ರಷ್ಯಾ ಮಹಿಳೆ, ಮಕ್ಕಳ ಭೇಟಿಗೆ ಅನುಮತಿ ನೀಡದ ಪೊಲೀಸರು, ಇಸ್ರೇಲಿ ಪತಿಗೆ ನಿರಾಸೆ

ನಿನಾ ಜತೆ ಲೀವಿಂಗ್​ ಟುಗೆದರ್​ನಲಿದ್ದು ಈಗ ಬೇರ್ಪಟ್ಟಿರುವ ಡ್ರೋರ್​ ಮಕ್ಕಳಿಗೆ ನೀಡಲು ಉಡುಗೊರೆಯೊಂದಿಗೆ ಬಂದಿದ್ದರು. ಆದರೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರಿಂದ ದೂರದಿಂದಲೇ ಕಿಟಕಿಯಲ್ಲಿ ಮಕ್ಕಳಿಗೆ ಹಾಯ್‌ ಹೇಳಿ ತೆರಳಿದರು.;

Update: 2025-07-18 06:39 GMT
ದಿಬ್ಬೂರಿನ ವಿದೇಶಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದ ಇಸ್ರೇಲಿ ಪತಿ ಡ್ರೋರ್​ ಗೋಲ್ಡ್​ ಸ್ಟೀನ್

ಗೋಕರ್ಣದ ರಾಮತೀರ್ಥ ಗುಡ್ಡದ ಅಪಾಯಕಾರಿ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ರಷ್ಯಾ ಮೂಲದ ನಿನಾ ಕುಟಿನಾ (40) ಅವರಿಗೆ ತುಮಕೂರಿನ ದಿಬ್ಬೂರು ಬಳಿಯ ವಿದೇಶಿ ನಿರಾಶ್ರಿತರ ಕೇಂದ್ರದಲ್ಲಿ (Foreign Detention Center - FDC) ಆಶ್ರಯ ನೀಡಲಾಗಿದೆ. ಗುರುವಾರ (ಜುಲೈ 17) ನಿನಾ ಮತ್ತು ಮಕ್ಕಳಾದ ಪ್ರೀಮಾ (6) ಹಾಗೂ ಅಮಾ (4) ಅವರನ್ನು ಭೇಟಿ ಮಾಡಲು ಬಂದಿದ್ದ ಇಸ್ರೇಲ್‌ನ ಡ್ರೋರ್ ಗೋಲ್ಡ್​​ಸ್ಟೀನ್ ಅವರಿಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ.

ನಿನಾ ಅವರೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದು, ಈಗ ಬೇರ್ಪಟ್ಟಿರುವ ಡ್ರೋರ್, ಮಕ್ಕಳಿಗೆ ನೀಡಲು ಉಡುಗೊರೆಗಳನ್ನು ತಂದಿದ್ದರು. ಆದರೆ, ಅಧಿಕಾರಿಗಳು ಭೇಟಿಗೆ ಅವಕಾಶ ನೀಡದ ಕಾರಣ, ದೂರದಿಂದಲೇ ಕಿಟಕಿಯಲ್ಲಿ ಮಕ್ಕಳಿಗೆ 'ಹಾಯ್' ಹೇಳಿ ವಾಪಸ್ ತೆರಳಿದ್ದಾರೆ.

ಡ್ರೋರ್ ಮಾತನಾಡಿ, "ಮಕ್ಕಳು ತಾಯಿಯೊಂದಿಗೆ ಇರಬೇಕು. ತಾಯಿಯ ಒಪ್ಪಿಗೆ ಇಲ್ಲದೆ ಮಕ್ಕಳನ್ನು ಕರೆದೊಯ್ಯುವುದಿಲ್ಲ. ಆದರೆ ಮಕ್ಕಳು ಸುರಕ್ಷಿತ ಜಾಗದಲ್ಲಿ ಬೆಳೆಯಬೇಕು. ಆರು ವರ್ಷವಾದರೂ ಶಿಕ್ಷಣ ಪಡೆದಿಲ್ಲ. ಅವರನ್ನು ಶಾಲೆಗೆ ಕಳಿಸಿಲ್ಲ. ಅವರು ಪುನಃ ರಷ್ಯಾಕ್ಕೆ ಹೋದರೆ ಅವರನ್ನು ಮತ್ತೆ ಭೇಟಿ ಮಾಡಲು ನನಗೆ ಅವಕಾಶ ದೊರೆಯುವುದಿಲ್ಲ. ಮತ್ತೊಮ್ಮೆ ಅಧಿಕಾರಿಗಳ ಅನುಮತಿ ಪಡೆದು ಮಕ್ಕಳ ಭೇಟಿಗೆ ಪ್ರಯತ್ನಿಸುತ್ತೇನೆ," ಎಂದು ತಿಳಿಸಿದ್ದಾರೆ.

ವೀಸಾ ಅವಧಿ ಮೀರಿದ ಹಿನ್ನೆಲೆ, ರಷ್ಯಾಕ್ಕೆ ವಾಪಸಾತಿ?

ತನ್ನ ಮಾಜಿ ಪ್ರಿಯಕರನ ಜತೆ ಮಕ್ಕಳನ್ನು ಕಳುಹಿಸಲು ನಿರಾಕರಿಸಿರುವ ನಿನಾ ಕುಟಿನಾ, ಮಕ್ಕಳು ಪರಿಸರದಲ್ಲೇ ಬೆಳೆಯಬೇಕು ಎಂದು ಹೇಳಿದ್ದರು. ಆದರೆ, ನಿನಾ ಅವರ ವೀಸಾ ಅವಧಿ 2017ರ ಏಪ್ರಿಲ್ 17 ರಂದೇ ಮುಕ್ತಾಯವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರಿನ ಎಫ್‌ಆರ್‌ಆರ್‌ಒ (ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ) ಸಂಪರ್ಕಿಸಿ ಪತ್ರವ್ಯವಹಾರ ನಡೆಸಲಾಗಿದ್ದು, ವೀಸಾ ಅವಧಿ ಮೀರಿದ ರಷ್ಯಾ ಮೂಲದ ಮಹಿಳೆ ಮತ್ತು ಮಕ್ಕಳನ್ನು ಮರಳಿ ರಷ್ಯಾಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವು ವಿದೇಶಿ ಪ್ರಜೆಗಳ ವೀಸಾ ನಿಯಮಗಳ ಉಲ್ಲಂಘನೆ ಮತ್ತು ಮಕ್ಕಳ ಭವಿಷ್ಯದ ಕುರಿತ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

Tags:    

Similar News