Sugarcane crisis|ಕಬ್ಬು ಪ್ರತಿ ಟನ್‌ಗೆ 3,300 ರೂ. ಘೋಷಿಸಿದ ಸರ್ಕಾರ; ಕೇಂದ್ರದತ್ತ ಬೊಟ್ಟು ಮಾಡಿದ ಸಿಎಂ

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ, ಸಕ್ಕರೆ ಎಂಎಸ್‌ಪಿ ಹೆಚ್ಚಳ ಸೇರಿದಂತೆ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಕೋರಿ ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Update: 2025-11-07 14:10 GMT

ಸಿಎಂ ಸಿದ್ದರಾಮಯ್ಯ

Click the Play button to listen to article

ರಾಜ್ಯಾದ್ಯಂತ ಕಳೆದ ಎಂಟು ದಿನಗಳಿಂದ ತೀವ್ರ ಸ್ವರೂಪ ಪಡೆದಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಸತತ ಏಳು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಗಳ ನಂತರ, ಪ್ರತಿ ಟನ್ ಕಬ್ಬಿಗೆ 3,30 ರೂಪಾಯಿ ದರವನ್ನು ಘೋಷಿಸಲಾಗಿದೆ. ಈ ದರದಲ್ಲಿ ಸಕ್ಕರೆ ಕಾರ್ಖಾನೆಗಳು 3,250 ರೂಪಾಯಿ ಮತ್ತು ರಾಜ್ಯ ಸರ್ಕಾರ 50 ರೂಪಾಯಿ ಪ್ರೋತ್ಸಾಹಧನವನ್ನು ಭರಿಸಲಿದೆ. ಆದರೆ, ಪ್ರತಿ ಟನ್‌ಗೆ 3,500 ರೂಪಾಯಿ ಪಟ್ಟು ಹಿಡಿದಿದ್ದ ರೈತರು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾರೆಯೇ ಅಥವಾ ತಮ್ಮ ಹೋರಾಟವನ್ನು ಮುಂದುವರಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಶುಕ್ರವಾರ ದಿನವಿಡೀ ವಿಧಾನಸೌಧದಲ್ಲಿ ನಡೆದ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದು ಕಬ್ಬು ಬೆಳೆಗಾರರ ಸಮಸ್ಯೆಯೇ ಆಗಿತ್ತು. ಬೆಳಿಗ್ಗೆ 11.30ಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಜೆಯವರೆಗೂ ರೈತ ಮುಖಂಡರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ಸಭೆಗಳ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.

ಸರ್ಕಾರದ ಹೊಸ ಸೂತ್ರ

ಬೆಳಗಾವಿ ಜಿಲ್ಲಾಧಿಕಾರಿಗಳು ಈ ಹಿಂದೆ 11.25% ಇಳುವರಿಗೆ (ರಿಕವರಿ) ಪ್ರತಿ ಟನ್‌ಗೆ 3,200 ರೂಪಾಯಿ ದರವನ್ನು ನಿಗದಿಪಡಿಸಿದ್ದರು. ಆದರೆ, ರೈತರು ಇದನ್ನು ತಿರಸ್ಕರಿಸಿದ್ದರು. ಇದೀಗ ಸರ್ಕಾರವು ಆ ದರಕ್ಕಿಂತ 100 ರೂಪಾಯಿ ಹೆಚ್ಚಳ ಮಾಡಿದೆ. "11.25% ರಿಕವರಿ ಇರುವ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳು 3,250 ವ ಪಾವತಿಸಬೇಕು. ಇದರ ಜೊತೆಗೆ, ರಾಜ್ಯ ಸರ್ಕಾರವು ಪ್ರತಿ ಟನ್‌ಗೆ 50 ರೂಪಾಯಿ ಹೆಚ್ಚುವರಿ ಪ್ರೋತ್ಸಾಹಧನ ನೀಡಲಿದೆ. ಈ ಮೂಲಕ ರೈತರಿಗೆ ಒಟ್ಟು 3,300 ರೂಪಾಯಿಸಿಗಲಿದೆ. ಮುಖ್ಯವಾಗಿ, ಈ ದರವು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಹೊರತುಪಡಿಸಿದ್ದಾಗಿದೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ನಿರ್ಧಾರಕ್ಕೆ ಬಹುತೇಕ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಗರಂ

ಸಭೆಯಲ್ಲಿ ರೈತರು ಮತ್ತು ಕಾರ್ಖಾನೆ ಮಾಲೀಕರು, ಇಬ್ಬರೂ ಕೇಂದ್ರ ಸರ್ಕಾರದ ನೀತಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಸಿಎಂ, "ಸಕ್ಕರೆಗೆ ಎಂಎಸ್‌ಪಿ, ಕಬ್ಬಿಗೆ ಎಫ್‌ಆರ್‌ಪಿ, ಎಥೆನಾಲ್ ಹಂಚಿಕೆ ಮತ್ತು ಸಕ್ಕರೆ ರಫ್ತು ಮಿತಿ, ಎಲ್ಲವನ್ನೂ ನಿರ್ಧರಿಸುವುದು ಕೇಂದ್ರ ಸರ್ಕಾರ. ಅವರಿಂದಾದ ಸಮಸ್ಯೆಗೆ ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ," ಎಂದು ರೈತ ಮುಖಂಡರಿಗೆ ಪ್ರಶ್ನಿಸಿದರು. "ರೈತರ ಹಿತದೃಷ್ಟಿಯಿಂದ ಕೇಂದ್ರವು ಸಕ್ಕರೆಯ ಎಂಎಸ್‌ಪಿ ಹೆಚ್ಚಿಸಬೇಕು. ಈ ಬಗ್ಗೆ ನಾವು ಈಗಾಗಲೇ ಪ್ರಧಾನಿಯವರಿಗೆ ಪತ್ರ ಬರೆದಿದ್ದೇವೆ. ಅವರು ಸಮಯ ನೀಡಿದರೆ, ನಾಳೆಯೇ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಲು ಸಿದ್ಧ," ಎಂದು ಅವರು ಘೋಷಿಸಿದರು.

ರೈತರ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ

ಕೇಂದ್ರದ ಮೇಲಿನ ಆರೋಪಗಳ ಜೊತೆಗೆ, ರಾಜ್ಯ ಮಟ್ಟದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಸಿಎಂ ನೀಡಿದರು. "ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿವೆ ಮತ್ತು ಇಳುವರಿಯನ್ನು ಕಡಿಮೆ ತೋರಿಸುತ್ತಿವೆ ಎಂಬ ಗಂಭೀರ ಆರೋಪಗಳಿವೆ. ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಪ್ರತಿ ಕಾರ್ಖಾನೆಯ ಎದುರು ಸರ್ಕಾರದ ವತಿಯಿಂದಲೇ ಪ್ರಯೋಗಾಲಯ ತೆರೆಯುವ ಬಗ್ಗೆಯೂ ಪರಿಶೀಲಿಸಲಾಗುವುದು. ಕೆಲವು ಕಾರ್ಖಾನೆಗಳು ಉಳಿಸಿಕೊಂಡಿರುವ ಹಳೆಯ ಬಾಕಿಯನ್ನು ತಕ್ಷಣ ಪಾವತಿಸಲು ಸೂಚನೆ ನೀಡಲಾಗುವುದು," ಎಂದು ಅವರು ರೈತರಿಗೆ ಭರವಸೆ ನೀಡಿದರು.

ಕಾರ್ಖಾನೆ ಮಾಲೀಕರಿಗೂ ಸಿಕ್ಕಿತು ಭರವಸೆ

ಸಭೆಯಲ್ಲಿ, ಸಕ್ಕರೆ ಕಾರ್ಖಾನೆಗಳು ತಾವು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯೂನಿಟ್‌ಗೆ 60 ಪೈಸೆ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಲಾಗುವುದು. ಕಾರ್ಖಾನೆಗಳ ಇತರ ಸಮಸ್ಯೆಗಳ ಬಗ್ಗೆಯೂ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದು," ಎಂದು ತಿಳಿಸಿದರು.

ಒಟ್ಟಿನಲ್ಲಿ, ಸತತ ಹೋರಾಟದ ನಂತರ ಸರ್ಕಾರವು ರೈತರ ಬೇಡಿಕೆಯ ಕಡೆಗೆ ಒಂದು ಹೆಜ್ಜೆ ಮುಂದಿಟ್ಟಿದೆ. ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ದರದಿಂದ ಹೊರಗಿಟ್ಟಿರುವುದು ರೈತರಿಗೆ ಸಮಾಧಾನಕರ ಅಂಶವಾದರೂ, ಅವರ ಮೂಲ ಬೇಡಿಕೆಯಾದ 3,೫೦೦ ರೂಪಾಯಿ  ಹೋಲಿಸಿದರೆ ಈ ಮೊತ್ತ ಇನ್ನೂ ಕಡಿಮೆಯಿದೆ. ಹೀಗಾಗಿ, ಸರ್ಕಾರದ ಈ ಹೊಸ ಸೂತ್ರಕ್ಕೆ ರೈತರು ಅಂತಿಮವಾಗಿ ಹೇಗೆ ಸ್ಪಂದಿಸುತ್ತಾರೆ ಎಂಬುದೇ ಸದ್ಯದ ಕುತೂಹಲ.  

Tags:    

Similar News