Nagpur Violence | ಔರಂಗಜೇಬ್ ಪ್ರಸ್ತುತವಲ್ಲ, ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ: ಆರ್‌ಎಸ್‌ಎಸ್‌

ಆರ್‌ಎಸ್‌ಎಸ್‌ ಹಿಂಸಾಚಾರಕ್ಕೆ ಕಾರಣ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ: ಸಂಘ ಆರಂಭವಾದಾಗಿನಿಂದಲೂ ದೇಶ ಕಟ್ಟುವುದೇ ನಮ್ಮ ಕೆಲೆಸ ಎಂದ ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್.;

Update: 2025-03-19 15:14 GMT
ಆರ್​ಎಸ್​ಎಸ್​ ಅಖಿಲ ಭಾರತೀಯ ಪ್ರತಿನಿಧಿ ಸಭೆ ಕುರಿತು ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಮಾಹಿತಿ ನೀಡಿದರು

ನಾಗಪುರದಲ್ಲಿ ಔರಂಗಜೇಬ್ ಸಮಾಧಿ ವಿವಾದಕ್ಕೆ ಸಂಬಂಧಿಸಿದಂತೆ ಆರ್​ಎಸ್​ಎಸ್​ ನಿಲುವು ಪ್ರಕಟಿಸಿದ್ದು, "ಔರಂಗಜೇಬ್ ಇಂದು ಪ್ರಸ್ತುತವಲ್ಲ. ಯಾವುದೇ ರೀತಿಯ ಹಿಂಸೆಯನ್ನು ಪ್ರೋತ್ಸಾಹಿಸಲಾಗುವುದಿಲ್ಲ," ಎಂದು ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರದ ನಾಗಪುರದಲ್ಲಿ ಮೊಘಲ್ ದೊರೆ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂಬ ಬೇಡಿಕೆ ಹಿಂದೂಪರ ಸಂಘಟನೆಗಳಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಧರ್ಮಗ್ರಂಥವನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿ ಹಬ್ಬಿದ್ದು, ಹಿಂಸಾಚಾರ ಭುಗಿಲೆದ್ದಿತ್ತು. ಹಾಗೂ ಆ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು.

ಈ ಸಂಬಂಧ ಆರ್‌ಎಸ್‌ಎಸ್‌ ನಿಲುವು ವ್ಯಕ್ತಪಡಿಸಿದ, ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಹಿಂಸಾಚಾರಕ್ಕೆ ಪ್ರೋತ್ಸಾಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿ,"ಔರಂಗಜೇಬನ ವಿಷಯ ಈಗ ಪ್ರಸ್ತುತವಲ್ಲ. ಶಾಂತಿಯನ್ನು ನಾವು ಕಾಪಾಡಬೇಕಿದೆ, ಯಾವುದೇ ಹಿಂಸಾಚಾರ  ಆರೋಗ್ಯಕರ ಒಳ್ಳೆಯದಲ್ಲ" ಎಂದು ಹೇಳಿದ್ದಾರೆ. ನಾಗಪುರ ಆರ್‌ಎಸ್‌ಎಸ್‌ನ ಪ್ರಧಾನ ಕಚೇರಿ ಇರುವ ಸ್ಥಳವಾಗಿದೆ.

ಬೆಂಗಳೂರಿನ ಹೊರವಲಯದ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡುತ್ತಿದ್ದರು. ಅವರು ಮಾರ್ಚ್ 21 ರಿಂದ 23 ರವರೆಗೆ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಮಹತ್ವದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಸಂಬಂಧ ವಿವರ ನೀಡುತ್ತಿದ್ದರು.

ಸಿದ್ದರಾಮಯ್ಯ ಹೇಳಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಕುರಿತ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಕರ್ನಾಟಕದಲ್ಲಿ ಕೋಮುಗಲಭೆಗೆ ಆರ್​ಎಸ್​ಎಸ್​ ಕಾರಣ," ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. 

ಈ ಸಂಬಂಧ ಪ್ರತಿಕ್ರಿಯಿಸಿದ ಅಂಬೇಕರ್, "ನಾನು ಅವರು ಹೇಳಿರೋ ವೀಡಿಯೋ ನೋಡಿಲ್ಲ. ನಮ್ಮ ಸ್ವಯಂಸೇವಕರು ಶಾಂತಿಯುತವಾಗಿ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಘ ಆರಂಭವಾದಾಗಿನಿಂದಲೂ ಇದೇ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮ್ಮ ಕೆಲಸ ನಾವು ಮಾಡುತ್ತೇವೆ," ಎಂದರು.

ಸಭೆ ವಿವರ

ಮೂರು ದಿನಗಳ ಕಾಲ ನಡೆಯುವ ಸಭೆಯಲ್ಲಿ ಸಂಘದ ಪ್ರತಿನಿಧಿಗಳು, ಪ್ರಮುಖರು ಭಾಗಿಯಾಗಲಿದ್ದು, ಈ ಬೈಠಕ್ ಪ್ರತಿ ವರ್ಷವೂ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಮುಂದಿನ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ 100ನೇ ವರ್ಷಕ್ಕೆ ಕಾಲಿಡಲಿದೆ. ಹೀಗಾಗಿ ಈ ವರ್ಷದ ವಿಜಯದಶಮಿಯಿಂದ 2026ರ ಸೆಪ್ಟಂಬರ್​ನಲ್ಲಿ ನಡೆಯುವ ವಿಜಯದಶಮಿವರೆಗೆ ಆರ್​ಎಸ್​ಎಸ್​​ ಶತಮಾನೋತ್ಸವವನ್ನು ಇಡೀ ವರ್ಷ ಆಚರಣೆ ಮಾಡಲಾಗುವುದು. ಜೊತೆಗೆ 4 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಸಂಘದ ರಚನೆಯಲ್ಲಿ ಇದು ಮಹತ್ವಪೂರ್ಣ ಸಭೆಯಾಗಿದೆ ಎಂದು ಅಂಬೇಕರ್ ವಿವರಿಸಿದರು.

ಆರ್​ಎಸ್ಎಸ್​ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಭೆಯಲ್ಲಿ 2024-25ರ ವರದಿಯನ್ನು ಮಂಡಿಸಲಿದ್ದಾರೆ. ಸಮಾಜದ ಎಲ್ಲರನ್ನೂ ತಲುಪಿಸುವ ಕೆಲಸ ಶತಮಾನೋತ್ಸವ ಆಚರಣೆಯಲ್ಲಿ ಪ್ರಮುಖವಾಗಿ ನಡೆಯಲಿದೆ. ಮೂರು ದಿನಗಳ ಕಾಲ ಪರಿವರ್ತನೆಯ 5 ವಿಷಯಗಳ ಮೇಲೆ ಚರ್ಚೆಯಾಗಲಿದೆ. ಇದೇ ಸಂದರ್ಭದಲ್ಲಿ ಪ್ರಮುಖವಾಗಿ 2 ನಿರ್ಣಯಗಳನ್ನು ಕೈಗೊಳ್ಳಲಿದ್ದು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮೊದಲನೇ ನಿರ್ಣಯ ಇರಲಿದೆ. ಆರ್​ಎಸ್​ಎಸ್​ ಶತಮಾನೋತ್ಸವ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಎರಡನೆಯ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು.

ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಆರ್​ಎಸ್​ಎಸ್​ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ‌. ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಸ್ ಚೌಹಾಣ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅಂಬೇಕರ್ ವಿವರಿಸಿದ್ದಾರೆ.

ಜೊತೆಗೆ ಆರ್​ಎಸ್​ಎಸ್​ ಸಂಘಟನೆ ಕುರಿತು ಮಾಹಿತಿ ನೀಡಿದ ಅವರು, ನಮ್ಮ ಕಾರ್ಯಕರ್ತರ ಪ್ರಯತ್ನದಿಂದ ಕಳೆದ ನಾಲ್ಕು ವರ್ಷಗಳಲ್ಲಿ ನಾವು ಮಂಡಲ ತಲುಪುವ ಕೆಲಸ ಮಾಡಿದ್ದೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘವನ್ನು ಸೇರುತ್ತಿದ್ದಾರೆ ಎಂದು ವಿವರಿಸಿದರು.

ಮಾರ್ಚ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆರ್​ಎಸ್​ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಪ್ರಧಾನಿಯಾಗಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಭೇಟಿ ನೀಡಿದ್ದರು. ಪ್ರಧಾನಿ ಭೇಟಿಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಎಂದರು.  ಮಾಧ್ಯಮಗೋಷ್ಠಿಯಲ್ಲಿ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Tags:    

Similar News