ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡ; ದರ ಹೆಚ್ಚಳಕ್ಕೆ ಪ್ರಧಾನಿಗೆ ಮನವಿ- ಡಿ.ಕೆ. ಶಿವಕುಮಾರ್
ಸಕ್ಕರೆ ದರ ಹೆಚ್ಚಳ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ರೈತರಿಗೂ ಒಳ್ಳೆಯದಾಗಬೇಕು, ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಒಳ್ಳೆಯದಾಗಬೇಕು ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಸಕ್ಕರೆ ಕಾರ್ಖಾನೆ ಮಾಲೀಕರು ಸಕ್ಕರೆ ದರ ಹೆಚ್ಚಳಕ್ಕೆ ಒತ್ತಡ ಹಾಕಿದ್ದಾರೆ. ಈಗಾಗಲೇ ದರ ಹೆಚ್ಚಳ ಮಾಡಿ ಹತ್ತು ವರ್ಷಗಳಾಗಿವೆ. ಹಾಗಾಗಿ ದರ ಪರಿಷ್ಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸಕ್ಕರೆ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರೈತರಿಗೂ ಒಳ್ಳೆಯದಾಗಬೇಕು, ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಒಳ್ಳೆಯದಾಗಬೇಕು. ರೈತರಿದ್ದರೆ ಫ್ಯಾಕ್ಟರಿ, ಫ್ಯಾಕ್ಟರಿ ಇದ್ದರೆ ರೈತರು. ಉದ್ಯಮ ಕೂಡ ನಡೆಯಬೇಕು. ಹಾಗಾಗಿ ಒತ್ತಡ ಹಾಕಿದ್ದೇವೆ. ಸಕ್ಕರೆಯ ದರ ನಿಗದಿ, ಮೊಲಾಸಸ್, ವಿದ್ಯುತ್ ದರ, ಬ್ಯಾಂಕ್ ಲೇಬರ್ ಬಡ್ಡಿ ಸೇರಿದಂತೆ ಎಲ್ಲವನ್ನೂ ನಿರ್ಧಾರ ಮಾಡುವವರು ಕೇಂದ್ರದವರೇ. ಹಾಗಾಗಿ, ನ್ಯಾಯ ಒದಗಿಸಬೇಕೆಂದು ಕೇಂದ್ರವನ್ನು ಕೋರಿದ್ದೇವೆ. ಪ್ರಹ್ಲಾದ್ ಜೋಶಿ ಅವರಿಗೂ ರೈತರ ಸಮಸ್ಯೆಯ ಅರಿವಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಮೇಕೆದಾಟು ಯೋಜನೆ ಮಾರ್ಪಾಡಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಮಾರ್ಪಾಡು ಮಾಡಬೇಕು. ಕೇಂದ್ರ ಜಲ ಆಯೋಗ ಕೆಲವು ಸ್ಪಷ್ಟನೆಗಳನ್ನು ಕೋರಿ ಡಿಪಿಆರ್ ಹಿಂದಕ್ಕೆ ಕಳುಹಿಸಿದೆ. ಅದನ್ನು ಪರಿಷ್ಕರಿಸಬೇಕು. ಕೆಲವರು ಆಕ್ಷೇಪ ಎತ್ತಿದ್ದಾರೆ. ಅಂದಾಜು ವೆಚ್ಚವನ್ನು ಈ ಹಿಂದಿನ ದರಕ್ಕೆ ಅನುಗುಣವಾಗಿ ನೀಡಲಾಗಿದೆ. ಹಾಗಾಗಿ ಅದು ಕೂಡ ಪರಿಷ್ಕರಣೆ ಆಗಬೇಕಿದೆ ಎಂದು ತಿಳಿಸಿದ್ದಾರೆ.
ಹೈಕಮಾಂಡ್ ಭೇಟಿಗೆ ಸಮಯ ನೀಡದ ವಿಚಾರವಾಗಿ ಮಾತನಾಡಿ, ಖುಷಿ ಪಡೋರು, ಅಳೋರು, ದುಃಖ ಪಡೋರು ಅವರ ಇಚ್ಛೆಯಂತೆ ಮಾಡಲಿ. ನಿಮಗೂ (ಮಾಧ್ಯಮಗಳಿಗೆ) ಒಳ್ಳೆಯ ಆಹಾರ ಸಿಗುತ್ತಿದೆ. ಎಲ್ಲರೂ ಚೆನ್ನಾಗಿ ಖುಷಿ ಪಡುತ್ತಿದ್ದೀರಿ. ಜನ, ನೀವೆಲ್ಲಾ ಖುಷಿಯಾಗಿದ್ದೀರಿ, ನಿಮ್ಮ ಖುಷಿಯೇ ನಮ್ಮ ಖುಷಿ ಎಂದು ವ್ಯಂಗ್ಯವಾಡಿದ್ದಾರೆ.