ಎಸ್ ನಿಜಲಿಂಗಪ್ಪ ಸ್ಮಾರಕ | ಹೆಸರಾಯಿತು ಕರ್ನಾಟಕ, ನನಸಾಗಲಿಲ್ಲ ಎಸ್ಸೆನ್ ಸ್ಮಾರಕ
ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಎಂದು ನಾವೆಲ್ಲಾ ಸಂಭ್ರಮಿಸುತ್ತಿರುವ ಹೊತ್ತಲ್ಲೇ, ಕರ್ನಾಟಕದ ಕನಸನ್ನು ನನಸು ಮಾಡಲು ಬದುಕು ಸವೆಸಿದ ಉದಾತ್ತ ಜೀವದ ಹೆಸರಲ್ಲಿ ಸ್ಮಾರಕ ಕಟ್ಟುವ ಕನಸು ಮಾತ್ರ ಕನಸಾಗಿಯೇ ಉಳಿದಿದೆ. ನಾಡಿನ ಉದ್ದಗಲಕ್ಕೂ ಸುವರ್ಣ ಕರ್ನಾಟಕ ಸಂಭ್ರಮಾಚರಣೆಗಳು ಮುಗಿಲುಮುಟ್ಟಿರುವಾಗ, ಚಿತ್ರದುರ್ಗದ ಆ ಮನೆಯಲ್ಲಿ ವಿಷಾದ ಮತ್ತು ನೋವಿನ ದನಿ ಪಿಸುಗುಡುವಂತಾಗಿದೆ!;
ನವ ಕರ್ನಾಟಕದ ಶಿಲ್ಪಿ ಎಂದೇ ಹೆಸರಾಗಿರುವ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರು ಬಾಳಿ ಬದುಕಿನ ಚಿತ್ರದುರ್ಗದ ಮನೆ ಈಗ ಮಾರಾಟಕ್ಕಿದೆ!
1959ರಲ್ಲಿ ಅಂದಿನ ಜವಾಹರ್ ಲಾಲ್ ನೆಹರು ನೇತೃತ್ವದ ಕೇಂದ್ರ ಸರ್ಕಾರ, ನಿರಾಶ್ರಿತ ಟಿಬೆಟಿಯನ್ನರಿಗೆ ಆಶ್ರಯ ನೀಡಲು ನಿರ್ಧರಿಸಿದಾಗ, ಬಹುತೇಕ ರಾಜ್ಯ ಸರ್ಕಾರಗಳು ಟಿಬೆಟಿಯನ್ನರಿಗೆ ಜಾಗ ಕೊಡಲು ಹಿಂದೇಟು ಹಾಕಿದ್ದವು. ಆಗ, ಮುಂದೆ ಬಂದು ರಾಜ್ಯದಲ್ಲಿ ಅವರಿಗೆ ಭೂಮಿ ನೀಡಿ, ವಸತಿ ವ್ಯವಸ್ಥೆ ಮಾಡುವ ಭರವಸೆ ನೀಡಿದವರು ಅಂದಿನ ಕರ್ನಾಟಕದ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ. ಹೀಗೆ ದೂರ ದೇಶದ ಜನಗಳ ಸಂಕಷ್ಟಕ್ಕೆ ಮಿಡಿದು ಭೂಮಿ, ಮನೆ ನೀಡಿ ಆಶ್ರಯ ನೀಡಿದ ಎಸ್ ನಿಜಲಿಂಗಪ್ಪ ಅವರ ಪತ್ನಿ ಸಾವು ಕಂಡಾಗ ಅವರ ಶವ ಸಂಸ್ಕಾರ ಮಾಡಲೂ ಆರಡಿ- ಮೂರಡಿ ಜಾಗ ಸ್ವಂತದ್ದು ಇರಲಿಲ್ಲ!
ಎರಡು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಬೃಹತ್ ನೀರಾವರಿ ಯೋಜನೆಗಳು, ಜಲ ವಿದ್ಯುತ್ ಯೋಜನೆಗಳು, ಕೈಗಾರಿಕೆಗಳನ್ನು ಕಟ್ಟಿ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ನಾಯಕನ ಸರಳತೆ ಮತ್ತು ಪ್ರಾಮಾಣಿಕತೆಗೆ ಆ ಪರಿಸ್ಥಿತಿ ಕನ್ನಡಿಯಾಗಿತ್ತು. ಆದರೆ, ಅಂತಹ ಮಹಾನ್ ನಾಯಕನ ಮನೆಯನ್ನು ಸ್ಮಾರಕ ಮಾಡಬೇಕು ಎಂಬ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ದಶಕಗಳ ಬಳಿಕವೂ ಯಶಸ್ಸು ಕಂಡಿಲ್ಲ. ಪರಿಣಾಮವಾಗಿ ಎಸ್ ನಿಜಲಿಂಗಪ್ಪ ಅವರ ಕುಟುಂಬ, ಇದೀಗ ಅವರು ಬಾಳಿ ಬದುಕಿದ ಮನೆಯನ್ನು ಮಾರಾಟ ಮಾಡಲು ಜಾಹೀರಾತು ನೀಡಿದೆ.
ಸ್ಮಾರಕ ಪ್ರಯತ್ನ ಏನಾಯ್ತು?
ರಾಜ್ಯದ ಏಕೀಕರಣ ಹೋರಾಟದ ನಾಯಕ, ನವ ಕರ್ನಾಟಕದ ನಿರ್ಮಾತೃ ಎಸ್ ನಿಜಲಿಂಗಪ್ಪ ಅವರ ಏಕೈಕ ಆಸ್ತಿಯಾಗಿರುವ ಚಿತ್ರದುರ್ಗದ ಜಿಲ್ಲಾಧಿಕಾರಿ ಬಂಗಲೆ ಸಮೀಪದ ಪಾರಂಪರಿಕ ಕಟ್ಟಡವನ್ನು ಅವರ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಪ್ರಯತ್ನಗಳು ಕಳೆದ ಮೂರೂವರೆ ದಶಕದಿಂದ ಫಲ ನೀಡಿಲ್ಲ.
ಚಿತ್ರದುರ್ಗದ ಎಸ್ ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಿಜಲಿಂಗಪ್ಪ ಅವರ ಪುತ್ರರಾದ ಕಿರಣ್ ಶಂಕರ್, ಮಾಜಿ ಎಂಎಲ್ಸಿ ಹಾಗೂ ಎಡಪಂಥೀಯ ಚಿಂತಕ ಮೋಹನ್ ಕೊಂಡಜ್ಜಿ ಸೇರಿದಂತೆ ಹಲವರು ಸ್ಮಾರಕ ನಿರ್ಮಾಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ.
ಅವರ ಪ್ರಯತ್ನದ ಫಲವಾಗಿ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ; ಐದು ವರ್ಷಗಳ ಹಿಂದೆ, ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿತ್ತು. ಅದರ ಭಾಗವಾಗಿ ಸರ್ಕಾರ ಐದು ಕೋಟಿ ರೂ. ಬಿಡುಗಡೆ ಮಾಡಿ, ಮನೆಯ ಖರೀದಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಮನೆ ಖರೀದಿ ಮಾಡಿ ಬಳಿಕ ಅದನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸುವುದು ಟ್ರಸ್ಟಿಗಳ ಗುರಿಯಾಗಿತ್ತು.
ಆ ಪ್ರಯತ್ನಕ್ಕೆ ತೊಡಕು ಏನಾಯ್ತು?
ಆದರೆ, ಸರ್ಕಾರದಿಂದ ಹಣ ಬಿಡುಗಡೆಯಾದರೂ ಅಧಿಕಾರಶಾಹಿಯ ವಿಳಂಬ ಧೋರಣೆಯಿಂದಾಗಿ ಸಕಾಲದಲ್ಲಿ ಮನೆ ಖರೀದಿ ಪ್ರಕ್ರಿಯೆ ನಡೆಯದೇ ʼಎಸ್ಸೆನ್ʼ ಅವರ ಕುಟುಂಬ ರೋಸಿ ಹೋಗಿ ಇದೀಗ ಮನೆಯನ್ನು ಮಾರಾಟ ಮಾಡುವ ಸ್ಥಿತಿಗೆ ಬಂದಿದೆ.
ವಾಸ್ತವವಾಗಿ ಆ ಮನೆಯನ್ನು ಎಸ್ ನಿಜಲಿಂಗಪ್ಪ ಅವರು ಬದುಕಿರುವಾಗಲೇ ತಮ್ಮ ಮಗ ಕಿರಣ್ ಶಂಕರ್ ಅವರ ಮಗ ವಿನಯ್ ಅವರ ಹೆಸರಿಗೆ ವಿಲ್ ಮಾಡಿದ್ದರು. ಆದರೆ, ವಿನಯ್ ಸದ್ಯ ವಿದೇಶದಲ್ಲಿ ಉದ್ಯೋಗದಲ್ಲಿದ್ಧಾರೆ. ಅಲ್ಲದೆ, ಮನೆಯ ಮಾಲೀಕತ್ವದ ಅಧಿಕೃತವಾಗಿ ಕಿರಣ್ ಶಂಕರ್ ಅವರಿಂದ ಅವರ ಪುತ್ರ ಕಿರಣ್ ಗೆ ವರ್ಗಾವಣೆಯಾಗಿರಲಿಲ್ಲ. ದಾಖಲೆ ವರ್ಗಾವಣೆ ಪ್ರಕ್ರಿಯೆಗಾಗಿಯೇ ವಿನಯ್ ಅವರು ನಾಲ್ಕು ವರ್ಷಗಳ ಹಿಂದೆ ಚಿತ್ರದುರ್ಗಕ್ಕೆ ಬಂದಿದ್ದರು. ಆದರೆ, ಆಗಿನ ಉಪ ನೋಂದಣಾಧಿಕಾರಿ ಕೆಲವು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ನೋಂದಣಿ ಮಾಡಲು ನಿರಾಕರಿಸಿದ್ದರು.
“ಆ ಬಳಿಕ ಮೂರ್ನಾಲ್ಕು ಬಾರಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಇರುವ ತಾಂತ್ರಿಕ ತೊಡಕು ನಿವಾರಿಸುವ ಯತ್ನಗಳಾದರೂ ಅಧಿಕಾರಿ ವರ್ಗದ ನಿರ್ಲಕ್ಷ್ಯ ಮತ್ತು ಸರ್ಕಾರದ ನಿರಾಸಕ್ತಿಯ ಕಾರಣದಿಂದ ಯಾವ ಪ್ರಯತ್ನಗಳೂ ಕೈಗೂಡಲಿಲ್ಲ” ಎಂದು ಎಸ್ ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿಗಳಲ್ಲಿ ಒಬ್ಬರಾದ ಮೋಹನ್ ಕೊಂಡಜ್ಜಿ ಅವರು ಬೇಸರ ವ್ಯಕ್ತಪಡಿಸಿದರು.
ಸರ್ಕಾರಗಳ ಧೋರಣೆ ಬೇಸರ ತರಿಸಿದೆ
ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ರಾಜ್ಯದ ಬೃಹತ್ ಜಲಾಶಯಗಳು, ಜಲವಿದ್ಯುತ್ ಯೋಜನೆಗಳು, ಕೈಗಾರಿಕೆಗಳನ್ನು ಕಟ್ಟಿ ಕೋಟ್ಯಂತರ ಜನರ ಬದುಕಿಗೆ ಆಸರೆ ನೀಡಿದ ಎಸ್ ನಿಜಲಿಂಗಪ್ಪ ಅವರು, ದೂರ ದೇಶದ ಟಿಬೆಟಿಯನ್ನರಿಗೂ ಇಲ್ಲಿ ಭೂಮಿ, ಮನೆ ನೀಡಿ ಆಶ್ರಯ ನೀಡಿದವರು. ಸ್ವಂತದ್ದು ಎಂದು ಒಂದು ಮನೆ ಬಿಟ್ಟರೆ ಅವರಿಗೆ ಇನ್ನೇನೂ ಇರಲಿಲ್ಲ. ಕೊನೆಯ ದಿನಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗುವಾಗಲೂ ಅವರು ಖಾಸಗಿ ಆಸ್ಪತ್ರೆಗಳಿಗೆ ಹೋಗದೆ, ಅವರು ಬೆಂಗಳೂರಿನ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅಂತಹ ಉದಾತ್ತ ನಾಯಕರ ಸ್ಮಾರಕ ನಿರ್ಮಾಣಕ್ಕೆ ನಮ್ಮ ಸರ್ಕಾರಗಳು, ಅಧಿಕಾರಶಾಹಿ ತೋರುತ್ತಿರುವ ನಿರ್ಲಕ್ಷ್ಯ, ಉದಾಸೀನ ಧೋರಣೆಯಿಂದ ಬೇಸತ್ತು ಅವರ ಪುತ್ರ ಈಗ ಮನೆಯನ್ನು ಖಾಸಗಿಯವರಿಗೆ ಮಾರಲು ಹೊರಟಿದ್ದಾರೆ" ಎಂದು ವಿವರಿಸಿದರು.
ದಿವಂಗತ ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕವಾಗಿ ರೂಪಿಸಲು ಸಾಕಷ್ಟು ಪ್ರಯತ್ನ ನಡೆಸಿದ ಕಾಂಗ್ರೆಸ್ ನಾಯಕರೂ ಆದ ಮೋಹನ್ ಕೊಂಡಜ್ಜಿ ಅವರೇ ಇದೀಗ ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ ಪುಟದಲ್ಲಿ ಮನೆ ಮಾರಾಟದ ವಿಷಯವನ್ನು ಹಂಚಿಕೊಂಡಿದ್ದಾರೆ.
ಮನೆಯ ಚಿತ್ರ ಹಾಗೂ ಮಾರಾಟದ ಮಾಹಿತಿ ಒಳಗೊಂಡ ಜಾಹೀರಾತು ಕಾರ್ಡನ್ನು ತಮ್ಮ ವಾಲ್‌ನಲ್ಲಿ ಹಂಚಿಕೊಂಡಿರುವ ಮೋಹನ್ ಕೊಂಡಜ್ಜಿ, “ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಬಂಗಲೆಯ ಬಳಿ ಇರುವ ಪಾರಂಪರಿಕ ಕಟ್ಟಡವಾದ ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ಎಸ್ ನಿಜಲಿಂಗಪ್ಪ ಅವರ ಮನೆ ಮಾರಾಟಕ್ಕಿದೆ. ಇವತ್ತಿನ ಮಾರುಕಟ್ಟೆ ದರದಲ್ಲಿ ಸುಮಾರು 10 ಕೋಟಿ ರೂ. ಬೆಲೆ ಬಾಳುವ ಮನೆ ಇದಾಗಿದ್ದು, ಆಸಕ್ತರು ಕಿರಣ್ ಶಂಕರ್ ಅವರನ್ನು ಸಂಪರ್ಕಿಸಬಹುದು” ಎಂದು ಹೇಳಿದ್ದಾರೆ.
ಒಂದು ಕಡೆ, ಸರ್ಕಾರ ಐದು ವರ್ಷಗಳ ಹಿಂದೆ ಮನೆ ಖರೀದಿಗೆ ಬಿಡುಗಡೆ ಮಾಡಿದ್ದ ಐದು ಕೋಟಿ ರೂಪಾಯಿ ಹಣ ಜಿಲ್ಲಾಧಿಕಾರಿಗಳ ಖಜಾನೆಯಲ್ಲೇ ಕೊಳೆಯುತ್ತಿದೆ. ಮತ್ತೊಂದು ಕಡೆ ಸರ್ಕಾರ ಮತ್ತು ಅಧಿಕಾರಶಾಹಿಯ ಧೋರಣೆಯಿಂದಾಗಿ ಬೇಸತ್ತು ಕಿರಣ್ ಶಂಕರ್ ಅವರು ಮನೆಯನ್ನು ಸರ್ಕಾರದ ಬದಲಾಗಿ ಖಾಸಗಿಯವರಿಗೆ ಮಾರಾಟ ಮಾಡಲು ನಿರ್ಧರಿಸಿ, ಅದಕ್ಕೆ ಹತ್ತು ಕೋಟಿ ರೂಪಾಯಿ ಮೌಲ್ಯ ನಿಗದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದಾರೆ.
ಭಾಷಾವಾರು ಪ್ರಾಂತ್ಯ ರಚನೆಗೆ ಮುನ್ನ ಬೇರೆ ಬೇರೆ ರಾಜಾಡಳಿತದ ವಲಯಗಳಲ್ಲಿ ಹರಿದುಹಂಚಿಹೋಗಿದ್ದ ಈ ನಾಡನ್ನು ಏಕೀಕರಣಗೊಳಿಸಿ ಕರ್ನಾಟಕ ಎಂದು ಹೆಸರಾಗಲು ದುಡಿದ ಎಸ್ ನಿಜಲಿಂಗಪ್ಪ ಅವರ ಸ್ಮಾರಕವಾಗಬೇಕಿದ್ದ, ಅವರು ಬಾಳಿ ಬದುಕಿದ್ದ ಪಾರಂಪರಿಕ ಕಟ್ಟಡ, ಕರ್ನಾಟಕ ಸುವರ್ಣ ಮಹೋತ್ಸವದ ಈ ಹೊತ್ತಲ್ಲೇ, ಅದೂ ಕನ್ನಡದ ತಿಂಗಳು ನವೆಂಬರಿನಲ್ಲಿಯೇ ಹೀಗೆ ಮಾರಾಟವಾಗಿ ಖಾಸಗಿಯವರ ಕೈಸೇರುವ ಹಾದಿಯಲ್ಲಿದೆ.
ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಎಂದು ನಾವೆಲ್ಲಾ ಸಂಭ್ರಮಿಸುತ್ತಿರುವ ಹೊತ್ತಲ್ಲೇ, ಕರ್ನಾಟಕದ ಕನಸನ್ನು ನನಸು ಮಾಡಲು ಬದುಕು ಸವೆಸಿದ ಉದಾತ್ತ ಜೀವದ ಹೆಸರಲ್ಲಿ ಸ್ಮಾರಕ ಕಟ್ಟುವ ಕನಸು ಮಾತ್ರ ಕನಸಾಗಿಯೇ ಉಳಿದಿದೆ. ನಾಡಿನ ಉದ್ದಗಲಕ್ಕೂ ಸುವರ್ಣ ಕರ್ನಾಟಕ ಸಂಭ್ರಮಾಚರಣೆಗಳು ಮುಗಿಲುಮುಟ್ಟಿರುವಾಗ, ಚಿತ್ರದುರ್ಗದ ಆ ಮನೆಯಲ್ಲಿ ವಿಷಾದ ಮತ್ತು ನೋವಿನ ದನಿ ಪಿಸುಗುಡುವಂತಾಗಿದೆ!