ಮೈಸೂರು ರೇಷ್ಮೆ ಸೀರೆಗೆ ನಾರಿಯರ ಪರದಾಟ; ಪೂರೈಕೆ ಕಡಿಮೆಯಾಗಿರುವುದೇಕೆ?
x

ಮೈಸೂರು ಸೀರೆ

ಮೈಸೂರು ರೇಷ್ಮೆ ಸೀರೆಗೆ ನಾರಿಯರ ಪರದಾಟ; ಪೂರೈಕೆ ಕಡಿಮೆಯಾಗಿರುವುದೇಕೆ?

ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮವು (KSIC) ರಾಜ್ಯದ ವಿವಿಧ ಜಿಲ್ಲೆ, ತೆಲಂಗಾಣದ ಹೈದರಾಬಾದ್ ಸೇರಿ 16 ಕಡೆ ಶೋ ರೂಂಗಳನ್ನು ನಿರ್ವಹಿಸುತ್ತಿದೆ. ಆನ್‌ಲೈನ್‌ ಮಾರಾಟ ಮತ್ತು ಪ್ರದರ್ಶನದ ಮೂಲಕವೂ ಸೀರೆ ಮಾರಾಟ ಮಾಡುತ್ತಿದೆ.


Click the Play button to hear this message in audio format

ದೀಪಗಳ ಬೆಳಕಿನಲ್ಲಿ ರೇಷ್ಮೆಯಂತೆ ಕಂಗೊಳಿಸಬೇಕೆಂಬ ಮಾನಿನಿಯರ ಮಹದಾಸೆಗೆ ದೀಪಾವಳಿ ಸಂಭ್ರಮ ನಿರಾಸೆ ಮೂಡಿಸಿದೆ. ವರಲಕ್ಷ್ಮಿಯಿಂದ ದೀಪಾವಳಿ ಹಬ್ಬದ ಅವಧಿಯಲ್ಲಿ ಹೊಸ ವಿನ್ಯಾಸ, ತರಹೇವಾರಿ ಜರಿಯ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಮೈಸೂರು ರೇಷ್ಮೆ ಸೀರೆಯನ್ನು ಒಮ್ಮೆಯಾದರೂ ಉಡಬೇಕೆಂಬ ಕನಸು ಹೊತ್ತವರಿಗೆ ನಿರಾಸೆಯೂ ಎದುರಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೈಸೂರು ರೇಷ್ಮೆ ಸೀರೆ ಪೂರೈಕೆ ಮಾಡುವುದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮಕ್ಕೆ (ಕೆಎಸ್‌ಐಸಿ) ಸಾಧ್ಯವಾಗುತ್ತಿಲ್ಲ.

ಕ್ಷೀಣಿಸಿದ ಕಚ್ಚಾವಸ್ತುಗಳ ಪೂರೈಕೆ, ಕುಶಲ ಕರ್ಮಿಗಳ ಅಲಭ್ಯತೆಯಿಂದ ಮೈಸೂರು ರೇಷ್ಮೆ ಸೀರೆ ತಯಾರಿಕೆಯು ಸಮರ್ಪಕವಾಗಿಲ್ಲ. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಪ್ರತಿ ಬುಧವಾರ ಹಾಗೂ ಶುಕ್ರವಾರ ಹೊಸ ವಿನ್ಯಾಸದ ಸೀರೆಗಳನ್ನು ಮಾರಾಟ ಮಳಿಗೆಗಳಿಗೆ ಪೂರೈಸಲಿದೆ. ಆದರೆ, ಹೊಸ ಸೀರೆ ಬಂದ ಕೆಲ ಗಂಟೆಗಳಲ್ಲೇ ಮಾರಾಟವಾಗಿರುತ್ತದೆ. ಕೊಂಚ ವಿಳಂಬವಾಗಿ ಬಂದವರಿಗೆ ಮೈಸೂರು ರೇಷ್ಮೆ ಸೀರೆ ಕನಸಾಗಿಯೇ ಉಳಿಯಲಿದೆ.

ಭೌಗೋಳಿಕ ಮಾನ್ಯತೆ(ಜಿಐ) ಪಡೆದಿರುವ ಮೈಸೂರು ರೇಷ್ಮೆ ಸೀರೆ ಹಲವು ಅಡೆತಡೆಗಳ ನಡುವೆಯೂ ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ತನ್ನ ಸಾಂಪ್ರದಾಯಿಕ ವಿನ್ಯಾಸ, ಮೃದುತ್ವ ಹಾಗೂ ಗುಣಮಟ್ಟದಿಂದ ಮಹಿಳೆಯರನ್ನು ಮೋಹಗೊಳಿಸುತ್ತಿದೆ. ಶತಮಾನದ ಇತಿಹಾಸದ ಹೆಗ್ಗುರುತಾಗಿರುವ ಮೈಸೂರು ರೇಷ್ಮೆಗೆ ಟಿಪ್ಪು ಸುಲ್ತಾನ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಐತಿಹ್ಯವಿದೆ. ಇತ್ತೀಚೆಗೆ ಕಾಂಚಿಪುರಂ, ಬನಾರಸ್‌ ಸೀರೆಗಳು ಪೈಫೋಟಿಗೆ ಇಳಿದರೂ ಮೈಸೂರು ರೇಷ್ಮೆ ಸೀರೆಗಳಿಗೆ ಸರಿಸಾಟಿಯಾಗುತ್ತಿಲ್ಲ. ಹಾಗಾಗಿ ಇಂದಿಗೂ ತನ್ನ ಮೈಸೂರು ರೇಷ್ಮೆ ಸೀರೆ ವರ್ಚಸ್ಸು ಉಳಿಸಿಕೊಂಡಿದೆ.

ಚಿನ್ನ ಹಾಗೂ ಬೆಳ್ಳಿಯ ಜರಿ ಹಾಗೂ ಶುದ್ಧ ರೇಷ್ಮೆಯಿಂದಲೇ ತಯಾರಾಗುವ ಮೈಸೂರು ರೇಷ್ಮೆಯು ಸಾಂಪ್ರದಾಯಿಕವಾಗಿ ವೈಭವದ ವಸ್ತ್ರವಾಗಿದೆ. ವಿಪರ್ಯಾಸವೆಂದರೆ ಇಂದು ಮೈಸೂರು ರೇಷ್ಮೆ ಸೀರೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮವು (KSIC) ರಾಜ್ಯದ ವಿವಿಧೆಡೆ, ತೆಲಂಗಾಣದ ಹೈದರಾಬಾದ್ ಸೇರಿ 16 ಕಡೆ ಶೋ ರೂಂ ನಿರ್ವಹಿಸುತ್ತಿದೆ.

ಮೈಸೂರು ರೇಷ್ಮೆ ಇತಿಹಾಸ

ಮೈಸೂರು ರೇಷ್ಮೆ ಇತಿಹಾಸವು 1790ರ ಟಿಪ್ಪು ಸುಲ್ತಾನನ ಆಳ್ವಿಕೆವರೆಗೂ ಸಾಗಲಿದೆ. ಅಂದು ಆಡಳಿತಗಾರರು ನೀಡಿದ ರೇಷ್ಮೆ ಉಡುಗೊರೆಯಿಂದ ಪ್ರಭಾವಿತರಾದ ಟಿಪ್ಪು ಸುಲ್ತಾನ್, ಸ್ಥಳೀಯವಾಗಿ ರೇಷ್ಮೆ ಉತ್ಪಾದನೆಗೆ ಮುಂದಾದರು. ರೇಷ್ಮೆ ಹುಳು ತರುವುದಕ್ಕಾಗಿಯೇ ಬಂಗಾಳ ಮತ್ತು ಚೀನಾಗೆ ರಾಯಭಾರಿಗಳನ್ನು ಕಳುಹಿಸಿದ್ದು ಮಾತ್ರವಲ್ಲದೆ, ಚಾಕಿ ಹುಳು ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಿ ರೇಷ್ಮೆ ಉದ್ಯಮಕ್ಕೆ ಭದ್ರ ಬುನಾದಿ ಹಾಕಿದರು.

19ನೇ ಶತಮಾನದ ಆರಂಭದಲ್ಲಿ ಉದ್ಯಮವು ಕುಸಿತ ಕಂಡಾಗ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಪರಂಪರೆ ಉಳಿಸುವ ದೃಢ ಸಂಕಲ್ಪ ಮಾಡಿದರು. ಬ್ರಿಟನ್ನಲ್ಲಿ ಯಂತ್ರದಿಂದ ತಯಾರಾದ ರೇಷ್ಮೆಯನ್ನು ಗಮನಿಸಿ ತಕ್ಷಣವೇ ಸ್ವಿಟ್ಜರ್‌ಲೆಂಡ್‌ನಿಂದ 32 ವಿದ್ಯುತ್ ಮಗ್ಗಗಳ ಖರೀದಿಗೆ ಆದೇಶಿಸಿದರು. ಇದರ ಪರಿಣಾಮ 1912ರಲ್ಲಿ ಮೈಸೂರಿನಲ್ಲಿ ರೇಷ್ಮೆ ಉತ್ಪಾದನಾ ಕಾರ್ಖಾನೆ ಸ್ಥಾಪಿಸಿದರು.

ಸ್ವಾತಂತ್ರ್ಯಾ ನಂತರ ರೇಷ್ಮೆ ಕಾರ್ಖಾನೆ ಅಧಿಕಾರವನ್ನು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆಗೆ ಹಸ್ತಾಂತರಿಸಲಾಯಿತು. 1980 ರಿಂದ ಸರ್ಕಾರಿ ಒಡೆತನದ ಕೆಎಸ್ಐಸಿ (KSIC) ಈ ಕಾರ್ಖಾನೆಯನ್ನು ನಿರ್ವಹಿಸುತ್ತಿದೆ. ಕೆಎಸ್ಐಸಿ ಇಂದು 300 ಕ್ಕೂ ಹೆಚ್ಚು ಬಣ್ಣಗಳು ಮತ್ತು 115 ವಿನ್ಯಾಸಗಳಲ್ಲಿ ರೇಷ್ಮೆ ಉತ್ಪಾದಿಸುವ ಏಕೈಕ ಸಂಸ್ಥೆಯಾಗಿದೆ.

ಮೈಸೂರು ರೇಷ್ಮೆ ಸೀರೆ ತಯಾರಿಕೆ ಹೇಗೆ?

ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದಲ್ಲಿ (KSIC) ತಯಾರಾಗುವ ಮೈಸೂರು ರೇಷ್ಮೆ ಸೀರೆಗಳ ತಯಾರಿಕೆಯು ಕೇವಲ ಒಂದು ಉತ್ಪಾದನಾ ಕಾರ್ಯವಲ್ಲ, ಅದೊಂದು ಕಲಾತ್ಮಕ ಪಯಣ. ರಾಮನಗರ ಹಾಗೂ ಶಿಡ್ಲಘಟ್ಟ ಗೂಡು ಮಾರುಕಟ್ಟೆಯಿಂದ ಉತ್ತಮ ಗುಣಮಟ್ಟದ ರೇಷ್ಮೆ ಗೂಡು ಸಂಗ್ರಹಿಸಲಾಗುತ್ತದೆ. ಈ ಗೂಡುಗಳನ್ನು ಮೈಸೂರಿನ ಟಿ.ನರಸೀಪುರದ ಕಾರ್ಖಾನೆಯಲ್ಲಿ ಸಂಸ್ಕರಿಸಿ, ನೂಲು ತಯಾರಿಸಲಾಗುತ್ತದೆ. ಬಳಿಕ ಅದನ್ನು ರೋಲ್ಗಳಲ್ಲಿ ಮೈಸೂರಿನ ಮುಖ್ಯ ಕಾರ್ಖಾನೆಗೆ ಕಳುಹಿಸಲಾಗುತ್ತದೆ.

ಇಲ್ಲಿ ನುರಿತ ಕುಶಲಕರ್ಮಿಗಳು 'ಡಾಬಿ' ಅಥವಾ 'ಜಾಕ್ವಾರ್ಡ್' ಮಾದರಿಯ ವಿದ್ಯುತ್ ಮಗ್ಗಗಳ ಸಹಾಯದಿಂದ ನಿಖರವಾದ ವಿನ್ಯಾಸಗಳೊಂದಿಗೆ ಸೀರೆಯನ್ನು ನೇಯುತ್ತಾರೆ. ನೇಯ್ಗೆಯ ನಂತರ ಸೀರೆಯನ್ನು 'ಡಿಗಮ್ಮಿಂಗ್' ಪ್ರಕ್ರಿಯೆಗೆ ಒಳಪಡಿಸಿ ನಯಗೊಳಿಸಿ, ನಂತರ `ವಿಂಚ್' ಯಂತ್ರದ ಮೂಲಕ ಆಕರ್ಷಕ ಬಣ್ಣಗಳನ್ನು ಲೇಪಿಸಲಾಗುತ್ತದೆ. ಅಂತಿಮವಾಗಿ, ಸೀರೆಯನ್ನು ಉಗಿ ಇಸ್ತ್ರಿ (ಸ್ಟೆಂಟರಿಂಗ್) ಮಾಡಿ, ಪ್ರತಿ ಸೀರೆಗೆ KSIC ಯ ಟ್ರೇಡ್ ಮಾರ್ಕ್ ಕಸೂತಿ ಮಾಡಲಾಗುತ್ತದೆ. ಇದರಿಂದ ನಕಲಿ ಸೀರೆಗಳ ತಯಾರಿ ತಡೆಯಬಹುದಾಗಿದೆ.

ಭೌಗೋಳಿಕತೆ ಮತ್ತು ಮಾರುಕಟ್ಟೆ ವ್ಯಾಪ್ತಿ

ಮೈಸೂರು ರೇಷ್ಮೆ ಉತ್ಪಾದನೆಯು ಕರ್ನಾಟಕದ ಭೌಗೋಳಿಕತೆಯಲ್ಲಿ ವಿಶೇಷವಾಗಿ ಮೈಸೂರು, ರಾಮನಗರ ಮತ್ತು ಬೆಂಗಳೂರಿನಲ್ಲಿ ಆಳವಾಗಿ ಬೇರೂರಿದೆ. ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಎಂದು ಕರೆಯಲ್ಪಡುವ ರಾಮನಗರವು ರೇಷ್ಮೆ ಸರಬರಾಜು ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೈಸೂರು ರೇಷ್ಮೆ ಸೀರೆಗಳಿಗೆ ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. ಈ ಪ್ರದೇಶದ ಹವಾಮಾನ ಮತ್ತು ಮಣ್ಣಿನ ಗುಣವು ಮಲ್ಬೆರಿ ರೇಷ್ಮೆ ಕೃಷಿ ಪೂರಕವಾಗಿದೆ. ಮೈಸೂರು ರೇಷ್ಮೆಯ ಮಾರುಕಟ್ಟೆ ವೈವಿಧ್ಯಮಯವಾಗಿದ್ದು, ಸಾಂಪ್ರದಾಯಿಕ ಮತ್ತು ಸಮಕಾಲೀನ ಬೇಡಿಕೆಗಳನ್ನು ಪೂರೈಸುತ್ತದೆ.

ಕಚ್ಚಾ ವಸ್ತುಗಳ ಖರೀದಿ

ರೇಷ್ಮೆ ನೇಯ್ಗೆ ಮತ್ತು ರೇಷ್ಮೆ ಉತ್ಪನ್ನಗಳ ವಿತರಣೆ ಜವಾಬ್ದಾರಿಯು ಮೈಸೂರು ರೇಷ್ಮೆ ಕಾರ್ಖಾನೆ ಹೊತ್ತುಕೊಂಡಿದೆ. ರಾಮನಗರ ಜಿಲ್ಲೆಯಿಂದ ಈ ಕಾರ್ಖಾನೆಗೆ ರೇಷ್ಮೆ ಪೂರೈಕೆಯಾಗಲಿದೆ. ಇದು ರೇಷ್ಮೆ ಗೂಡುಗಳಿಗೆ ಏಷ್ಯಾದ ಅತಿದೊಡ್ಡ ಮಾರುಕಟ್ಟೆ ಎಂದೂ ಪರಿಗಣಿಸಲಾಗಿದೆ. ಪ್ರತಿದಿನ, ಈ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ತಮ್ಮ ರೇಷ್ಮೆ ಗೂಡುಗಳನ್ನು ಮಾರಾಟ ಮಾಡುತ್ತಾರೆ.

ಮೈಸೂರು ರೇಷ್ಮೆಯಲ್ಲಿ ಪರಿಣತಿ ಹೊಂದಿರುವ ಕೆಎಸ್ಐಸಿ ಅಧಿಕಾರಿಗಳು ಸರ್ಕಾರಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ರೇಷ್ಮೆ ಗೂಡುಗಳನ್ನು ಖರೀದಿಸುತ್ತಾರೆ. ನಂತರ ಇವುಗಳನ್ನು ಟಿ.ನರಸೀಪುರಕ್ಕೆ ಕೊಂಡೊಯ್ದು ನೂಲು ಬಿಚ್ಚಣಿಕೆ ನಡೆಯುತ್ತದೆ ಎಂದು ಕೆಎಸ್‌ಐಸಿನ ಅಧಿಕಾರಿಯೊಬ್ಬರು `ದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ರೇಷ್ಮೆ ಬೆಳೆಗಾರ ಬಸವರಾಜು ʻದ ಫೆಡರಲ್‌ ಕರ್ನಾಟಕʼ ಜತೆ ಮಾತನಾಡಿ, ಈ ಹಿಂದೆ ರೇಷ್ಮೆಗೆ ಬೆಲೆ ಕಡಿಮೆ ಇದ್ದರೂ ಒಂದು ಕೆ.ಜಿ ರೇಷ್ಮೆಗೆ 700 ರೂ. ಬೆಲೆ ಇದೆ. ರೇಷ್ಮೆ ಹುಳುವಿನ ಸರಿಯಾದ ಪ್ರಮಾಣದಲ್ಲಿ ತಾಪಮಾನದಲ್ಲಿ ಇಡಬೇಕಾಗುತ್ತದೆ. ಇದು ಸವಾಲಿನ ಕೆಲಸ. ಮಳೆ, ಚಳಿಗೆ ಬಹಳಷ್ಟು ನಾಜೂಕಾಗಿ ಇದನ್ನು ನಿಭಾಯಿಸಬೇಕು. ರೇಷ್ಮೆ ಗೂಡು ಸಂಪೂರ್ಣವಾಗಿ ಕೃಷಿ ಬಂದಾಗ ನಾವು ಅದನ್ನು ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಗೆ ಮಾರಾಟ ಮಾಡುತ್ತೇವೆ. ಅಲ್ಲಿ ಹರಾಜು ಪ್ರಕ್ರಿಯೆ ಮೂಲಕ ಗೂಡುಗಳ ಮಾರಾಟ ನಡೆಯುತ್ತದೆ ಎಂದು ಅವರು ತಿಳಿಸಿದರು.

ಕುಶಲಕರ್ಮಿ ವಿಭಾಗ ಮತ್ತು ಪರಿಣತಿ

ಮೈಸೂರು ರೇಷ್ಮೆಯು ತಲೆಮಾರುಗಳಿಂದ ಬಂದ ಪರಂಪರೆಯ ಕೌಶಲ್ಯವನ್ನು ಹೊಂದಿರುವ ಕುಶಲಕರ್ಮಿಗಳ ಕೈಚಳಕವನ್ನು ಅವಲಂಬಿಸಿದೆ. ಭಾರತದ ಅತ್ಯಂತ ಹಳೆಯ ರೇಷ್ಮೆ ಕುಶಲಕರ್ಮಿಗಳೆಂದು ಪರಿಗಣಿಸುವ ಈ ನೇಕಾರರು, ಸೀರೆಗಳನ್ನು ಸೂಕ್ಷ್ಮವಾಗಿ ರಚಿಸುತ್ತಾರೆ.

ಈ ನೇಯ್ಗೆ ಪ್ರಕ್ರಿಯೆಯಲ್ಲಿ ವಾರ್ಪ್ಗೆ (warp) 26/28 ಡೆನಿಯರ್ ತಿರುಚದ ಕಚ್ಚಾ ರೇಷ್ಮೆ ನೂಲು ಮತ್ತು ನೇಯ್ಗೆಗೆ ಎರಡು ಪದರದ ತಿರುಚದ ನೂಲನ್ನು ಬಳಸಲಾಗುತ್ತದೆ. ಮೈಸೂರು ರೇಷ್ಮೆ ಸೀರೆಗಳಲ್ಲಿ ಉಪಯೋಗಿಸುವ ಸೊಗಸಾದ ಜರಿಯು ಶೇ 65 ರಷ್ಟು ಶುದ್ಧ ಬೆಳ್ಳಿ ಮತ್ತು ಶೇ 0.65 ರಷ್ಟು ಚಿನ್ನ ಒಳಗೊಂಡಿರುತ್ತದೆ. ಇದು ಸೀರೆಗೆ ಸಾಟಿಯಿಲ್ಲದ ಹೊಳಪು ಮತ್ತು ದೀರ್ಘಾಯುಷ್ಯ ರೂಪಿಸುತ್ತದೆ.

ರೇಷ್ಮೆ ಹುಳು ಸಾಕುವುದರಿಂದ ಹಿಡಿದು ನೈಸರ್ಗಿಕ ಬಣ್ಣಗಳಲ್ಲಿ ರೇಷ್ಮೆಗೆ ಬಣ್ಣ ಹಾಕುವುದು ಮತ್ತು ಸಂಕೀರ್ಣ ವಿನ್ಯಾಸಗಳನ್ನು ನೇಯ್ಗೆ ಮಾಡುವವರೆಗೆ ಕುಶಲಕರ್ಮಿಗಳು ಒಂದು ಕಠಿಣ ಉತ್ಪಾದನಾ ಪ್ರಕ್ರಿಯೆ ಅನುಸರಿಸುತ್ತಾರೆ. ಈ ಪರಿಣತಿಯು ಪ್ರತಿಯೊಂದು ಮೈಸೂರು ರೇಷ್ಮೆ ಸೀರೆಯಲ್ಲಿ ಕರ್ನಾಟಕದ ರೇಷ್ಮೆ ಉದ್ಯಮದ ಪರಂಪರೆ ಮತ್ತು ಭವ್ಯತೆ ಪ್ರತಿಬಿಂಬಿಸುತ್ತದೆ.

ಸೀರೆ ನೇಯ್ಗೆಗೆ ಬೇಕಾಗುವ ಸಮಯ

ಮೈಸೂರು ಸಿಲ್ಕ್ ಸೀರೆಯನ್ನು ಹೆಣೆಯಲು ಸಾಮಾನ್ಯವಾಗಿ ವಿದ್ಯುತ್ ಮಗ್ಗಗಳಲ್ಲಿಸುಮಾರು 4 ಗಂಟೆಗಳ ಸಮಯ ಬೇಕಾಗುತ್ತದೆ. ಇದರಲ್ಲಿ ನೇಯ್ಗೆಯ ಪೂರ್ವ ತಯಾರಿ, ನೂಲು ತೆಗೆಯುವುದು, ಬಣ್ಣ ಹಾಕುವುದು, ಮತ್ತು ಸೀರೆಯನ್ನು ನುಣುಪಾಗಿಸಲು ನೀರು-ಸೋಡಾದಲ್ಲಿ ನೆನೆಸುವುದು ಮುಂತಾದ ಎಲ್ಲಾ ಪ್ರಕ್ರಿಯೆಗಳನ್ನು ಸೇರಿಸಿದರೆ, ಒಂದು ಸೀರೆಯನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಬೇಕಾಗುವ ಒಟ್ಟು ಸಮಯ ಹೆಚ್ಚು ಇರುತ್ತದೆ. ಆದರೂ, ಮಗ್ಗದ ಮೇಲೆ ಸೀರೆಯನ್ನು ನೇಯಲು ಮಾತ್ರ ಸುಮಾರು 4 ಗಂಟೆ ಬೇಕಾಗುತ್ತದೆ. ಸೀರೆಯಲ್ಲಿರುವ ವಿನ್ಯಾಸ ಮತ್ತು ಜರಿಯ ಕೆಲಸದ ಸಂಕೀರ್ಣತೆಯನ್ನು ಅವಲಂಬಿಸಿ ಸಮಯವು ಬದಲಾಗಬಹುದು. ಕೈಮಗ್ಗಗಳಲ್ಲಿ ನೇಯ್ಗೆ ಮಾಡಿದರೆ ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಕಾಟನ್ ಸೀರೆಗಳನ್ನು ನೇಯ್ಗೆ ಮಾಡಬೇಕಾದರೆ ಕನಿಷ್ಟ ನಾಲ್ಕು ಗಂಟೆ ಸಮಯ ಬೇಕಾಗುತ್ತದೆ ಎಂದು ನೇಕಾರ ಗಂಗಾಧರ್ ʻದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಸೀರೆಗಳ ಬೇಡಿಕೆ ಹೆಚ್ಚಾಗಲು ಕಾರಣವೇನು?

ಆಗಸ್ಟ್‌ನಲ್ಲಿ ಆರಂಭವಾಗುವ ವರಲಕ್ಷ್ಮೀ ಹಬ್ಬದಿಂದ ದೀಪಾವಳಿ ಹಬ್ಬದವರೆಗೆ ಸಾಲು ಸಾಲು ಹಬ್ಬಗಳು ಬರುತ್ತವೆ. ಈ ಸಮಯದಲ್ಲಿ ಮಹಿಳೆಯರು ಸೀರೆ ಖರೀದಿಗೆ ಮುಂದಾಗುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮೈಸೂರು ರೇಷ್ಮೆ ಸೀರೆಗಳಿಗಾಗಿ ಕಾದು ನಿಂತರೂ ಸೀರೆಗಳು ಲಭ್ಯವಾಗುತ್ತಿಲ್ಲ.

ಮೈಸೂರು ಸಿಲ್ಕ್ ಸೀರೆಗಳಿಗೆ ಬೇಡಿಕೆ ಹೆಚ್ಚಳದ ಕುರಿತು ʻದ ಫೆಡರಲ್ ಕರ್ನಾಟಕ ʼದ ಜತೆ ಮಾತನಾಡಿದ ಕೆಎಸ್ಐಸಿ ವ್ಯವಸ್ಥಾಪಕ ನಿರ್ದೇಶಕಿ ಜೆಹೆರಾ ನಸೀಮ್ ಅವರು, ಮೈಸೂರು ಸೀರೆಗಳಿಗೆ ಯಾವಾಗಲೂ ಬೇಡಿಕೆ ಇದೆ. ಅದಕ್ಕೆ ಕಾರಣ, ಒಂದು ಗುಣಮಟ್ಟದ ಭರವಸೆ. ಎರಡನೆಯದು, ಸೀರೆಯ ಮೃದುತ್ವ. ಈಗ ಪ್ರತಿಯೊಬ್ಬ ಮಹಿಳೆಯೂ ಉದ್ಯೋಗಸ್ಥರು. ಪ್ರತಿಯೊಬ್ಬ ಮಹಿಳೆಗೂ ಹೆಚ್ಚು ಖರೀದಿ ಸಾಮರ್ಥ್ಯ ಇದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ಹೆಚ್ಚು ಸೀರೆಗಳನ್ನು ಖರೀದಿಸಲು ಬಯಸುತ್ತಾರೆ ಎಂದು ಹೇಳಿದರು.

ನಾವು ಇಂದು ಒಬ್ಬೊಬ್ಬ ಮಹಿಳೆಯರನ್ನು ನೋಡಿದರೆ, ಪ್ರತಿಯೊಬ್ಬರ ಬಳಿಯೂ ಎರಡರಿಂದ ಮೂರು ಸೀರೆಗಳು ಇರುತ್ತವೆ. ಹಿಂದೆ, ಪ್ರತಿಯೊಬ್ಬರೂ ಒಂದು ಸೀರೆ ಮಾತ್ರ ಖರೀದಿಸುತ್ತಿದ್ದರು. ಹೀಗಾಗಿ ಈ ಸೀರೆಗಳಿಗೆ ಇಂದು ಬೇಡಿಕೆ ಹೆಚ್ಚಾಗಿದೆ ಎಂದರು.

ಉತ್ಪಾದನಾ ಕೊರತೆಗೆ ಕಾರಣ

ಆಧುನಿಕ ಯುವತಿಯರಿಗೆ ಸರಿಹೊಂದುವಂತೆ ವಿನ್ಯಾಸ, ಮಾದರಿ ಮತ್ತು ಕಲರ್ ಪ್ಯಾಲೆಟ್ ಬದಲಾಯಿಸಿದ್ದೇವೆ. ಸಾಂಪ್ರದಾಯಿಕ ಶೈಲಿಗೆ ಆಧುನಿಕ ಸ್ಪರ್ಶವನ್ನೂ ನೀಡಿದ್ದೇವೆ. ಹಾಗಾಗಿ ಬೇಡಿಕೆ ಹೆಚ್ಚಾಗಿದೆ. ಸೀರೆಗಳ ಉತ್ಪಾದನೆ ಹೆಚ್ಚಿಸಲು, ನಾವು ಎರಡು ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ. ನಮಗೆ ನೇಕಾರರು ಬೇಕು. ನೇಕಾರರಿಗೆ ತರಬೇತಿ ನೀಡಬೇಕೆಂದರೆ, ಮೂರು ವರ್ಷಗಳ ನಂತರ ಅವರು 'ಸಿಂಗಲ್ ರಿಪೀಟ್'ನಿಂದ 'ಡಬಲ್ ರಿಪೀಟ್'ಗೆ ಹೋಗುತ್ತಾರೆ. ಆದ್ದರಿಂದ, ನೇಕಾರರಿಗೆ ತರಬೇತಿ ನೀಡುವುದೇ ದೊಡ್ಡ ಸವಾಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜೆಹೆರಾ ನಸೀಮ್ ಅವರ ಅಭಿಪ್ರಾಯವಾಗಿದೆ.

ನಾವು ಈಗ ನಿಧಾನವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ಮಗ್ಗಗಳನ್ನು ಹೆಚ್ಚಿಸುತ್ತಿದ್ದೇವೆ. ಪ್ರತಿ ವರ್ಷ ನಾವು 30-40 ಮಗ್ಗಗಳನ್ನು ಹೆಚ್ಚಿಸುತ್ತಿದ್ದೇವೆ. ಇದರಿಂದ ನೇಕಾರರಿಗೆ ಕ್ರಮೇಣ ತರಬೇತಿ ನೀಡಲಾಗುತ್ತದೆ. ಈ ಮೊದಲು ನಿಗಮದಲ್ಲಿ 900 ಕಾಯಂ ನೇಕಾರರಿದ್ದರು, ಆದರೆ ಅವರೆಲ್ಲರೂ ನಿವೃತ್ತರಾಗಿದ್ದಾರೆ. ಚಿಕ್ಕ ಬಾರ್ಡರ್ ಸೀರೆಯ ನೇಯ್ಗೆ ಕಲಿಯಲು 6-7 ತಿಂಗಳು ತರಬೇತಿ ಬೇಕಾಗುತ್ತದೆ. 30-40 ವರ್ಷಗಳ ಅನುಭವ ಇರುವ ನೇಕಾರರ ಕೊರತೆಯಿಂದ ಉತ್ಪಾದನೆ ಕಡಿಮೆಯಾಗುತ್ತಿದೆ.

ನಾವು ಈ ಸೀರೆಗಳಿಗೆ ಹೆಗ್ಗುರುತು ಮಾಡಿದ್ದೇವೆ, ಮತ್ತು ಅದನ್ನು ಹಾಳು ಮಾಡಲು ನಮಗೆ ಇಷ್ಟವಿಲ್ಲ. ಒಂದೆರಡು ಸೀರೆಗಳಲ್ಲಿ ದೋಷ ಇದ್ದರೆ, ಯಾರಾದರೂ ಬಂದು ನಮ್ಮ ಉತ್ಪನ್ನವನ್ನು ತೆಗೆದುಕೊಳ್ಳುತ್ತಾರೆಯೇ? ನಮ್ಮಲ್ಲಿ ವಿನ್ಯಾಸಕರು ಇದ್ದಾರೆ. ನಮ್ಮ ಅಂಗಡಿಯಲ್ಲಿ ಹಲವು ವಿನ್ಯಾಸಗಳಿವೆ. ನಾವು ಯಾವುದು ಉತ್ತಮ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಯಾವುದು ಮೈಸೂರಿನ ನೇಯ್ಗೆ ಎಂದು ನಾವು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಇದು 200 ವರ್ಷಗಳ ಹಳೆಯ ಕಂಪನಿ. ನಾವು ಪ್ರತಿ ಕೆಲವು ದಿನಗಳಿಗೊಮ್ಮೆ ಹೊಸ ವಿನ್ಯಾಸಗಳನ್ನು ಸೇರಿಸುತ್ತಲೇ ಇರುತ್ತೇವೆ. ನಾನು ಪ್ರಿಂಟೆಡ್ಗಳನ್ನು ಹೊರತುಪಡಿಸಿ 23 ಹೊಸ ವಿನ್ಯಾಸಗಳನ್ನು ಸೇರಿಸಿದ್ದೇನೆ. ಹಾಗಾಗಿ ಸೀರೆಗಳ ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ತಿಳಿಸಿದರು.

ಸಿಬ್ಬಂದಿ ಕೊರತೆಯಿಂದ ಉತ್ಪಾದನೆ ಕ್ಷೀಣ

ಮೈಸೂರಿನ ಹೃದಯ ಭಾಗದ ಮಾನಂದವಾಡಿಯಲ್ಲಿ ನೇಯ್ಗೆ ಕಾರ್ಖಾನೆಯಿದೆ. ಟಿ ನರಸೀಪುರದಲ್ಲಿನೂಲು ತೆಗೆಯುವ ಘಟಕ, ಚನ್ನಪಟ್ಟಣದಲ್ಲಿಜೂಟು ರೇಷ್ಮೆ ಗಿರಣಿ ಆವರಣದಲ್ಲಿ ಮತ್ತೊಂದು ನೇಯ್ಗೆ ಘಟಕ ಇದೆ. ರಾಜ್ಯ ಹಾಗೂ ಹೊರ ರಾಜ್ಯಗಳ ಮಾರಾಟ ಕೇಂದ್ರದಲ್ಲಿ180 ಮಂದಿ, ಮೈಸೂರಿನ ನೇಯ್ಗೆ ಕೇಂದ್ರದಲ್ಲಿ500, ಟಿ.ನರಸೀಪುರದಲ್ಲಿ200, ಚನ್ನಪಟ್ಟಣದಲ್ಲಿ89 ಮಂದಿ ಕೆಲಸ ಮಾಡುತ್ತಿದ್ದಾರೆ.

ವ್ಯಾಪಕ ಬೇಡಿಕೆ ಇದ್ದಾಗಲೂ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸದಿರುವ ಕಾರಣ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿಲ್ಲ ಎಂಬುದು ಕಟು ಸತ್ಯ. ಕೆಎಸ್ ಐಸಿ ತರಬೇತಿ ಪಡೆದ ನೇಕಾರರಿಂದಷ್ಟೆ ಸೀರೆ ಉತ್ಪಾದಿಸುತ್ತದೆ. ಸಿಬ್ಬಂದಿ ಕೊರತೆಯ ಜತೆಗೆ ಪರಿಣಿತಿ ಪಡೆದ ನೇಕಾರರ ಕೊರತೆಯೂ ಕಾರಣವಾಗಿದೆ. ಹಾಗಾಗಿ ಸೀರೆಗಳ ಪೂರೈಕೆಯಲ್ಲಿ ಸಮಸ್ಯೆ ಕಂಡು ಬರುತ್ತಿದೆ.

ಪ್ರಾರಂಭದಲ್ಲಿ ಶನಿವಾರ ಮಾತ್ರ ಟೋಕನ್ ನೀಡಿ ಸೀರೆಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಇದೀಗ ಶನಿವಾರ ಬದಲಿಗೆ ಬುಧವಾರ ಮತ್ತು ಶುಕ್ರವಾರ ಎರಡು ದಿನಗಳು ಅವಕಾಶ ನೀಡಿದ್ದರೂ ಸೀರೆ ಸಿಗುತ್ತಿಲ್ಲಎಂಬುದು ಗ್ರಾಹಕರ ಆರೋಪ. ಬೆಳಿಗ್ಗೆ ಬಂದು ಸರತಿ ಸಾಲಿನಲ್ಲಿ ನಿಂತರೂ ಸಿಬ್ಬಂದಿ ನೀಡುವ ಸೀಮಿತ ಟೋಕನ್ ಸಿಕ್ಕರೂ ಇಷ್ಟದ ಸೀರೆಗಳು ಸಿಗುತ್ತಿಲ್ಲ ಎ ನಿರಾಸೆ ಹೊರಹಾಕುತ್ತಿದ್ದಾರೆ ಎಂದು ಬೆಂಗಳೂರಿನ ಕೆಎಸ್ಐಸಿನ ಸಿಬ್ಬಂದಿಯೊಬ್ಬರು ʻದ ಫೆಡರಲ್‌ ಕರ್ನಾಟಕ ʼಗೆ ತಿಳಿಸಿದರು.

ಮೈಸೂರು ರೇಷ್ಮೆ ಸೀರೆ ಬೆಲೆ ಮತ್ತು ಮಾರಾಟ

ಮೈಸೂರು ರೇಷ್ಮೆ ಸೀರೆಯ ಬೆಲೆಗಳು 16,000 ರೂ.ನಿಂದ 3ಲಕ್ಷ ರೂ.ಗಳವರೆಗೆ ಇದೆ. ಪ್ರಿಂಟೆಟ್ ಸೀರೆಗಳು 10 ಸಾವಿರ ರೂ.ಗಳಲ್ಲಿ ಲಭ್ಯವಿದೆ. ವರ್ಷದಿಂದ ವರ್ಷಕ್ಕೆ ಸೀರೆಗಳ ಬೇಡಿಕೆ ಹೆಚ್ಚುತ್ತಲೇ ಇದೆ. 2022- 23 ರಲ್ಲಿ ಒಟ್ಟು 98,277 ಸೀರೆಗಳು ಮಾರಾಟವಾಗಿದ್ದು, 240 ಕೋಟಿ ವಹಿವಾಟು ನಡೆದಿದೆ. 2023 -24ರಲ್ಲಿ 1 ಲಕ್ಷ 80 ಸಾವಿರ ಸೀರೆಗಳು ಮಾರಾಟವಾಗಿದ್ದು, 286ಕೋಟಿ ವಹಿವಾಟು ನಡೆದಿದೆ. 2024 – 25ರ ಸಾಲಿನಲ್ಲಿ ಒಟ್ಟು 1ಲಕ್ಷದ 3347 ಸೀರೆಗಳು ಮಾರಾಟವಾಗಿದ್ದು, 332 ಕೋಟಿ ರೂ. ವಹಿವಾಟು ನಡೆದಿದೆ. ಈ ವರ್ಷ ಅಂದಾಜು 1 ಲಕ್ಷ 40 ಸಾವಿರ ಸೀರೆಗಳನ್ನು ತಯಾರಿಸಲಾಗಿತ್ತು.

ರಾಜ್ಯ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (KSIC)ವು ಮೈಸೂರು ಸಿಲ್ಕ್ನ ವಿಶಿಷ್ಟ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸುವಲ್ಲಿ ಮತ್ತು ಹಣಕಾಸು ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಸಾಧನೆ ಮಾಡಿದೆ. ನಿಗಮವು ನಷ್ಟದಿಂದ ಲಾಭದತ್ತ ಸಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಮೈಸೂರು ರೇಷ್ಮೆಗೆ ಮತ್ತಷ್ಟು ಗೌರವ ತಂದುಕೊಟ್ಟಿದೆ.

ಮೈಸೂರು ಸಿಲ್ಕ್‌ಗೆ GI ಮಾನ್ಯತೆ

ಮೈಸೂರು ಸಿಲ್ಕ್ನ ವಿಶಿಷ್ಟತೆ ಮತ್ತು ಗುಣಮಟ್ಟವನ್ನು ರಕ್ಷಿಸುವ ನಿಟ್ಟಿನಲ್ಲಿ KSICಯು ಮೊದಲು ಮಹತ್ವದ ಹೆಜ್ಜೆ ಇಟ್ಟಿತು. ಇದರ ಫಲವಾಗಿ ಮೈಸೂರು ಸಿಲ್ಕ್ಗೆ 2005 ರಲ್ಲಿ ಭೌಗೋಳಿಕ ಸೂಚಕ (GI) ಪ್ರಮಾಣಪತ್ರ ಲಭಿಸಿದೆ. ಈ ಮಾನ್ಯತೆಯಿಂದಾಗಿ ಮೈಸೂರಿನ ಹೊರತಾದ ಯಾವುದೇ ಸಂಸ್ಥೆಯು 'ಮೈಸೂರು ಸಿಲ್ಕ್' ಎಂಬ ಹೆಸರನ್ನು ತಮ್ಮ ಉತ್ಪನ್ನಗಳಿಗೆ ಬಳಸದಂತೆ ಕಾನೂನು ರಕ್ಷಣೆ ದೊರೆತಿದೆ. ಈ ಪ್ರಮಾಣಪತ್ರವು ಮೈಸೂರು ರೇಷ್ಮೆಯನ್ನು ಜಾಗತಿಕ ಬ್ರ್ಯಾಂಡ್ ಆಗಿ ಉನ್ನತೀಕರಿಸಿದೆ.

ಲಾಭದತ್ತ ನಿಗಮದ ಪಯಣ

ಒಂದು ಕಾಲದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಕೆಎಸ್ಐಸಿ, ನಷ್ಟದ ಹಾದಿಯಿಂದ ಸಂಪೂರ್ಣವಾಗಿ ಹೊರಬಂದಿದೆ. 2003-04ರಲ್ಲಿ 1870 ರೂ. ಲಕ್ಷ ನಷ್ಟದಲ್ಲಿದ್ದ ನಿಗಮವು, ಕೇವಲ ಐದು ವರ್ಷಗಳಲ್ಲಿ, ಅಂದರೆ 2008-09ರ ವೇಳೆಗೆ, 733 ರೂ.ಲಕ್ಷಗಳಷ್ಟು ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ನಿಗಮವು 2009ರಲ್ಲಿ ಐಎಂಎಸ್ (IMS) ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಇದು KSICಯ ಸಮಗ್ರ ನಿರ್ವಹಣಾ ವ್ಯವಸ್ಥೆಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿರುವುದನ್ನು ದೃಢಪಡಿಸುತ್ತದೆ.

ಉತ್ಪಾದನಾ ಹೆಚ್ಚಳ

ಮೈಸೂರು ರೇಷ್ಮೆ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, KSIC ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆಗಳನ್ನು ರೂಪಿಸಿದೆ. ಇದರ ಭಾಗವಾಗಿ, ಮೈಸೂರಿನಲ್ಲಿ ಎರಡನೇ ರೇಷ್ಮೆ ನೇಯ್ಗೆ ಕಾರ್ಖಾನೆಯನ್ನು ಸ್ಥಾಪಿಸಲು ನಿಗಮವು ಮುಂದಾಗಿದೆ.

ರಾಜ್ಯದಲ್ಲಿ ಒಟ್ಟು 16 ಮಳಿಗೆ ಇವೆ. ಬೆಂಗಳೂರಿನಲ್ಲಿ 8 ಹಾಗೂ ಮೈಸೂರಿನಲ್ಲಿ 6 ಇವೆ. ಚೆನ್ನಪಟ್ಟಣ, ದಾವಣಗೆರೆಯಲ್ಲಿ ಹಾಗೂ ಹೈದರಬಾದ್‌ನಲ್ಲಿ 1 ಮಳಿಗೆ ಇವೆ.

ಮೈಸೂರು ರೇಷ್ಮೆ ಸೀರೆಗಳು - ಪ್ರಮುಖ ಅಂಶಗಳು

ಮೈಸೂರು ರೇಷ್ಮೆ ಸೀರೆಗಳಲ್ಲಿ ಮುಖ್ಯವಾಗಿ ಮಲ್ಬರಿ ರೇಷ್ಮೆ ಸೀರೆಗಳು ಇವೆ. ಇವುಗಳನ್ನು ವಿಶಿಷ್ಟವಾದ ವಿನ್ಯಾಸ, ಬಣ್ಣಗಳು ಮತ್ತು ಸಾಂಪ್ರದಾಯಿಕ ಜರಿ ಕೆಲಸಗಳಿಂದ ಗುರುತಿಸಲಾಗುತ್ತದೆ. ಮಲ್ಬರಿ ರೇಷ್ಮೆ ಸೀರೆ ಇದು ಮೈಸೂರು ರೇಷ್ಮೆ ಸೀರೆಗಳ ಅತ್ಯಂತ ಸಾಮಾನ್ಯ ಮತ್ತು ಜನಪ್ರಿಯ ವಿಧವಾಗಿದೆ. ಇದನ್ನು ಮಲ್ಬರಿ ರೇಷ್ಮೆ ಹುಳುಗಳಿಂದ ಪಡೆಯುವ ರೇಷ್ಮೆಯಿಂದ ತಯಾರಿಸಲಾಗುತ್ತದೆ. ಇವು ಮೃದುವಾದ ಸ್ಪರ್ಶ ಮತ್ತು ಹೊಳಪಿಗೆ ಹೆಸರುವಾಸಿಯಾಗಿವೆ.

ವಿವಿಧ ವಿನ್ಯಾಸಗಳ ಆಕರ್ಷಣೆ

ಮೈಸೂರು ರೇಷ್ಮೆ ಸೀರೆಗಳು ಹಲವಾರು ವಿನ್ಯಾಸಗಳಲ್ಲಿ ಲಭ್ಯವಿವೆ. ಉದಾಹರಣೆಗೆ, ಸಾಂಪ್ರದಾಯಿಕ ದೇವತಾ ವಿನ್ಯಾಸಗಳು, ನವಿಲುಗಳು, ಆನೆಗಳು, ಮತ್ತು ಹೂವಿನ ವಿನ್ಯಾಸಗಳು ಇತ್ಯಾದಿ. ಮೈಸೂರು ರೇಷ್ಮೆ ಸೀರೆಗಳು ಸಾಮಾನ್ಯವಾಗಿ ಹಸಿರು, ಕೆಂಪು, ನೇರಳೆ, ಮತ್ತು ನೀಲಿ ಬಣ್ಣದಂತಹ ವೈವಿಧ್ಯಮಯ ಬಣ್ಣಗಳಲ್ಲಿ ಲಭ್ಯವಿವೆ.

ಕುಸುರಿಯಂತ ಜರಿ ಕೆಲಸ

ಮೈಸೂರು ರೇಷ್ಮೆ ಸೀರೆಗಳಲ್ಲಿ ಚಿನ್ನದ ಅಥವಾ ಬೆಳ್ಳಿಯ ಜರಿಯ ಕೆಲಸವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಸೀರೆಗಳಿಗೆ ರಾಜಮನೆತನದ ನೋಟವನ್ನು ನೀಡುತ್ತದೆ. ಮೈಸೂರು ರೇಷ್ಮೆ ಸೀರೆಗಳು ಅತ್ಯುತ್ತಮ ಹೊಳಪನ್ನು ನೀಡುತ್ತವೆ. ಇದನ್ನು ತಯಾರಿಸಲು ಬಳಸುವ ಗುಣಮಟ್ಟದ ಮಲ್ಬರಿ ರೇಷ್ಮೆ ಇದಕ್ಕೆ ಕಾರಣವಾಗಿದೆ.

ಮೈಸೂರು ಸಿಲ್ಕ್ ದುಬಾರಿ ಏಕೆ?

ಮೈಸೂರು ಮಹಾರಾಜರ ಕಾಲದಿಂದಲೂ ಚಿನ್ನಬೆಳ್ಳಿಯನ್ನು ಬಳಸಿ, ಅಪ್ಪಟ 28 ಡೀನಿಯರ್ ರೇಷ್ಮೆ ಎಳೆಯಿಂದಲೇ ಸೀರೆಗಳನ್ನು ನೇಯಲಾಗುತ್ತಿದೆ. ಯಾವುದೇ ಮಿಶ್ರಿತ ದಾರ ಬಳಸದಿರುವುದು ಇದರ ವಿಶೇಷತೆ. ಈ ಗುಣಮಟ್ಟವನ್ನು ಉಳಿಸಿಕೊಳ್ಳುವ ನಿಲುವು ಬೇಡಿಕೆಯನ್ನು ಹೆಚ್ಚಿಸಿದೆ. ರೇಷ್ಮೆಗೂಡು, ಚಿನ್ನ, ಬೆಳ್ಳಿ ಹಾಗೂ ನುರಿತ ಸಿಬ್ಬಂದಿಯ ಸಂಬಳ ಹೆಚ್ಚಳದಿಂದ ಸೀರೆಗಳ ಬೆಲೆ ದುಬಾರಿಯಾಗಿದ್ದರೂ, ಪ್ರಿಯವಾದ ಈ ಸೀರೆಗಳ ಖರೀದಿ ಉತ್ಸಾಹ ಕಡಿಮೆಯಾಗಿಲ್ಲ.

ರೇಷ್ಮೆ ಮಂಡಳಿ ಅಧ್ಯಕ್ಷ ಹೇಳುವುದೇನು?

ಈ ಕುರಿತು ಗಮನ ಹರಿಸಿರುವ ರೇಷ್ಮೆ ಮಂಡಳಿ ಅಧ್ಯಕ್ಷ ಎಸ್. ಗಂಗಾಧರ್ ರೇಷ್ಮೆ ಉತ್ಪನ್ನಗಳಿಗೆ ಬೇಡಿಕೆ ದಿಢೀರ್ ಹೆಚ್ಚಳವಾಗಿದ್ದು, ಈ ಬೇಡಿಕೆಯನ್ನು ಪೂರೈಸಲು ರಾಜ್ಯದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ, ಚನ್ನಪಟ್ಟಣದಲ್ಲಿ ಹೆಚ್ಚುವರಿ ಕರ್ಖಾನೆಯೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಒಂದು ಹೊಸ ಘಟಕ ಆರಂಭವಾಗುವ ನಿರೀಕ್ಷೆಯಿದೆ.

ಚೀನಾದಿಂದ ಸರಬರಾಜು ಸ್ಥಗಿತಗೊಂಡಿರುವುದರಿಂದ ದೇಶೀಯ ರೇಷ್ಮೆ ಉತ್ಪನ್ನಗಳಿಗೆ ದಿಢೀರ್ ಬೇಡಿಕೆ ಹೆಚ್ಚಿದೆ. ಈ ಬೆಳವಣಿಗೆಯಿಂದ ರೈತರಿಗೂ ಹೆಚ್ಚಿನ ಅನುಕೂಲವಾಗುತ್ತಿದೆ. ಹಿಂದೆ ಬೆಲೆ ಕಡಿಮೆಯಾಗಿ ತೊಂದರೆಯಾಗುತ್ತಿತ್ತು, ಆದರೆ ಈಗ ಉತ್ತಮ ರೇಟ್ ಇದ್ದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಉತ್ಪನ್ನ ಲಭ್ಯವಿಲ್ಲ.

ಈ ಮೊದಲು ಫ್ರಾಂಚೈಸಿಗಳ ಮೂಲಕ ನಡೆಯುತ್ತಿದ್ದ ಉತ್ಪಾದನೆಯಲ್ಲಿ ಗುಣಮಟ್ಟ ಸಮಸ್ಯೆ ಬರುತ್ತಿರುವ ಕಾರಣ, ಇನ್ನು ಮುಂದೆ ನಮ್ಮ ಸ್ವಂತ ಘಟಕಗಳಲ್ಲೇ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಉತ್ಪಾದನೆಯ ಮಾಹಿತಿ ಮತ್ತು ಗುಣಮಟ್ಟದ ಮೇಲೆ ಹೆಚ್ಚು ನಿಯಂತ್ರಣ ಸಾಧ್ಯವಾಗಲಿದೆ. ಮಹಾಲಕ್ಷ್ಮಿ ಹಬ್ಬ ಮತ್ತು ದೀಪಾವಳಿ ಹಬ್ಬದಂತಹ ಪ್ರಮುಖ ಹಬ್ಬದ ಸೀಸನ್ಗಳಲ್ಲಿ ಬೇಡಿಕೆ ಇನ್ನೂ ಹೆಚ್ಚಾಗಿದ್ದು, ಪ್ರಸ್ತುತ ಇರುವ ಉತ್ಪಾದನೆಯು ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಪೂರೈಕೆ ಹೆಚ್ಚಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಬೇಡಿಕೆ ಹೆಚ್ಚಿದಂತೆಲ್ಲಾ ನೇಯ್ಗೆದಾರರ ಕೊರತೆಯೂ ಉಂಟಾಗುವುದು ಸಹಜ. ಈ ನಿಟ್ಟಿನಲ್ಲೂ ಗಮನ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರೇಷ್ಮೆ ಸಂಸ್ಥೆ ಮಂಡಳಿಯ ಅಧ್ಯಕ್ಷ ಗಂಗಾಧರ್ ಅವರು ತಿಳಿಸಿದರು.

ನಿಗಮ ಎದುರಿಸುತ್ತಿರುವ ಸವಾಲುಗಳು ಏನು?

ಸಿಂಥೆಟಿಕ್ ಬಟ್ಟೆ ಸ್ಪರ್ಧೆ: ಸಂಶ್ಲೇಷಿತ ಬಟ್ಟೆಗಳ ಪರ್ಯಾಯಗಳ ಹೆಚ್ಚಳವು ಶುದ್ಧ ರೇಷ್ಮೆ ಸೀರೆಗಳ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ.

ಹೆಚ್ಚಿನ ಉತ್ಪಾದನಾ ವೆಚ್ಚ: ಕಚ್ಚಾ ವಸ್ತುಗಳು ಮತ್ತು ಜರಿಯ ಹೆಚ್ಚಿನ ಬೆಲೆಯು ಮೈಸೂರು ರೇಷ್ಮೆಯ ಹೆಚ್ಚಿನ ಮಾರಾಟದ ಬೆಲೆಗೆ ಕಾರಣವಾಗಿದೆ, ಇದು ಸಾಮಾನ್ಯ ಜನರಿಗೆ ಕೈಗೆಟಕದಂತಾಗಿದೆ.

ಸೀಮಿತ ಲಭ್ಯತೆ: ಮೈಸೂರು ರೇಷ್ಮೆಯನ್ನು ಕೆಎಸ್ಐಸಿ ಮಳಿಗೆಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ, ಇದು ವಿಶಾಲ ಗ್ರಾಹಕ ವರ್ಗಕ್ಕೆ ಕಡಿಮೆ ಪ್ರವೇಶವನ್ನು ನೀಡುತ್ತದೆ.

ಈ ಸವಾಲುಗಳ ಹೊರತಾಗಿಯೂ, ಮೈಸೂರು ರೇಷ್ಮೆ ಜಾಗತಿಕ ಮಾರುಕಟ್ಟೆಗಳನ್ನು ಆಕರ್ಷಿಸುತ್ತಲೇ ಇದೆ. ಸೆಲೆಬ್ರಿಟಿಗಳು ಮತ್ತು ಫ್ಯಾಷನ್ ವಿನ್ಯಾಸಕರ ಪ್ರಭಾವವು ಅದರ ಜನಪ್ರಿಯತೆಯನ್ನು ಹೆಚ್ಚಿಸಿದೆ.

75 ನೇ ಕ್ಯಾನೆ ಚಲನಚಿತ್ರೋತ್ಸವದಲ್ಲಿ ನೋಡಿದಂತೆ, ನಟಿ ದೀಪಿಕಾ ಪಡುಕೋಣೆ ಮೈಸೂರು ರೇಷ್ಮೆ ಧರಿಸಿದ್ದರು. ಅಂತರರಾಷ್ಟ್ರೀಯ ಗ್ರಾಹಕರು ಮೈಸೂರು ಸಿಲ್ಕ್ ಅನ್ನು ಐಷಾರಾಮಿ ಜವಳಿ ಎಂದು ಗುರುತಿಸುತ್ತಿದ್ದಾರೆ. ಅದರ ಜಾಗತಿಕ ಆಕರ್ಷಣೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದಾರೆ.

ಭಾರತದ ಶ್ರೀಮಂತ ಜವಳಿ ಪರಂಪರೆಗೆ ಮೈಸೂರು ರೇಷ್ಮೆ ಸಾಕ್ಷಿಯಾಗಿ ನಿಂತಿದೆ. ಇದು ಸೊಬಗು, ಕರಕುಶಲತೆ ಮತ್ತು ಪ್ರತ್ಯೇಕತೆಯನ್ನು ಒಳಗೊಂಡಿದೆ. ಅದರ ಆಳವಾದ ಬೇರೂರಿರುವ ಇತಿಹಾಸ, ನಿಖರವಾದ ನೇಯ್ಗೆ ತಂತ್ರಗಳು ಮತ್ತು ಸಾಂಸ್ಕೃತಿಕ ಮಹತ್ವದಿಂದಾಗಿ, ಮೈಸೂರು ರೇಷ್ಮೆ ತಲೆಮಾರುಗಳಿಂದಲೂ ಪಾಲಿಸಬೇಕಾದ ಆಸ್ತಿಯಾಗಿ ಮುಂದುವರಿದಿದೆ.

ಜಾಗತಿಕ ಫ್ಯಾಷನ್ ಉದ್ಯಮವು ಸುಸ್ಥಿರ ಮತ್ತು ಪರಂಪರೆಯ ಜವಳಿಗಳ ಕಡೆಗೆ ಬದಲಾಗುತ್ತಿದೆ. ಹೀಗಾಗಿ, ಮೈಸೂರು ರೇಷ್ಮೆ ಸಂಪ್ರದಾಯವನ್ನು ಆಧುನಿಕ ಐಷಾರಾಮಿ ಬಟ್ಟೆಯಲ್ಲಿ ನೇಯ್ಗೆ ಮಾಡಿ, ವಿಶ್ವದ ಅತ್ಯುತ್ತಮ ರೇಷ್ಮೆಗಳಲ್ಲಿ ಒಂದಾಗಿ ತನ್ನ ಪರಂಪರೆಯನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.

Read More
Next Story