ರಾಜ್ಯ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್‌ ನೇಮಕ

ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ಡಾ. ಶಾಲಿನಿ ರಜನೀಶ್‌ ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.;

Update: 2024-07-26 12:45 GMT
ಡಾ. ಶಾಲಿನಿ ರಜನೀಶ್‌
Click the Play button to listen to article

ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್‌ ಅಧಿಕಾರಿ ಡಾ. ಶಾಲಿನಿ ರಜನೀಶ್‌ ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾನೂನು ಸಚಿವ ಎಚ್.ಕೆ. ಪಾಟೀಲ್‌, ಶಾಲಿನಿ ರಜನೀಶ್ ಅವರನ್ನು ನೂತನ ಸಿಎಸ್ ಆಗಿ ನೇಮಕ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸರ್ಕಾರದ ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಮುಂದಿನ 5 ದಿನಗಳಲ್ಲಿ ನಿವೃತ್ತಿಯಾಗಲಿದ್ದಾರೆ. ಈ  ಹಿನ್ನೆಲೆಯಲ್ಲಿ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಜನೀಶ್ ಗೋಯಲ್ ನಿವೃತ್ತಿ

ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರ ಅಧಿಕಾರದ ಅವಧಿಯು ಜುಲೈ 31ಕ್ಕೆ ಮುಗಿಯುತ್ತಿದೆ. ಹೀಗಾಗಿ ಶಾಲಿನಿ ರಜನೀಶ್‌ ಅವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಶಾಲಿನಿ ರಜನೀಶ್‌ ಅವರು ರಜನೀಶ್‌ ಗೋಯಲ್‌ ಅವರ ಪತ್ನಿಯಾಗಿದ್ದು, ಈವರೆಗೆ ಅವರು ರಾಜ್ಯ ಅಭಿವೃದ್ಧಿ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶಾಲಿನಿ ಅವರಿಗೆ ಜ್ಯೇಷ್ಠತೆಯ ಆಧಾರದ ಮೇಲೆ ಈ ಬಡ್ತಿ ನೀಡಲಾಗಿದೆ.

ಮುಖ್ಯ ಕಾರ್ಯದರ್ಶಿ ಹುದ್ದೆ ರೇಸ್​ನಲ್ಲಿ ಈ ಬಾರಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್‌ ಸೇಠ್‌ ಹಾಗೂ ಶಾಲಿನಿ ರಜನೀಶ್‌ ಇದ್ದರು. ಈಗ ರಾಜ್ಯ ಸರ್ಕಾರವು ಶಾಲಿನಿ ರಜನೀಶ್‌ ಅವರಿಗೇ ಮಣೆ ಹಾಕಿದೆ. ಸುದೀರ್ಘ ಅವಧಿಗೆ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದರೆ ಆಡಳಿತ ಯಂತ್ರ ಸುಗಮವಾಗಿ ಸಾಗಲು ನೆರವಾಗಬಹುದು ಎಂಬ ಚಿಂತನೆಯಿದೆ. 2027ರ ಜೂನ್‌ಗೆ ಶಾಲಿನಿ ಅವರು ನಿವೃತ್ತಿ ಹೊಂದಲಿದ್ದಾರೆ. ಅಜಯ್‌ ಸೇಠ್‌ ಸೀನಿಯರ್ ಆಗಿದ್ದರೂ, ಅವರ ಸೇವಾ ಅವಧಿ 11 ತಿಂಗಳು ಮಾತ್ರ ಇರುವುದರಿಂದ ರಾಜ್ಯ ಸರ್ಕಾರವು ಶಾಲಿನಿ ರಜನೀಶ್ ಅವ​ರನ್ನು ನೇಮಕ ಮಾಡಿದೆ ಎನ್ನಲಾಗಿದೆ.

ರಾಜ್ಯ ಸಿಎಸ್‌ ಆಗಿ ನೇಮಕಗೊಂಡ ದ್ವಿತೀಯ ದಂಪತಿ 

ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ 2ನೇ ದಂಪತಿ ಎಂಬ ಖ್ಯಾತಿಗೆ ಶಾಲಿನಿ ರಜನೀಶ್‌ ಹಾಗೂ ರಜನೀಶ್‌ ಗೋಯಲ್‌ ಪಾತ್ರರಾಗಿದ್ದಾರೆ. ಈ ದಂಪತಿಗಿಂತ ಮೊದಲು ಬಿ.ಕೆ.ಭಟ್ಟಾಚಾರ್ಯ ಹಾಗೂ ತೆರೇಸಾ ಭಟ್ಟಾಚಾರ್ಯ ದಂಪತಿ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿದ್ದರು. 2000 ರಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಬಿ ಕೆ ಭಟ್ಟಾಚಾರ್ಯ ಅವರು 2000 ರಲ್ಲಿ ನಿವೃತ್ತರಾಗಿದ್ದರು. ಆ ಬಳಿಕ ಅವರ ಪತ್ನಿ ತೆರೆಸಾ ಭಟ್ಟಾಚಾರ್ಯ ಜನವರಿ 1, 2000ದಿಂದ ಮಾರ್ಚ್ 30, 2002 ರ ವರೆಗೆ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Tags:    

Similar News