ಮಂಗಳವಾರ ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆ: ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭ

Update: 2024-05-06 14:31 GMT

ಕರ್ನಾಟಕದ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಮತದಾನ ನಾಳೆ (ಮಂಗಳವಾರ) ನಡೆಯಲಿದೆ.

ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ 14 ಕ್ಷೇತ್ರಗಳ ಮತದಾನ ಆರಂಭವಾಗುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಸೋಮವಾರ ಇಡೀ ದಿನ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮನೆ ಮನೆ ಪ್ರಚಾರ ನಡೆಸಿದ್ದಾರೆ. ನಾಳೆ ನಡೆಯಲಿರುವ ಮತದಾನದಲ್ಲಿ 2,59,52,958 ಮತದಾರರು ಕಿತ್ತೂರು ಕರ್ನಾಟಕ, ಮಲೆನಾಡು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ 14 ಕ್ಷೇತ್ರಗಳ 28,269 ಮತಗಟ್ಟೆಗಳಲ್ಲಿ 224 ಅಭ್ಯರ್ಥಿಗಳ ರಾಜಕೀಯ ಹಣೆಬರಹ ಬರೆಯಲಿದ್ದಾರೆ.

ರಾಜ್ಯದಲ್ಲಿ ಗಮನ ಸೆಳೆದಿರುವ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ(ಎಸ್ಸಿ ಮೀಸಲು), ಕಲಬುರಗಿ(ಎಸ್ಸಿ), ರಾಯಚೂರು(ಎಸ್ಟಿ ಮೀಸಲು), ಬೀದರ್, ಕೊಪ್ಪಳ, ಬಳ್ಳಾರಿ(ಎಸ್ಟಿ), ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಶೋರಾಪುರ ವಿಧಾನಸಭಾ ಕ್ಷೇತ್ರಕ್ಕೂ ನಾಳೆಯೇ ಉಪಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಬ್ಬರು, ನಾಲ್ವರು ಸ್ವತಂತ್ರರು ಕಣಕ್ಕಿಳಿದಿದ್ದಾರೆ. ಒಟ್ಟಾರೆ ಸ್ಪರ್ಧಾಕಣದಲ್ಲಿ 206 ಪುರುಷರು ಹಾಗೂ 21 ಮಹಿಳೆಯರು ಸೇರಿದಂತೆ ಒಟ್ಟು 227 ಮಂದಿ ಇದ್ದಾರೆ.

ಈ ನಡುವೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಚುನಾವಣೆಯ ದಿನದಂದು ತಾಪಮಾನವು 45-46 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆಯನ್ನು ನೀಡಿದೆ.

Live Updates
2024-05-07 11:08 GMT

ಬೆಳಗಾವಿ: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಡಿತ ನೆಹರೂ ಸಂಯುಕ್ತ ಜ್ಯೂನಿಯರ್ ಕಾಲೇಜು ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 201ರಲ್ಲಿ ಸಿಬ್ಬಂದಿ ಊಟಕ್ಕಾಗಿ ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಿದ್ದರಿಂದ ಮತದಾರರು ಹಾಗೂ ಹಿರಿಯ ನಾಗರಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದರು. 'ನೀವು ಒಬ್ಬೊಬ್ಬರೇ ಊಟ ಮಾಡಿ. ಮತದಾನ ಪ್ರಕ್ರಿಯೆ ಮುಂದುವರಿಸಿ' ಎಂದು ಮತದಾರರು ಕೋರಿದರೂ, ಸಿಬ್ಬಂದಿ ಪಟ್ಟು ಸಡಿಲಿಸಲಿಲ್ಲ. ಹಾಗಾಗಿ ಮತದಾನ ಆರಂಭವಾಗುವವರೆಗೂ ಜನರು ಕಾಯುತ್ತ ಕುಳಿತುಕೊಳ್ಳಬೇಕಾಯಿತು.

Tags:    

Similar News