ಮಾಜಿ ಸಿಎಂ ಎಸ್. ನಿಜಲಿಂಗಪ್ಪ ನಿವಾಸ ವಸ್ತು ಸಂಗ್ರಹಾಲಯವಾಗಿಸಲು ಕ್ರಮ: ಸಚಿವ ತಂಗಡಗಿ
ನಿವಾಸ ಖರೀದಿಗೆ ಸರ್ಕಾರ 5 ಕೋಟಿ ರೂ. ಅನುದಾನ ನೀಡಿತ್ತು. ಇದರಲ್ಲಿ 4.18 ಕೋಟಿ ರೂ. ಗೆ ನಿವಾಸ ಖರೀದಿಸಲಾಗಿದ್ದು, ಉಳಿದ 82 ಲಕ್ಷ ರೂ. ಗಳಲ್ಲಿ ಮನೆಯನ್ನು ನವೀಕರಣಗೊಳಿಸಲಾಗುವುದು ಎಂದು ಸಚಿವ ತಂಗಡಗಿ ತಿಳಿಸಿದ್ದಾರೆ.;
ದಿವಂಗತ ಎಸ್. ನಿಜಲಿಂಗಪ್ಪ ಭಾವಚಿತ್ರಕ್ಕೆ ಸಚಿವ ಶಿವರಾಜ್ ತಂಗಡಗಿ ಪುಷ್ಪನಮನ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ದಿ. ಎಸ್.ನಿಜಲಿಂಗಪ್ಪನವರ ಚಿತ್ರದುರ್ಗ ನಗರದ ಮನೆಯನ್ನು ನವೀಕರಣಗೊಳಿಸಿ, ವಸ್ತು ಸಂಗ್ರಹಾಲಯ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ತಿಳಿಸಿದರು.
ಮಂಗಳವಾರ ಚಿತ್ರದುರ್ಗದ ಎಸ್. ನಿಜಲಿಂಗಪ್ಪನವರ ನಿವಾಸ, ಸ್ಮಾರಕ ಹಾಗೂ ತಾಲ್ಲೂಕಿನ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿವಾಸ ಖರೀದಿಗೆ ಸರ್ಕಾರ 5 ಕೋಟಿ ರೂ. ಅನುದಾನ ನೀಡಿತ್ತು. ಇದರಲ್ಲಿ ಇಲಾಖೆಯಿಂದ 4.18 ಕೋಟಿ ರೂ. ನೀಡಿ ನಿವಾಸ ಖರೀದಿಸಲಾಗಿದೆ. ಉಳಿದ 82 ಲಕ್ಷ ರೂ. ಅನುದಾನದಲ್ಲಿ ಮನೆ ನವೀಕರಣಗೊಳಿಸಲಾಗುವುದು ಎಂದರು.
ರಾಷ್ಟ್ರ ಮತ್ತು ರಾಜ್ಯ ನಾಯಕರಾಗಿ, ಮುಖ್ಯಮಂತ್ರಿಗಳಾಗಿ ಎಸ್. ನಿಜಲಿಂಗಪ್ಪನವರ ಕೊಡುಗೆ ಅಪಾರ. ಅವರು ಹುಟ್ಟಿ ಬೆಳೆದು, ಬದುಕಿ ಬಾಳಿದ ನಿವಾಸಕ್ಕೆ ಬೆಲೆ ಕಟ್ಟಲಾಗದು. ಹಿರಿಯ ಮುಖಂಡರಾದ ಹನುಮಂತಪ್ಪ ಹಾಗೂ ಎಸ್.ನಿಜಲಿಂಗಪ್ಪನವರ ಮಗ ಕಿರಣ್ ಶಂಕರ್ ಟ್ರಸ್ಟ್ ಸ್ಥಾಪಿಸಿ, ಉತ್ತಮ ರೀತಿಯಲ್ಲಿ ಸ್ಮಾರಕ ನಿರ್ವಹಣೆ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡುವ ದೃಷ್ಟಿಯಿಂದ ಈಗಾಗಲೇ ಎರಡು ಬಾರಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಜಿಲ್ಲಾಧಿಕಾರಿಗಳು ಕೂಡ ಉತ್ಸುಕತೆಯಿಂದ ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೂ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ನಿವಾಸದ ಮೂಲ ವಿನ್ಯಾಸಕ್ಕೆ, ಗೋಡೆಗಳಿಗೆ ಯಾವುದೇ ಧಕ್ಕೆಯಾಗದಂತೆ ನವೀಕರಣ ಮಾಡಲಾಗುವುದು. ನಿಜಲಿಂಗಪ್ಪನವರ ಪುತ್ರ ಕಿರಣ್ ಶಂಕರ್ ಒಳಗೊಂಡಂತೆ ಸಮಿತಿ ರಚಿಸಿ, ಯೋಜನೆ ರೂಪಿಸಿ, ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗುವುದು. ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಪ್ರಸ್ತುತ 86 ಲಕ್ಷ ರೂ. ಅನುದಾನ ಲಭ್ಯವಿದ್ದು, ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒದಗಿಸಲಾಗುವುದು ಎಂದು ಹೇಳಿದರು.
ದುರ್ಗೋತ್ಸವಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ
ಕನ್ನಡ ಪರ ಸಂಘಟನೆಗಳು ದುರ್ಗೋತ್ಸವ ಆಚರಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಾರಿ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಅಣೆಕಟ್ಟುಗಳು ತುಂಬಿವೆ. ರೈತರು ಸಂತಸದಿಂದಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ಸವಗಳ ಆಚರಣೆ ಮಾಡುವುದು ತಪ್ಪಲ್ಲ. ಈ ಹಿಂದೆ ಎರಡು ಬಾರಿ ಐತಿಹಾಸಿಕ ಹಿನ್ನಲೆಯ ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರ್ಗೋತ್ಸವ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಿದರೆ ದುರ್ಗೋತ್ಸವ ಆಚರಣೆ ಮಾಡಲಾಗುವುದು. ಮುಖ್ಯಮಂತ್ರಿಗಳು ಸಹ ದುರ್ಗೋತ್ಸವಕ್ಕೆ ಆಚರಣೆಗೆ ಅವಕಾಶ ಹಾಗೂ ಸಹಕಾರ ನೀಡುವ ಭರವಸೆ ಇದೆ. ಹೀಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಮಠಗಳಿಗೆ ಅನುದಾನ ಕಡಿಮೆ ಮಾಡಿಲ್ಲ
ಸರ್ಕಾರ ಮಠಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿಲ್ಲ. ನಿಯಮಾನುಸಾರ ಸರ್ಕಾರ ಶೇ.25 ಹಣವನ್ನು ಮೀಸಲಿರಿಸಿ ಅನುದಾನ ಘೋಷಿಸಿಬೇಕು. ಸರ್ಕಾರ ಹಣಕಾಸಿನ ಶಿಸ್ತು ಪಾಲನೆ ಮಾಡುತ್ತಿದೆ. ಇದೇ ರೀತಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮ ಮಂಡಳಿಗಳನ್ನು ಸ್ಥಾಪಿಸಲು 5 ಕೋಟಿ ರೂ. ಮೂಲಧನ ಇರಿಸಬೇಕು. ಇತ್ತೀಚೆಗೆ ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು 5 ಕೋಟಿ ರೂ. ನೀಡಿ ಕಂಪನಿ ನೊಂದಣಿ ಕಾಯ್ದೆಯಡಿ ದೆಹಲಿಯಲ್ಲಿ ನೊಂದಯಿಸಲಾಗಿದೆ ಎಂದರು.