Cabinet Meeting: ಮಾದಪ್ಪನ ಸನ್ನಿಧಿಯಲ್ಲಿ ಇಡೀ ಸರ್ಕಾರ; ನಿರೀಕ್ಷೆಗಳೂ ಅಪಾರ..!

ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ. ಏ.24ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯರಿಂದ 2000 ಕೋಟಿ ರೂ ಪ್ಯಾಕೇಜ್​ ಘೋಷಣೆ ಸಾಧ್ಯತೆ ಇದೆ.;

Update: 2025-04-22 02:00 GMT

ಆಗಸ್ಟ್​ 15, 1997ರಂದು ದೇಶ 50ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಿಕೊಳ್ಳುವ ಸುಸಂದರ್ಭದಲ್ಲಿ ಚಾಮರಾಜನಗರ ಮೈಸೂರಿನಿಂದ ಬೇರ್ಪಟ್ಟು, ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿತು. ಅಂದಿನ ಮುಖ್ಯಮಂತ್ರಿ ಜೆ.ಎಚ್​.ಪಟೇಲ್​ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲಾ ಕೇಂದ್ರವನ್ನು ಉದ್ಘಾಟನೆ ಮಾಡಿದ್ದರು. ಇಂದು ಅದೇ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ.

ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಮೂಢನಂಬಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ ಕ್ಷೇತ್ರಗಳ ಕಡೆಗಣನೆ, ಮೂಲ ಸೌಕರ್ಯಗಳ ಕೊರತೆಯಿಂದಾಗಿ ಅತ್ಯಂತ ಹಿಂದುಳಿದ ಜಿಲ್ಲೆ ಎನ್ನುವ ಕುಖ್ಯಾತಿ ಪಡೆದುಕೊಂಡಿದೆ. ಇದೀಗ ಏ.24ರಂದು ನಡೆಸಲು ಉದ್ದೇಶಿಸಿರುವ ಸಚಿವ ಸಂಪುಟ ಸಭೆಯ ಮೇಲೆ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ಚಾಮರಾಜನಗರ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ವಿವಿಧ ಇಲಾಖೆಗಳಿಂದ ಪ್ರಸ್ತಾವನೆಗಳನ್ನು ಪಡೆದುಕೊಂಡಿದೆ. ಮುಖ್ಯವಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಮಾನವ-ಪ್ರಾಣಿ ಸಂಘರ್ಷ, ಆಸ್ಪತ್ರೆಗಳ ಕೊರತೆ, ಶಿಕ್ಷಣ, ಹಾಡಿ ಜನತೆಗೆ ಮೂಲ ಸೌಕರ್ಯ ಕಲ್ಪಿಸುವುದು, ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿ, ಪ್ರವಾಸೋದ್ಯಮ ಸೇರಿ ಹಲವು ವಿಚಾರಗಳ ಅಜೆಂಡಾ ಈಗಾಗಲೇ ಸಿದ್ಧವಾಗಿದೆ.

ಮೂಢ ನಂಬಿಕೆಯ ಗೋಡೆ ಕೆಡವಿದ ಸಿದ್ದರಾಮಯ್ಯ

ಚಾಮರಾಜನಗರಕ್ಕೆ ಭೇಟಿ ನೀಡಿದರೆ ಸಚಿವರು, ಮುಖ್ಯಮಂತ್ರಿಗಳು ಆರು ತಿಂಗಳ ಒಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೂಢ ನಂಬಿಕೆ ಗಾಢವಾಗಿ ಬೇರು ಬಿಟ್ಟಿತ್ತು. ಇದೇ ಕಾರಣಕ್ಕೆ 1997ರಲ್ಲಿ ಮುಖ್ಯಮಂತ್ರಿ ಜೆ.ಎಚ್​.ಪಟೇಲರು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡದೇ ಮಲೆ ಮಹದೇಶ್ವರ ಬೆಟ್ಟದಿಂದಲೇ ಜಿಲ್ಲೆಯ ಉದ್ಘಾಟನೆ ಮಾಡಿದ್ದರು. 

2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಹನೂರು, ಕೊಳ್ಳೇಗಾಲ, ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದರು. ಇದಾದ ಮೇಲೆ ಜಗದೀಶ್​ ಶೆಟ್ಟರ್​ ಅವರು ಜಿಲ್ಲೆಗೆ ಬಂದಿದ್ದರು. ಜೊತೆಗೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರವನ್ನು ಘೋಷಣೆ ಮಾಡಿದ್ದರು. ಇದಾದ ಮೇಲೆ 2013ರಲ್ಲಿ ಸಿಎಂ ಪಟ್ಟಕ್ಕೇರಿದ ಸಿದ್ದರಾಮಯ್ಯ ಸುಮಾರು 20ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡುವ ಮೂಲಕ ಮೂಢನಂಬಿಕೆಯ ಗೋಡೆಯನ್ನು ಕೆಡವಿದ್ದರು. ಅಲ್ಲದೇ ಕೆಲ್ಲಂಬಳ್ಳಿ-ಬದನಗುಪ್ಪೆಯಲ್ಲಿ 1520 ಎಕರೆ ವಿಶಾಲ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆ, ಸರ್ಕಾರಿ ಶಾಲೆಗಳ ಆಧುನೀಕರಣ, ಹನೂರಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿಗೆ 300 ಕೋಟಿ ರೂ. ವಿಶೇಷ ಅನುದಾನ ಸೇರಿ ಹಲವು ದಾಖಲಾರ್ಹ ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದರು.

ಇದೀಗ ಎರಡನೇ ಅವಧಿಗೆ ಮುಖ್ಯಮಂತ್ರಿ ಆದ ಬಳಿಕ ಇದೇ ಜಿಲ್ಲೆಯೊಳಗೆ ಸಚಿವ ಸಂಪುಟ ಸಭೆಯನ್ನು ನಡೆಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಇದೇ ರೀತಿ 2002ರಲ್ಲಿ ಸಿಎಂ ಆಗಿದ್ದ ಎಸ್​.ಎಂ. ಕೃಷ್ಣ ಅವರು ಬಿಳಿಗಿರಿರಂಗನ ಬೆಟ್ಟದಲ್ಲಿ ಮಿನಿ ಕ್ಯಾಬಿನೆಟ್​ ಸಭೆ ನಡೆಸಿ ಗಮನ ಸೆಳೆದಿದ್ದರು. ಈ ವೇಳೆ ಸೋಲಿಗ ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಕಾರ್ಯಕ್ರಮ, ಮಲೆ ಮಹದೇಶ್ವರ ಬೆಟ್ಟಕ್ಕೆ ಕುಡಿಯುವ ನೀರಿನ ಸಂಪರ್ಕ, ಹಾಡಿಗಳ ರಸ್ತೆ ಅಭಿವೃದ್ಧಿ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದ್ದರು. 

ಕೃಷಿಯೇ ಮೂಲ ಕಸುಬು; ಭಕ್ತಿಯೇ ಇಲ್ಲಿನ ಸೊಗಸು

ಹತ್ತು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಚಾಮರಾಜನಗರದಲ್ಲಿ ಶೇ. 44 ರಷ್ಟು ಮಂದಿ ಕೃಷಿಕರಿದ್ದಾರೆ. ಜಿಲ್ಲೆಯ ತುಂಬೆಲ್ಲಾ ಜಾನಪದ ಹಾಡುಗಾರರಿದ್ದಾರೆ. ಐತಿಹಾಸಿಕ ದೇವಸ್ಥಾನಗಳಿವೆ. ಸುವರ್ಣಾವತಿ, ಕಬಿನಿ, ಚಕ್ಕಿಹೊಳೆ, ಗುಂಡ್ಲು, ಕಾವೇರಿ ನದಿಗಳ ಸಮೃದ್ಧ ನೀರಾವರಿ ಪ್ರದೇಶವಿದೆ. ತಮಿಳುನಾಡು, ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆ ಅತಿ ಹೆಚ್ಚಾಗಿ ಅರಣ್ಯ ಪ್ರದೇಶದಿಂದಲೇ ಆವೃತ್ತವಾಗಿರುವುದು. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ರಾಜ್ಯದಲ್ಲಿ 22ನೇ ಸ್ಥಾನದಲ್ಲಿ ಇರುವ ಮೂಲಕ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಅರಿಶಿಣ, ಬಾಳೆ, ಭತ್ತ, ರಾಗಿ, ದ್ವಿದಳ ಧಾನ್ಯಗಳು ಇಲ್ಲಿನ ಪ್ರಮುಖ ಬೆಳೆಗಳು. ಬಿಳಿಗಿರಿರಂಗನಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಚಾಮರಾಜೇಶ್ವರ ದೇವಸ್ಥಾನ, ಚಿಕ್ಕಲ್ಲೂರು, ಕುರುಬನಕಟ್ಟೆ, ಕುಂತೂರು ಸೇರಿ ಸಾಕಷ್ಟು ಧಾರ್ಮಿಕ ಮಹತ್ವ ಪಡೆದುಕೊಂಡಿರುವ ಕ್ಷೇತ್ರಗಳಿವೆ. ಜಿಲ್ಲೆಯಾದ್ಯಂತ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿಯ ಒಕ್ಕಲುಗಳಿದ್ದಾರೆ. ಜನಪದ ಹಾಡುಗಾರರು ಮನೆ ಮನೆಗೂ ಇದ್ದಾರೆ.

ವೀರಪ್ಪನ್‌ ಅಡಗುತಾಣವಾಗಿತ್ತು!

ಒಂದು ಕಡೆ ಮೈಸೂರು, ಬೆಂಗಳೂರಿಗೂ ಹತ್ತಿರ, ರಾಮನಗರ, ಮಂಡ್ಯ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆ ಇದು. ಒಂದು ಕಾಲದಲ್ಲಿ ವೀರಪ್ಪನ್​ ಮತ್ತು ಸಹಚರರ ಅಡಗು ತಾಣವಾಗಿದ್ದ ಇಲ್ಲಿನ ಸತ್ಯಮಂಗಲ, ಗುಂಡಾಲ್​, ಮಲೆ ಮಹದೇಶ್ವರ, ಬಿಳಿಗಿರಿರಂಗನಬೆಟ್ಟ ಅರಣ್ಯ ವ್ಯಾಪ್ತಿಯಲ್ಲಿ ಸಾಕಷ್ಟು ಸಂಪತ್ತು ಲೂಟಿಯೂ ಆಗಿತ್ತು. ವನ್ಯ ಜೀವಿಗಳ ಹನನವಾಗಿತ್ತು. ಎಲೆ ಉದುರುವ ಕಾಡುಗಳಲ್ಲಿ ಸಿಂಹ, ಚಿರತೆ, ಆನೆ, ಜಿಂಕೆ ಹೀಗೆ ನೂರಾರು ಬಗೆಯ ಪ್ರಾಣಿ, ಪಕ್ಷಿಗಳು ಆಶ್ರಯ ಪಡೆದಿವೆ. ಇವೆಲ್ಲವೂ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದುಕೊಂಡಿರುವುದು ಜಿಲ್ಲೆಗೆ ಮತ್ತೊಂದು ವರ.

ಹೊಗೆನಕಲ್​, ಮೇಕೆ ದಾಟು, ಗಗನಚುಕ್ಕಿ, ಬರಚುಕ್ಕಿ, ಶಿವನಸಮುದ್ರ, ಬಂಡೀಪುರ ರಾಷ್ಟ್ರೀಯ ಉದ್ಯಾನ ಸೇರಿ ಬಹಳಷ್ಟು ತಾಣಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಉದ್ಯೋಗ, ಸ್ಥಳೀಯರಿಗೆ ಆದಾಯದ ಮೂಲಗಳಾಗಿಯೂ ಇವೆ. ಇವುಗಳ ಅಭಿವೃದ್ಧಿ ಕಡೆಗೆ ಸರ್ಕಾರ ಗಮನ ನೀಡಿದರೆ ಅನುಕೂಲ ಆಗುತ್ತದೆ ಎನ್ನುವ ಅಭಿಪ್ರಾಯ ಇಲ್ಲಿನ ಜನತೆಯದ್ದು.

ನಮ್ಮದು ಸೌಲಭ್ಯ ವಂಚಿತ ಶ್ರೀಮಂತ ಜಿಲ್ಲೆ

ನಾನು ದೇಶದ ನಾನಾ ಭಾಗಗಳಲ್ಲಿ ಸಂಚಾರ ಮಾಡಿ ಜನಪದ ಸಾಹಿತ್ಯವನ್ನು ಅಧ್ಯಯನ ಮಾಡಿದ್ದೇನೆ. ಹೊರ ದೇಶಗಳಲ್ಲಿಯೂ ಸುತ್ತಾಡಿದ್ದೇನೆ. ಆದರೆ ಚಾಮರಾಜನಗರದಲ್ಲಿ ಇರುವಷ್ಟು ಜಾನಪದ ಶ್ರೀಮಂತಿಕೆಯನ್ನು ಎಲ್ಲಿಯೂ ನೋಡಿಲ್ಲ. ಇಲ್ಲಿ ವಾಸಿಸುವ ಎಲ್ಲರೂ ಹಾಡುಗಾರರೇ. 730ಪುಟಗಳ ಮಂಟೇಸ್ವಾಮಿ ಕಾವ್ಯ, 1351 ಪುಟಗಳ ಮಹದೇಶ್ವರ ಸ್ವಾಮಿಯ ಕಾವ್ಯ ಈ ಮಣ್ಣಿನಲ್ಲಿ ಹಾಸುಹೊಕ್ಕಾಗಿದೆ. ಕೆಲವರು ಚಾಮರಾಜನಗರ ಹಿಂದುಳಿದ ಜಿಲ್ಲೆ ಎನ್ನುತ್ತಾರೆ. ಆದರೆ ನಾನು ಇದನ್ನು ಒಪ್ಪುವುದಿಲ್ಲ. ಇದು ಆರ್ಥಿಕವಾಗಿ, ಮೂಲ ಸೌಕರ್ಯಗಳ ದೃಷ್ಟಿಯಿಂದ ಹಿಂದೆ ಉಳಿದಿರಬಹುದು. ಆದರೆ ಜಾನಪದ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಅತ್ಯಂತ ಶ್ರೀಮಂತಿಕೆ ಹೊಂದಿದೆ. ವೈ.ಕೆ.ಕೃಷ್ಣಮೂರ್ತಿ ಅವರಂತ ಮೇಧಾವಿ, ಡಾ. ರಾಜ್​ ಕುಮಾರ್​ ರಂತಹ ದೊಡ್ಡ ಕಲಾವಿದರು ಈ ನಾಡಿನಿಂದಲೇ ಹೋದವರು ಎನ್ನುತ್ತಾರೆ ಸಾಹಿತಿ ಹಾಗೂ ಜಾನಪದ ವಿದ್ವಾಂಸರಾದ ಡಾ. ಹನೂರು ಕೃಷ್ಣಮೂರ್ತಿ.

"ನಮ್ಮ ಜಿಲ್ಲೆಯಲ್ಲಿ 36ಕ್ಕೂ ಹೆಚ್ಚು ಶತಮಾನ ಪೂರೈಸಿದ ಶಾಲೆಗಳಿವೆ, ಅವುಗಳ ಅಭಿವೃದ್ಧಿ ಆಗಬೇಕು. ಮಲೆ ಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಬಗ್ಗೆ ಈಗೀಗ ಯುವ ಜನತೆಯಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರೋತ್ಸಾಹ ಸಿಗಬೇಕು, ಜಾನಪದ ಕಲಾವಿದರಿಗೆ ಸೂಕ್ತ ಗೌರವ, ಸಹಾಯ ಸಿಗಬೇಕು," ಎಂದು ತಮ್ಮ ಒತ್ತಾಸೆಯನ್ನು ದ ಫೆಡರಲ್​ ಕರ್ನಾಟಕದೊಂದಿಗೆ ಹಂಚಿಕೊಳ್ಳುತ್ತಾರೆ 

ಚಾಮರಾಜನಗರದಲ್ಲಿ 36ಕ್ಕೂ ಹೆಚ್ಚು ಶತಮಾನ ಪೂರೈಸಿದ ಶಾಲೆಗಳಿವೆ, ಅವುಗಳ ಅಭಿವೃದ್ಧಿ ಆಗಬೇಕು. ಮಲೆ ಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಬಗ್ಗೆ ಈಗೀಗ ಯುವ ಜನತೆಯಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರೋತ್ಸಾಹ ಸಿಗಬೇಕು, ಜಾನಪದ ಕಲಾವಿದರಿಗೆ ಸೂಕ್ತ ಗೌರವ, ಸಹಾಯ ಸಿಗಬೇಕು ಎಂಬುದ ಅವರ ಆಶಯ

ಬಸ್, ಕರೆಂಟ್​ ಕೊಡಿ, ಆಗ ಗ್ಯಾರಂಟಿ ಖಾತ್ರಿ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ನಮ್ಮ ಚಾಮರಾಜನಗರದ ಸಾಕಷ್ಟು ಗ್ರಾಮಗಳಿಗೆ, ಹಾಡಿಗಳಿಗೆ ಬಸ್ ವ್ಯವಸ್ಥೆಯೇ ಇಲ್ಲ, ವಿದ್ಯುತ್​ ಸಂಪರ್ಕವೂ ಇಲ್ಲ. ಹೀಗಿರುವಾಗ ಗ್ಯಾರಂಟಿ ಯೋಜನೆಗಳು ನಮಗೆ ಹೇಗೆ ಉಪಯೋಗಕ್ಕೆ ಬರುತ್ತವೆ..? ಹೀಗೆ ಪ್ರಶ್ನೆ ಎತ್ತಿದವರು ರೈತ ಮುಖಂಡ ಹೊನ್ನೂರು ಪ್ರಕಾಶ್​.

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಲು ಉದ್ದೇಶಿಸಿರುವ ಸಚಿವ ಸಂಪುಟ ಸಭೆಯ ಬಗ್ಗೆ ಫೆಡರಲ್​ ಕರ್ನಾಟಕದ ಜೊತೆ ಮಾತನಾಡಿದ ಅವರು, ಜಿಲ್ಲೆಯ ರೈತ ಮೊದಲಿನಿಂದಲೂ ಮಾರುಕಟ್ಟೆ ಸಮಸ್ಯೆ ಎದುರಿಸುತ್ತಲೇ ಇದ್ದಾನೆ. ಮೈಸೂರು ಅಥವಾ ತಮಿಳುನಾಡಿನ ಕಡೆಗೆ ನಾವು ಮುಖ ಮಾಡಬೇಕು. ಫಸಲು ಕೈಗೆ ಬಂತು ಎನ್ನುವಾಗ ಕಾಡು ಪ್ರಾಣಿಗಳ ಹಾವಳಿ ಶುರುವಾಗುತ್ತದೆ. ಪಂಪ್​ ಸೆಟ್​ಗಳಿಗೆ ಸಮರ್ಪಕ ವಿದ್ಯುತ್​ ಪೂರೈಕೆಯೂ ಇಲ್ಲ. ರಸ್ತೆ ಸಂಪರ್ಕ ಸರಿಯಾಗಿಲ್ಲ. ಹೀಗಿರುವಾಗ ರೈತ ಹೇಗೆ ತಾನೆ ನೆಮ್ಮದಿಯಿಂದ ಬದುಕಲು ಸಾಧ್ಯ..?

ಹನೂರು ಭಾಗದ ದೊಡ್ಡಾಣೆ ಎನ್ನುವ 150 ಕುಟುಂಬಗಳು ಇರುವ ಗ್ರಾಮಕ್ಕೆ ಇಂದಿಗೂ ಬಸ್​ ಸಂಪರ್ಕ ಇಲ್ಲ. ಅಲ್ಲಿಂದ ಮಾಟಳ್ಳಿ ಎನ್ನುವ ಗ್ರಾಮಕ್ಕೆ 12 ಕಿ.ಮೀ. ನಡೆದುಕೊಂಡು ಬರಬೇಕು. ಇವರಿಗೆ ನಿಮ್ಮ ಗ್ಯಾರಂಟಿಗಳಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡುವ ಹೊನ್ನೂರು ಪ್ರಕಾಶ್​​ ಅವರು ರೈತರಿಗೆ ಸೂಕ್ತ ಮಾರುಕಟ್ಟೆ, ಕೋಲ್ಡ್​ ಸ್ಟೋರೇಜ್​ ಯೂನಿಟ್​, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಒತ್ತು ಕೊಡಬೇಕು ಎಂದು ಆಗ್ರಹಿಸುತ್ತಾರೆ.

ಚಾಮರಾಜನಗರದ ಸಾಕಷ್ಟು ಗ್ರಾಮಗಳಿಗೆ, ಹಾಡಿಗಳಿಗೆ ಬಸ್ ವ್ಯವಸ್ಥೆಯೇ ಇಲ್ಲ, ವಿದ್ಯುತ್​ ಸಂಪರ್ಕವೂ ಇಲ್ಲ. ಹೀಗಿರುವಾಗ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆಗಳು ನಮಗೆ ಹೇಗೆ ಉಪಯೋಗಕ್ಕೆ ಬರುತ್ತವೆ..? ಕೂಡಲೇ ಸರ್ಕಾರ ಮೂಲ ಸೌಲಭ್ಯ, ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಹೇಳುತ್ತಾರೆ.

ಇನ್ನು ಆಡಳಿತ ಪಕ್ಷದ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಗಣೇಶ್​ ಪ್ರಸಾದ್​ ಅವರು ದ ಫೆಡರಲ್​​ ಕರ್ನಾಟಕದೊಂದಿಗೆ ಮಾತನಾಡಿ, ನಾವು ಈ ಸಚಿವ ಸಂಪುಟ ಸಭೆಯಿಂದ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಸುಮಾರು 1500ರಿಂದ 2000 ಕೋಟಿ ರೂ. ವಿಶೇಷ ಅನುದಾನ ಸಿಗುವ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರಿಗೆ ಚಾಮರಾಜನಗರದ ಮೇಲೆ ವಿಶೇಷವಾದ ಕಾಳಜಿ ಇದೆ. ಇದೇ ಕಾರಣಕ್ಕೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಮೆಡಿಕಲ್​ ಕಾಲೇಜು, ತಾಲ್ಲೂಕು ಆಸ್ಪತ್ರೆಗಳನ್ನು ಕೊಟ್ಟಿದ್ದಾರೆ. ಇಂಜಿನಿಯರ್​ ಕಾಲೇಜಿಗೆ ಅನುಮತಿ​, 50 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನದ ಕಾಮಗಾರಿಗಳು, ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಅನುಮತಿ ಕೋರಿದ್ದೇವೆ. ಹಾಸ್ಟೆಲ್​ಗಳು, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಹೂಡಿಕೆ ಆಕರ್ಷಣೆಗೆ ಕ್ರಮ, ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಕ್ರಮ ವಹಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗದ್ದು, ಎಲ್ಲವೂ ಈಡೇರುವ ಭರವಸೆ ಇದೆ ಎನ್ನುತ್ತಾರೆ.

ಹಳೆ ಮೈಸೂರು ಭಾಗದಲ್ಲಿಯೇ ಇದ್ದರೂ ಅಭಿವೃದ್ಧಿ ಕಾಣದ ಚಾಮರಾಜನಗರಕ್ಕೆ ಸಚಿವ ಸಂಪುಟ ಸಭೆ ಹೊಸ ಭರವಸೆ ತುಂಬುವ​ ರೀತಿ ಕೆಲಸ ಮಾಡಲಿದೆಯೇ..? ನಾಲ್ಕು ಜನ ಶಾಸಕರಿದ್ದರೂ ಸಚಿವ ಸಂಪುಟದಲ್ಲಿ ಜಿಲ್ಲೆಯ ಒಬ್ಬರಿಗೂ ಪ್ರತಿನಿಧ್ಯ ಇಲ್ಲದ ವೇಳೆಯಲ್ಲಿ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ..? ಭವಿಷ್ಯದಲ್ಲಿ ಈ ಸಭೆ ಜಿಲ್ಲೆಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿ, ಹೊಸ ಮೈಲಿಗಲ್ಲು ಸ್ಥಾಪನೆಯಾಗುವಂತೆ ಮಾಡುವುದೇ..? ಇರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಉದ್ಯೋಗ, ಆರ್ಥಿಕ ಸ್ಥಿತಿಯ ಮೇಲ್ಮುಖ ಚಲನೆಗೆ ಸಹಕಾರಿಯಾಗುವುದೆನ್ನುವುದು ಚಾಮರಾಜನಗರ ಜಿಲ್ಲೆಯ ಜನತೆಯ ಆಶಯ.

Tags:    

Similar News