Save Lalbagh| ಸುರಂಗ ರಸ್ತೆ ವಿರೋಧಿಸಿ ನ.2ರಂದು ಬಿಜೆಪಿ ಪ್ರತಿಭಟನೆ

ನಗರದ ಸುರಂಗ ರಸ್ತೆ ಯೋಜನೆಯ ಹೆಸರು ಕೇಳಿದರೆ ಜನರು ಭೀತಿಗೊಳ್ಳುತ್ತಿದ್ದಾರೆ. ಎಲ್ಲಿ ಯಾರ ಮನೆ ಹೋಗಲಿದೆ ಎಂದು ತಿಳಿಯುತ್ತಿಲ್ಲ. ಲಾಲ್‌ಬಾಗ್‌ನಲ್ಲಿ 6 ಎಕರೆ ಜಮೀನು ಕಬಳಿಕೆ ಮಾಡಿ ಯೋಜನೆ ಮಾಡಲಾಗುತ್ತಿದೆ ಎಂದು ಆರ್‌.ಅಶೋಕ್‌ ತಿಳಿಸಿದರು.

Update: 2025-10-30 18:35 GMT

ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌

Click the Play button to listen to article

ಬೆಂಗಳೂರಿನ ಸಂಚಾರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿದೆ. ಆದರೆ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆಗೆ ವಿರೋಧ ಪಕ್ಷಗಳು, ಪರಿಸರವಾದಿಗಳು ಸೇರಿದಂತೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದರ ಭಾಗವಾಗಿ ಬಿಜೆಪಿ ನ.2ರಂದು ಪ್ರತಿಭಟನೆ ನಡೆಸಲು ಉದ್ದೇಶಿಸಿದೆ.

ಈ ಕುರಿತು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಮಾಧ್ಯಮಗಳೊಂದಿಗೆ ಮಾತನಾಡಿ, "ನಗರದ ಸುರಂಗ ರಸ್ತೆ ಯೋಜನೆಯ ಹೆಸರು ಕೇಳಿದರೆ ಜನರು ಭೀತಿಗೊಳ್ಳುತ್ತಿದ್ದಾರೆ. ಎಲ್ಲಿ ಯಾರ ಮನೆ ಹೋಗಲಿದೆ ಎಂದು ತಿಳಿಯುತ್ತಿಲ್ಲ. ಲಾಲ್‌ಬಾಗ್‌ನಲ್ಲಿ 6 ಎಕರೆ ಜಮೀನು ಕಬಳಿಕೆ ಮಾಡಿ ಯೋಜನೆ ಮಾಡಲಾಗುತ್ತದೆ. ಇದಕ್ಕೆ ಯಾವ ಇಲಾಖೆಯೂ ಅನುಮತಿ ನೀಡಿಲ್ಲ. ಬಿಹಾರ ಚುನಾವಣೆ ಬಂದಿರುವುದರಿಂದ ಹಣ ಮಾಡಲು ಈ ಯೋಜನೆ ಜಾರಿ ಮಾಡುತ್ತಿರಬಹುದು. ಲಾಲ್‌ಬಾಗ್‌ ಉಳಿಸಿ, ಬೆಂಗಳೂರು ರಕ್ಷಿಸಿ ಎಂಬ ಘೋಷಣೆಯಡಿ ನ. 2 ರಂದು ಬೆಳಗ್ಗೆ 8ಗಂಟೆಗೆ ಲಾಲ್‌ಬಾಗ್‌ನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಗುವುದು" ಎಂದರು.

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಎಲ್ಲ ಶಾಸಕರು ಸಭೆ ಸೇರಿ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಹೋರಾಟ ಮಾಡಲಾಗುವುದು. ಬಿಜೆಪಿ ಅವಧಿಯಲ್ಲಿ ರಸ್ತೆ ದುರಸ್ತಿಗೆ 8,000 ಕೋಟಿ ರೂ. ನೀಡಲಾಗಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಡಾಂಬರೀಕರಣ ಬಿಟ್ಟು ಹೊಸದಾಗಿ ರಸ್ತೆ ನಿರ್ಮಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಒಮ್ಮೊಮ್ಮೆ ಒಂದೊಂದು ರೀತಿಯ ಅನುದಾನದ ಬಗ್ಗೆ ಹೇಳುತ್ತಿದ್ದಾರೆ.  ಡಿಸಿಎಂ ಡಿ.ಕೆ.ಶಿವಕುಮಾರ್‌ ಕಾಟಾಚಾರಕ್ಕೆ ಬ್ರ್ಯಾಂಡ್‌ ಬೆಂಗಳೂರಿನ ಘೋಷಣೆ ಮಾಡಿದ್ದಾರೆ. ಅಧಿಕಾರಿಗಳಂತೂ ಇವರ ಮಾತನ್ನು ಕೇಳುತ್ತಿಲ್ಲ ಎಂದು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ ಅವರನ್ನು ಅವಹೇಳನ ಮಾಡುವುದು ತಪ್ಪು. ಇದು ಒಂದು ಲೋಕಸಭಾ ಕ್ಷೇತ್ರಕ್ಕೆ ಮಾಡುವ ಅಪಮಾನ. ಸಿಎಂ ಹಾಗೂ ಡಿಸಿಎಂ ಗೌರವ ಕೊಟ್ಟು ಮಾತಾಡುವುದನ್ನು ಕಲಿಯಲಿ ಎಂದರು.

ಧರ್ಮಸ್ಥಳ ಕುರಿತು ಅಪಪ್ರಚಾರ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿರುವುದು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಅಪಪ್ರಚಾರ ಮಾಡಿರುವವರಿಗೆ ಶಿಕ್ಷೆಯಾಗಬೇಕು. ಅದಕ್ಕಾಗಿ ಸರ್ಕಾರ ಸೂಕ್ತ ಕ್ರಮ ವಹಿಸಬೇಕಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಈ ಬಗ್ಗೆ ಮಾಧ್ಯಮಗಳ ಮುಂದೆ ಪ್ರಶ್ನೆ ಕೇಳುವ ಬದಲು, ಸಚಿವ ಸಂಪುಟದಲ್ಲೇ ಪ್ರಶ್ನೆ ಕೇಳಬೇಕಿತ್ತು. ಎಸ್‌ಐಟಿ ರಚಿಸುವುದನ್ನು ಅವರು ಮೊದಲೇ ತಡೆಯಬಹುದಿತ್ತು ಎಂದರು.

ಅಭಿವೃದ್ಧಿ ಶುಲ್ಕ ಏರಿಕೆ

ನಿವೇಶನಗಳಿಗೆ  ಖಾತಾ ಮಾಡಲು ದುಬಾರಿ ಹಣ  ವಸೂಲಿ ಮಾಡಲಾಗುತ್ತಿದೆ. ಒಸಿ, ಸಿಸಿಗೆ ಕಮಿಶನ್‌ ನಿಗದಿಯಾಗಿದೆ. ಯಾರೂ ಮನೆ ಕಟ್ಟಲು ಸಾಧ್ಯವಿಲ್ಲ. ಅಭಿವೃದ್ಧಿ ಶುಲ್ಕವನ್ನು 5 ಲಕ್ಷ ರೂ. ಗೆ ಏರಿಸಲಾಗಿದೆ. ಕರ್ನಾಟಕವೆಂದರೆ ಕಲೆಕ್ಷನ್‌ ಸೆಂಟರ್‌ ಆಗಿದೆ ಎಂದು ಆರೋಪಿಸಿದರು.

ನಾಯಕರನ್ನು ಮೆಚ್ಚಿಸಲು ವಯನಾಡು ಜಾಹೀರಾತು

ಕಾಂಗ್ರೆಸ್‌ ಸರ್ಕಾರ ವಯನಾಡಿನಲ್ಲಿದೆ. ಹಿಂದೆ ಆನೆಯಿಂದ ಸತ್ತಿದ್ದಕ್ಕೆ ಪರಿಹಾರ ಕೊಟ್ಟಿದ್ದರು. ಈಗ ವಯನಾಡಿನಲ್ಲಿ ಪ್ರವಾಸ ಮಾಡಿ ಎಂದು ಜಾಹೀರಾತು ನೀಡುತ್ತಿದ್ದಾರೆ. ಅಲ್ಲಿ ಕರ್ನಾಟಕದ ಯಾವುದೇ ಸ್ಥಳ ಇಲ್ಲ. ಜೋಗ, ಹಂಪಿ, ಕೊಡಗು, ಗೋಕರ್ಣದಲ್ಲಿರುವಂತಹ ಸ್ಥಳ ವಯನಾಡಿನಲ್ಲಿ ಇಲ್ಲ. ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಅವರ ಫ್ಲೆಕ್ಸ್‌ ನೋಡಲು ಜನರು ಅಲ್ಲಿಗೆ ಪ್ರವಾಸ ಹೋಗಬೇಕಿದೆ. ಮೈಸೂರು ಅರಮನೆ ಬಗ್ಗೆ ಪ್ರಚಾರ ಮಾಡುವುದನ್ನು ಬಿಟ್ಟು ವಯನಾಡಿನ ರಾಹುಲ್‌ ಗಾಂಧಿ ಅರಮನೆ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Tags:    

Similar News