ನಿಯಮ ಗಾಳಿ ತೂರಿದ ಅರಣ್ಯ ಇಲಾಖೆ; ಸಕ್ರೆಬೈಲು ಶಿಬಿರದಲ್ಲಿ ಪ್ರವಾಸಿಗರಿಗೆ ಆನೆ ಸವಾರಿ
ವನ್ಯಜೀವಿ ಕಾರ್ಯಕರ್ತ ಜೊಸೆಫ್ ಹೂವರ್ ಅವರು ಈ ವಿಷಯವನ್ನು ಬಯಲಿಗೆಳೆದಿದ್ದಾರೆ. ಶಿವಮೊಗ್ಗ ಸಕ್ರೆಬೈಲು ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ ಅವರಿಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ನಿಯಮಾವಳಿಗಳ ಅರಿವಿಲ್ಲವೇ ಎಂದು ಹೂವರ್ ಪ್ರಶ್ನಿಸಿದ್ದಾರೆ.;
ವನ್ಯಜೀವಿಗಳ ಬಗ್ಗೆ ಇರುವ ಕಾನೂನಿನ ಬಗ್ಗೆ ಅರಣ್ಯಾಧಿಕಾರಿಗಳಿಗೇ ಮಾಹಿತಿ ಇಲ್ಲವೇ? ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಲ್ಲಿ ಇಲಾಖೆ ವತಿಯಿಂದ ಪ್ರವಾಸಿಗಳ ಮನರಂಜನೆಗಾಗಿ “ಆನೆ ಸವಾರಿ” ನಡೆಸುತ್ತಿರುವುದು ಈ ಪ್ರಶ್ನೆಗೆ ಕಾರಣವಾಗಿದೆ.
ಪರಿಸರವಾದಿ ಮತ್ತು ವನ್ಯಜೀವಿ ಕಾರ್ಯಕರ್ತ ಜೊಸೆಫ್ ಹೂವರ್ ಅವರು ಈ ವಿಷಯವನ್ನು ಬಯಲಿಗೆಳೆದಿದ್ದಾರೆ. ಶಿವಮೊಗ್ಗ ಸಕ್ರೆಬೈಲು ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ ಅವರಿಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ನಿಯಮಾವಳಿಗಳ ಅರಿವಿಲ್ಲವೇ ಎಂದು ಹೂವರ್ ಪ್ರಶ್ನಿಸಿದ್ದಾರೆ.
ಎಲ್ಲ ಆನೆ ಶಿಬಿರಗಳಲ್ಲಿ ಆನೆ ಸವಾರಿ ನಿಷೇಧಿಸಲಾಗಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ , ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960 ರ ಅಡಿಯಲ್ಲಿ ಹಲವು ನಿಯಮಾವಳಿಗಳನ್ನು ರೂಪಿಸಿದೆ. ಪ್ರದರ್ಶನಕ್ಕೆ ಒಳಗಾಗುವ ಪ್ರಾಣಿಗಳ (ನೋಂದಣಿ) ನಿಯಮಗಳು, 2001 ಮತ್ತು ಈ ಸಂಬಂಧ ರಾಜಸ್ಥಾನ ಸರ್ಕಾರದ 2010 ರ ಆದೇಶಂತೆ ಅನೆಗಳನ್ನು ಮನರಂಜನೆಗಾಗಿ ಬಳಸುವುದಕ್ಕೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಪ್ರಾಜೆಕ್ಟ್ ಎಲಿಫೆಂಟ್ ಮತ್ತು ಪರಿಸರ ಖಾತೆ ಸಚಿವಾಲಯ, ಶಿಬಿರದಲ್ಲಿರುವ ಆನೆಗಳ ಕಲ್ಯಾಣಕ್ಕಾಗಿ ನಿಯಮಗಳನ್ನು ರೂಪಿಸಿವೆ. ಆದರೂ ಅರಣ್ಯ ಇಲಾಖೆ ಮೂಗಿನಡಿಯಲ್ಲಿಯೇ ಇರುವ ಸಕ್ರೆಬೈಲು ಆನೆ ಶಿಬಿರದಲ್ಲಿ ನಿಯಮಾವಳಿಗಳು ಉಲ್ಲಂಘನೆ ಆಗುತ್ತಿವೆ.
ಜೋಸೆಫ್ ಹೂವರ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದು, “ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಂಜನ್ ಅವರಿಗೆ ಸಕ್ರೆಬೈಲು ಪ್ರದೇಶದಲ್ಲಿ ಆನೆಗಳನ್ನು ಸವಾರಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿಯಿಲ್ಲ," ಎಂದು ಹೇಳಿದ್ದಾರೆ.
ಆನೆ ಸವಾರಿ
ಸಕ್ರೆಬೈಲು ಆನೆ ಕ್ಯಾಂಪ್‌ನಲ್ಲಿ ಆನೆ ಸವಾರಿಗೆ ಇಂತಿಷ್ಟು ದರಗಳನ್ನು ಇಲಾಖೆಯೇ ನಿಗದಿ ಮಾಡಿರುವುದು ಅಚ್ಚರಿ ಉಂಟು ಮಾಡಿದೆ. ಪ್ರತಿ ಸವಾರಿಗೆ ಮಕ್ಕಳಿಗೆ 30 ರೂ., ದೊಡ್ಡವರಿಗೆ 100 ರೂ. ದರ ನಿಗದಿ ಮಾಡಿ, ಪ್ರವಾಸಿಗರಿಂದ ಹಣ ಸಂಗ್ರಹಿಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಒಂದು ಆನೆಯನ್ನು 11 ಸವಾರಿಗಳಿಗಾಗಿ ಬಳಸಲಾಗುತ್ತಿದೆ ಎಂದು ಹೂವರ್ ಹೇಳಿದ್ದಾರೆ. ನಮ್ಮ ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸುವುದು ಅರಣ್ಯ ಇಲಾಖೆಯ ಮುಖ್ಯ ಉದ್ದೇಶವಾಗಿದೆ. ದುರದೃಷ್ಟವಶಾತ್, ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದವರು ವಿಷಾದ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯ ಹಾರಂಗಿ ಶಿಬಿರದಲ್ಲೂ ಆನೆ ಸವಾರಿ ಆರಂಭಿಸುವ ಕ್ರಮವಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಆಶಿಸಿದ್ದಾರೆ.