Hubli Encounter | ಹೊರರಾಜ್ಯದವರಿಂದಲೇ ಹೆಚ್ಚು ಅಪರಾಧ ಕೃತ್ಯ; ಗೃಹ ಸಚಿವ ಡಾ.ಜಿ.ಪರಮೇಶ್ವರ್
ಹೊರರಾಜ್ಯದ ಬಹುತೇಕ ಮಂದಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ನೆಲೆ ಕಂಡುಕೊಂಡಿದ್ದಾರೆ. ಅವರಿಗೆ ಇಲ್ಲಿನ ಸಂಸ್ಕೃತಿ, ಕಾನೂನಿನ ಅರಿವಿಲ್ಲ. ಕಾರ್ಮಿಕ ಇಲಾಖೆ ಜೊತೆಗೂಡಿ ಹೊರರಾಜ್ಯಗಳ ಜನರಿಗೆ ಕಾನೂನು ತಿಳಿವಳಿಕೆ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ;
ಕರ್ನಾಟಕದದಲ್ಲಿ ಸಾಕಷ್ಟು ಅಪರಾಧ ಕೃತ್ಯಗಳು ಹೊರ ರಾಜ್ಯದವರಿಂದಲೇ ನಡೆಯುತ್ತಿದ್ದು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ನಿತ್ಯ ಬೆಂಗಳೂರಿಗೆ ಹೊರರಾಜ್ಯಗಳಿಂದ ಸಾಕಷ್ಟು ಜನ ಬರುತ್ತಾರೆ. ಬಹುತೇಕ ಮಂದಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ನೆಲೆ ಕಂಡುಕೊಂಡಿದ್ದಾರೆ. ಆದರೆ, ಅವರಿಗೆ ಇಲ್ಲಿನ ಸಂಸ್ಕೃತಿ, ಕಾನೂನಿನ ಅರಿವಿಲ್ಲ. ಜನರ ಭಾವನೆ ಅರ್ಥ ಮಾಡಿಕೊಳ್ಳದೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಹಲವೆಡೆ ಕಟ್ಟಡ ಕಾರ್ಮಿಕರಿಂದ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಸಲುವಾಗಿ ಇಲ್ಲಿನ ಕಾನೂನುಗಳ ಕುರಿತು ಕಾರ್ಮಿಕ ಇಲಾಖೆ ಜೊತೆಗೂಡಿ ಸಭೆ ನಡೆಸಿ, ತಿಳಿವಳಿಕೆ ಮೂಡಿಸಲಾಗುವುದು ಎಂದು ಹೇಳಿದ್ದಾರೆ.
ಏನಿದು ಘಟನೆ?
ಹುಬ್ಬಳ್ಳಿಯ ರಾಯನಾಳ ಸಮೀಪದ ಅಧ್ಯಾಪಕ್ ನಗರದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಚಾಕೋಲೆಟ್ ಕೊಡಿಸುವ ಆಸೆ ತೋರಿಸಿ ಆರೋಪಿ ರಾಕೇಶ್ ಕುಮಾರ್ ಕರೆದೊಯ್ದಿದ್ದ. ಪಾಳು ಬಿದ್ದಿದ್ದ ಶೆಡ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ ಬಳಿಕ ಕೊಲೆ ಮಾಡಿದ್ದ ಎನ್ನಲಾಗಿದೆ.
ಕೊಪ್ಪಳ ಮೂಲದ ದಂಪತಿಯು ಮಗಳಿಗಾಗಿ ಹುಡುಕಾಡುವಾಗ ಬಾಲಕಿಯ ಶವ ಶೆಡ್ನಲ್ಲಿ ಸಿಕ್ಕಿತ್ತು. ಅಶೋಕ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಬಾಲಕಿಯ ಮೇಲಿನ ಅತ್ಯಾಚಾರ ಸುದ್ದಿ ಶರವೇಗದಲ್ಲಿ ಹಬ್ಬಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮೀಪದ ದೃಶ್ಯ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ ಬಾಲಕಿಯನ್ನು ಆರೋಪಿ ಹೊತ್ತೊಯ್ಯುತ್ತಿದ್ದ ದೃಶ್ಯಗಳು ಕಂಡು ಬಂದಿವೆ. ಇದೇ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಯನ್ನು ವಿಚಾರಣೆ ನಡೆಸಿ, ಆತ ಉಳಿದುಕೊಂಡಿದ್ದ ತಾರಿಹಾಳಕ್ಕೆ ಸ್ಥಳ ಮಹಜರಿಗೆ ಕರೆದೊಯ್ಯುವಾಗ ಇಲ್ಲಿನ ಸೇತುವೆ ಬಳಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ಪಿಎಸ್ಐ ಅನ್ನಪೂರ್ಣ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ನಿಲ್ಲದ ಆರೋಪಿ ಮೇಲೆ ಗುಂಡು ಹಾರಿಸಲಾಯಿತು. ಆರೋಪಿಯ ಕಾಲು, ಬೆನ್ನಿಗೆ ಗುಂಡು ತಗುಲಿ ಮೃತಪಟ್ಟಿದ್ದ. ಇನ್ನು ಆರೋಪಿಯ ಹಲ್ಲೆಯಿಂದ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ.