ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ತಾತ್ಕಾಲಿಕ ತಡೆಗೆ ಸಿದ್ದರಾಮಯ್ಯ ನಿರ್ಧಾರ

Update: 2024-07-17 15:52 GMT

ವಿವಿಧ ವಲಯಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ.

ಮುಖ್ಯಮಂತ್ರಿ ಕಚೇರಿಯ ಅಧಿಕೃತ ಪ್ರಕಟಣೆಯಲ್ಲಿ  ಈ ವಿಷಯ ತಿಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ನಿರ್ಧರಿಸಲಾಗುವುದು ಹಾಗೂ ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. "ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ," ಎಂದು ಪ್ರಕಟಣೆ ವಿವರಿಸಿದೆ.

ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಡ್ಡಾಯಗೊಳಿಸುವ ನೂತನ ಮಸೂದೆಗೆ ರಾಜ್ಯ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿತ್ತು. ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಉದ್ಯಮ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ನಿಗದಿತ ಪ್ರಮಾಣದ ಉದ್ಯೋಗಗಳನ್ನು ಕಾಯ್ದಿರಿಸುವ ʼಕರ್ನಾಟಕ ರಾಜ್ಯ ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ-2024ʼ ಸಂಪುಟ ಅನುಮೋದನೆಯೊಂದಿಗೆ ವಿಧಾನಸಭೆಯಲ್ಲಿ ಮಂಡನೆಗೆ ಸಜ್ಜಾಗಿತ್ತು. 

ರಾಜ್ಯ ಕಾರ್ಮಿಕ ಇಲಾಖೆ ಸಿದ್ಧಪಡಿಸಿರುವ ಈ ಮಸೂದೆ, ಡಾ ಸರೋಜಿನಿ ಮಹಿಷಿ ವರದಿ ಸೇರಿದಂತೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ಮತ್ತು ಅವಕಾಶಗಳು ಎಂಬ ಸೂತ್ರದ ಹಿನ್ನೆಲೆಯಲ್ಲಿ ಸಿದ್ಧಗೊಂಡಿದೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬೇಕು ಎಂಬ ದಶಕಗಳ ಕನ್ನಡಿಗರ ಹೋರಾಟಕ್ಕೆ ಅಂತಿಮವಾಗಿ ಸರ್ಕಾರ, ಮಸೂದೆಯ ಕಾನೂನು ಚೌಕಟ್ಟು ರೂಪಿಸಿತ್ತು.

ಆದರೆ, ಪ್ರಮುಖವಾಗಿ ಸಿ ಮತ್ತು ಡಿ ದರ್ಜೆಯ ಉದ್ಯೋಗಗಳಿಗೆ ಶೇಕಡಾ75   ಅವಕಾಶ ನೀಡುವ ಸಂಬಂಧ ಖಾಸಗಿ ಸಂಸ್ಥೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಜತೆಗೆ ಬೆಂಗಳೂರು ಐಟಿ, ಬಿಟಿ, ಏರೋಸ್ಪೇಸ್‌ ಮತ್ತಿತರ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಕರ್ನಾಟಕ ಸರ್ಕಾರದ ನೀತಿಯಿಂದ ಮುಂದಿನ ದಿನಗಳಲ್ಲಿ ಬಂಡವಾಳ ಹೂಡಿಕೆಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂಬ  ಭಯವೂ ಸರ್ಕಾರದ ಈ ನಿರ್ಧಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕಾಂಗ್ರೆಸ್‌ನ ನಾಯಕರಾದ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರೂ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಅವಸರದ ನಿರ್ಧಾರ ಕೈಗೊಳ್ಳಬೇಡಿ ಎಂಬ ಕಿವಿ ಮಾತು ಹೇಳಿದರೆನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರ ವಿವರವಾಗಿ ಚರ್ಚಿಸಿ  ಮುಂದಿನ  ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲು ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಕಳೆದ ಎರಡು ದಶಕದಿಂದ ಈಚೆಗೆ ತಳಮಟ್ಟದ ಕೂಲಿ ಕೆಲಸದಿಂದ ಆರಂಭವಾಗಿ ಕಚೇರಿಗಳ ಉನ್ನತ ಅಧಿಕಾರಿ ಹುದ್ದೆಗಳವರೆಗೆ ಉತ್ತರಭಾರತೀಯರ ಪಾರುಪತ್ಯ ಹೆಚ್ಚಾಗಿದೆ. ರಾಜ್ಯದ ನೀರು, ಭೂಮಿ, ತೆರಿಗೆ ವಿನಾಯ್ತಿ, ಸಾರಿಗೆ, ಸೌಕರ್ಯ ಮುಂತಾದ ಎಲ್ಲಾ ಮೂಲಸೌಲಭ್ಯಗಳನ್ನು ಬಳಸಿಕೊಳ್ಳುವ ಖಾಸಗಿ ಕಂಪನಿಗಳು ಉದ್ಯೋಗ ನೀಡುವಾಗ ಮಾತ್ರ ಉತ್ತರ ಭಾರತೀಯರಿಗೆ ಆದ್ಯತೆ ನೀಡುತ್ತಿವೆ. ಹಾಗಾಗಿ ಕರ್ನಾಟಕದಲ್ಲಿ ಕನ್ನಡಿಗರೇ ದ್ವಿತೀಯ ದರ್ಜೆ ನಾಗರಿಕರಂತೆ ಬದುಕುವಂತಾಗಿದೆ. ಹಾಗಾಗಿ ಕನ್ನಡ ನಾಡಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಖಾತರಿಪಡಿಸಲು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕಾಯ್ದಿರಿಸುವ ಮೀಸಲಾತಿ ನೀತಿ ಜಾರಿಗೆ ಬರಬೇಕು ಎಂದು ಹತ್ತಾರು ವರ್ಷಗಳಿಂದ ರಾಜ್ಯದ ವಿವಿಧ ಸಾಮಾಜಿಕ ಸಂಘಟನೆಗಳು ಒತ್ತಾಯಿಸುತ್ತಲೇ ಇದ್ದವು. ಈ ಕೂಗಿನ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಉದ್ದೇಶದ ಮಸೂದೆ ವಿಧಾನಸಭೆಯಲ್ಲಿ ಮಂಡನೆಗೆ ಸಿದ್ಧವಾಗಿದೆ.

ಆದರೆ, ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದ ಈ ಮಸೂದೆಗೆ ಐಟಿ ಮತ್ತು ಬಿಟಿ ವಲಯದ ಉದ್ಯಮಗಳಿಂದ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕ ಸರ್ಕಾರದ ತೆರಿಗೆ ವಿನಾಯ್ತಿ, ಕಡಿಮೆ ಬೆಲೆಯ ಭೂಮಿ ಮತ್ತು ನೀರು ಪಡೆದು ಬೆಳೆದಿರುವ ಬೃಹತ್ ಐಟಿ ಮತ್ತು ಬಿಟಿ ಉದ್ಯಮ ಸಂಸ್ಥೆಗಳ ಮುಖ್ಯಸ್ಥರೇ ಈ ಬಗ್ಗೆ ತೀವ್ರ ಅಪಸ್ವರ ಎತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ನೂತನ ಮಸೂದೆ ರಾಷ್ಟ್ರವ್ಯಾಪಿ ಚರ್ಚೆಯ ವಸ್ತುವಾಗಿ ಹೊರಹೊಮ್ಮಿತ್ತು.

 

Tags:    

Similar News