Right To Education | ಖಾಸಗಿಯವರಿಗೆ ಆರ್‌ಟಿಇ ತಿದ್ದುಪಡಿ ಕಾಯ್ದೆ ವರದಾನ; ಮೂಲ ಉದ್ದೇಶವೇ ನಗಣ್ಯ

2012ರಲ್ಲಿ ಆರ್‌ಟಿಇ ಕಾಯ್ದೆ ಜಾರಿಯಾದರೂ ಅದರ ಉದ್ದೇಶ ಮಾತ್ರ ಮೂಲ ನಿಯಮಗಳಲ್ಲೇ ಉಳಿದಿದೆ. 2018ರಲ್ಲಿ ಕಾಯ್ದೆಯ ನಿಯಮಗಳಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತಂದ ತಿದ್ದುಪಡಿಯೇ ದುರ್ಬಲ ವರ್ಗದವರಿಗೆ ಮಾರಕವಾಗಿದೆ.;

Update: 2025-05-07 02:30 GMT

ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಬಡ ಹಾಗೂ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಖಾತರಿಪಡಿಸುವ ʼಶಿಕ್ಷಣ ಹಕ್ಕು ಕಾಯ್ದೆʼಯ (ಆರ್‌ಟಿಇ) ಪರಿಣಾಮಕಾರಿ ಜಾರಿ ಕನಸಾಗಿಯೇ ಉಳಿದಿದೆ. 

2012ರಿಂದ ರಾಜ್ಯದಲ್ಲಿ ಆರ್‌ಟಿಇ ಕಾಯ್ದೆ ಜಾರಿಯಾದರೂ ಅದರ ಉದ್ದೇಶ ಮಾತ್ರ ಮೂಲ ನಿಯಮಗಳಲ್ಲೇ ಉಳಿದಿದೆ. 2018ರಲ್ಲಿ ಕಾಯ್ದೆಯ ನಿಯಮಗಳಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತಂದ ತಿದ್ದುಪಡಿಯೇ ಇದೀಗ ಬಡ ಹಾಗೂ ದುರ್ಬಲ ವರ್ಗದವರಿಗೆ ಮಾರಕವಾಗಿ ಪರಿಣಮಿಸಿದೆ.

ಕಾಯ್ದೆ ಅನುಷ್ಠಾನ ಕುರಿತು ಖಾಸಗಿ ಶಾಲೆಗಳ ಒಕ್ಕೂಟದ(ಕುಸುಮ್‌) ನಿರ್ಲಕ್ಷ್ಯ, ಸರ್ಕಾರದ ಇಚ್ಛಾಶಕ್ತಿ ಕೊರತೆ, ಕಾಯ್ದೆ ನಿಯಮಗಳ ಲೋಪದಿಂದಲೇ ಶಿಕ್ಷಣ ಹಕ್ಕು ಕಾಯ್ದೆಯ ಉದ್ದೇಶ ಈಡೇರದಂತಾಗಿದೆ.

ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನದ ಆರಂಭದಲ್ಲಿ ವಾರ್ಷಿಕ ಅಂದಾಜು 1.5 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದರು. ನಿಯಮ ತಿದ್ದುಪಡಿ ಬಳಿಕ ಆರ್‌ಟಿಸಿ ಅಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. 

ಆರ್‌ಟಿಇ ಕಾಯ್ದೆ ಹೇಳುವುದೇನು?

ಪ್ರತಿಷ್ಠಿತ ಶಾಲೆಗಳಲ್ಲಿ 6 ರಿಂದ 14 ವರ್ಷದ ಮಕ್ಕಳಿಗೆ (1ರಿಂದ 8ನೇ ತರಗತಿ) ಆರ್‌ಟಿಇ ಕಾಯ್ದೆಯಡಿ ಶೇ 25ರಷ್ಟು ಸೀಟುಗಳನ್ನು ಮೀಸಲಿಡಬೇಕು. ಸಾಮಾಜಿಕ, ಆರ್ಥಿಕ ತಾರತಮ್ಯವಿಲ್ಲದೇ ಖಾಸಗಿ, ಅನುದಾನಿತ ಶಾಲೆಗಳು ಉಚಿತ ಶಿಕ್ಷಣ ಒದಗಿಸಬೇಕು. ಜೊತೆಗೆ ಕಾಯ್ದೆ ಜಾರಿಯಾದ ಮೂರು ವರ್ಷದಲ್ಲಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂಬುದಿದೆ.

ವಿದ್ಯಾರ್ಥಿಗಳು ವಾಸವಿರುವ ಸ್ಥಳದಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳು ಇಲ್ಲದಿರುವ ಸಂದರ್ಭದಲ್ಲಿ ನೆರೆಹೊರೆಯ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಬೇಕು. ಸರ್ಕಾರ ಕಾಯ್ದಿರಿಸಿದ ಶೇ 25ರಷ್ಟು ಸೀಟುಗಳಿಗೆ ರಾಜ್ಯ ಸರ್ಕಾರ ತಲಾ ವಿದ್ಯಾರ್ಥಿಗೆ ವಾರ್ಷಿಕ 16 ಸಾವಿರ ರೂ. ಪಾವತಿಸಲಿದೆ. ಆದರೆ, ಮೂಲ ಕಾಯ್ದೆಯ ನಿಯಮಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ ಎಂಬುದು ಆರ್‌ಟಿಇ ಕಾರ್ಯಕರ್ತರ ಆರೋಪವಾಗಿದೆ.

ತಿದ್ದುಪಡಿ ಕಾಯ್ದೆ ಏನು ಹೇಳುತ್ತೆ?

ಕರ್ನಾಟಕದಲ್ಲಿ 2018ರಲ್ಲಿ ಆರ್‌ಟಿಇ ಕಾಯ್ದೆಗೆ ತಂದ ತಿದ್ದುಪಡಿಯು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವರವಾಗಿ ಪರಿಣಮಿಸಿದೆ. ಆರ್‌ಟಿಇ ಕಾಯ್ದೆಯಲ್ಲಿ ಸೆಕ್ಷನ್ 12(1)ಸಿ ಸೇರ್ಪಡೆ ಮಾಡಲಾಗಿದೆ. ವಿದ್ಯಾರ್ಥಿಯ ನೆರೆಹೊರೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿದ್ದಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡುವಂತಿಲ್ಲ. ಒಂದು ವೇಳೆ ಸರ್ಕಾರಿ, ಅನುದಾನಿತ ಶಾಲೆಗಳು ಇಲ್ಲದೇ ಹೋದ ಸಂದರ್ಭದಲ್ಲಿ ಮಾತ್ರ ಪ್ರವೇಶಾವಕಾಶ ನೀಡಬಹುದಾಗಿದೆ. ಈ ನಿಯಮ ತಿದ್ದುಪಡಿ ಬಳಿಕ ಖಾಸಗಿ ಶಾಲೆಗಳ ಒಕ್ಕೂಟದಡಿ ಬರುವ ಶಾಲೆಗಳಿಗೆ ಆರ್‌ಟಿಇ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗಿದೆ.  

2012 ರಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಾಗ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳನ್ನು ಕಾಯ್ದೆಯಿಂದ ಹೊರಗಿಡಲಾಯಿತು. ಆಗ ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಇನ್ನಿತರೆ ಅಲ್ಪಸಂಖ್ಯಾತ ಸಮುದಾಯಗಳ ಶಿಕ್ಷಣ ಸಂಸ್ಥೆಗಳಲ್ಲಿ ಆರ್‌ಟಿಇ ಪ್ರವೇಶ ಸ್ಥಗಿತಗೊಳಿಸಲಾಯಿತು. 

ನಾಯಿಕೊಡೆಯಂತೆ ಹುಟ್ಟಿಕೊಂಡ ಖಾಸಗಿ ಶಾಲೆಗಳು

ಬಡ ಹಾಗೂ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಸೀಟು ಕಾಯ್ದಿರಿಸುವ ಆರ್‌ಟಿಇ  ಕಾಯ್ದೆಯ ನಿಯಮವು ಖಾಸಗಿ ಶಾಲೆಗಳಿಗೆ ಅನುಕೂಲಕರವಾಗಿದೆ. ಸರ್ಕಾರವೇ ಶೇ 25 ರಷ್ಟು ವಿದ್ಯಾರ್ಥಿಗಳ ಪ್ರವೇಶ ಅವಕಾಶ ನೀಡಿ, ವೆಚ್ಚ ಭರಿಸುವುದರಿಂದ ಸಣ್ಣಪುಟ್ಟ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. 

ರಾಜ್ಯ ಸರ್ಕಾರದ ಪ್ರಾಯೋಜಿತ ನಿಯಮವಾಗಿರುವ 12(1)ಸಿ ಖಾಸಗಿ ಶಾಲೆಗಳಿಗೆ ಇನ್ನಷ್ಟು ಅನುಕೂಲ ಕಲ್ಪಿಸಿದೆ. ಕೆಲ ಖಾಸಗಿ ಶಾಲೆಗಳು ಸರ್ಕಾರ ನೀಡುವ ವೆಚ್ಚದ ಜೊತೆಗೆ ಪೋಷಕರಿಂದಲೂ ಹಣ ವಸೂಲಿ ಮಾಡುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇನ್ನು ಮಕ್ಕಳ ಭವಿಷ್ಯ ಹಾಗೂ ಕಲಿಕೆ ದೃಷ್ಟಿಯಿಂದ ಪೋಷಕರು ಕೂಡ ಖಾಸಗಿ ಆಡಳಿತ ಮಂಡಳಿಗಳನ್ನು ಪ್ರಶ್ನಿಸಲು ಹೋಗುತ್ತಿಲ್ಲ. ಇದರಿಂದ ಆರ್‌ಟಿಇ ಕಾಯ್ದೆಯ ಮೂಲ ಉದ್ದೇಶ ಈಡೇರಿಲ್ಲ ಎಂಬುದು ಶಿಕ್ಷಣ ತಜ್ಞರು ಹಾಗೂ ಆರ್‌ಟಿಇ ಕಾರ್ಯಕರ್ತರ ಅಭಿಪ್ರಾಯವಾಗಿದೆ.

“ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಅಂದರೆ ಮಗುವಿನ ಹಕ್ಕು, ಸರ್ಕಾರದ ಜವಾಬ್ದಾರಿ ಎಂದರ್ಥ. ಆದರೆ, ಸರ್ಕಾರವೇ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮೂಲಕ ಶಿಕ್ಷಣ ಖಾಸಗೀಕರಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಕಾಯ್ದೆಯ ಮೂಲ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸದೇ ಇರುವುದರಿಂದ ಅದರ ಪ್ರಯೋಜನ ಹೆಚ್ಚು ಜನರಿಗೆ ಸಿಗುತ್ತಿಲ್ಲ" ಎಂದು ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ʼ2012ರಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕುಸುಮ್) ಅಧ್ಯಕ್ಷರು ನೇರವಾಗಿ ಆರ್‌ಟಿಇ ಕಾಯ್ದೆ ವಿರೋಧಿಸಿದ್ದರು. ʼಆರ್‌ಟಿಇ ಅಡಿ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿಕೊಂಡರೆ ಸಮುದ್ರದ ನೀರಿಗೆ ಕೊಳಚೆ ನೀರು ಬಿಟ್ಟಂತೆʼ ಎಂದು ಹೇಳುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದರು. ಅಂದಿನಿಂದಲೂ ಖಾಸಗಿ ಶಾಲೆಗಳು ಆರ್‌ಟಿಇ ಅಡಿ ದಾಖಲಾಗುವ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ನೋಡಿಕೊಳ್ಳುತ್ತಿವೆʼ ಎಂದು ದೂರಿದರು.

ಉನ್ನತ ಮಟ್ಟದ ಸಮಿತಿ ರಚನೆಗೆ ಆಗ್ರಹ

ʼ1ರಿಂದ 8ನೇ ತರಗತಿವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸುವ ಸದುದ್ದೇಶದ ಕಾಯ್ದೆಯನ್ನು ಅಂದಿನ ಯುಪಿಎ ಸರ್ಕಾರ ಜಾರಿಗೆ ತಂದಿತು. ಆದರೆ, ರಾಜ್ಯದಲ್ಲಿ ಎರಡು ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ಕಾಯ್ದೆಯ ಪರಿಣಾಮಕಾರಿ ಜಾರಿಗೆ ನೀಲನಕ್ಷೆ ತಯಾರು ಮಾಡಿಲ್ಲ. ಶಿಕ್ಷಣ ತಜ್ಞರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ, ಮೂಲ ಕಾಯ್ದೆಯ ನಿಯಮಗಳನ್ನು ಜಾರಿಗೆ ತರಲು ಶ್ರಮಿಸಬೇಕುʼ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ʼಬಹುತೇಕ ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಆ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಬಂದ ಲಾಭವನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಖಾಸಗಿ ಶಾಲೆ, ಕಾಲೇಜುಗಳನ್ನು ನಡೆಸುವ ರಾಜಕಾರಣಿಗಳಲ್ಲಿ ʼಹಿತಾಸಕ್ತಿ ಸಂಘರ್ಷʼ ಇರುವಾಗ ಪರಿಣಾಮಕಾರಿ ಜಾರಿಗೆ ಬಿಡುವುದಿಲ್ಲʼ ಎಂದು ಹೇಳಿದರು.

ಆರ್‌ಟಿಇ ಸೌಲಭ್ಯಕ್ಕೆ ಪೋಷಕರಲ್ಲೇ ನಿರಾಸಕ್ತಿ

ಅನುದಾನರಹಿತ ಶಾಲೆಗಳಿಗೆ 12(1)ಸಿ ಅಡಿ ಪ್ರವೇಶ ಅವಕಾಶ ಕಲ್ಪಿಸಿರುವಂತೆ, ಅನುದಾನಿತ ಶಾಲೆಗಳ ಪ್ರವೇಶಕ್ಕೆ ಸೆಕ್ಷನ್ 12(1)(ಬಿ) ಅಡಿ ಪ್ರವೇಶ ನೀಡಲಾಗುತ್ತಿದೆ. ಈ ಶಾಲೆಗಳಿಗೆ ಸರ್ಕಾರ ನೀಡುವ ಅನುದಾನದ ಅನುಪಾತಕ್ಕೆ ಅನುಗುಣವಾಗಿ ಉಚಿತ ಸೀಟುಗಳ ಪ್ರಮಾಣ ನಿರ್ಧಾರವಾಗಲಿದೆ.

2012ರಲ್ಲಿ ನಿಯಮ ತಿದ್ದುಪಡಿಯ ಬಳಿಕ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಪ್ರಮಾಣ ಕಡಿಮೆಯಾಗಿದೆ. ಅನುದಾನಿತ ಶಾಲೆಗಳಲ್ಲಿ ಶಿಕ್ಷಣ, ಮೂಲ ಸೌಕರ್ಯ ಇರುವುದಿಲ್ಲ ಎಂಬ ಆತಂಕದಿಂದ ಮಕ್ಕಳನ್ನು ಸೇರಿಸಲು ಪೋಷಕರೇ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಆರ್‌ಟಿಇ ಅಡಿ ದಾಖಲಾಗಿರುವ ಮಕ್ಕಳನ್ನೂ ಶಾಲೆ ಬಿಡಿಸುತ್ತಿದ್ದಾರೆ. ಹಾಗಾಗಿ ಆರ್‌ಟಿಇ ಕಾಯ್ದೆಯಡಿ ಪ್ರವೇಶಾತಿ ಕುಸಿದಿದೆ ಎಂದು ಆರ್‌ಟಿಇ ಕಾರ್ಯಕರ್ತ ನಾಗಸಿಂಹ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಮಧ್ಯಮ ವರ್ಗದವರ ಪಾಲಾದ ಆರ್‌ಟಿಇ ಸೀಟು

ಬಡವರು, ಅಂಗವಿಕಲರು, ಪರಿಶಿಷ್ಟರು ಹಾಗೂ ದುರ್ಬಲ ವರ್ಗದವರಿಗೆ ಆನ್‌ಲೈನ್‌ ಕುರಿತು ಹೆಚ್ಚಿನ ತಿಳಿವಳಿಕೆ ಇಲ್ಲದ ಕಾರಣ ಪ್ರವೇಶದಿಂದ ವಂಚಿತರಾಗುತ್ತಿದ್ದಾರೆ. ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸುವುದು ಕೂಡ ಹಿನ್ನಡೆ ಉಂಟು ಮಾಡಿದೆ. ಇನ್ನು ಎಂಟನೇ ತರಗತಿ ಪೂರ್ಣಗೊಳಿಸಿದ ಬಳಿಕ ಆರ್‌ಟಿಇ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಬೇಕು. ಆದರೆ, ಇದ್ಯಾವುದೂ ನಡೆಯುತ್ತಿಲ್ಲ.ಆರ್‌ಟಿಇ ತಿದ್ದುಪಡಿ ಕಾಯ್ದೆಯಡಿ ಸೇರಿಸಿರುವ 12(1)ಸಿ ನಿಯಮ ಕೈ ಬಿಡಬೇಕು ಎಂದು ಆಗ್ರಹಿಸಿದರು.

2018 ರಲ್ಲಿ ಆರ್‌ಟಿಇ ಕಾಯ್ದೆಗೆ ತಂದಿರುವ ತಿದ್ದುಪಡಿ ನಿಯಮ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದೇವೆ. ಆದರೆ, ಈವರೆಗೂ ಅರ್ಜಿ ವಿಚಾರಣೆಗೆ ಬಂದಿಲ್ಲ ಎಂದು ತಿಳಿಸಿದರು.

Tags:    

Similar News