ದಬ್ಬಾಳಿಕೆ ಮುಂದುವರಿದರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ: ಬಿ ವೈ ವಿಜಯೇಂದ್ರ
ಪೊಲೀಸ್ ಅಧಿಕಾರಿಗಳು ಇದೇರೀತಿ ದೌಲತ್ತಿನಿಂದ ನಡೆದುಕೊಂಡರೆ ನನ್ನನ್ನೂ ಸೇರಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.;
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಪದೇಪದೆ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಅಕ್ಷಮ್ಯ. ಪೊಲೀಸ್ ಅಧಿಕಾರಿಗಳು ಇದೇ ರೀತಿ ದೌಲತ್ತಿನಿಂದ ನಡೆದುಕೊಂಡರೆ ನನ್ನನ್ನೂ ಸೇರಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬುಧವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪೊಲೀಸರು ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ವಿನಾಕಾರಣ ಎಫ್‌ಐಆರ್ ದಾಖಲಿಸುತ್ತಿದ್ದಾರೆ. ಅಡಳಿತ ಪಕ್ಷಕ್ಕೆ ಖುಷಿಪಡಿಸು ಉದ್ದೇಶದ ಅಧಿಕಾರಿಗಳ ಈ ನಡವಳಿಕೆ ಅಕ್ಷಮ್ಯ ಅಪರಾಧ. ತಪ್ಪು ಮಾಡಿದ ಅಧಿಕಾರಿಗಳಿಗೆ ತಿಳಿಹೇಳುವ ಕೆಲಸವನ್ನು ಮಾಡಿ ಎಂದು ಗೃಹ ಸಚಿವರಿಗೆ ಒತ್ತಾಯಿಸಿದರು.
ನಿನ್ನೆ ಶ್ರೀ ರಂಗಪಟ್ಟಣದಲ್ಲಿ ನಡೆದ ಘಟನೆ ಸಣ್ಣ ಘಟನೆಯಲ್ಲ; ವಿನಾಕಾರಣ ನಮ್ಮ ಕಾರ್ಯಕರ್ತೆಯನ್ನು ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ವರೆಗೆ ಕೂರಿಸಿದ್ದು ಅಕ್ಷಮ್ಯ ಅಪರಾಧ. ಜನರಿಗೆ ನ್ಯಾಯ ಕೊಡಬೇಕಾದ ಪೊಲೀಸರು ಹೀಗೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಿನ್ನೆ ನಮ್ಮ ಬಿಜೆಪಿಯ ಕಾರ್ಯಕರ್ತೆ ಛಾಯಾ ಅವರು ಸದಸ್ಯತ್ವ ಅಭಿಯಾನ ಮಾಡುವ ಸಂದರ್ಭದಲ್ಲಿ ರಾತ್ರಿ ಏಕಾಏಕಿ ಪೊಲೀಸರು ಅವರನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದಾರೆ. ಎಫ್‌ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ. ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಪೊಲೀಸ್ ಠಾಣೆಗೆ ಧಾವಿಸಿ ಕಾರಣ ಕೇಳಿದ್ದಾರೆ. ಆಗ ಒಟಿಪಿಗಳನ್ನು ಡೌನ್‌ಲೋಡ್ ಮಾಡುತ್ತಿದ್ದಾರೆಂದು ಏನೇನೋ ಕಥೆ ಹೇಳಿಕೊಂಡು ಛಾಯಾ ಅವರನ್ನು ರಾತ್ರಿ 12ರವರೆಗೆ ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಂಡು ದಬ್ಬಾಳಿಕೆ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.