಷಗಳಿಂದ ಸತತ ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಕೂಡ ಬುದ್ದನ ನಾಡಿನವರು ಎಂದು ಹೇಳಿಕೊಂಡು ಹಿಂದೂಗಳು ಒಳಗೆ ಪ್ರವೇಶಿಸಿದ್ದಾರೆ. ಬೌದ್ಧ ಧರ್ಮ ಹಿಂದೂ ಧರ್ಮದ ಭಾಗ, ಬುದ್ಧ ವಿಷ್ಣುವಿನ ಅವತಾರ ಎಂಬ ಸುಳ್ಳು ಹರಡಿದ್ದಾರೆ. ಹಾಗಾದರೆ ಸಿಖ್‌, ಜೈನರು ಕೂಡ ಹಿಂದೂ ಧರ್ಮದವರೇ ಅಲ್ಲವೇ, ಅವರ ಶ್ರದ್ಧಾಕೇಂದ್ರಗಳಲ್ಲಿ ಏಕೆ ಹಸ್ತಕ್ಷೇಪ ಮಾಡಿಲ್ಲ ಎಂದು ಪ್ರಶ್ನಿಸಿದರು.

ಮಹಾಬೋಧಿ ಮಹಾವಿಹಾರಕ್ಕೆ ಬರುತ್ತಿರುವ ದೇಣಿಗೆ ಹಣವನ್ನು ದೇವಾಲಯಗಳ ನಿರ್ಮಾಣ, ಅಭಿವೃದ್ಧಿಗೆ ಬಳಸಲಾಗುತ್ತಿದೆ. ಬಿಹಾರ ಸರ್ಕಾರ ಕೂಡ ಇದಕ್ಕೆ ಬೆಂಬಲ ನೀಡುತ್ತಿದೆ. ಪ್ರಗತಿಪರರು, ಪ್ರಜಾಸತ್ತಾತ್ಮಕ ನೆಲೆಯಲ್ಲಿರುವ ಸಂಘಟನೆಗಳು ಇದರ ವಿರುದ್ಧ ದನಿ ಎತ್ತಬೇಕು ಎಂದು ದೇವೇಂದ್ರ ಹೆಗ್ಗಡೆ ಆಗ್ರಹಿಸಿದರು.

ಬೌದ್ಧರ ಹೋರಾಟಕ್ಕಿದೆ 150 ವರ್ಷ ಇತಿಹಾಸ

1880ರಲ್ಲಿ ʼಲೈಟ್ ಆಫ್ ಏಷಿಯಾʼದ ಲೇಖಕ ಎಡೀನ್ ಅರ್ನಾಲ್ಡ್ ಅವರು ಬ್ರಾಹ್ಮಣರ ವಶದಲ್ಲಿರುವ ಬುದ್ಧಗಯಾ ವಿಹಾರ ಬೌದ್ಧರಿಗೆ ಸೇರಬೇಕು ಎಂದು ಜಾಗತಿಕ ಮಟ್ಟದಲ್ಲಿ ಹೋರಾಟ ಆರಂಭಿಸಿದರು. ಅವರ ನಂತರ ಶ್ರೀಲಂಕಾದ ಅನಗರಿಕಾ ಧಮ್ಮಪಾಲರು 1891 ರಂದು ಬುದ್ಧಗಯಾಕ್ಕೆ ಭೇಟಿ ನೀಡಿ ಮಹಾವಿಹಾರದ ವಿಮೋಚನೆಗೆ ಸಂಕಲ್ಪತೊಟ್ಟು ಅಲ್ಲಿಯೇ ನೆಲೆಸಿದರು. ಮಹಾಬೋಧಿ ಸೊಸೈಟಿ ಸ್ಥಾಪಿಸಿ ಹೋರಾಟ ಆರಂಭಿಸಿದರು. ಧಮ್ಮಪಾಲ ಮತ್ತವರ ಹಿಂಬಾಲಕರ ಮೇಲೆ ಮಹಾಂತರ ಬೆಂಬಲಿಗರು ಹಲವು ಬಾರಿ ಮಾರಣಾಂತಿಕ ಹಲ್ಲೆ ಮಾಡಿದರೂ ಹೋರಾಟ ನಿಲ್ಲಿಸಿರಲಿಲ್ಲ.

ಭಾರತ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅಂದಿನ ರಾಷ್ಟ್ರೀಯ ಕಾಂಗ್ರೆಸ್ ನಾಯಕರಾದ ಮಹಾತ್ಮಗಾಂಧಿ, ಜವಾಹರಲಾಲ್ ನೆಹರು. ಡಾ.ರಾಧಾ ಕೃಷ್ಣನ್ ಮತ್ತು ಹಿಂದೂ ಮಹಾಸಭಾ ನಾಯಕರು ಬೌದ್ಧರ ಬೇಡಿಕೆ ನ್ಯಾಯಯುತವಾಗಿದೆ. ಸ್ವಾತಂತ್ರ್ಯ ನಂತರ ಸಮಸ್ಯೆಗೆ ಪರಿಹಾರ ಹುಡುಕೋಣ ಎಂದು ಬೌದ್ಧರಿಗೆ ಭರವಸೆ ಕೊಟ್ಟಿದ್ದರು. 1933ರಲ್ಲಿ ಅನಗರಿಕಾ ಧಮ್ಮಪಾಲರು ನಿಧನರಾದರು. 1947ರ ಸಾತಂತ್ರ್ಯದ ನಂತರ ಬಿಹಾರ ವಿಧಾನಸಭೆಯಲ್ಲಿ ಬುದ್ಧಗಯಾ ಟೆಂಪಲ್ ಆಕ್ಟ್ 1949 ಎಂಬ ಕಾಯ್ದೆ ಜಾರಿಗೆ ತಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 9 ಜನರ ಕಮಿಟಿ ರಚಿಸಲಾಯಿತು. ಇದೇ ಕಮಿಟಿ ಅಧೀನದಲ್ಲಿ ಸದ್ಯ ಬುದ್ದಗಯಾ ಇದೆ.

ಬೌದ್ಧರ ಆಚರಣೆಗಳಿಗೆ ಧಕ್ಕೆ ಆರೋಪ

ಬಿ.ಟಿ.ಆಕ್ಟ್ 1949 ಜಾರಿಯಾದ ಬಳಿಕ ಬುದ್ಧವಿಹಾರದ ಆಡಳಿತ ಮಂಡಳಿಯೊಳಗೆ ಬ್ರಾಹ್ಮಣರು ಸೇರಿದರು. ಬಳಿಕ ಬುದ್ದಗಯಾದ ಸುತ್ತ ದೇವಾಲಯಗಳನ್ನು ನಿರ್ಮಿಸಿದರು. ಈಗ ಪಿಂಡದಾನ ಆಚರಣೆಯನ್ನೂ ನಡೆಸಲಾಗುತ್ತಿದೆ. ಇದರಿಂದ ಬೌದ್ಧರ ಇತಿಹಾಸ ಮತ್ತು ಸಂಸ್ಕೃತಿ ಕ್ರಮೇಣ ನಶಿಸುವಂತೆ ಮಾಡುತ್ತಿದ್ದಾರೆ ಎಂದು ಬೌದ್ಧ ಧರ್ಮಿಯರು ಆರೋಪಿಸಿದ್ದಾರೆ.

ಬುದ್ಧನ ವಿಗ್ರಹದ ಮುಂದೆ ಶಿವಲಿಂಗವಿತ್ತು ಎಂಬ ಸುಳ್ಳು ಹರಡಿಸಿ ಬುದ್ಧ ವಿಹಾರವನ್ನು ಬ್ರಾಹ್ಮೀಣಕರಣ ಮಾಡಲು ಯತ್ನಿಸುತ್ತಿದ್ದಾರೆ. ಬುದ್ದ ವಿಹಾರದ ಆವರಣದಲ್ಲಿ ಗಣಪತಿ ವಿಗ್ರಹ ಇಡಲಾಗಿದೆ. ಬುದ್ದಗಯಾದಲ್ಲಿ ಶಿವಪುರಾಣ, ವಿಷ್ಣುಪುರಾಣ ಪ್ರವಚನ ಪ್ರಾರಂಭಿಸಿ, ಬುದ್ಧನು ವಿಷ್ಣುವಿನ ಅವತಾರವೆಂದು ಸುಳ್ಳು ಹಬ್ಬಿಸಿ ಬೌದ್ಧರ ಭಾವನೆಗಳಿಗೆ ದಕ್ಕೆ ತರುತ್ತಿದ್ದಾರೆ ಎಂದು ಆಲ್‌ ಇಂಡಿಯಾ ಬುದ್ದಿಸ್ಟ್‌ ಫೋರಂನ ಕರ್ನಾಟಕ ಉಸ್ತುವಾರಿ ದೇವೇಂದ್ರ ಹೆಗ್ಗಡೆ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಅಂಬೇಡ್ಕರ್‌ ಹೋರಾಟಕ್ಕೆ ಧಕ್ಕದ ಫಲ

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ ನಂತರ ಬುದ್ದಗಯಾ ಮಹಾಬೋಧಿ ಮಹಾವಿಹಾರದ ಮುಕ್ತಿ ಆಂದೋಲನ ಆರಂಭಿಸಿದ್ದರು. ಆದರೂ ಯಾವುದೇ ಫಲ ಸಿಗಲಿಲ್ಲ. ಧಮ್ಮ ದೀಕ್ಷಾ ಸಮಾರಂಭದಲ್ಲಿ ಸ್ವೀಕರಿಸಿದ 22 ಪ್ರತಿಜ್ಞೆಗಳಲ್ಲಿ "ಬುದ್ಧ ವಿಷ್ಣುವಿನ ಅವತಾರ ಅಲ್ಲ. ಇದು ಬ್ರಾಹ್ಮಣರ ಕುತಂತ್ರ" ಎಂದು ಘೋಷಿಸಿದ್ದರು.

1992ರಂದು ಆರ್ಯ ನಾಗಾರ್ಜುನ ಸುರೈ ಸಸಾಯಿ ನೇತೃತ್ವದಲ್ಲಿ ಅಂಬೇಡ್ಕರ್ ಅನುಯಾಯಿಗಳು ಹೋರಾಟ ಮುಂದುವರೆಸಿದರು. ಪರಿಣಾಮ ಬಿ.ಟಿ. ಆ್ಯಕ್ಟ್ 1949ರ ಕಾಯ್ದೆ ಹಾಗೂ ಬಿಟಿಎಂಸಿಯಲ್ಲಿ ಅಲ್ಪ ಬದಲಾವಣೆಗಳು ಆದವೇ ಹೊರತು ಸಂಪೂರ್ಣ ನಿರ್ವಹಣೆ ಬೌದ್ಧರಿಗೆ ಸಿಗಲಿಲ್ಲ.

ಬೌದ್ಧರಿಗೆ ಮಾತ್ರ ಅನ್ಯಾಯ

ಸಂವಿಧಾನದ ಪ್ರಕಾರ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೇ ನಿರ್ವಹಿಸುತ್ತಿದ್ದಾರೆ. ಹಿಂದೂಗಳು, ಸಿಖ್ಖರು, ಮುಸ್ಲಿಮರು, ಜೈನರು, ಪಾರ್ಸಿಗಳು ಹೀಗೆ ಎಲ್ಲ ಧರ್ಮಿಯರು ಅವರವರ ಶ್ರದ್ಧಾಕೇಂದ್ರಗಳ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ. ಆದರೆ, ಬುದ್ದಗಯಾದಲ್ಲಿ ಮಾತ್ರ ಮಹಾಬೋಧಿ ವಿಹಾರದ ಆಡಳಿತ ಪೂರ್ಣ ಪ್ರಮಾಣದಲ್ಲಿ ಬೌದ್ಧರಿಗೆ ದೊರೆತಿಲ್ಲ. ಬಿಟಿಎಂಸಿ ಸಂಪೂರ್ಣ ಹಿಂದೂಗಳ ನಿಯಂತ್ರಣದಲ್ಲಿದೆ.

ಬಿ.ಟಿ. ಆಕ್ಟ್ 1949ನ್ನು ರದ್ದುಪಡಿಸಿ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ಎಂದು ಬೌದ್ಧರ ಆಗ್ರಹವಾಗಿದೆ.

ಜಗತ್ತಿನ ಬೌದ್ಧರ ಪವಿತ್ರ ಸ್ಥಳವಾದ ಬುದ್ದಗಯಾದಲ್ಲಿ ದಕ್ಷಿಣ ಏಷ್ಯಾದ 16 ರಾಷ್ಟ್ರಗಳ ವಿಹಾರಗಳು ಇಲ್ಲಿವೆ. ಸರಿಯಾದ ನಿರ್ವಹಣೆ ಇಲ್ಲ. ರಸ್ತೆಗಳು ಹದಗೆಟ್ಟಿವೆ. ಇಡೀ ಪ್ರದೇಶ ಸಂಪೂರ್ಣ ಕೊಳಕಾಗಿದೆ. ಕಾಶಿಗಿಂತ ಅತಿ ಹೆಚ್ಚು ಜನರು ಇಲ್ಲಿಗೆ ಆಗಮಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರಿಡಾರ್‌ ಹೆಸರಲ್ಲಿ ಕಾಶಿ ಅಭಿವೃದ್ಧಿಪಡಿಸಿದರೇ ಹೊರತು ಬುದ್ಧ ಗಯಾದತ್ತ ತಿರುಗಿಯೂ ನೋಡಿಲ್ಲ. ಹಿಂದೂಗಳ ಆಚರಣೆಗಳಿಂದ ಧ್ಯಾನಕ್ಕೆ ತೊಂದರೆಯಾಗಿದೆ. ಬೌದ್ಧ ಧರ್ಮದ ಆಚರಣೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಭಾರತೀಯ ಬೌದ್ಧ ಸಂಘದ ಸದಸ್ಯ ಮಾವಳ್ಳಿ ಶಂಕರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

Tags:    

Similar News