ಬೆಳಗಾವಿಯಲ್ಲಿ ದುರಂತ: ಉಸಿರುಗಟ್ಟಿ ಮೂವರು ಯುವಕರ ಸಾವು, ಒಬ್ಬನ ಸ್ಥಿತಿ ಗಂಭೀರ

ಮೃತರನ್ನು ರಿಹಾನ್ ಮತ್ತಿ (22), ಸರ್ಫರಾಜ್ ಹರಪ್ಪನಹಳ್ಳಿ (22), ಮತ್ತು ಮೊಯಿನ್‌ ನಲಬಂದ್ (22) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡಿರುವ 19 ವರ್ಷದ ಶಹಾನವಾಜ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Update: 2025-11-19 05:00 GMT

ಮೃತಪಟ್ಟಿರುವ ಯುವಕರು 

Click the Play button to listen to article

ಬೆಳಗಾವಿ ನಗರದ ಅಮನ್ ನಗರದಲ್ಲಿ ನಡೆದ ದುರಂತವೊಂದರಲ್ಲಿ ಮೂವರು ಯುವಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಚಳಿಯಿಂದ ರಕ್ಷಿಸಿಕೊಳ್ಳಲು ಮುಚ್ಚಿದ ಕೋಣೆಯಲ್ಲಿ ಬೆಂಕಿ ಹಾಕಿಕೊಂಡು ಮಲಗಿದ್ದ ಮೂವರು ಯುವಕರು, ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ. 

ಮೃತರನ್ನು ರಿಹಾನ್ ಮತ್ತಿ (22), ಸರ್ಫರಾಜ್ ಹರಪ್ಪನಹಳ್ಳಿ (22), ಮತ್ತು ಮೊಯಿನ್‌ ನಲಬಂದ್ (22) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡಿರುವ 19 ವರ್ಷದ ಶಹಾನವಾಜ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ?

ಸೋಮವಾರ ರಾತ್ರಿ ನಾಲ್ವರು ಸ್ನೇಹಿತರು ನಾಮಕರಣ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಮ್ಮ ಕೋಣೆಗೆ ಮರಳಿದ್ದರು. ಬೆಳಗಾವಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದರಿಂದ, ಕೋಣೆಯನ್ನು ಬೆಚ್ಚಗಿಡಲು ಇದ್ದಿಲಿನ ಬೆಂಕಿ ಹಾಕಿಕೊಂಡಿದ್ದಾರೆ. ಜೊತೆಗೆ, ಸೊಳ್ಳೆಗಳ ಕಾಟ ತಪ್ಪಿಸಲು ಸೊಳ್ಳೆ ಬತ್ತಿಗಳನ್ನು (ಮಸ್ಕಿಟೋ ಕಾಯಿಲ್) ಹಚ್ಚಿಟ್ಟು ಮಲಗಿದ್ದಾರೆ.

ಮುಚ್ಚಿದ ಕೋಣೆಯೇ ಮುಳುವಾಯಿತು

ಯುವಕರು ಮಲಗಿದ್ದ ಕೋಣೆಯಲ್ಲಿ ಕಿಟಕಿ ಇರಲಿಲ್ಲ. ಬಾಗಿಲನ್ನು ಒಳಗಿನಿಂದ ಭದ್ರವಾಗಿ ಮುಚ್ಚಿಕೊಂಡಿದ್ದರು. ಇದರಿಂದಾಗಿ ಇದ್ದಿಲು ಮತ್ತು ಸೊಳ್ಳೆ ಬತ್ತಿಗಳಿಂದ ಉತ್ಪತ್ತಿಯಾದ ಹೊಗೆಯು ಕೋಣೆಯೊಳಗೆ ದಟ್ಟವಾಗಿ ಆವರಿಸಿದೆ. ಗಾಳಿಯಾಡಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ, ಕೋಣೆಯಲ್ಲಿ ಆಮ್ಲಜನಕದ ಕೊರತೆ ಉಂಟಾಗಿ, ಇಂಗಾಲದ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲ ಹೆಚ್ಚಾಗಿದೆ. ಗಾಢ ನಿದ್ರೆಯಲ್ಲಿದ್ದ ಯುವಕರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ತಡವಾಗಿ ಬೆಳಕಿಗೆ ಬಂದ ಪ್ರಕರಣ

ಮಂಗಳವಾರ ಸಂಜೆಯಾದರೂ ಯುವಕರು ಮನೆಯಿಂದ ಹೊರಗೆ ಬಾರದಿದ್ದಾಗ, ಅನುಮಾನಗೊಂಡ ಪೋಷಕರು ಮತ್ತು ಸ್ಥಳೀಯರು ಬಾಗಿಲು ಬಡಿದಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮಾಳಮಾರುತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶಾಸಕ ಆಸೀಫ್ ಸೇಠ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಪೊಲೀಸರು ಸ್ಥಳ ಪಂಚನಾಮೆ ನಡೆಸಿ, ಹೆಚ್ಚಿನ ತನಿಖೆಗಾಗಿ ಬೂದಿಯ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:    

Similar News