ಒಳ ಮೀಸಲಾತಿ | ಪರಿಶಿಷ್ಟ ಜಾತಿ ಸಚಿವರು, ಶಾಸಕರ ಸಭೆ ಇಂದು
ಒಳ ಮೀಸಲಾತಿ ಜಾರಿಗೊಳಿಸಲು ಸಂವಿಧಾನಬದ್ಧ ಅಧಿಕಾರವನ್ನು ರಾಜ್ಯಗಳಿಗೆ ನೀಡಿ ಕಳೆದ ಆ.1ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ಸಚಿವರು, ಶಾಸಕರ ಸಭೆ ಮಹತ್ವ ಪಡೆದುಕೊಂಡಿದೆ.;
ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಸಹಮತ ಮೂಡಿಸುವ ಉದ್ದೇಶದಿಂದ ಸೋಮವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಉಪಜಾತಿಗಳ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಮಹತ್ವದ ಸಭೆ ನಡೆಯಲಿದೆ.
ಸಚಿವರಾದ ಕೆ.ಎಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಎಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ, ಶಿವರಾಜ ತಂಗಡಗಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಪರಿಷತ್ ಸದಸ್ಯರಾದ ಸುಧಾಮ ದಾಸ್ ಸೇರಿದಂತೆ ಶಾಸಕರು, ಪರಿಷತ್ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಒಳ ಮೀಸಲಾತಿ ಜಾರಿಗೊಳಿಸಲು ಸಂವಿಧಾನಬದ್ಧ ಅಧಿಕಾರವನ್ನು ರಾಜ್ಯಗಳಿಗೆ ನೀಡಿ ಕಳೆದ ಆ.1ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ.
ಪರಿಶಿಷ್ಟ ಜಾತಿಗಳಲ್ಲಿರುವ ಉಪಜಾತಿಗಳ ನಿಖರ ದತ್ತಾಂಶ ಇಲ್ಲ. ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಉಲ್ಲೇಖಿಸಿರುವ ದತ್ತಾಂಶದಲ್ಲೂ ಕೆಲ ಗೊಂದಲಗಳಿವೆ. ಒಳ ಮೀಸಲಾತಿ ಜಾರಿಗೆ ಉಪಜಾತಿಗಳ ನಿಖರ ಅಂಕಿ ಅಂಶ ಅಗತ್ಯವಿದೆ. ಹಾಗಾಗಿ ಎಸ್ಸಿಪಿ-ಟಿಎಸ್ಪಿ ಅನುದಾನದಲ್ಲಿ ಪರಿಶಿಷ್ಟ ಜಾತಿಗಳ ಗಣತಿ ನಡೆಸುವಂತೆ ಒತ್ತಾಯಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.
ಇನ್ನು ಸರ್ಕಾರದ ಜಾತಿವಾರು ಜನಗಣತಿ ವರದಿಯನ್ನು ಒಪ್ಪಿಕೊಳ್ಳುವ ಕುರಿತು ಯಾವುದೇ ಮಾತುಕತೆ ನಡೆಸುವುದಿಲ್ಲ.ಪರಿಶಿಷ್ಟ ಜಾತಿಗಳ ಗಣತಿ ನಡೆಸಬೇಕು ಎಂಬ ವಿಷಯದ ಕುರಿತಂತೆ ಚರ್ಚಿಸಿ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಜಾತಿವಾರು ಜನಗಣತಿ ವರದಿ ಜಾರಿಗೆ ಮೊದಲು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯವನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಜನಗಣತಿ ವರದಿ ಬಿಡುಗಡೆ ಮಾಡದಿರಲು ಭಾನುವಾರ ಸಂಜೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ ಒಳ ಮೀಸಲಾತಿ ಜಾರಿ ಕುರಿತು ಪರಿಶಿಷ್ಟ ಜಾತಿಯ ಸಚಿವರು, ಶಾಸಕರು ಸಭೆ ಆಯೋಜಿಸಿರುವುದು ಮಹತ್ವ ಪಡೆದುಕೊಂಡಿದೆ.