ಕಬ್ಬಿನ ಬವಣೆ: Part-8| ಮಹಾರಾಷ್ಟ್ರದಲ್ಲಿ ಕಬ್ಬಿಗೆ ಅಧಿಕ ದರ;  ರೈತರ ವಲಸೆಯಿಂದ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಕಬ್ಬಿನ ಕೊರತೆ
x

ಕಬ್ಬಿನ ಬವಣೆ: Part-8| ಮಹಾರಾಷ್ಟ್ರದಲ್ಲಿ ಕಬ್ಬಿಗೆ ಅಧಿಕ ದರ; ರೈತರ ವಲಸೆಯಿಂದ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಕಬ್ಬಿನ ಕೊರತೆ

ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ 200 ರಿಂದ 300 ರೂ.ನಷ್ಟು ಹೆಚ್ಚಳ ನೀಡುತ್ತವೆ. ಅಲ್ಲಿನ ಅಧಿಕ ದರ, ಸಕಾಲಿಕ ಪಾವತಿ ಮತ್ತು ಉತ್ತಮ ಸೌಲಭ್ಯಗಳು ರೈತರನ್ನು ಆಕರ್ಷಿಸುತ್ತಿವೆ.


Click the Play button to hear this message in audio format

ಕಬ್ಬಿಗೆ ಉತ್ತಮ ರಿಕವರಿ ಹಾಗೂ ಎಫ್‌ಆರ್‌ಪಿ ದರ ಕೊಡುತ್ತಿರುವ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳತ್ತ ರಾಜ್ಯದ ಕಬ್ಬು ಬೆಳೆಗಾರರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿರುವ ಕಾರಣ ರಾಜ್ಯದ ಸಣ್ಣ ಪುಟ್ಟ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಲಭ್ಯತೆ ಕೊರತೆಯಿಂದ ಬಳಲುತ್ತಿವೆ.

ಮಹಾರಾಷ್ಟ್ರದಲ್ಲಿ ಎಫ್‌ಆರ್‌ಪಿ ದರ ಹಾಗೂ ಪಾವತಿ ವ್ಯವಸ್ಥೆಯು ರಾಜ್ಯಕ್ಕೆ ಹೋಲಿಸಿದರೆ ಉತ್ತಮವಾಗಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ರಿಕವರಿ ಪ್ರಮಾಣವನ್ನು ಕಡಿಮೆ ತೋರಿಸುವ ಮೂಲಕ ರೈತರನ್ನು ವಂಚಿಸುತ್ತಿವೆ. ಇಂತಹ ಸಂದರ್ಭದಲ್ಲಿ ಒಂದಿಷ್ಟು ಲಾಭದ ಆಸೆಯಿಂದ ರೈತರು ಮಹಾರಾಷ್ಟ್ರ ಕಾರ್ಖಾನೆಗಳತ್ತ ಮುಖ ಮಾಡಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರವು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರೊಂದಿಗೆ ಸಭೆ ನಡೆಸಿ, 10.25ರಿಕವರಿ ಇರುವ ಪ್ರತಿ ಟನ್‌ ಕಬ್ಬಿಗೆ 3200ರೂ ಎಫ್‌ಆರ್‌ಪಿ ದರ ನೀಡಬೇಕು. ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ತಲಾ 50ರೂ.ನೀಡಬೇಕು ಎಂದು ನಿರ್ಧರಿಸಲಾಗಿತ್ತು. ಆದಾಗ್ಯೂ, ಕಾರ್ಖಾನೆ ಮಾಲೀಕರು ಹಿಂದೇಟು ಹಾಕುತ್ತಿರುವುದು ರೈತರನ್ನು ಮಹಾರಾಷ್ಟ್ರದತ್ತ ಮುಖ ಮಾಡಲು ಕಾರಣವಾಗಿದೆ.

ಕಬ್ಬಿಗೆ ಹೆಚ್ಚಿನ ದರ ನಿಗದಿ ಮಾಡುವ ಸಂಬಂಧ ಬೆಳಗಾವಿಯಲ್ಲಿ ರೈತರು ಹೋರಾಟ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಸುದೀರ್ಘ ಸಭೆ ನಡೆಸಿದ ಬಳಿಕ ರೈತರ ಹೋರಾಟಗಾರರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿತ್ತು. ಆದರೂ, ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪ್ರತಿ ಟನ್‌ಗೆ 3500 ಎಫ್ಆರ್‌ಪಿ ದರ ನೀಡುವಂತೆ ರೈತರು ಪಟ್ಟು ಹಿಡಿದಿದ್ದರು. ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹೊತ್ತಿಸಿದ್ದರಿಂದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಪ್ರತಿ ಟನ್‌ಗೆ 200-300ರೂ. ಹೆಚ್ಚಳ

ಮಹಾರಾಷ್ಟ್ರದ ಕಾರ್ಖಾನೆಗಳು ಪ್ರತಿ ಟನ್‌ಗೆ 200 ರಿಂದ 300 ರೂ. ಹೆಚ್ಚುವರಿ ದರ ನೀಡುತ್ತಿವೆ. ಇದರಿಂದಾಗಿ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಗಡಿ ಭಾಗದ ಜಿಲ್ಲೆಗಳ ರೈತರು ಲಾಭದ ನಿರೀಕ್ಷೆಯಲ್ಲಿ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ. ರಾಜ್ಯದ ಗಡಿಭಾಗದಿಂದ ಕೇವಲ 10-15 ಕಿ.ಮೀ. ಅಂತರದಲ್ಲಿರುವ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ 3500 ರಿಂದ 3618 ರೂ. ವರೆಗೆ ದರ ಘೋಷಿಸಿವೆ. ಈ ದರ ವ್ಯತ್ಯಾಸದಿಂದಾಗಿ ರೈತರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಗಡಿ ದಾಟುತ್ತಿದ್ದಾರೆ.

ಗಡಿಭಾಗದ ಹಲವು ಕಬ್ಬು ಬೆಳೆಗಾರರು ತಮ್ಮ ಬೆಳೆಯನ್ನು ರಾಜ್ಯದೊಳಗಿನ ಕಾರ್ಖಾನೆಗಳಿಗೆ ನೀಡುವುದಕ್ಕಿಂತ ನೆರೆ ರಾಜ್ಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚಾಗಿ ಸಾಗಿಸುತ್ತಿದ್ದಾರೆ. ಪ್ರತಿ ವರ್ಷ, ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಮತ್ತು ಕಾಗವಾಡ ತಾಲ್ಲೂಕುಗಳಿಂದಲೇ ಅಂದಾಜು 10 ಲಕ್ಷ ಟನ್‌ಗಳಷ್ಟು ಕಬ್ಬು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಸಾಗಣೆಯಾಗುತ್ತದೆ. ಅಂತೆಯೇ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಬಾಗಲಕೋಟೆ, ವಿಜಯಪುರ, ಕಲಬುರಗಿ ಜಿಲ್ಲೆಯ ಕಬ್ಬು ಬೆಳೆಗಾರರು ನೆರೆ ರಾಜ್ಯದ ಕಡೆ ಹೋಗುತ್ತಿದ್ದಾರೆ. ಇದು ರಾಜ್ಯದ ಸ್ಥಳೀಯ ಸಕ್ಕರೆ ಕಾರ್ಖಾನೆಗಳ ಮೇಲೆ ಪರಿಣಾಮ ಬೀರುತ್ತಿದೆ.

ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಹೆಚ್ಚಿನ ಕಬ್ಬಿನ ಅವಶ್ಯಕತೆಯಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಅಲ್ಲಿನ ಕಾರ್ಖಾನೆಗಳು, ರಾಜ್ಯದ ರೈತರಿಗೆ ಹೆಚ್ಚಿನ ದರ ನೀಡಿ ಆಕರ್ಷಿಸುತ್ತಿವೆ. ರಾಜ್ಯದ ಕಾರ್ಖಾನೆಗಳು ಸರಿಯಾದ ಸಮಯಕ್ಕೆ ದರ ಘೋಷಿಸುವುದಿಲ್ಲ. ಘೋಷಿಸಿದರೂ ಮಹಾರಾಷ್ಟ್ರಕ್ಕೆ ಹೋಲಿಸಿದರೆ ದರ ತೀರಾ ಕಡಿಮೆ. ಸಾಗಾಟದ ಖರ್ಚು ಹೆಚ್ಚಾದರೂ ಅಲ್ಲಿ ಉತ್ತಮ ಬೆಲೆ ಸಿಗುವುದರಿಂದ ನಮಗೆ ಲಾಭ ಉಳಿಯುತ್ತದೆ. ಹೀಗಾಗಿ ನಾವು ಅಲ್ಲಿಗೆ ಕಬ್ಬು ಸಾಗಿಸುತ್ತಿದ್ದೇವೆ. ರಾಜ್ಯದ ಕಾರ್ಖಾನೆಗಳು ಸಹ ಸ್ಪರ್ಧಾತ್ಮಕ ದರ ನೀಡಿದರೆ, ರೈತರಿಗೆ ಅನುಕೂಲವಾಗುತ್ತದೆ ಎಂದು ದ ಫೆಡರಲ್‌ ಕರ್ನಾಟಕಕ್ಕೆ ರೈತ ಮಂಜು ಮನುಗೂಳಿ ತಿಳಿಸಿದ್ದಾರೆ.

ಮಹಾರಾಷ್ಟ್ರದತ್ತ ಒಲವಿಗೆ ಕಾರಣಗಳೇನು?

ಅಧಿಕ ದರ: ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಕರ್ನಾಟಕದ ಕಾರ್ಖಾನೆಗಳಿಗಿಂತ ಪ್ರತಿ ಟನ್ ಕಬ್ಬಿಗೆ ಹೆಚ್ಚಿನ ದರವನ್ನು ನೀಡುತ್ತಿವೆ. ಈ ವ್ಯತ್ಯಾಸವು ಪ್ರತಿ ಟನ್‌ಗೆ 100 ರೂ.ನಿಂದ 400 ರೂ.ರವರೆಗೆ ಇರುತ್ತದೆ. 2022ರ ನವೆಂಬರ್‌ನಲ್ಲಿ, ಕರ್ನಾಟಕದ ಗಡಿ ಭಾಗದ ಕಾರ್ಖಾನೆಗಳು ಪ್ರತಿ ಟನ್‌ಗೆ 2900 ರೂ. ಘೋಷಿಸಿದಾಗ, ಮಹಾರಾಷ್ಟ್ರದ ಕಾರ್ಖಾನೆಗಳು 3000 ರೂ.ಕ್ಕಿಂತ ಹೆಚ್ಚು ದರ ನೀಡಿದ್ದವು. ಪ್ರಸಕ್ತ ಹಂಗಾಮಿನಲ್ಲಿ, ರಾಜ್ಯದ ಸರ್ಕಾರವು ಪ್ರತಿ ಟನ್‌ಗೆ 3300 ದರವನ್ನು ನಿಗದಿಪಡಿಸಿದೆ. ಆದರೆ, ಮಹಾರಾಷ್ಟ್ರದ ಕೆಲವು ಕಾರ್ಖಾನೆಗಳು ಪ್ರತಿ ಟನ್‌ಗೆ 3400 ರೂ.ವರೆಗೆ ದರ ನೀಡುತ್ತಿವೆ.

ಉತ್ತಮ ಸೌಲಭ್ಯ: ಕೇವಲ ದರ ಮಾತ್ರವಲ್ಲ, ಮಹಾರಾಷ್ಟ್ರದ ಕಾರ್ಖಾನೆಗಳು ನೀಡುವ ಇತರ ಸೌಲಭ್ಯಗಳು ಕೂಡ ರೈತರನ್ನು ಆಕರ್ಷಿಸುತ್ತಿವೆ. ಹಲವು ಮಹಾರಾಷ್ಟ್ರದ ಕಾರ್ಖಾನೆಗಳು ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ತಾವೇ ಭರಿಸುತ್ತವೆ ಅಥವಾ ಅದಕ್ಕೆ ವ್ಯವಸ್ಥೆ ಮಾಡುತ್ತವೆ. ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಖರೀದಿಗೆ ಬಡ್ಡಿ ರಹಿತ ಮುಂಗಡ ಹಣವನ್ನು ನೀಡಲಾಗುತ್ತದೆ. ಇದಲ್ಲದೆ, ಕೆಲವು ಕಾರ್ಖಾನೆಗಳು ರೈತ ಸದಸ್ಯರಿಗೆ ಆರೋಗ್ಯ ವಿಮೆ ಮತ್ತು ಆರ್ಥಿಕ ಸಹಾಯದಂತಹ ಸೌಲಭ್ಯಗಳನ್ನೂ ಒದಗಿಸುತ್ತವೆ. ರೈತರಿಗೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳಿಗಾಗಿ ಬಡ್ಡಿ ರಹಿತ ಮುಂಗಡ ಹಣವನ್ನು ನೀಡಲಾಗುತ್ತದೆ. ಅಲ್ಲದೇ, ರೈತ ಸದಸ್ಯರಿಗೆ ಆರೋಗ್ಯ ವಿಮೆ ಮತ್ತು ಆರ್ಥಿಕ ಸಹಾಯದಂತಹ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತಿದೆ.

ಸಕಾಲಿಕ ಪಾವತಿ: ಮಹಾರಾಷ್ಟ್ರದ ಕಾರ್ಖಾನೆಗಳು ಕಬ್ಬು ಪೂರೈಸಿದ ಕೆಲವೇ ದಿನಗಳಲ್ಲಿ ಹಣ ಪಾವತಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯದ ಕೆಲವು ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಕಾಲದಲ್ಲಿ ಹಣ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ನಿದರ್ಶನಗಳಿವೆ.

ರಾಜ್ಯದದಲ್ಲಿ ಸಕ್ಕರೆ ಕಾರ್ಖಾನೆಗಳು ನೀಡುವ ದರವೆಷ್ಟು?

ಬೆಳಗಾವಿ ಶುಗರ್ಸ್ - 3350 ರೂ.

ವಿಶ್ವನಾಥ ಶುಗರ್ಸ್ - 3300 ರೂ.

ರೇಣುಕಾ ಶುಗರ್ಸ್ - 3300 ರೂ.

ಸೌಭಾಗ್ಯ, ಹಲಗಾಂವ ಶುಗರ್ಸ್ - 3300 ರೂ.

ಮಹಾರಾಷ್ಟ್ರ ಕಾರ್ಖಾನೆಗಳು ನೀಡುವ ದರವೆಷ್ಟು?

ಜೈಸಿಂಗ ಸಕ್ಕರೆ ಕಾರ್ಖಾನೆ - 3518 ರೂ.

ದತ್ತಶೇತಕರಿ ಕಾರ್ಖಾನೆ - 3618 ರೂ.

ಶಹೂ ಸಕ್ಕರೆ ಕಾರ್ಖಾನೆ - 3500 ರೂ.

ಜವಾಹರ ಸಕ್ಕರೆ ಕಾರ್ಖಾನೆ - 3500 ರೂ.

ಮಹಾರಾಷ್ಟ್ರದ ನಿಯಮ ಜಾರಿ ಅಗತ್ಯ

ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ರೈತಪರ ಹೋರಾಟಗಾರ ಮಹಾಂತೇಶ್‌, ಕಬ್ಬಿನ ದರ ವಿಚಾರದಲ್ಲಿ ನೆರೆ ರಾಜ್ಯ ಮಹಾರಾಷ್ಟ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಅಲ್ಲದೇ, ಇತರೆ ಕಾರ್ಯಗಳಲ್ಲಿಯೂ ಭಿನ್ನವಾಗಿದೆ. ಕಬ್ಬಿನ ದರದ ಜತೆಗೆ ಮಹಾರಾಷ್ಟ್ರದಲ್ಲಿ ಕಬ್ಬು ಅರೆದು ಸಕ್ಕರೆ ಉತ್ಪನ್ನ ಮಾಡಿದ ಬಳಿಕ ತಕ್ಷಣ ಕಾರ್ಖಾನೆಗಳು ಮಾರಾಟ ಮಾಡುತ್ತವೆ. ಅದರಿಂದ ಬಂದ ಹಣವನ್ನು ಕಬ್ಬು ಬೆಳೆಗಾರರಿಗೆ ಪಾವತಿ ಮಾಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಇಂತಹ ನಿಯಮ ಇಲ್ಲ. ರಾಜ್ಯದಲ್ಲಿ ಕಬ್ಬು ಅರಿದು ಸಕ್ಕರೆ ಉತ್ಪಾದನೆಯಾದ ಬಳಿಕ ಸರ್ಕಾರದ ಅನುಮತಿಗಾಗಿ ಕಾಯಬೇಕು. ಆರು ತಿಂಗಳು, ವರ್ಷವಾದರೂ ಸಕ್ಕರೆ ಮಾರಾಟವಾಗಿರುವುದಿಲ್ಲ. ರೈತರಿಗೆ ಬ್ಯಾಂಕ್‌ನಿಂದ ಸಾಲ ತೆಗೆದುಕೊಂಡು ಬಂದು ಹಣ ಪಾವತಿಸಬೇಕಾಗುತ್ತದೆ. ಇದು ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ನಿಯಮವನ್ನು ಬದಲಾವಣೆ ಮಾಡಬೇಕಾಗಿದೆ. ರಾಜ್ಯದಲ್ಲಿಯೂ ಕಬ್ಬು ಅರಿದು ಸಕ್ಕರೆ ಉತ್ಪಾದನೆ ಮಾಡಿದ ತಕ್ಷಣ ಮಾರಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸಮಸ್ಯೆಗಳೇನು, ಸರ್ಕಾರದ ನಿಲುವೇನು?

ರಾಜ್ಯದಲ್ಲಿ ಕಬ್ಬು ಬೆಳೆಗಾರರು ನ್ಯಾಯಯುತ ದರಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಪ್ರತಿ ಟನ್ ಕಬ್ಬಿಗೆ 3,500 ರೂ. ನೀಡಬೇಕು ಎಂದ ರೈತರು ಪಟ್ಟು ಹಿಡಿದಿದ್ದರು. ಸರ್ಕಾರವು ಇತ್ತೀಚೆಗೆ 3,300 ರೂ.ದರ ನಿಗದಿಪಡಿಸಿದೆ. ಸರ್ಕಾರದ ಈ ನಿರ್ಧಾರವನ್ನು ಬೆಳಗಾವಿಯ ರೈತರು ಸ್ವಾಗತಿಸಿದರೂ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ನಿಗದಿಪಡಿಸುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಮತ್ತು ರಾಜ್ಯ ಸರ್ಕಾರ ಘೋಷಿಸುವ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ವಿಚಾರದಲ್ಲಿ ಆಗಾಗ್ಗೆ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಸಕ್ಕರೆ ಇಳುವರಿ ಪ್ರಮಾಣವನ್ನು ಲೆಕ್ಕಹಾಕುವಲ್ಲಿ ಪಾರದರ್ಶಕತೆಯ ಕೊರತೆ ಮತ್ತು ತೂಕದಲ್ಲಿ ಮೋಸದಂತಹ ಆರೋಪಗಳೂ ಇವೆ. ಈ ಸಮಸ್ಯೆಗಳ ಹಿನ್ನೆಲೆಯಲ್ಲಿ, ರಾಜ್ಯದ ಕಬ್ಬು ಬೆಳೆಗಾರರು ನ್ಯಾಯಯುತ ದರಕ್ಕಾಗಿ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಾರೆ. ರಾಜ್ಯ ಸರ್ಕಾರವು ಕಬ್ಬು ಮತ್ತು ಸಕ್ಕರೆಗೆ ಸಂಬಂಧಿಸಿದಂತೆ ಹೆಚ್ಚಿನ ನಿಯಂತ್ರಣವು ಕೇಂದ್ರ ಸರ್ಕಾರದ ಕೈಯಲ್ಲಿದೆ. ಎಂಎಸ್‌ಪಿ ಹೆಚ್ಚಳ ಹಾಗೂ ಸಕ್ಕರೆ ರಫ್ತು ನೀತಿಗಳಲ್ಲಿನ ಬದಲಾವಣೆಗಳಿಗೆ ಕೇಂದ್ರವನ್ನು ಒತ್ತಾಯಿಸುತ್ತಲೇ ಇದೆ.

ಒಟ್ಟಾರೆಯಾಗಿ ರಾಜ್ಯದ ಗಡಿ ಭಾಗದ ಕಬ್ಬು ಬೆಳೆಗಾರರು ಉತ್ತಮ ಬೆಲೆ ಮತ್ತು ಸೌಲಭ್ಯಗಳನ್ನು ಅರಸಿ ಮಹಾರಾಷ್ಟ್ರದತ್ತ ಮುಖ ಮಾಡಿರುವುದು, ರಾಜ್ಯದಲ್ಲಿನ ಕಬ್ಬು ಬೆಲೆ ನಿಗದಿ ನೀತಿ ಮತ್ತು ಸಕ್ಕರೆ ಉದ್ಯಮದಲ್ಲಿನ ವ್ಯವಸ್ಥಿತ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳುತ್ತಿದೆ. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸ್ಪರ್ಧಾತ್ಮಕ ದರ ಹಾಗೂ ಉತ್ತಮ ಸೌಲಭ್ಯಗಳನ್ನು ಒದಗಿಸದ ಹೊರತು, ಗಡಿ ಭಾಗದ ಕಬ್ಬು ನೆರೆ ರಾಜ್ಯಗಳ ಪಾಲಾಗುವುದು ಮುಂದುವರೆಯಲಿದೆ ಎಂಬುದು ಸ್ಪಷ್ಟವಾಗಿದೆ.

Read More
Next Story