ಹೊರ ರಾಜ್ಯಗಳಲ್ಲಿ ಕುಳಿತು ರಾಜ್ಯದ ಆಳಂದ ಕ್ಷೇತ್ರದ ಮತದಾರರ ಹೆಸರು ಡಿಲೀಟ್‌?
x

ಹೊರ ರಾಜ್ಯಗಳಲ್ಲಿ ಕುಳಿತು ರಾಜ್ಯದ ಆಳಂದ ಕ್ಷೇತ್ರದ ಮತದಾರರ ಹೆಸರು ಡಿಲೀಟ್‌?

ಹೈದರಾಬಾದ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕುಳಿತು ಕ್ಷೇತ್ರದ ಆರು ಸಾವಿರಕ್ಕೂ ಹೆಚ್ಚು ಮತಗಳನ್ನು ಆಳಿಸಿ ಹಾಕುವ ಕಾರ್ಯ ಮಾಡಲಾಗಿದೆ. ಸವಳೇಶ್ವರ ಗ್ರಾಮದಲ್ಲಿ ಈ ಕಾರ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.


Click the Play button to hear this message in audio format

ರಾಜ್ಯದಲ್ಲಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಳಿಕ ಇದೀಗ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಆರೋಪ ಕೇಳಿಬಂದಿದ್ದು, ಹೈದರಾಬಾದ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕುಳಿತು ಕ್ಷೇತ್ರದ ಆರು ಸಾವಿರಕ್ಕೂ ಹೆಚ್ಚು ಮತಗಳನ್ನು ಆಳಿಸಿ ಹಾಕುವ ಕಾರ್ಯ ಮಾಡಲಾಗಿದೆ.

ಲೋಕಸಭೆ ಪ್ರತಿಪಕ್ಷನಾಯಕ ರಾಹುಲ್‌ಗಾಂಧಿ ಮಹದೇವಪುರ ಕ್ಷೇತ್ರದ ಬಳಿಕ ಆಳಂದ ಕ್ಷೇತ್ರದಲ್ಲಿನ ಅಕ್ರಮವನ್ನು ಬಯಲು ಮಾಡುತ್ತಿದ್ದಂತೆ ರಾಜ್ಯದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಯಾಗಿದೆ. ಹೈದರಾಬಾದ್‌ನಲ್ಲಿ ಕುಳಿತು ಕೆಲವು ದುಷ್ಕರ್ಮಿಗಳು ಕಾಂಗ್ರೆಸ್‌ ಪಕ್ಷದ ಮತಗಳು ಹೆಚ್ಚಿರುವ ಗ್ರಾಮಗಳನ್ನೇ ಆಯ್ಕೆ ಮಾಡಿಕೊಂಡು ಮತಗಳನ್ನು ಆಳಿಸಿ ಹಾಕಿರುವುದು ಗೊತ್ತಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರಿಗೆ ಮೊದಲು ಆಳಂದ ವಿಧಾನಸಭಾ ಕ್ಷೇತ್ರದ ಸವಳೇಶ್ವರ ಗ್ರಾಮದಲ್ಲಿ ಈ ಕೆಲಸ ಮಾಡಿರುವುದು ಗೊತ್ತಾಗಿದೆ ಎನ್ನಲಾಗಿದೆ.

ಕಾಮನಹಳ್ಳಿಯಲ್ಲಿ48 ಮತಗಳ ಡಿಲೀಟ್‌

ಆಳಂದ ಕ್ಷೇತ್ರದಲ್ಲಿ ಸವಳೇಶ್ವರ ಗ್ರಾಮದಲ್ಲಿ ಮೊದಲು ಮತಗಳನ್ನು ಅಳಿಸಿ ಹಾಕಿರುವುದು ಗೊತ್ತಾದ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಅಳವಾಗಿ ಪರಿಶೀಲನೆ ನಡೆಸಿದಾಗ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಮತಗಳನ್ನು ಅಳಿಸಿರುವುದು ಬೆಳಕಿಗೆ ಬಂದಿದೆ. ಕಾಮನಹಳ್ಳಿ ಗ್ರಾಮವೊಂದರಲ್ಲಿಯೇ 48 ಮತಗಳನ್ನು ಅಳಿಸಿರುವುದು ಗೊತ್ತಾಯಿತು. ಪ್ರತಿ ಹಳ್ಳಿಯಲ್ಲಿಯೂ 20 ರಿಂದ 40 ಮತಗಳನ್ನು ಅಳಿಸಿ ಹಾಕಲಾಗಿದೆ. 60ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಮತಗಳನ್ನು ಡಿಲೀಟ್‌ ಮಾಡಲಾಗಿದೆ. ಅವೆಲ್ಲವೂ ಕಾಂಗ್ರೆಸ್‌ ಮತಗಳು ಹೆಚ್ಚಿರುವ ಗ್ರಾಮಗಳೇ ಆಗಿವೆ ಎಂಬುದು ಗೊತ್ತಾಗಿದೆ.

ಡಿಲೀಟ್‌ ಮಾಡಲು ಬೇರೆ ರಾಜ್ಯಗಳ ಫೋನ್ ನಂಬರ್ ಬಳಕೆ ಮಾಡಲಾಗಿದೆ. ಕಾಂಗ್ರೆಸ್ ಮತಗಳನ್ನೇ ಗುರಿಯಾಗಿಸಿಕೊಂಡು ಅಳಿಸಿ ಹಾಕಲಾಗಿದೆ. ಸೂರ್ಯಕಾಂತ್‌ ಹೆಸರು ಬಳಸಿ 14 ನಿಮಿಷದಲ್ಲಿ 12 ವೋಟ್ ಡಿಲೀಟ್ ಮಾಡಲಾಗಿದೆ. ಕಾಂಗ್ರೆಸ್‌ ಬಲವಾಗಿರುವ ಬೂತ್‌ಗಳನ್ನೇ ಗುರಿ ಮಾಡಿಕೊಂಡು ಮತಗಳ್ಳತನ ಮಾಡಲಾಗಿದೆ ಎಂಬುದು ಕಾಂಗ್ರೆಸ್‌ ಆರೋಪವಾಗಿದೆ. ಇದಲ್ಲದೇ, ಗೋದಾಬಾಯಿ, ಸೂರ್ಯಕಾಂತ್‌, ನಾಗರಾಜ್‌ ಎಂಬವರು ಹೆಸರಲ್ಲಿಯೂ ಡಿಲೀಟ್‌ ಎಂದು ಹೇಳಲಾಗಿದೆ.

ಸಾಫ್ಟ್‌ವೇರ್‌ ಬಳಸಿ ಹೈಜಾಕ್‌

ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಅಪರಿಚಿತ ವ್ಯಕ್ತಿಗಳು ಸಾಫ್ಟ್​​ವೇರ್​ ಬಳಕೆ ಮಾಡಿಕೊಂಡು ಮತಗಳನ್ನು ಅಳಿಸಿಹಾಕಲು ಯತ್ನಿಸಿದ್ದರು. ಬೂತ್ ಮಟ್ಟದ ಮಹಿಳಾ ಅಧಿಕಾರಿಯೊಬ್ಬರಿಗೆ ತನ್ನ ಚಿಕ್ಕಪ್ಪನ ಮತ ಡಿಲೀಟ್​ ಆಗಿರುವುದು ಅರಿವಿಗೆ ಬಂದಿದೆ. ಆಗ ಆಕೆ ಈ ಕುರಿತು ಪರಿಶೀಲಿಸಿದಾಗ ತಮ್ಮ ನೆರೆಹೊರೆಯವರ ಮತಗಳನ್ನು ಸಹ ಅಳಿಸಿರುವುದನ್ನು ಕಂಡುಕೊಂಡಿದ್ದಾರೆ. ಮತ ಅಳಿಸಿಹಾಕಿರುವ ಬಗ್ಗೆ ನೆರೆ ಹೊರೆಯವರಿಗೆ ವಿಚಾರಿಸಿದಾಗ ಅವರಿಂದ ಮಾಹಿತಿ ಲಭ್ಯವಾಗಿಲ್ಲ. ಆಗ ಯಾರೋ ಈ ಮತ ಅಳಿಸುವಿಕೆ ಪ್ರಕ್ರಿಯೆಯನ್ನು ಹೈಜಾಕ್​ ಮಾಡಿರುವುದು ಕಂಡುಬಂದಿದೆ. ಅದೃಷ್ಟವಶಾತ್​ ಇದು ಸಿಕ್ಕಿಬಿದ್ದಿದೆ. ಆದರೆ ಬಹಳಷ್ಟು ಡಿಲೀಟ್‌ ಆಗಿರುವುದು ಗೊತ್ತಾಗಿಲ್ಲ. ದುಷ್ಕರ್ಮಿಗಳು ಸಾಫ್ಟ್​ವೇರ್ ಬಳಕೆ ಮಾಡಿ ಕೃತ್ಯ ಎಸಗಿದ್ದಾರೆ. ರಾಜ್ಯದ ಹೊರಗಿನ ಮೊಬೈಲ್​ ಸಂಖ್ಯೆಗಳನ್ನು ಬಳಕೆ ಮಾಡಿ ಆಳಂದದಲ್ಲಿ ಮತದಾರರ ಹೆಸರು ಅಳಿಸಲಾಗಿದೆ ಎಂಬುದು ಕಾಂಗ್ರೆಸ್‌ ಕಾರ್ಯಕರ್ತರು ನಡೆಸಿದ ಪರಿಶೀಲನೆಯಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ.

ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ಕಾಂಗ್ರೆಸ್‌ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಒಂದೇ ಹೆಸರಿನಲ್ಲಿ ಹಲವು ಮತದಾರರ ಹೆಸರನ್ನು ಕೈಬಿಡಲಾಗಿದೆ. ಮಹದೇವಪುರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಹೆಸರು ಸೇರ್ಪಡೆ ಮಾಡಿದರೆ, ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ಡಿಲೀಟ್‌ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ಬಂದರೂ ಸರಿಯಾದ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದೆ ಎಂದು ಹೇಳಲಾಗಿದೆ.

5,994 ಅರ್ಜಿಗಳ ಹೆಸರಲ್ಲಿ ಅಕ್ರಮ

2023ರ ವಿಧಾನಸಭಾ ಚುನಾವಣೆಗೂ ಮೊದಲು ಆಳಂದದಲ್ಲಿ ಅರ್ಜಿ ಸಂಖ್ಯೆ 7 ಬಳಸಿಕೊಂಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ತೆಗೆಯಿರಿ ಎಂದು 6,018 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 24 ಮಾತ್ರ ನೈಜವಾಗಿದ್ದವು. ಉಳಿದ 5,994 ಅರ್ಜಿಗಳನ್ನು ನೈಜ ಮತದಾರರ ಹೆಸರಲ್ಲಿ ಅಕ್ರಮವಾಗಿ ಸಲ್ಲಿಸಲಾಗಿತ್ತು ಎಂದು ಚುನಾವಣಾಧಿಕಾರಿಗಳ ಪರಿಶೀಲನೆ ವೇಳೆ ಗೊತ್ತಾಗಿತ್ತು. ಬಳಿಕ ಪ್ರಕರಣದ ಬಗ್ಗೆ ಆಳಂದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್‌. ಪಾಟೀಲ್‌ ದೂರು ನೀಡಿದ್ದರು. ನಂತರದ ಕಾಂಗ್ರೆಸ್‌ ಸರ್ಕಾರ ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿತ್ತು. ಆದರೆ, ಪ್ರಕರಣದ ಮಹತ್ವದ ಸಾಕ್ಷ್ಯಗಳನ್ನು ಕೇಂದ್ರ ಚುನಾವಣಾ ಆಯೋಗವು ಈವರೆಗೆ ತನಿಖಾ ಸಂಸ್ಥೆ ಜತೆ ಹಂಚಿಕೊಂಡಿಲ್ಲ. ಹೀಗಾಗಿ ಸಿಐಡಿ ತನಿಖೆಗೆ ಗ್ರಹಣ ಹಿಡಿದಿದೆ ಎಂಬುದು ರಾಹುಲ್‌ ಗಾಂಧಿ ಆರೋಪವಾಗಿದೆ.

ಬಿ.ಆರ್‌.ಪಾಟೀಲ್‌ ಈ ಹಿಂದೆಯೂ ಆರೋಪ ಮಾಡಿದ್ದರು:

ಆಳಂದ ಕ್ಷೇತ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಷಡ್ಯಂತ್ರ ನಡೆದಿತ್ತು ಎಂಬುದನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್. ಪಾಟೀಲ್ ಈ ಹಿಂದೆಯೇ ಆರೋಪ ಮಾಡಿದ್ದರು. ಅನೇಕರ ಹೆಸರುಗಳನ್ನು ಅಳಿಸುವಂತೆ ಚುನಾವಣಾ ಆಯೋಗಕ್ಕೆ ನಕಲಿ ಇಮೇಲ್‌ಗಳನ್ನು ಕಳುಹಿಸಲಾಗಿದೆ. ಈ ಮತ ಕಳ್ಳತನ ವಿವಾದದ ಕುರಿತು ಆರಂಭಿಸಲಾದ ತನಿಖೆ ಸರಿಯಾಗಿ ನಡೆಯದಿರುವ ಕಾರಣಕ್ಕೆ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿದೆ. ಆದರೆ ಚುನಾವಣಾ ಆಯೋಗವು ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.

ನಕಲಿ ಮೇಲ್‌ಗಳನ್ನು ಕಳುಹಿಸಲಾದ ಕಂಪ್ಯೂಟರ್‌ಗಳ ಐಪಿ ವಿಳಾಸಗಳನ್ನು ಚುನಾವಣಾ ಆಯೋಗ ಪತ್ತೆಹಚ್ಚುವುದು ಕಷ್ಟಕರವಾಗಿರುತ್ತದೆ. ಹೀಗಾಗಿ ಪ್ರಕರಣವನ್ನು ಸೈಬರ್ ಅಪರಾಧ ದಳಕ್ಕೆ ಶಿಫಾರಸು ಮಾಡಲಾಗಿದೆ. ಮತದಾರರ ಪಟ್ಟಿಯಿಂದ ಆರು ಸಾವಿರಕ್ಕೂ ಹೆಚ್ಚಿನ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕುವ ಷಡ್ಯಂತ್ರ ಮಾಡುತ್ತಿರುವುದರ ಹಿಂದೆ ಯಾರ ಕೈವಾಡವಿದೆ ಎಂಬುದರ ಪತ್ತೆ ಹಚ್ಚಬೇಕು. ಈಗಾಗಲೇ ಪ್ರಕರಣ ದಾಖಲಾಗಿದ್ದರೂ ತನಿಖೆಗೆ ಚುನಾವಣಾ ಆಯೋಗ ಯಾಕೆ ಸಹರಿಸುತ್ತಿಲ್ಲ? ಸಂವಿಧಾನ ಬದ್ಧವಾಗಿರುವ ಸಂಸ್ಥೆ ಬಿಜೆಪಿಯನ್ನೇ ಅಧಿಕಾರದಲ್ಲಿ ಕೂರಿಸಲು ಯತ್ನ ಮಾಡುತ್ತಿದೆ. ಇಂತಹ ಘಟನೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂದು ಕಿಡಿಕಾರಿದ್ದರು.

Read More
Next Story