ಶಿವಮೊಗ್ಗ | ಮಾರಿ ಜಾತ್ರೆ ಗಲಾಟೆ: ಪೊಲೀಸ್ ಮೇಲೆ ಹಲ್ಲೆ ನಡೆಸಿದ ಪುಂಡರು!
ಜಗಳ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ಪುಂಡರು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದ ಆನಂದಪುರ ಮಾರಿಕಾಂಬಾ ಜಾತ್ರೆಯಲ್ಲಿ ನಡೆದಿದೆ.;
ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿ ನಡೆದ ಮಾರಿಕಾಂಬಾ ಜಾತ್ರೆಯಲ್ಲಿ ಕ್ಷುಲ್ಲಕ ವಿಷಯಕ್ಕೆ ಹೊಡೆದಾಡುತ್ತಿದ್ದ ಪುಂಡರನ್ನು ಚದುರಿಸಲು ಹೋದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆದಿದೆ.
ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೌತಮಪುರದ ಮಾರಿಜಾತ್ರೆಯಲ್ಲಿ ಘಟನೆ ನಡೆದಿದ್ದು, ಪೊಲೀಸರ ಮೇಲೆ ಯುವಕರು ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಜಾತ್ರೆಯಲ್ಲಿ ಅಂಗಡಿ ಮುಂಗಟ್ಟುಗಳ ಎದುರು ಪುಂಡರು ಗಲಾಟೆ ಮಾಡುತ್ತಿರುವುದನ್ನು ತಿಳಿದ ಪೊಲೀಸರು ಗಲಾಟೆ ತಿಳಿಗೊಳಿಸಲು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ, ಪುಂಡರು ಪೊಲೀಸರೊಂದಿಗೆ ಜಗಳಕ್ಕೆ ನಿಂತಿದ್ದಾರೆ.
ಪರಿಸ್ಥಿತಿ ನಿಭಾಯಿಸಲು ಪೊಲೀಸರ ಸಂಖ್ಯೆ ಕಡಿಮೆ ಇದ್ದುದರಿಂದ ಪರಿಸ್ಥಿತಿ ಕೈ ಮೀರಿ ಹೋಗಿದ್ದು, ಯುವಕರ ತಂಡ ಪೊಲೀಸ್ ಸಿಬ್ಬಂದಿಯ ಕಪಾಳಕ್ಕೆ ಹೊಡೆದು, ಸಮವಸ್ತ್ರ ಹಿಡಿದೆಳೆದು ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದೆ.
ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಗೌತಮ್ ಕೊಡ್ಕಣಿ ಮತ್ತು ಭರತ್ ಪೂರಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.